ಮೋಹಿನಿ ಎಂಬ ಪುಟ್ಟ ಹುಡುಗಿ ಅಂದು ಪದೇ ಪದೇ ಚಿತ್ರಮಂದಿರಕ್ಕೆ ಬಂದು ‘ಸತಿ ಸಾವಿತ್ರಿ' ಚಿತ್ರ ನೋಡುತ್ತಿದ್ದಳು. ಆ ಸಂದರ್ಭದಲ್ಲಿ ಎಮ್.ಎಸ್ ಸುಬ್ಬುಲಕ್ಷ್ಮಿ ಅವರ ಹಾಡು ಅವಳನ್ನು ಬೆರಗುಗೊಳಿಸಿತ್ತು. ಅಂದಿನಿಂದಲೇ ಮೋಹಿನಿ ತಾನು ಅಭಿನಯಿಸಲೇಬೇಕು ಎಂಬ ಕನಸು ಕಾಣತೊಡಗಿದಳು. ಉಡುಪಿಯಲ್ಲಿ ಓದುತ್ತಿದ್ದ ಸಮಯದಲ್ಲಿ ತನ್ನ ಶಾಲಾ ಸಹಪಾಠಿಯಾದ ಪುಷ್ಪಳ ಬಳಿ ತನ್ನ ಕನಸುಗಳನ್ನು ಹೇಳಿಕೊಳ್ಳುತ್ತಾಳೆ. ಅಂಗಡಿಯೊದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ ತನ್ನ ತಂದೆಗೆ ಪುಷ್ಪ ವಿಷಯ ತಿಳಿಸಿದಳು. ಮೋಹಿನಿಯನ್ನು ಕರೆದು ಅದು ಸರಿಯಲ್ಲ, ನೀನು ಅಭಿನಯಿಸುವುದರ ಕನಸು ಕಾಣುವುದು ಬೇಡವೆಂದರೂ ಆಕೆ ಕೇಳಲಿಲ್ಲ. ಯಾಕೆಂದರೆ ಆಕೆಗೆ ಗಾಢವಾದ ನಂಬಿಕೆ ಇತ್ತು. ಧೈರ್ಯವೂ ಇತ್ತು. ಅದು ಎಲ್ಲೂ ಕೈ ಕೊಡಲಿಲ್ಲ.
ಅದೇ ವೇಳೆಗೆ ಹಿರಣ್ಣಯ್ಯ ಮಿತ್ರ ಮಂಡಳಿಯ ನಾಟಕ ಕಂಪೆನಿಯವರು ಉಡುಪಿಗೆ ಬಂದಾಗ, ಒಂದು ಸಾರಿ ಪುಷ್ಪಳ ತಂದೆಯ ಬಳಿ, ಯಾರಾದರೂ ನಟಿಯರಿದ್ದರೆ ಹೇಳಿ ಎಂದಿದ್ದರಂತೆ. ಆಗ ಅವರು ಮೊದಲು ತೋರಿಸಿದ್ದೆ ಈ ಮೋಹಿನಿಯನ್ನು ಮೊದಲು ತಾಯಿ ಒಪ್ಪದಿದ್ದರೂ ಅಕ್ಕನ ಸಹಕಾರದೊಂದಿಗೆ ಶಿವಮೊಗ್ಗದಲ್ಲಿದ್ದ ಹಿರಣ್ಣಯ್ಯನವರ ನಾಟಕ ಮಂಡಳಿಗೆ ಸೇರಿಸಿದರು. ಒಂದು ವರ್ಷ ಕಾಲ ಅಲ್ಲಿ ದುಡಿದರು. ಅಷ್ಟರಲ್ಲಿ ನಿರ್ದೇಶಕ ಸಿ.ವಿ. ರಾಜುರವರ ಪರಿಚಯವಾಯ್ತು. ಅವರ ಕೃಷ್ಣಲೀಲೆ ಚಿತ್ರಕ್ಕೆ ಆಯ್ಕೆ ಆಗಿಯೇ ಬಿಟ್ಟರು. ದೇವರ ಅನುಗ್ರಹದಿಂದ ಮೋಹಿನಿ ಅಂದುಕೊಡಂತೆ ನಡೆಯಲಾರಂಭಿಸಿತು. ಮೈಸೂರು ಮೂವಿ ಟೋನ್‌ರವರು ನಿರ್ಮಿಸಿದ ಕೃಷ್ಣಲೀಲೆ ಚಿತ್ರದಲ್ಲಿ ರಾಧೆಯ ಪಾತ್ರ ಸಿಕ್ಕಿತು. ಅಲ್ಲಿ ಕೃಷ್ಣನ ಪಾತ್ರ ಮಾಡಿದ್ದು ಉಷಾ ಎಂಬ ತರುಣಿಯೆ. ಆದರೆ ಯಾಕೊ ಚಿತ್ರ ಅರ್ಧದಲ್ಲಿಯೆ ಸ್ಥಗಿತಗೊಂಡಾಗ ಮಹಾತ್ಮ ಪಿಕ್ಚರ್ ನವರು 'ಕೃಷ್ಣ ಲೇಲೆ' ಚಿತ್ರವನ್ನು ಕೈಗೆತ್ತಿಕೊಂಡರು.
ಅದರಲ್ಲಿ ನೃತ್ಯ ನಿರ್ದೇಶಕ ಸೋಹನ್‌ಲಾಲ್, ತನಗೆ ಪ್ರೇಯಸಿ ರಾಧೆಯ ಪಾತ್ರಕೊಟ್ಟರೆ ಬರುತ್ತೇನೆಂದರು. ಆದ್ದರಿಂದ ರಾಧೆಯ ಪಾತ್ರ ಮೋಹಿನಿಯ ಕೈ ತಪ್ಪಿತು. ಕಾಲಾನುಕ್ರಮದಲ್ಲಿ ಮೋಹಿನಿಯ ಹೆಸರು ಪ್ರತಿಮಾದೇವಿ ಎಂದು ಮರು ನಾಮಕರಣವಾಯಿತು. ಯಾರು ಈ ಪ್ರತಿಮಾದೇವಿ ಅಂತೀರಾ? ಅವರೇ 25 ವಾರವಾದರೂ ಯಾವೂದೇ ಅಡೆತಡೆಗಳಿಲ್ಲದೆ ಮುನ್ನುಗ್ಗಿ ಭರ್ಜರಿ ಯಶಸನ್ನು ಕಂಡ 'ಜಗನ್ಮೋಹಿನಿ' ಚಿತ್ರದ 'ಗೌರಿ' ಪಾತ್ರಧಾರಿ. ಅಲ್ಲಿಂದ ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ 55 ಚಿತ್ರಗಳಲ್ಲಿ ಅಭಿನಯಿಸಿದ ಪ್ರತಿಮಾದೇವಿ ಭಕ್ತರಾಮದಾಸ, ಮಹಾನಂದ, ನಾಗಕನ್ಯೆ ಅಭಿನಯಿಸುತ್ತಿದ್ದಂತೆ, ಮಹಾತ್ಮ ಪಿಕ್ಚರ್ ನ ಶಂಕರ ಸಿಂಗ್‌ರನ್ನು ವರಿಸಿದರು. ಅವರು ಅಬಿನಯಿಸಿದ ಹೆಚ್ಚಿನ ಚಿತ್ರಗಳು ತನ್ನ ಪತಿರಾಯ ಶಂಕರ ಸಿಂಗ್‌ರ ನಿರ್ದೇಶನ, ನಿರ್ಮಾಣದ ಚಿತ್ರಗಳೇ ಆಗಿದ್ದವು. 'ಜಗನ್ಮೋಹಿನಿ' ಚಿತ್ರದಲ್ಲಿ ಅವರು ಅಭಿನಯಿಸುವಾಗ ಮದುವೆಯಾಗಿ ಅವರಿಗೆ ಒಂದು ಮಗು ಇತ್ತು, ಅವರೇ ಇಂದಿನ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
'ಜಗನ್ಮೋಹಿನಿ' ಚಿತ್ರ ಎಷ್ಟು ಯಶಸ್ವಿಯಾಗಿತ್ತೆಂದರೆ ದಾವಣಗೆರೆಯ ಚಿತ್ರಮಂದಿರದ ಮಾಲೀಕ ರಾಜಾನ್ಹಳ್ಳಿ ಹನುಮಂತಪ್ಪ ಗೌರಿ ಪಾತ್ರ ಮಾಡಿದ ಮಾತೆಯನ್ನು ಒಂದು ಸಾರಿ ಕಾಣಬೇಕೆಂದು ಮೈಸೂರಿಗೆ ಹುಡುಕಿ ಬಂದು ಕೃತಜ್ಙತೆ ಸಲ್ಲಿಸಿದ್ದರಂತೆ. ವಿಜಾಪುರದಲ್ಲಿ ಜನರು ಹುಚ್ಚರಾಗುತ್ತಿದ್ದಾರೆಂದು 25 ವಾರ ಆಗುತ್ತಿದ್ದಂತೆ ಆಗಿನ ಅಲ್ಲಿನ ಜಿಲ್ಲಾಧಿಕಾರಿ ಅ ಚಿತ್ರವನ್ನು ನಿಲ್ಲಿಸಿಯೇ ಬಿಟ್ಟರಂತೆ. ಕೆಂಪರಾಜ್ ಅರಸ್, ಉದಯಕುಮಾರ್, ರಾಜ್‌ಕುಮಾರ್, ಬಿ.ಎಮ್ ವೆಂಕಟೇಶ್ ಮುಂತಾದವರ ಚಿತ್ರಗಳಲ್ಲಿ ಅಭಿನಯಿಸಿದ ಪ್ರತಿಮಾದೇವಿ ಯವರಿಗೆ 2003ರಲ್ಲಿ ಚಿತ್ರರಂಗದ ಸೇವೆಗಾಗಿ ಕರ್ನಾಟಕ ಸರಕಾರ "ರಾಜ್‌ಕುಮಾರ್" ಪ್ರಶಸ್ತಿ ನೀಡಿ ಗೌರವಿಸಿದೆ.
ಅವರ ಅಭಿನಯದ ಚಿತ್ರಗಳ ನಿರ್ದೇಶಕರು, ನಿರ್ಮಾಪಕರನ್ನು, ತಂತ್ರಜ್ಞರನ್ನು, ಕಲಾವಿದರನ್ನು ಅದಕ್ಕಿಂತಲೂ ಹೆಚ್ಚಾಗಿ ಹಿಣ್ಣಯ್ಯ ನಾಟಕ ಮಂಡಳಿಯನ್ನು ನೆನಪಿಸಿ ಕೋಳುವ ಪ್ರತಿಮಾದೇವಿ ಯವರು 1933ರಲ್ಲಿ ಸರಸ್ವತಿ ಮತ್ತು ಉಪೇಂದ್ರ ಶೆಣೈ ಎಂಬ ದಂಪತಿಗಳಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಜನಿಸಿದರು. ಮೂರು ಜನ ಅಕ್ಕಂದಿರು ಹಾಗು ಒಬ್ಬ ಅಣ್ಣನೊಂದಿಗೆ ಬೆಳೆದ ಇವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ಕೊಂಡಿದ್ದರು.
ಪ್ರತಿಮಾದೇವಿ ಯವರು ಸಿನಿಮಾರಂಗವನ್ನು ಅರಸಿ ಬಂದಿದ್ದರಿಂದ ಮಕ್ಕಳು, ಮೊಮ್ಮಕ್ಕಳೊಂದಿಗೆ ಚಿತ್ರರಂಗದಲ್ಲೇ ಇದ್ದರು. ಅವರ ಮಕ್ಕಳಾದ ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್(ಈಗಿಲ್ಲ), ಜೈರಾಜ್ ಸಿಂಗ್, ಜೈಜಗದೀಶ್ ಪತ್ನಿ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಇನರೆಲ್ಲರೂ ಇರುವುದು ಚಿತ್ರರಂಗದಲ್ಲಿಯೇ. ಸುಮಾರು 16 ವರ್ಷಗಳಿಂದ ಅಭಿನಯಿಸುವುದೇ ಬೇಡವೆಂದು ಕುಳಿತಿದ್ದ ಪ್ರತಿಮಾದೇವಿಯವರು 2002ರಲ್ಲಿ 'ಲಾ ಆಂಡ್ ಆರ್ಡರ್' ಎಂಬ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಿದ್ದರು.
ಆಗ ನಿರ್ದೇಶಕರ ಮತ್ತು ಕಲಾವಿದರ ಮಧ್ಯೆ ಗುರು ಶಿಷ್ಯರ ಸಂಬಂಧವಿತ್ತು. ಆದರೆ ಅದು ಈಗ ಮಾಯವಾಗಿದೆ. ಗೌರವ ಕೂಡ ಮರೆಮಾಚಿದೆ ಎನ್ನುತ್ತಿದ್ದರು. ಆಗಿನ ಕಲಾವಿದರಿಗೆ ಕಲೆಯ ಬಗ್ಗೆ ಇದ್ದ ಭಕ್ತಿ ಭಾವ ಅವರನ್ನು ನೋಡಿದಾಗಲೇ ತಿಳಿಯತ್ತಿತು. ಇಂಥಹ ಅಭೂತಪೂರ್ವ ಕಲಾವಿದೆ ಕಲ್ಲಡ್ಕದಲ್ಲಿ ಹುಟ್ಟಿ ಉಡುಪಿಯಲ್ಲಿ ಬಾಲ್ಯದ ದಿನಗಳಲ್ಲಿ ಬೆಳೆದು ಶಿವಮೊಗ್ಗದ ಹಾದಿಯಾಗಿ ಮೈಸೂರು ಸೇರಿ ಬೆಂಗಳೂರಲ್ಲಿ ನೆಲೆಸಿದ್ದ ಪ್ರತೀಮಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಪ್ರತಿಮ ನಟನಾ ಕೌಶಲ್ಯದಿಂದ ಅವರು ಸಿನಿಲೋಕದ ದ್ರುವತಾರೆಯಾಗಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್