image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತೀಯ ಚಿತ್ರರಂಗವನ್ನು ವಿಶ್ವದ ವೇದಿಕೆಗೆ ತಲುಪಿಸಿದ ಸತ್ಯಜಿತ್ ರೇ ಎಂಬ ಅಪ್ರತಿಮ

ಭಾರತೀಯ ಚಿತ್ರರಂಗವನ್ನು ವಿಶ್ವದ ವೇದಿಕೆಗೆ ತಲುಪಿಸಿದ ಸತ್ಯಜಿತ್ ರೇ ಎಂಬ ಅಪ್ರತಿಮ

ಭಾರತೀಯ ಚಿತ್ರರಂಗದ ಇತಿಹಾಸವನ್ನು ನಾವು ಸತ್ಯಜಿತ್ ರೇ ಅವರಿಗಿಂತ ಮೊದಲು ಮತ್ತು ರೇ ಅವರ ನಂತರ ಎಂದು ವಿಭಾಗಿಸಬಹುದು. ಅಷ್ಟರ ಮಟ್ಟಿಗೆ ಅವರು ಸಿನೆಮಾ ಮಾಧ್ಯಮದ ಆಯಾಮವನ್ನೇ ಬದಲಿಸಿದವರು. 1921ರ ಮೇ 2ರಂದು ಕಲ್ಕತ್ತಾದ ಸುಪ್ರಸಿದ್ಧ ಕಲಾವಿದರ ಕುಟುಂಬದಲ್ಲಿ ಜನಿಸಿದ ರೇ, ಕೇವಲ ಒಬ್ಬ ಚಲನಚಿತ್ರ ನಿರ್ದೇಶಕರಷ್ಟೇ ಅಲ್ಲದೆ ಒಬ್ಬ ಸೃಜನಶೀಲ ಲೇಖಕ, ಅಪ್ರತಿಮ ಅಕ್ಷರ ವಿನ್ಯಾಸಕ (Typographer), ಸಂಗೀತ ನಿರ್ದೇಶಕ ಮತ್ತು ಉತ್ತಮ ಚಿತ್ರಕಲಾವಿದರೂ ಆಗಿದ್ದರು. ಅವರ ಪ್ರತಿಭೆ ಎಷ್ಟು ವಿಭಿನ್ನವಾಗಿತ್ತೆಂದರೆ, ಅವರು ತಮ್ಮ ಚಿತ್ರಗಳ ಚಿತ್ರಕಥೆ, ಸೆಟ್ ವಿನ್ಯಾಸ, ವೇಷಭೂಷಣ ಮತ್ತು ಪೋಸ್ಟರ್‌ಗಳನ್ನು ಸ್ವತಃ ತಾವೇ ಸಿದ್ಧಪಡಿಸುತ್ತಿದ್ದರು.ಸತ್ಯಜಿತ್ ರೇ ಅವರ ಹೆಸರನ್ನು ಕೇಳಿದ ಕೂಡಲೇ ನೆನಪಿಗೆ ಬರುವುದು ಅವರ ಚೊಚ್ಚಲ ಚಿತ್ರ 'ಪಥೇರ್ ಪಾಂಚಾಲಿ'. ಯಾವುದೇ ವೈಭವೋಪೇತ ಸೆಟ್‌ಗಳಿಲ್ಲದೆ, ದೊಡ್ಡ ತಾರಾಗಣವಿಲ್ಲದೆ, ಕೇವಲ ನೈಜವಾದ ಹಳ್ಳಿ ಮತ್ತು ಅಲ್ಲಿನ ಬಡ ಕುಟುಂಬದ ಬದುಕಿನ ಸಣ್ಣಪುಟ್ಟ ಸಂಭ್ರಮ-ಸಂಕಟಗಳನ್ನು ಅವರು ತೆರೆಯ ಮೇಲೆ ತಂದ ರೀತಿ ಇಡೀ ಜಗತ್ತನ್ನೇ ಬೆರಗುಗೊಳಿಸಿತು. ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರಕ್ಕೆ ದೊರೆತ ಜಾಗತಿಕ ಮನ್ನಣೆ ಭಾರತೀಯ ಸಿನೆಮಾದ ಘನತೆಯನ್ನು ಹೆಚ್ಚಿಸಿತು. ಅಪು ಟ್ರೈಲಾಜಿ (Apu Trilogy) ಎಂದು ಕರೆಯಲ್ಪಡುವ ಅವರ ಚಿತ್ರಸರಣಿಯು ಮಾನವೀಯ ಸಂಬಂಧಗಳ ಅದ್ಭುತ ದಾಖಲೆಯಾಗಿ ಇಂದಿಗೂ ವಿಶ್ವದಾದ್ಯಂತ ಸಿನಿಮಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಂತಿದೆ.
ರೇ ಅವರ ಸಿನಿಮಾ ಶೈಲಿಯು ಅತ್ಯಂತ ಸರಳವಾಗಿದ್ದರೂ ಅದು ತಲುಪಿಸುವ ಸಂದೇಶ ಗಾಢವಾಗಿರುತ್ತಿತ್ತು. 'ಚಾರುಲತಾ', 'ಮಹಾನಗರ್', ಮತ್ತು 'ಜಲಸಾಂಘರ್' ನಂತಹ ಚಿತ್ರಗಳಲ್ಲಿ ಅವರು ಹೆಣ್ಣಿನ ಅಂತರಂಗದ ಹೋರಾಟ ಮತ್ತು ಬದಲಾಗುತ್ತಿರುವ ಸಮಾಜದ ಮುಖಗಳನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಅವರು ಕೇವಲ ಗಂಭೀರ ಚಿತ್ರಗಳಿಗಷ್ಟೇ ಸೀಮಿತವಾಗಲಿಲ್ಲ; ಮಕ್ಕಳಿಗಾಗಿ ಅವರು ಸೃಷ್ಟಿಸಿದ 'ಫೆಲುಡಾ' ಎಂಬ ಪತ್ತೇದಾರಿ ಪಾತ್ರ ಮತ್ತು 'ಪ್ರೊಫೆಸರ್ ಶೋಂಕು' ಎಂಬ ವಿಜ್ಞಾನಿ ಪಾತ್ರಗಳು ಇಂದಿಗೂ ಬಂಗಾಳಿ ಸಾಹಿತ್ಯದ ಅಮರ ಸೃಷ್ಟಿಗಳು. ಅವರ ಸಾಹಿತ್ಯ ಮತ್ತು ಕಲಾತ್ಮಕ ಸಿನೆಮಾಗಳು ಒಂದೇ ಸಮತೋಲನದಲ್ಲಿ ಸಾಗುತ್ತಿದ್ದವು.
ವಿಶ್ವದ ಅತ್ಯುನ್ನತ ಸಿನಿಮಾ ಗೌರವವಾದ  "ಗೌರವ ಆಸ್ಕರ್"' ಜೀವಮಾನದ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಸತ್ಯಜಿತ್ ರೇ ಅವರದ್ದು. ಅನಾರೋಗ್ಯದ ಕಾರಣ ಅವರು ಆಸ್ಪತ್ರೆಯಲ್ಲಿದ್ದಾಗ ಆಸ್ಕರ್ ಅಕಾಡೆಮಿಯು ಕಲ್ಕತ್ತಾಗೆ ಬಂದು ಅವರಿಗೆ ಈ ಗೌರವ ಸಲ್ಲಿಸಿದ್ದು ಅವರ ವ್ಯಕ್ತಿತ್ವಕ್ಕೆ ಸಂದ ಅತಿದೊಡ್ಡ ಸಾಕ್ಷಿ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಸತ್ಯಜಿತ್ ರೇ ಅವರ ಚಿತ್ರಗಳು ನಮಗೆ ಪ್ರಸ್ತುತವೆನಿಸುತ್ತವೆ.ಚಿತ್ರರಂಗದ ಪ್ರತಿಯೊಬ್ಬ ಆರಾಧಕನಿಗೂ ಸತ್ಯಜಿತ್ ರೇ ಎಂಬ ಹೆಸರು ಕೇವಲ ಒಬ್ಬ ನಿರ್ದೇಶಕನಲ್ಲ, ಬದಲಿಗೆ ಅದೊಂದು ಕಲಾ ಶಾಲೆಯಂತೆ ಭಾಸವಾಗುತ್ತದೆ. ಅವರ ಈ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ