image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮರೆಯಾದ ಸಿನಿಲೋಕದ ಧ್ರುವತಾರೆ 'ಬಿ ಸರೋಜಾ ದೇವಿ'

ಮರೆಯಾದ ಸಿನಿಲೋಕದ ಧ್ರುವತಾರೆ 'ಬಿ ಸರೋಜಾ ದೇವಿ'

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ “ಅಭಿನಯ ಸರಸ್ವತಿ” ಮತ್ತು ತಮಿಳು ಚಿತ್ರರಂಗದಲ್ಲಿ “ಕನ್ನಡತು ಪೈಂಗಿಲಿ”(ಕನ್ನಡದ ಗಿಳಿ) ಎಂದು ಕರೆಯಲ್ಪಟ್ಟ ಬೆಂಗಳೂರು ಸರೋಜಾ ದೇವಿ ಅವರು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. 1955ರಲ್ಲಿ ಸರೋಜಾ ದೇವಿ ಅವರು ತನ್ನ 17 ನೇ ವಯಸ್ಸಿನಲ್ಲಿ, ಹೊನ್ನಪ್ಪ ಭಾಗವತರ್ ಅವರ ‘ಮಹಾಕವಿ ಕಾಳಿದಾಸ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಅವರು 1957ರಲ್ಲಿ ಬಿ ಆರ್ ಪಂತುಲು ಅವರ ‘ತಂಗಮಲೈ ರಾಗಸಿಯಂ’ ತಮಿಳು ಚಿತ್ರದಲ್ಲಿ ನಟಿಸಿದರು, 1957ರಲ್ಲಿ ಅವರು ‘ಪಾಂಡುರಂಗ ಮಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 1970 ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು. 1958ರಲ್ಲಿ ತಮಿಳು ಚಲನಚಿತ್ರ ರಂಗದಲ್ಲಿ ‘ನಾಡೋಡಿ ಮನ್ನನ್’ ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. 1959ರಿಂದ ಅವರು ‘ಪೈಗಮ್’ ಚಿತ್ರದಿಂದ ಪ್ರಾರಂಭಿಸಿ 1965ವರೆಗೆ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು. 1958 ರಿಂದ 1980 ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಮುಂದುವರೆದದ್ದು ಮಾತ್ರವಲ್ಲದೆ 1967ರಲ್ಲಿ ಸರೋಜಾ ದೇವಿ ಅವರ ಮದುವೆಯ ನಂತರ, ಅವರು 1974ರವರೆಗೆ ತಮಿಳು ಚಲನಚಿತ್ರಗಳಲ್ಲಿ ಎರಡನೇ ಬೇಡಿಕೆಯ ನಟಿಯಾಗಿ ಮುಂದುವರೆದರು, 1955 ಮತ್ತು 1984ರ ನಡುವೆ ಸರೋಜಾದೇವಿ ಅವರು ಸತತ ನೂರೈವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರಮುಖ ನಾಯಕಿಯಾಗಿ ನಟಿಸಿದ್ದಾರೆ. ಸರೋಜಾ ದೇವಿಯವರು ಬೆಂಗಳೂರಿನಲ್ಲಿ 1938ರ ಜನವರಿ 7ರಂದು ಆಗಿನ ಮೈಸೂರು ಸಾಮ್ರಾಜ್ಯದ ಬೆಂಗಳೂರಿನಲ್ಲಿ ಒಕ್ಕಲಿಗ ಕುಟುಂಬದ ಬೈರಪ್ಪ ಮತ್ತು ರುದ್ರಮ್ಮ ದಂಪತಿಗಳ ನಾಲ್ಕನೇ ಮಗಳಾಗಿ ಜನಿಸಿದರು. ಆಕೆಯ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ಭೈರಪ್ಪನವರು ಸರೋಜಾ ದೇವಿಯವರಿಗೆ ನೃತ್ಯ ಕಲಿಯುವಂತೆ ಮಾಡಿ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಅವರ ತಾಯಿಯ ಕಟ್ಟು£ಟ್ಟಾದ ಶಿಸ್ತಿನಿಂದ ಬಾಲ್ಯದಲ್ಲಿದ್ದಾಗಲೇ ಆಕೆಯ ವಸ್ತಾçಲಂಕಾರದ ಮೇಲೆ ಗಮನಕೊಟ್ಟಿರುವ ಕಾರಣದಿಂದಲೇ 1960ರ ದಶಕದಲ್ಲಿ, ಸರೋಜಾ ದೇವಿ ಅವರು ದಕ್ಷಿಣ ಭಾರತದ ಮಹಿಳೆಯರಲ್ಲಿ ಫ್ಯಾಷನ್ ಐಕಾನ್ ಆಗಿಬಿಟ್ಟರು ಎಂದು ಹೇಳಬಹುದು. ಅವರು ಕನ್ನಡ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ತನ್ನದೆ ಶೈಲಿಯಲ್ಲಿ ತೊಡುತ್ತಿದ್ದ ಸೀರೆಗಳು, ರವಿಕೆಗಳು, ಆಭರಣಗಳು, ಕೇಶವಿನ್ಯಾಸಗಳ ಶೈಲಿಯನ್ನು ಅನೇಕ ಮಹಿಳೆಯರು ತನ್ನ ಶೈಲಿಯಾಗಿ ಮಾರ್ಪಾಡಿಸಿಕೊಂಡರು. 1969ರಲ್ಲಿ ಮಲ್ಲಮ್ಮನ ಪವಾಡ, 1971ರಲ್ಲಿ ನ್ಯಾಯವೇ ದೇವರು, 1974ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ, 1977ರಲ್ಲಿ ಬಬ್ರುವಾಹನ ಮತ್ತು ಭಾಗ್ಯವಂತರು ಸೇರಿದಂತೆ ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದರು. ಶಿವಾಜಿ ಗಣೇಶನ್ ಅವರೊಂದಿಗೆ ಸರೋಜಾ ದೇವಿಯವರು ಒಂದರ ಹಿಂದೆ ಒಂದರಂತೆ ಸುಮಾರು 22 ಚಿತ್ರಗಳಲ್ಲಿ ಅಭಿನಯಿಸಿದರು. ಎನ್ ಟಿ ರಾಮರಾವ್ ಅವರೊಂದಿಗೆ ಅಭಿನಯಿಸಿದ ತೆಲುಗು ಚಿತ್ರಗಳು ಸೂಪರ್‌ಹಿಟ್ ಆದವು. ಇದು ಮಾತ್ರವಲ್ಲದೆ ಚಿರಂಜೀವಿ, ವಿಷ್ಣುವರ್ಧನ್ ಅವರ ಜೊತೆ ಕೂಡ ನಟಿಸಿದ್ದಾರೆ. 1967 ಮಾರ್ಚ್ 1ರಂದು ಸರೋಜಾ ದೇವಿ ಅವರು ಇಂಜಿನಿಯರ್ ಆಗಿರುವ ಶ್ರೀ ಹರ್ಷ ಅವರನ್ನು ವಿವಾಹ ವಾದರು. ಹರ್ಷ ಅವರು ಸರೋಜಾದೇವಿಯವರನ್ನು ಚಿತ್ರರಂಗದಲ್ಲಿ ನಟಿಸಲು ಪ್ರೋತ್ಸಾಹಿಸುತ್ತಿದ್ದರು. 1977ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಶ್ರೀ ರೇಣುಕಾದೇವಿ ಮಹಾತ್ಮೆ’ ಸರೋಜಾ ದೇವಿ ಅವರ ವೃತ್ತಿಜೀವನದ 150 ನೇ ಚಿತ್ರವಾಗಿದೆ. ಸರೋಜಾದೇವಿ ಅವರು 1985ರಲ್ಲಿ ‘ಲೇಡೀಸ್ ಹಾಸ್ಟೆಲ್’ ಚಿತ್ರಕ್ಕೆ ಸಹಿ ಹಾಕಿದರು, ಆದರೆ ಅವರ ಪತಿ ಅನಾರೋಗ್ಯಕ್ಕೆ ಒಳಗಾದ ನಂತರ ಶೂಟಿಂಗ್‌ಗೆ ಹೋಗುವುದನ್ನು ನಿಲ್ಲಿಸಿದರು. ಅವರ ಪತಿ 1986ರಲ್ಲಿ ನಿಧನರಾದ ಬಳಿಕ ಅವರು 1987ರಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಿ ಮೊದಲು ಒಪ್ಪಿಕೊಂಡಿದ್ದ ಎಂಟು ಚಲನಚಿತ್ರಗಳನ್ನು ಪೂರ್ಣಗೊಳಿಸಿದರು. ಸರೋಜಾದೇವಿ ಅವರು ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರೂ ಚಲನಚಿತ್ರ ನಿರ್ಮಾಪಕರು ಮತ್ತು ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರು ಮತ್ತೆ ನಟನೆಗೆ ಮರಳಿದರು. ಸರೋಜಾ ದೇವಿ ಅವರು ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಯನ್ನು 1969 ರಲ್ಲಿ ಮತ್ತು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು 1992ರಲ್ಲಿ ಭಾರತ ಸರಕಾರದಿಂದ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿ0ದ ಕಲೈಮಾಮಣಿ ಪ್ರಶಸ್ತಿ ಪಡೆದಿದ್ದಾರೆ. 1998ಮತ್ತು 2005 ರಲ್ಲಿ ಎರಡು ಬಾರಿ, ಸರೋಜಾ ದೇವಿ ಅವರು ಚಲನಚಿತ್ರ ತೀರ್ಪುಗಾರರ ಅಧ್ಯಕ್ಷತೆಯನ್ನು ವಹಿಸಿದ್ದರು, ಭಾರತ ಸರ್ಕಾರದಿಂದ 2008ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, 2001 ಮತ್ತು 2009ರ ಆಂಧ್ರ ಪ್ರದೇಶ ಸರಕಾರದಿಂದ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ, 1965ರಲ್ಲಿ ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ, 1969ರಲ್ಲಿ ‘ಕುಲ ವಿಲಕ್ಕು’ ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, 1980ರಲ್ಲಿ ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾ0ಚನ ಮಾಲಾ ಪ್ರಶಸ್ತಿ, 1988ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1993 ರಲ್ಲಿ ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಿಕೊಂಡಿದ್ದಾರೆ. ಸರೋಜಾದೇವಿ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದು, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ಮತ್ತು ತಾಯಿಯ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ಗಳು, ಪುನರ್ವಸತಿ ಕೇಂದ್ರಗಳು ಮತ್ತು ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲೂ ಹೆಸರು ಮಾಡಿರುವ ಇಂತಹ ಮಹಾನ್ ಕಲಾವಿದೆಯಾದ ಸರೋಜಾದೇವಿಯವರು   ಸಿನಿಲೋಕದ ಧ್ರುವತಾರೆಯಾಗಿ ತನ್ನ 87 ನೇ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಳಿದ್ದಾರೆ. ಇವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥನೆ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ