ಬಿ ಆರ್ ಪಂತುಲು ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟ ಎನ್ನಬಹುದು.ಕಾರಣ ಅವರಿಗೆ ಭಾಷೆಯ ಹಂಗಿರಲಿಲ್ಲ. ಇವರ ಹೆಸರನ್ನು ಕೇಳದ ಕಲಾಪ್ರೇಮಿಗಳು ಇರಲಾರರು. ‘ರತ್ನಗಿರಿ ರಹಸ್ಯ’ ಚಿತ್ರದ ಮೂಲಕ ನಿರ್ದೇಶಕರಾದ ಬಿ ಆರ್ ಪಂತುಲು ಅವರು ಪದ್ಮಿನಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 57 ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. ಬಿ ಆರ್ ಎಂದರೆ ಅವರ ಊರಾದ ಬೂದಗೂರು ಹಾಗು ಹೆಸರು ರಾಮಕೃಷ್ಣಯ್ಯ ಪಂತುಲು. ಹೆಸರು ಉದ್ಧವಿದ್ದ ಕಾರಣ ಬಿ ಆರ್ ಪಂತುಲು ಎಂಬುದಾಗಿ ಮಾಡಿಕೊಂಡಿದ್ದರು. ಶ್ರೀಕೃಷ್ಣ ದೇವರಾಯ, ಸ್ಕೂಲ್ ಮಾಸ್ಟರ್, ಕಿತ್ತೂರು ಚನ್ನಮ್ಮ, ಕರ್ಣನ್ ಮತ್ತು ವೀರಪಾಂಡಿಯ ಕಟ್ಟಬೊಮ್ಮನ್ ಮುಂತಾದ ಚಿತ್ರಗಳು ಅವರ ಅತ್ಯಂತ ಜನ ಪ್ರಿಯ ಚಿತ್ರಗಳು. ಸಂಸಾರ ನೌಕೆ, ಸದಾರಮೆ, ಗುಳೇಬ, ಕಾವಲಿ ನಾಟಕಗಳಲ್ಲಿ ಅಭಿನಯಿಸಿರುವ ಪಂತುಲು ಅವರು 1936 ರ ‘ಸಂಸಾರ ನೌಕೆ’ ಚಿತ್ರದ ಮೂಲಕ ನಟರಾಗಿ ಪಾದಾರ್ಪಣೆ ಮಾಡಿದವರು, ‘ಸಂಸಾರ ನೌಕೆ’ ಚಿತ್ರವನ್ನು ಚೆನ್ನೈ ಮೂಲದ ದೇವಿ ಫಿಲ್ಮ್ಸ್ ನಿರ್ಮಿಸಿತ್ತು. ಎಚ್. ಎಲ್.ಎನ್.ಸಿಂಹ ನಿರ್ದೇಶನದ ಈ ಚಿತ್ರದಲ್ಲಿ ಪಂತುಲು ಅವರ ಜೊತೆ ಎಂ.ವಿ.ರಾಜಮ್ಮ, ಡಿಕ್ಕಿ ಮಾಧವ ರಾವ್, ಎಸ್.ಕೆ.ಪದ್ಮಾದೇವಿ ಮತ್ತು ಎಂ.ಎಸ್.ಮಾಧವರಾವ್ ನಟಿಸಿದ್ದರು.ಗುಬ್ಬಿ ವೀರಣ್ಣನವರ ತಂಡದಲ್ಲಿ ಆಡುತ್ತಿದ್ದ ನಾಟಕವಾದ ‘ಸಂಸಾರ ನೌಕೆ’ಯಲ್ಲಿ ನಾಯಕ ತನ್ನ ಅಜ್ಜನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುತ್ತಾನೆ. ನಂತರ ಅವನನ್ನು ಹೊರಹಾಕಲಾಗುತ್ತದೆ. ಅವನ ತೊಂದರೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವನು ತನ್ನ ಅತ್ತೆಯ ಪರವಾಗಿರದೆ ಇರುವುದರಿಂದ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಅಜ್ಜ ತನಗಾಗಿ ಆಯ್ಕೆ ಮಾಡಿದ ವಧುವನ್ನು ಕೊಲೆ ಮಾಡಿದ ಆರೋಪವನ್ನು ಎದುರಿಸಿರುತ್ತಾನೆ. ಇದೆ ಕಥೆಯನ್ನು ಆದರಿಸಿ ‘ಸಂಸಾರ ನೌಕೆ’ ಚಿತ್ರವನ್ನಾಗಿ ಮಾಡಲಾಯಿತು. 1950 ರಲ್ಲಿ, ಪಂತುಲು ಅವರು ಚಲನಚಿತ್ರ ನಿರ್ಮಾಪಕ ಪಿ.ಪುಲ್ಲಯ್ಯ ಅವರೊಂದಿಗೆ ಒಂದು ರಂಗ ಕಂಪನಿಯ ಅಡಿಯಲ್ಲಿ ಪಾಲುದಾರಿಕೆ ವಹಿಸಿ, ತಮಿಳು ಚಲನಚಿತ್ರ ‘ಮಚರೆಖೈ’ ಅನ್ನು ನಿರ್ಮಿಸಿದರು, ಅದಾದ ನಂತರ ಸಂಗೀತಗಾರ ಟಿ.ಆರ್. ಮಹಾಲಿಂಗಂ ಅವರ ಪಾಲುದಾರ ಸಂಸ್ಥೆಯೊಂದಿಗೆ ಸುಕುಮಾರ್ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ದುಡಿದರು. ಅಲ್ಲಿ ಪರಿಚಯವಾದ ಬರಹಗಾರ ಪಿ. ನೀಲಕಂಠನ್ ಅವರೊಂದಿಗೆ ಪಂತುಲು ಅವರು ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯನ್ನು ಪ್ರಾರಂಬಿಸಿ, 1954 ರಲ್ಲಿ ತಮಿಳು ಚಲನಚಿತ್ರ ‘ಕಲ್ಯಾಣಂ ಪನ್ನಿಯುಂ’ ಎಂಬ ಬ್ರಹ್ಮಚಾರಿಯ ಸುತ್ತ ಸುತ್ತುವ ಕಥೆಯನ್ನಾಧರಿಸಿದ ಚಿತ್ರವನ್ನು ನಿರ್ಮಿಸಿದರು. ಪದ್ಮಿನಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅವರು ಕನ್ನಡ ಚಲನಚಿತ್ರಗಳಾದ ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ ಮತ್ತು ಶ್ರೀಕೃಷ್ಣದೇವರಾಯ ಚಿತ್ರಗಳನ್ನು ನಿರ್ಮಿಸಿದರು. ‘ಶ್ರೀ ಕೃಷ್ಣದೇವರಾಯ’ ಚಿತ್ರದಲ್ಲಿ ವಿಜಯನಗರದ ರಾಜ ಕೃಷ್ಣದೇವರಾಯನ ಪ್ರಧಾನ ಮಂತ್ರಿಯಾಗಿದ್ದ ತಿಮ್ಮರುಸು ಅವರ ಪಾತ್ರವನ್ನು ಮಾಡಿದ ಪಂತುಲು ಅವರು ಯಶಸ್ವಿಯಾದ ಕಾರಣ ಅವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಿ ಆಗಿನ ಸರಕಾರ ಗೌರವಿಸಿತು. ‘ಸ್ಕೂಲ್ ಮಾಸ್ಟರ್’ ಚಿತ್ರಕ್ಕಾಗಿ 1958 ರಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಲ್ ಇಂಡಿಯಾ ಸರ್ಟಿಫಿಕೇಟ್ ಆಫ್ ಮೆರಿಟ್, 1959 ರಲ್ಲಿ ತಮಿಳಿನಲ್ಲಿ ವೀರಪಾಂಡಿಯ ಕಟ್ಟಬೊಮ್ಮನ್ ಅತ್ಯುತ್ತಮ ಚಲನಚಿತ್ರಕ್ಕಾಗಿ ಅರ್ಹತೆಯ ಪ್ರಮಾಣಪತ್ರ, 1961 ರಲ್ಲಿ ಕಿತ್ತೂರು ಚೆನ್ನಮ್ಮ ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ಅರ್ಹತೆಯ ಪ್ರಮಾಣಪತ್ರ, 1961 ರಲ್ಲಿ ಕಪ್ಪಲೋಟ್ಟಿಯ ತಮಿಳನ್ ತಮಿಳಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ, 1969-70 ರಲ್ಲಿ ಶ್ರೀ ಕೃಷ್ಣದೇವರಾಯ ಚಿತ್ರದಲ್ಲೀನ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದು ಕೊಂಡರು. ಪಂತುಲು ಅವರು 26 ಜುಲೈ 1910 ರಂದು ಹಿಂದಿನ ಮೈಸೂರು ಸಾಮ್ರಾಜ್ಯದ ಇಂದಿನ ಕೋಲಾರ ಜಿಲ್ಲೆಯ ಬೂದಗೂರು ಗ್ರಾಮದಲ್ಲಿ ಜನಿಸಿದರು. ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರೂ ರಂಗಭೂಮಿಯಿಂದ ಪ್ರಭಾವಿತರಾದ ಅವರು ಚಂದ್ರಕಲಾ ನಾಟಕ ಮಂಡಳಿಗೆ ಸೇರಿದರು. ಗುಬ್ಬಿ ವೀರಣ್ಣನವರ ತಂಡದಲ್ಲಿ ಕೆಲಕಾಲ ಕೆಲಸ ಮಾಡಿ, ನಂತರ ಪಂತುಲು ಅವರು ತಮ್ಮದೇ ಆದ ಕನ್ನಡ ವೃತ್ತಿ ರಂಗಭೂಮಿ ತಂಡವಾದ ಕಲಾಸೇವಾ ನಾಟಕ ಮಂಡಳಿಯನ್ನು ಕಟ್ಟಿಕೊಂಡು ತಮ್ಮ ಸ್ವಂತ ಆಯ್ಕೆಯ ನಾಟಕಗಳನ್ನು ಪ್ರದರ್ಶಿಸಿದರು. ಪತ್ನಿ ಅಂಡಲಮ್ಮಾಯಿ ಮತ್ತು ಮಗಳು ವಿಜಯಲಕ್ಷ್ಮಿ, ಮಗ ರವಿಶಂಕರ್ ಅವರೊಂದಿಗೆ ಜೀವನ ನಡೆಸುತ್ತಿದ್ದ ಪಂತುಲು ಅವರು 1974 ರ ಅಕ್ಟೋಬರ 8 ರಂದು ಇಹಲೋಕ ತ್ಯಜಿಸಿದರು. ಎ.ಎನ್.ಪ್ರಹ್ಲಾದ ರಾವ್ ಅವರು ಬಿ.ಆರ್. ಪಂತುಲು ಅವರ ಬಾಲ್ಯ, ರಂಗಭೂಮಿ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸಿದ ಚಲನಚಿತ್ರಗಳ ವಿವರಗಳನ್ನು ಒಳಗೊಂಡಿರುವ ‘ದನಿವಿಲ್ಲದ ಧನಿ’ ಎಂಬ ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿರುವ ಈ ಪುಸ್ತಕವನ್ನು ಡಾ.ಭಾರತಿ ವಿಷ್ಣುವರ್ಧನ್ ಅವರು ನವೆಂಬರ್ 2016ರಲ್ಲಿ ಬಿಡುಗಡೆ ಮಾಡಿದರು. ರಂಗಭೂಮಿಯಿಂದ ಚಿತ್ರ ರಂಗಕ್ಕೆ ಪ್ರವೇಶಗೊಂಡು ದಕ್ಷಿಣ ಭಾರತದ ಭಾಷೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಬಿ ಆರ್ ಪಂತುಲು ಅವರು ಸಿನಿಲೋಕದ ಧ್ರುವತಾರೆಯಾಗಿದ್ದಾರೆ.