image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಬ್ರುವಾಹನ ದಂತಹ ಸಿನಿಮಾಗಳಿಗೆ ಸಂಗೀತ ನೀಡಿರುವವರು 'ಟಿ ಜಿ ಲಿಂಗಪ್ಪ'..

ಬಬ್ರುವಾಹನ ದಂತಹ ಸಿನಿಮಾಗಳಿಗೆ ಸಂಗೀತ ನೀಡಿರುವವರು 'ಟಿ ಜಿ ಲಿಂಗಪ್ಪ'..

ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಹೆಸರಾಂತ ಕಲಾವಿದರ, ನಿರ್ದೇಶಕರ ಚಿತ್ರಗಳಲ್ಲಿ ಗಾಯಕನಾಗಿ, ರಾಗ ಸಂಯೋಜಕರಾಗಿ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಯಶಸ್ವಿಯಾದವರು ಟಿ ಜಿ ಲಿಂಗಪ್ಪನವರು. 1951ರಲ್ಲಿ ‘ಮೋಹನ ಸುಂದರಂ’ ತಮಿಳು ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಟಿ. ಜಿ.ಲಿಂಗಪ್ಪ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾಗಲೇ ಒಂದೆರಡು ಕನ್ನಡ ಚಿತ್ರಗಳಿಗೆ ಸಂಗೀತ ನೀಡುತ್ತಾ ಬಂದರು. ಆದರೆ ಅಣ್ಣಾವ್ರ ಚಿತ್ರಗಳಿಗೆ ಸಂಗೀತ ನೀಡಲು ಶುರು ಮಾಡಿದ ಮೇಲೆ ಅನೇಕ ಕನ್ನಡ ಚಿತ್ರಗಳಿಗೆ ಸಂಗೀತ ನೀಡಿ ಜನಮನ್ನಣೆ ಗಳಿಸಿದರು. ದೇವರ ಕಣ್ಣು, ಹೊಸಲು ಮೆಟ್ಟಿದ ಹೆಣ್ಣು, ಕಾಲೇಜು ರಂಗ, ಬಬ್ರುವಾಹನ, ಲಕ್ಷ್ಮಿ ನಿವಾಸ, ಒಂದು ಪ್ರೇಮದ ಕಥೆ, ವೀರ ಸಿಂಧೂರ ಲಕ್ಷ್ಮಣ, ಕುದುರೆ ಮುಖ, ತಾಯಿಗೆ ತಕ್ಕ ಮಗ, ಮಧು ಚಂದ್ರ, ಭಕ್ತ ಸಿರಿಯಾಳ, ಭಾಗ್ಯವಂತ, ಹಾಸ್ಯರತ್ನ ರಾಮಕೃಷ್ಣ, ಭಕ್ತ ಪ್ರಹ್ಲಾದ, ಗೆಲುವು ನನ್ನದೇ, ಅದೇ ಕಣ್ಣು, ಶಿವ ಕೊಟ್ಟ ಸೌಭಾಗ್ಯ, ಶ್ರುತಿ ಸೇರಿದಾಗ, ಶಿವ ಮೆಚ್ಚಿದ ಕಣ್ಣಪ್ಪ ಮುಂತಾದ ಅನೇಕ ಕನ್ನಡ ಚಿತ್ರಗಳಿಗೆ ಸಂಗೀತ ನೀಡಿ ಹೆಸರುವಾಸಿಯಾಗಿದ್ದಾರೆ. ಒಂದು ಸಮಯದಲ್ಲಿ ಗಿಟರ್ ವಾದಕರಾಗಿ ಮೇಲುಗೈ ಸಾಧಿಸಿದ ಟಿ ಜಿ ಲಿಂಗಪ್ಪ ಸಂಯೋಜಿಸುತ್ತಿದ್ದ ರಾಗಗಳೇ ಅದ್ಭುತವಾಗಿದ್ದವು. ಇಂದು ಅವರ ಮಗ ಕಿಶೋರ್ ಲಿಂಗಪ್ಪ ಕೂಡ ಗಿಟರ್ ವಾದಕರಾಗಿರುವುದು ವಿಶೇಷ. ತಿರುಚ್ಚಿಯಲ್ಲಿ ವಾಸವಾಗಿದ್ದ ಜಿ. ಗೋವಿಂದರಾಜುಲು ನಾಯ್ಡು ಮತ್ತು ಗೌರಿ ದಂಪತಿಗಳಿಗೆ 1927 ರ ಅಗೋಸ್ಟು 22 ರಂದು ಲಿಂಗಪ್ಪನವರು ಎರಡನೇ ಮಗನಾಗಿ ಜನಿಸಿದರು. ಜಿ. ಗೋವಿಂದರಾಜುಲು ನಾಟಕಗಳಲ್ಲಿ ಹಾರ್ಮೋನಿಯಂ ವಾದಕರಾಗಿದ್ದುಕೊಂಡು ಇತರರಿಗೂ ಸಂಗೀತ ಕಲಿಸುತ್ತಾ, ಸಂಗೀತ ಉಪಕರಣಗಳನ್ನು ಮಾರಾಟ ಮಾಡುತ್ತಾ ನಂತರದ ದಿನಗಳಲ್ಲಿ ತನ್ನ ಕುಟುಂಬವನ್ನು ಮದ್ರಾಸ್‌ಗೆ ಕರೆದುಕೊಂಡು ಹೋದರು. ಬಾಲ್ಯದಲ್ಲೇ ಕಲಾಮಾಧ್ಯಮದ ಮೇಲೆ ಇದ್ದ ಅಪಾರ ಅಭಿಮಾನದಿಂದ, ತನ್ನ 14 ನೇ ವಯಸ್ಸಿನಲ್ಲಿಯೇ ಲಿಂಗಪ್ಪನವರು ವಿಶ್ವನಾಥನ್ ನಿರ್ಮಿಸಿದ ‘ಕಾಮತೇನು’ ಚಿತ್ರದಲ್ಲಿ ನಟಿಸಲು ಪ್ರಯತ್ನಿಸಿದರು. ಆದರೆ ವಿಶ್ವನಾಥನ್ ಅವರು ಲಿಂಗಪ್ಪ ಅವರನ್ನು ಹಾಡಲು ಮತ್ತು ಅವಕಾಶ ನೀಡಲು ಸ್ವಲ್ಪ ಸಮಯ ತಮ್ಮ ಬಳಿ ಇರುವಂತೆ ಕೇಳಿಕೊಂಡರು. ಆದರೂ ಅದು ಫಲಪ್ರದವಾಗದಿದ್ದಾಗ ಅಲ್ಲಿಂದ ತೆರಳಿದರು. ಅವರು ಸಂಗೀತ ವಾದ್ಯಗಳನ್ನು ನುಡಿಸಲು ಸಮರ್ಥರಾಗಿದ್ದರಿಂದ, ನಂತರ ಮಯೂರ ಫಿಲ್ಮ್ ಆರ್ಕೆಸ್ಟ್ರಾವನ್ನು ಸೇರಿಕೊಂಡು, ಹಾರ್ಮೋನಿಯಂ, ಮ್ಯಾಂಡೋಲಿನ್ ಮತ್ತು ಗಿಟಾರ್ ನುಡಿಸಿದರು. ಈ ಆರ್ಕೆಸ್ಟ್ರಾ ಚಲನಚಿತ್ರಗಳಿಗೆ ಮತ್ತು ಗ್ರಾಮಫೋನ್‌ಗೆ ಸಂಗೀತವನ್ನು ನುಡಿಸುತ್ತಿತ್ತು. 1941 ರಲ್ಲಿ ಅಶೋಕ್ ಕುಮಾರ್ ಅವರಿಗೆ ವಾದ್ಯಗಳನ್ನು ನುಡಿಸುತ್ತಿದ್ದ ಲಿಂಗಪ್ಪನವರು ಸಿ. ರಾಮಚಂದ್ರ ಮತ್ತು ಹಿರಿಯ ಕಲಾವಿದರೊಂದಿಗೆ ಜೆಮಿನಿ ಸ್ಟುಡಿಯೋಸ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಮುಂದಾದಾಗ ಚಿಕ್ಕ ವಯಸ್ಸಿನ ಕಾರಣ ಲಿಂಗಪ್ಪ ಅವರನ್ನು ತಿರಸ್ಕರಿಸಲಾಯಿತು. ಆದರೂ ಹಠಬಿಡದೆ ಲಿಂಗಪ್ಪನವರು ಸಂಗೀತ ನಿರ್ದೇಶಕ ಟಿ.ಎ.ಕಲ್ಯಾಣಂ ಹಾಗೂ ಇನ್ನಿತರ ದಿಗ್ಗಜರ ಬಳಿ ಅವಕಾಶಕ್ಕಾಗಿ ಸುತ್ತಾಡಿದರು. 1945 ರಲ್ಲಿ, ಲಿಂಗಪ್ಪ ಪ್ರಗತಿ ಸ್ಟುಡಿಯೋದಲ್ಲಿ ಆರ್. ಸುದರ್ಶನಂ ಅವರ ಅಡಿಯಲ್ಲಿ ಕೆಲಸ ಮಾಡಿದರು.  1945 ರಲ್ಲಿ ಶ್ರೀ ವಲ್ಲಿ ಚಿತ್ರದಲ್ಲಿ ವಾದ್ಯಗಳನ್ನು ನುಡಿಸಿದರು. 1947 ರಲ್ಲಿ ಎವಿಎಂ ಪ್ರೊಡಕ್ಷನ್ಸ್ ‘ನಮ್ ಇರುವರ್’ ಚಿತ್ರವನ್ನು ನಿರ್ಮಿಸಿದಾಗ ಲಿಂಗಪ್ಪ ಸಂಗೀತ ವಾದ್ಯಗಳನ್ನು ನುಡಿಸಲು ಕರಕ್ಕುಡಿಗೆ ಹೋಗಿದ್ದರು. ನಂತರ 1948 ರಲ್ಲಿ, ಮತ್ತೆ ಮದ್ರಾಸಿಗೆ ಹಿಂದಿರುಗಿ ಲಿಂಗಪ್ಪನವರು ಸಿ. ಆರ್. ಸುಬ್ಬುರಾಮನ್ ಅವರ ಅಡಿಯಲ್ಲಿ ಕೆಲಸ ಮಾಡಿದರು. ವಿಭಿನ್ನ ಹೆಸರಾಂತ ಸಂಗೀತ ನಿರ್ದೇಶಕರ ಅಡಿಯಲ್ಲಿ ಆದ ಈ ಎಲ್ಲಾ ಅನುಭವವು ಸ್ವತಂತ್ರ ಸಂಗೀತಗಾರನಾಗುವ ಕಲ್ಪನೆಯನ್ನು ಹುಟ್ಟುಹಾಕಿತು. ಅವರು ವಿದೇಶದಿಂದ ಆಧುನಿಕ ಉಪಕರಣಗಳನ್ನು ಖರೀದಿಸಲು ಹೋದರು. ವಿಶೇಷವಾಗಿ ಲಂಡನ್ ನಲ್ಲಿ ಅವರು ಎಲೆಕ್ಟ್ರಿಕ್ ಗಿಟಾರ್ ಖರೀದಿಸಿದರು. ಸಂಗೀತ ನಿರ್ದೇಶಕರಾದ ಜಿ. ರಾಮನಾಥನ್, ಎಸ್. ವಿ. ವೆಂಕಟ್ರಾಮನ್ ಮತ್ತು ಕೆ. ವಿ. ಮಹದೇವನ್ ತಮ್ಮ ಹಲವಾರು ಹಾಡುಗಳಿಗೆ ಲಿಂಗಪ್ಪನವರನ್ನು ಬಳಸಿಕೊಂಡಿದ್ದರು. ಅಂದಿನಿಂದ ಲಿಂಗಪ್ಪ ಎಲ್ಲ ಪ್ರಮುಖ ಸಂಗೀತ ನಿರ್ದೇಶಕರ ಬಳಿ ಹಲವು ವಾದ್ಯಗಳನ್ನು ನುಡಿಸುತ್ತಿದ್ದರು. ಗಾಯಕ ನಟರಾದ ಎಂ. ಎಂ. ದಂಡಪಾಣಿ ದೇಶಿಕರ್, ಟಿ. ಆರ್. ಮಹಾಲಿಂಗಂ, ಕೆ.ಆರ್.ರಾಮಸ್ವಾಮಿ, ಯು.ಆರ್.ಜೀವರತ್ನಂ, ಮುಂತಾದವರ ಸಂಯೋಜನೆಯಲ್ಲಿ ಸ್ಮರಣೀಯ ಗೀತೆಗಳನ್ನು ಹಾಡಿದರು. ಓ ಆರ್ ಮಹಾಲಿಂಗಂ ಅವರು 1950 ರಲ್ಲಿ ನಿರ್ಮಿಸಿದ ಮೊದಲ ಚಿತ್ರ ಮಚ್ಚಾ ರೇಗೈ ಚಿತ್ರಕ್ಕೆ ಸಂಗೀತ ನೀಡಿದ್ದ ಸುಬ್ಬುರಾಮನ್ ಹಠಾತ್ತನೆ ನಿಧನರಾದ ಕಾರಣ, ಸುಬ್ಬು ರಾಮನ್ ಅವರ ಮ್ಯಾನೇಜರ್ ಆಗಿದ್ದ ಬಿ. ಆರ್. ಪಂತುಲು ಮತ್ತು ಲಿಂಗಪ್ಪನವರು ಆತ್ಮೀಯರಾದ್ದರಿಂದ ‘ನಮ್ ಇರುವರ್’ ಚಿತ್ರದಲ್ಲಿ ಹತ್ತಿರವಾದ ಟಿ.ಆರ್.ಮಹಾಲಿಂಗಂ 1951 ರಲ್ಲಿ ನಿರ್ಮಿಸಿದ ‘ಮೋಹನ ಸುಂದರಂ’ ಎರಡನೇ ಚಿತ್ರಕ್ಕೆ ಲಿಂಗಪ್ಪ ಅವರಿಗೆ ಸಂಗೀತ ಸಂಯೋಜಿಸುವ ಅವಕಾಶವನ್ನು ನೀಡಿದರು. ‘ಮೋಹನ ಸುಂದರಂ’ ನಲ್ಲಿ ಹತ್ತಕ್ಕೂ ಹೆಚ್ಚು ಹಾಡುಗಳಿವೆ. ಹಾಡುಗಳ ಯಶಸ್ಸಿಗೆ ಕಾರಣ ಟಿ.ಆರ್.ಮಹಾಲಿಂಗಂ ಮತ್ತು ಲಿಂಗಪ್ಪ ಇಬ್ಬರೂ ಕರ್ನಾಟಕ ಸಂಗೀತವನ್ನು ಬಲ್ಲವರಾದ್ದರಿಂದ ಒಟ್ಟಿಗೆ ಕುಳಿತು ರಾಗಗಳನ್ನು ಚರ್ಚಿಸಿದರು. ಆನಂತರ ಟಿ. ಆರ್. ಮಹಾಲಿಂಗಂ ಅವರು ತಮ್ಮ ಇತರ ಚಿತ್ರಗಳಾದ ‘ಚಿನ್ನ ದುರೈ’ ಮತ್ತು ‘ವಿಲಾಯಟ್ಟು ಬೊಮ್ಮಾಯಿ’ ಯಲ್ಲಿ ಲಿಂಗಪ್ಪ ಅವರಿಗೆ ಅವಕಾಶವನ್ನಿತ್ತರು. ಬಿ.ಆರ್.ಪಂತುಲು ಅವರು ಟಿ.ಆರ್.ಮಹಾಲಿಂಗಂ ಅವರಿಂದ ಬೇರ್ಪಟ್ಟು ಪದ್ಮಿನಿ ಪಿಕ್ಚರ್ಸನ್ನು ಪ್ರಾರಂಭಿಸಿದರು, ಪದ್ಮಿನಿ ಪಿಕ್ಚರ್ಸ್ ಗಾಗಿ ಲಿಂಗಪ್ಪನವರು ತಮಿಳಿನಲ್ಲಿ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳಿಗೆ ಸಂಗೀತ ನೀಡಿದರು. ತನ್ನ ರಾಗ ಸಂಯೋಜನೆಯಿಂದಲೇ ಯಶಶ್ವಿಯಾಗಿ ಟಿ.ಆರ್.ಮಹಾಲಿಂಗಂ, ಬಿ ಆರ್ ಪಂತುಲು, ಹುಣಸೂರು ಕೃಷ್ಣಮೂರ್ತಿಗಳ ಒಡನಾಟ ಗಳಿಸಿ ‘ಬಬ್ರುವಾಹನ’ ದಂತಹ ಚಿತ್ರಗಳಿಗೆ ಸಂಗೀತ ನೀಡಿ ಕಲಾಪ್ರೇಮಿಗಳ ಹೃದಯದಲ್ಲಿ ಸಿನಿಲೋಕದ ಧ್ರುವತಾರೆಯಾಗಿ ಮೆರೆದ ಟಿ ಜಿ ಲಿಂಗಪ್ಪನವರು 2000 ನೇ ಫೆಬ್ರವರಿ 5 ರಂದು ವಿಧಿವಶರಾದರು.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ