ಕನ್ನಡ ಚಲನಚಿತ್ರ ರಂಗ ಉದಯವಾದದ್ದು 1931 ರಲ್ಲಿ “ಮೃಚ್ಛಕಟಿಕ’ಎಂಬ ಮೂಕಿಚಿತ್ರದಲ್ಲಾದರೂ ಮೊದಲನೇ ಮಾತಿನ ಚಿತ್ರ ‘ಸತೀಸುಲೋಚನ’. ರಾಮಾಯಣದಲ್ಲಿ ಬರುವ ಸುಲೋಚನ ಪಾತ್ರವನ್ನು ಆಧರಿಸಿದ ಕಥೆ ಇದು. ವೈ. ವಿ. ರಾವ್ ನಿರ್ದೇಶಿಸಿದ ಈ ಚಲನಚಿತ್ರವು ಮಾರ್ಚ್ 3, 1934 ರಂದು ಬಿಡುಗಡೆಯಾಯಿತು. ಬೆಂಗಳೂರಿನ ಮಾರ್ವಾಡಿ ಉದ್ಯಮಿ ರಾಜಸ್ಥಾನದ ಜಲೋರ್ ಜಿಲ್ಲೆಯ ಅಹೋರ್ ಮೂಲದವರಾದ ಚಮನಲಾಲ್ ದೂಂಗಾಜಿ ಮತ್ತು ಶಾ ಭುರ್ಮಲ್ ಚಮನ್‌ಲಾಲ್ಜಿ ಈ ಚಿತ್ರವನ್ನು ನಿರ್ಮಿಸಿದರು. ಬೆಂಗಳೂರಿನ ಸಿಟಿ ಮಾರ್ಕೆಟ್ ಬಳಿಯಲ್ಲಿದ್ದ ಪ್ಯಾರಾಮೌಂಟ್ ಸಿನಿಮಾ ಥಿಯೇಟರ್(ಪರಿಮಳಾ ಟಾಕೀಸ್)ನಲ್ಲಿ ಬಿಡುಗಡೆಯಾಯಿತು. ಕನ್ನಡದ ಮೊದಲ ಟಾಕಿ ಚಿತ್ರವಾದ ಇದು ಬೆಂಗಳೂರಿನಲ್ಲಿ ಆರು ವಾರಗಳ ಕಾಲ ಹೌಸ್‌ಫುಲ್ ಆಗಿ ಓಡಿತು. ಈ ಚಿತ್ರದಲ್ಲಿ ರಂಗಭೂಮಿಯ ಘಟಾನುಘಟಿಗಳೇ ಇದ್ದರು. ಸುಲೋಚನಾ ಪಾತ್ರದಲ್ಲಿ ತ್ರಿಪುರಾಂಬಾ, ರಾವಣನಾಗಿ ಆರ್. ನಾಗೇಂದ್ರ ರಾವ್ ಮಂಡೋದರಿಯಾಗಿ ಲಕ್ಷ್ಮಿ ಬಾಯಿ, ಲಕ್ಷ್ಮಣನಾಗಿ ವೈ. ವಿ. ರಾವ್ ನಾರದನಾಗಿ ಸಿ.ವಿ.ಶೇಷಾಚಲಂ, ರಾಮನಾಗಿ ಡಿ.ಎ.ಮೂರ್ತಿ ರಾವ್, ಸಖಿಯಾಗಿ ಎಸ್. ಕೆ. ಪದ್ಮಾದೇವಿ ಅಭಿನಯಿಸಿದ್ದರು. ಈ ವಿಷಯವನ್ನು ಯಾಕೆ ಪ್ರಸ್ತಾಪಿಸಿದೆನಂದರೆ ಇವತ್ತಿನ ಸಿನಿಲೋಕದ ಧ್ರುವತಾರೆ ಮೊದಲ ಮಾತಿನ ‘ಸತಿ ಸಲೋಚನ’ ಚಿತ್ರದ ಪ್ರಧಾನ ಪಾತ್ರದಾರಿ ಮತ್ತು ರಂಗಭೂಮಿಯ ಮೇಧಾವಿ ಕಲಾವಿದ ಎಮ್ ವಿ ಸುಬ್ಬಯ್ಯ ನಾಯ್ಡು. ಈ ಚಿತ್ರದಲ್ಲಿ ಇಂದ್ರಜಿತ್ ಆಗಿ ಸುಬ್ಬಯ್ಯ ನಾಯ್ಡು ಮೆರುಗು ನೀಡಿದರು. ಇವರು ಕನ್ನಡ ಚಿತ್ರರಂಗದ ಹೆಸರುವಾಸಿ ನಟ ಲೋಕೇಶ್ ಅವರ ತಂದೆ ಮತ್ತು ಕನ್ನಡ ಚಿತ್ರರಂಗದ ನಟ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆ ಸೃಜನ್ ಲೋಕೇಶ್ ಹಾಗೂ ನಟಿ ಪೂಜಾ ಲೋಕೇಶ್ ಅವರ ತಾತ. ಇವರ ಪೂರ್ತಿ ಹೆಸರು ಮೈಸೂರು ವೆಂಕಟಪ್ಪ ಸುಬ್ಬಯ್ಯ ನಾಯ್ಡು. ನಾಯ್ಡು ಅವರು ತಮ್ಮ ನಟನಾ ವೃತ್ತಿಜೀವನವನ್ನು ರಂಗಭೂಮಿ ನಾಟಕಗಳಲ್ಲಿ ಪ್ರಾರಂಭಿಸಿದರು. ನಾಯ್ಡು ಅವರು ಅತೀ ಕಡಿಮೆ ಸಮಯದಲ್ಲಿ ನಟರಾಗಿ, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಪ್ರವರ್ಧನಮಾನಕ್ಕೆ ಬಂದರು. ನಾಯ್ಡು ಅವರು ಚೈತನ್ಯದಿಂದ ನಿರ್ವಹಿಸಿದ ಪಾತ್ರಗಳು ಅವರನ್ನು ಕಲಾಭಿಮಾನಿಗಳು ಗುರುತಿಸುವಂತೆ ಮಾಡಿತು. ಆರ್. ನಾಗೇಂದ್ರರಾವ್ ನಾಯ್ಡು ಅವರೊಂದಿಗೆ ಚಿತ್ರಗಳಲ್ಲಿ ಅಭಿನಯಿಸಿದರು. ಅವರಿಬ್ಬರ ಭಾಂದವ್ಯ ಚೆನ್ನಾಗಿತ್ತು. ಅವರು 1940 ರಲ್ಲಿ ಭೂಕೈಲಾಸ, 1941 ರಲ್ಲಿ ವಸಂತಸೇನಾ, 1943 ರಲ್ಲಿ ಸತ್ಯ ಹರಿಶ್ಚಂದ್ರ, ಮತ್ತು 1947 ರಲ್ಲಿ ಮಹಾತ್ಮ ಕಬೀರ್ ಮುಂತಾದ ಕನ್ನಡ ಚಲನಚಿತ್ರಗಳನ್ನು ಮಾಡಿದರು. ಒಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಾಯ್ಡು ಅವರ ಅಂತಿಮ ನಟನೆ 1958 ರ ಚಲನಚಿತ್ರ ‘ಭಕ್ತ ಪ್ರಹ್ಲಾದ’ ದಲ್ಲಿ ಆಯಿತೆಂದು ಹೇಳಬಹುದು. ಅವರಿಗೆ 1961 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 1896 ರಲ್ಲಿ ಮೈಸೂರು ಪ್ರಾಂತ್ಯದ ಹೆಗ್ಗಡೆ ದೇವನ ಕೋಟೆಯಲ್ಲಿರುವ ಮಾದಪುರದಲ್ಲಿ ಜನಿಸಿದ ಎಮ್ ವಿ ಸುಬ್ಬಯ್ಯ ನಾಯ್ಡು ಅವರು 21 ಜುಲೈ 1962 ರಂದು ಮಂಡ್ಯ ದಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಆಗ ಅವರು ತಮ್ಮ ತಂಡವಾದ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯೊಂದಿಗೆ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡರು. ತನ್ನ ತಂಡದೊಂದಿಗೆ ಮಂಡ್ಯದಲ್ಲಿದ್ದು ನಾಯ್ಡು ಅವರು ನಾಟಕವೊಂದರಲ್ಲಿ ಅಂಬರೀಷ ಪಾತ್ರ ಮಾಡುತ್ತಿದ್ದರು. ನಾಯ್ಡು ಅವರು ನಿಧನರಾದ ದಿನದಂದೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಿಸಿ, ಸುಬೇದಾರ್ ಛತ್ರಂ ರಸ್ತೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಾಯ್ಡು ಅವರ ಸಾವಿನ ಸುದ್ದಿ ಕೇಳಿ ಅವರ ಪತ್ನಿ ಮುನಿವೆಂಕಟಮ್ಮ ಅದೇ ದಿನ ನಿಧನರಾದರು. ಸಾವಿನಲ್ಲೂ ಜೊತೆಯಾದರು ಸುಬ್ಬಯ್ಯ ನಾಯ್ಡು ದಂಪತಿಗಳು. ಕಲಾರಂಗವನ್ನು ಆರಾಧಿಸುತ್ತಿದ್ದ ಎಮ್ ವಿ ಸುಬ್ಬಯ್ಯ ನಾಯ್ಡು ಅವರು ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ಕನ್ನಡ ಚಿತ್ರದಲ್ಲಿ ಅಭಿನಯಿಸಿ ಚಿತ್ರರಂಗ ಬೆಳೆಯಲು ಕಾರಣಕರ್ತರಾಗಿದ್ದು ಮಾತ್ರವಲ್ಲದೆ ಸಿನಿಲೋಕದ ಧ್ರುವತಾರೆಯಾಗಿ ಅಚ್ಚಳಿಯದೆ ಉಳಿದಿದ್ದಾರೆ.