image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಮ್ಮ ಜೀವನವನ್ನು ಸಂಗೀತಕ್ಕೇ ಮತ್ತು ತನ್ನ ಕುಟುಂಬಕ್ಕಾಗಿ ಮುಡಿಪಾಗಿಟ್ಟವರು ಗಾನಕೋಗಿಲೆ ಲತಾ ಮಂಗೇಶ್ಕರ್..

ತಮ್ಮ ಜೀವನವನ್ನು ಸಂಗೀತಕ್ಕೇ ಮತ್ತು ತನ್ನ ಕುಟುಂಬಕ್ಕಾಗಿ ಮುಡಿಪಾಗಿಟ್ಟವರು ಗಾನಕೋಗಿಲೆ ಲತಾ ಮಂಗೇಶ್ಕರ್..

 

 

ಸಹಸ್ರಾರು ಹಾಡುಗಳನ್ನು ಹಾಡಿ ಜನಮನ್ನಣೆ ಪಡೆದಿರುವ ಗಾನಕೋಗಿಲೆ ಲತಾ ಮಂಗೇಶ್ಕರ್. ಈ ಹೆಸರನ್ನು ಕೇಳದವರೇ ಇರಲು ಸಾಧ್ಯ ಇಲ್ಲಾ. ದೇಶ ವಿದೇಶಗಳಲ್ಲೂ ಪ್ರಖ್ಯಾತವಾಗಿರುವ ಹೆಸರು ಲತಾ ಮಂಗೇಶ್ಕರ್. ಯಾಕೆಂದರೆ ಇವರು ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ತನ್ನ ಮಧುರವಾದ ಸ್ವರದಿಂದ ಲೆಕ್ಕವಿಡಲಾರದಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುವ ಗಾಯಕಿ. ಹೆಚ್ಚು ಕಮ್ಮಿ 75 ವರ್ಷಗಳ ಕಾಲ ಹಾಡಿ ಜನಮನ ಸೆಳೆದ ಗಾನ ಕೋಗಿಲೆ. 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್, ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳ ಸುರಿಮಳೆಯಲ್ಲೆ ಮಿಂದ ಅದ್ಭುತ ಪ್ರತಿಭೆಗೆ ಭಾರತ ಸರಕಾರದಿಂದ ಕೊಡಮಾಡುವ 1969 ರಲ್ಲಿ ಪದ್ಮಭೂಷಣ 1999 ರಲ್ಲಿ ಪದ್ಮ ವಿಭೂಷಣ ಹಾಗೆಯೇ 2001 ರಲ್ಲಿ ಭಾರತರತ್ನ ಗೌರವ. ಈ ಮಟ್ಟಕ್ಕೆ ಲತಾಮಂಗೇಶ್ಕರ್ ಬೆಳೆಯಬೇಕಾದರೆ ಅವರ ಪರಿಶ್ರಮವೇ ಕಾರಣ. ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಸ್ವರವನ್ನು ಅಳವಡಿಸಿ ಹಾಡುವ ಕಲೆ ಇದೆಲ್ಲವನ್ನು ಗಮನಿಸಿದರೆ ಲತಾ ಅವರ ಕೆಲಸದಲ್ಲಿದ್ದ ಶ್ರದ್ದೆ ಮತ್ತು ಭಕ್ತಿ ಅವರನ್ನು ಮೇರು ಪರ್ವತದ ಎತ್ತರಕ್ಕೆ ಏರಿಸಿತು ಎಂದರೆ ತಪ್ಪಾಗಲಾರದು. ಲತಾ ಮಂಗೇಶ್ಕರ್ ಅವರು ಶಾಸ್ತ್ರೀಯ ಸಂಗೀತಕಾರ ಮತ್ತು ರಂಗ ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ. ಮಧ್ಯಪ್ರದೇಶದ ಇಂದೋರಿನಲ್ಲಿ 1929 ಸೆಪ್ಟಂಬರ್ 29 ರಂದು ಜನಿಸಿದರು. ‘ಬಲವಂತ್ ಸಂಗೀತ್ ಮಂಡಳಿ’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ದೀನಾನಾಥ್ ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜ ಸೇವಕ. ಕೆಲವು ಸಮಸ್ಯೆಗಳಿಂದ ಕಂಪೆನಿ ಮುಚ್ಚಲ್ಪಟ್ಟಿತು. ದೀನನಾಥ್ ಅವರಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಒಬ್ಬ ಗಂಡು ಮಗ. ದೀನಾನಾಥ್ ತನ್ನ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಮಾಡುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಎಳೆಯ ವಯಸ್ಸಿನಲ್ಲಿಯೆ ಲತಾ ತಿದ್ದುವುದನ್ನು ಗಮನಿಸಿದ ದೀನಾನಾಥ್ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದನ್ನು ಮನಗಂಡರು. ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತ ಪಾಠ ಪ್ರಾರಂಭಿಸಿದರು. ತಂದೆಯೇ ಲತಾ ಅವರ ಪ್ರಥಮ ಗುರುವಾದರು. ಹಾಗೇಯೇ ಸಂಗೀತ ಜ್ಙಾನ ಬೆಳೆಸಿಕೊಂಡ ಲತಾ ಮಂಗೇಶ್ಕರ್ ಹಿಂದಿ ಚಿತ್ರರಂಗದಲ್ಲಿ ಹೆಚ್ಚಿನ ಹಾಡುಗಳನ್ನು ಹಾಡಿವುದರ ಜೊತೆಗೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. 1967ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದರು. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಲತಾ ಅವರು ಬರೀ ಗಾಯಕಿ ಮಾತ್ರ ಅಲ್ಲ. ನಟಿ ಕೂಡ ಆಗಿದ್ದರು. ‘ಸಂಗೀತ್ ಸೌಭದ್ರ್’ ಎಂಬ ಮರಾಠಿ ನಾಟಕದ ನಾರದನ ಪಾತ್ರಧಾರಿ ಏನೋ ಕಾರಣದಿಂದ ಬರದೆ ಇರುವಾಗ ಲತಾ, ತಂದೆಯವರನ್ನು ಒಪ್ಪಿಸಿ ತಾವೇ ಆ ಪಾತ್ರವನ್ನು ಮಾಡಿದರಂತೆ. ಆಗ ಅವರಿಗಿನ್ನು 8 ವರ್ಷ. ಆಗಲೇ ಕಲಾಭಿಮಾನಿಗಳಿಂದ ಒನ್ಸ್ ಮೋರ್ ಗಿಟ್ಟಿಸಿಕೊಂಡ ಲತಾ ಅವರಮೂಲ ಹೆಸರು ಹೇಮಾ. “ಭಾವ್ ಬಂಧನ್” ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದು ಬದಲಾಯಿತು. ನಂತರ ‘ರಾಮಕೃಷ್ಣ ಬುವಾವಚೆ’ ಮತ್ತು ‘ಉಸ್ತಾದ್ ಅಮಾನತ್ ಖಾನ್’ ಅವರ ಬಳಿ ಸಂಗೀತ ಶಿಕ್ಷಣ ಪಡೆದರು.

ಶಾಸ್ತ್ರೀಯ ಸಂಗೀತ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ 41 ನೇ ವರ್ಷದಲ್ಲೇ ತೀರಿಕೊಂಡಾಗ 13 ವರ್ಷದ ಬಾಲಕಿಯಾಗಿದ್ದ ಲತಾ ಅವರ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿತ್ತು. ತಾಯಿ, 4 ಜನ ತಂಗಿಯರು, ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿ ಕೊಳ್ಳುವುದಕ್ಕಾಗಿ ಅವರು ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಬೇಕಾಗಿ ಬಂತು. 1942 ರಲ್ಲಿ ಪ್ರಾರಂಭಮಾಡಿದ ಮರಾಠಿ ಚಿತ್ರ ‘ಕಿತೀ ಹಸಾಲ್’ ನಲ್ಲಿ ಹಾಡಿದರೂ ಕಾರಣಾಂತರಗಳಿಂದ ಅವರ ಹಾಡು ಸೇರ್ಪಡೆಯಾಗಲಿಲ್ಲ. ಇಂದರಿಂದ ಲತಾ ಪುಣೆಗೆ ಬಂದರು. ಕೊಲ್ಲಾಪುರದಲ್ಲಿ ಸ್ವಲ್ಪ ದಿನವಿದ್ದು, 1947 ರಲ್ಲಿ ತನ್ನ ಕುಟುಂಬ ಪರಿವಾರದೊಡನೆ ಮುಂಬಯಿ ನ ನಾನಾ ಚೌಕ್ ನಲ್ಲಿ ಬಂದು ನೆಲೆಸಿದರು. 1947 ರಲ್ಲಿ ಹಿಂದಿ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು. ‘ಆಪ್ ಕಿ ಸೇವಾಮೆ’, ‘ಪಾಂ ಲಾಗೂ ಕರ್ ಚೋರಿರೇ’ ಎಂಬ ಹಾಡುಗಳನ್ನು ಹಾಡಿದರು. ‘ಹುಸ್ನ್ ಲಾಲ್ ಭಗತ್ ರಾಮ್’ ಅವರು ಆಕೆಯ ಕಂಠಶ್ರೀಯನ್ನು ಕೇಳಿ ಮೆಚ್ಚಿ ಸರಿಯಾದ ಅವಕಾಶವನ್ನು ಕೊಟ್ಟರು.

ಅಲ್ಲಿಂದ ಲತಾ ಮಂಗೇಶ್ಕರ್ ಅವರ ಸಿನಿಪಯಣ ಶುರುವಾಯಿತು. ಭಾರತೀಯ ಚಿತ್ರರಂಗ ಅವರ ಹಿಂದೆ ಬೀಳುವಂತೆ ಮಾಡಿತು. ಹಿಂದಿ ಚಿತ್ರರಂಗದಲ್ಲಿ ಅವರನ್ನು “ಲತಾ ದೀದಿ” ಎಂದೇ ಕರೆಯುತ್ತಾರೆ. ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮತ್ತು ತನ್ನ ಕುಟುಂಬಕ್ಕಾಗಿ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ವಿಶೇಷ. ಆಶಾ ಮತ್ತು ಲತಾ, ಉಷಾ ಮತ್ತು ಲತಾ, ಮೀನಾ ಮತ್ತು ಲತಾ ಹಾಡಿರುವ ಕೆಲವು ಯುಗಳಗೀತೆಗಳೂ ಪ್ರಸಿದ್ಧವಾಗಿವೆ. ತಮ್ಮ ಹೃದಯನಾಥ್ ಮಂಗೇಶ್ಕರ್ ಸಂಗೀತ ನಿರ್ದೇಶನದಲ್ಲಿ ಲತಾ ಅನೇಕ ಗೀತೆಗಳನ್ನು, ಭಜನೆಗಳನ್ನು ಹಾಡಿದ್ದಾರೆ. “ಲೇಕಿನ್” ಎಂಬ ಕಲಾತ್ಮಕ ಚಿತ್ರ ಸೇರಿ ನಾಲ್ಕು ಚಿತ್ರವನ್ನು ಲತಾ ನಿರ್ಮಿಸಿದ್ದಾರೆ. ನಾಯಕಿಯಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶನ ಮಾಡಿದ್ದಾರೆ.

ಲತಾರವರ ಆತ್ಮಚರಿತ್ರೆಯಾಗಿ “ಪುಲೆ ವೇಚಿತಾ” “ಹಾಡುಹಕ್ಕಿಯ ಹೃದಯಗೀತೆ’ ಎಂಬ ಪುಸ್ತಕಗಳು ಪ್ರಕಟಗೊಂಡಿವೆ. ನಾಯಕಿ, ಗಾಯಕಿ, ನಿರ್ಮಾಪಕಿ, ಸಂಗೀತ ನಿರ್ದೇಶಕಿ ಎಲ್ಲವೂ ಆಗಿದ್ದ ಲತಾ ಮಂಗೇಶ್ಕರ್ ಕಲಾಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಸಿನಿಲೋಕದ ಧ್ರುವತಾರೆಯಾಗಿ ನೆಲೆಸಿ 2022 ರ ಫೆಬ್ರವರಿ 6ರಂದು ಇಹಲೋಕ ತ್ಯಜಿಸಿದರು.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ