image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತೆಲುಗು ಚಿತ್ರರಂಗದಲ್ಲಿ ಕನ್ನಡ ಪ್ರಭಾಕರ್ ಎಂದೇ ಹೆಸರಾಗಿದ್ದವರು ನಮ್ಮ ಟೈಗರ್ ಪ್ರಭಾಕರ್...

ತೆಲುಗು ಚಿತ್ರರಂಗದಲ್ಲಿ ಕನ್ನಡ ಪ್ರಭಾಕರ್ ಎಂದೇ ಹೆಸರಾಗಿದ್ದವರು ನಮ್ಮ ಟೈಗರ್ ಪ್ರಭಾಕರ್...

ಟೈಗರ್ ಪ್ರಭಾಕರ್ ಆಕ್ಸನ್ ಚಿತ್ರಕ್ಕೆ ಹೆಸರು ವಾಸಿಯಾದವರು. ಅವರು ಖಳನಾಯಕನಾಗಿ ಎಲ್ಲಾ ನಟರೊಂದಿಗೆ ಅಭಿನಯಿಸಿದ್ದಾರೆ. ದೈತ್ಯ ದೇಹವಿದ್ದರೂ ಎಲ್ಲರಲ್ಲೂ ಬೆರೆಯುವಂತ ಮನಸ್ಸು ಅವರದ್ದು. ಅವರು ಅಭಿನಯಿಸಿದ ಕಾಡಿನ ರಹಸ್ಯ ಚಿತ್ರವು ಹೆಸರುವಾಸಿಯಾಗಿತ್ತು. ಟೈಗರ್ ನಾಯಕನಟರಾಗಿ ಅಭಿನಯಿಸಿದ ಆಕ್ಸನ್ ಚಿತ್ರಗಳು ಜಾಸ್ತಿಯಾಗಿ ತೆರೆಕಂಡು ಯಶಸ್ಸನ್ನು ಕಂಡರೂ ಅವರ ಅಭಿನಯದ ಫ್ಯಾಮಿಲಿ ಓರಿಯೆಂಟೆಡ್ ಚಿತ್ರಗಳು ಕೂಡ ಗೆದ್ದಿವೆ. ಕೆಲವು ಚಿತ್ರಗಳಲ್ಲಿ ಪ್ರಭಾಕರ್ ಅವರ ಎಂಟ್ರಿ ನೋಡಿದರೆ ಇವರನ್ನು ಟೈಗರ್ ಪ್ರಭಾಕರ್ ಎಂದು ಕರೆದಿದ್ದು ಸೂಕ್ತವಾಗಿತ್ತು ಎನಿಸಿ ಬಿಡುತ್ತದೆ.

ಪ್ರಭಾಕರ್ ಅಭಿನಯದ “ಜಿದ್ದು” ಚಿತ್ರದಲ್ಲಿ ಅವರ ಅಭಿನಯ ಹುಲಿಯಂತೆ ಗರ್ಜಿಸುತ್ತಿತ್ತು. ಜಿದ್ದು ಚಿತ್ರದಲ್ಲಿ  ಹುಲಿಯಂತೆ ಅವರನ್ನು ತೋರಿಸಲಾಗಿತ್ತು ಕೂಡ. ಹಾಗೇಯೆ ಟೈಗರ್ ಪ್ರಭಾಕರ್ ಅವರು ‘ಕರುಳಿನ ಕೂಗು” ಎಂಬ ಸಾಂಸಾರಿಕ ಚಿತ್ರದಲ್ಲಿ ಮನಮಿಡಿಯುವಂತೆ ಅಭಿನಯಸಿ ಜನರ ಮನಸ್ಸನ್ನು ಗೆದ್ದಿದ್ದರು. ಇಂದಿನ ದಿನ ಅವರ ಮಗ ಮರಿಟೈಗರ್ ವಿನೋದ್ ಪ್ರಭಾಕರ್, ಪ್ರಭಾಕರ್ ಅವರನ್ನು ನೆನೆಪಿಸುವ ಹಾಗೆ ಅಭಿನಯ ನೀಡುತ್ತಿದ್ದಾರೆ. ಪ್ರಭಾಕರ್ ಅವರು ಮುಖ್ಯವಾಗಿ ಕನ್ನಡ, ತೆಲುಗು ಚಿತ್ರರಂಗದಲ್ಲಿ ಹಾಗೂ ಕೆಲವು ಮಲಯಾಳಂ, ತಮಿಳು ಮತ್ತು ಬಾಲಿವುಡ್ ಚಲನಚಿತ್ರಗಳೊಂದಿಗೆ ಅವರು ಅಭಿನಯಿಸಿದ್ದಾರೆ. ಭಾರತೀಯ ಚಲನಚಿತ್ರ ನಟರಾದ ಪ್ರಭಾಕರ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಖಳನಟನ ಪಾತ್ರಗಳನ್ನು ಮಾಡುತ್ತಿದ್ದಾಗ, ಮುತ್ತೈದೆ ಭಾಗ್ಯ ಮತ್ತು ಟೈಗರ್ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಗೊಂಡರು.

ಅಲ್ಲಿಂದ ಅವರ ಯುಗ ಆರಂಭಗೊಂಡಿತು ಎಂದು ಹೇಳಬಹುದು. ಅವರು ಮಹೇಂದ್ರ ವರ್ಮ ಮತ್ತು ಮಿಸ್ಟರ್ ಮಹೇಶ್ ಕುಮಾರ್ ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಹಿಟ್ ಆಗಿದ್ದವು. 1980 ರ ದಶಕದ ಮಧ್ಯಭಾಗದಲ್ಲಿ ಪ್ರಭಾಕರ್ ಎಲ್ಲಾ ನಿರ್ಮಾಪಕರಿಂದ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ನಟರಾಗಿದ್ದರು. ಅವರು ಆರತಿ, ಜಯಮಾಲಾ, ಭಾರತಿ ಮತ್ತು ಜಯಂತಿಯಂತಹ ಉನ್ನತ ನಾಯಕಿಯರೊಂದಿಗೆ ಭಾವನಾತ್ಮಕ, ಕುಟುಂಬ ಆಧಾರಿತ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅಮಿತಾಬ್ ಬಚ್ಚನ್-ಶ್ರೀದೇವಿ ಅಭಿನಯದ ಇಂಕ್ವಿಲಾಬ್ ಚಿತ್ರದಲ್ಲಿ ಕ್ರಿಮಿನಲ್ ಅನಿಲ್ ರಾಜ್ ಪಾತ್ರವನ್ನು ನಿರ್ವಹಿಸಿದ್ದರು. ಮಮ್ಮುಟ್ಟಿ ಮತ್ತು ಸುರೇಶ್ ಗೋಪಿ (ಧ್ರುವಂ) ರಂತಹ ನಟರೊಂದಿಗೆ ಕೆಲವು ಮಲಯಾಳಂ ಚಲನಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದರು. ಜನಮನ್ನಣೆ ಗಳಿಸಿದ ನಂತರ ಅವರು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದರು. ಸುಮಾರು 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಪ್ರಭಾಕರ್ ಅವರು ಚಿರಂಜೀವಿಯವರ ಹಲವು ಚಿತ್ರಗಳಲ್ಲಿ ಖಳನಟನಾಗಿ ಅಭಿನಯಿಸಿ “ಕನ್ನಡ ಪ್ರಭಾಕರ್” ಎಂಬ ಹೆಸರನ್ನು ಪಡೆದುಕೊಂಡರು.

ಪ್ರಭಾಕರ್ ಕಂಗ್ಲಿಷನ್ನು ಕನ್ನಡ ಚಲನಚಿತ್ರಗಳಿಗೆ ಪರಿಚಯಿಸಿ ದರು. ಕಂಗ್ಲಿಷ್ ಎಂದರೆ ಕನ್ನಡ ಮತ್ತು ಇಂಗ್ಲಿಷ್ ಸಂಭಾಂಷಣೆಗಳ ಮಿಶ್ರಣವಾಗಿದೆ. ಪ್ರಭಾಕರ್ ಅವರು ಸಾಕಷ್ಟು ಜನರಿಗೆ ಮತ್ತು ವಿವಿಧ ದತ್ತಿ ಸಂಸ್ಥೆಗಳಿಗೆ ಹಣದ ಸಹಾಯ ಮಾಡಿದ್ದಾರೆ. 1950 ಮಾರ್ಚ್ ತಿಂಗಳ 30 ರಂದು ಜನಿಸಿದ ಪ್ರಭಾಕರ್ 1974 ರಲ್ಲಿ ಆಲ್ಫೊನ್ಜಾ ಮೇರಿ ಅವರೊಂದಿಗೆ ಮೊದಲ ಮದುವೆಯಾದರು. ಅವರಿಗೆ ಭಾರತಿ, ಗೀತಾ ಮತ್ತು ಒಬ್ಬ ಮಗ ಇದ್ದಾರೆ.

ಆ ಮಗನೇ ವಿನೋದ್ ಪ್ರಭಾಕರ್. ನಂತರ ಅವರು 1985 ರಲ್ಲಿ ನಟಿ ಜಯಮಾಲಾ ಅವರನ್ನು ವಿವಾಹವಾದರು ಮತ್ತು ಅವರಿಗೆ ಸೌಂದರ್ಯ ಎಂಬ ಮಗಳು ಇದ್ದಾರೆ. ಅವರ ಮೂರನೇ ಪತ್ನಿ ಇನ್ನೊಬ್ಬ ನಟಿ 1995 ರಲ್ಲಿ ಅಂಜು ಅವರನ್ನು ಮದುವೆ ಆದರು. ಅವರಿಗೆ ಅರ್ಜುನ್ ಎಂಬ ಮಗನಿದ್ದಾನೆ. ಪ್ರಭಾಕರ್ ಅವರಿಗೆ 1980 ರ ದಶಕದ ಮಧ್ಯಭಾಗದಲ್ಲಿ ಬೈಕ್ ಅಪಘಾತದಲ್ಲಿ ಉಂಟಾದ ಗಾಯಗಳಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು.

ಇದಾದ ನಂತರ, 2000 ದ ದಶಕದ ಆರಂಭದಲ್ಲಿ, ಅವರು ಬಹು ಅಂಗಗಳ ಅಪಸಾಮಾನ್ಯ ಕ್ರಿಯೆಯ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ರಾತ್ರಿ. _25 ಮಾರ್ಚ್ 2001 ರಂದು ನಿಧನರಾದರು. ಅಪಾರ ಅಭಿಮಾನಿಗಳನ್ನು ಅಗಲಿದರು.

ಸ್ಟಂಟ್, ಆಕ್ಸನ್, ಸೆಂಟಿಮೆಂಟ್, ಥ್ರಿಲ್ಲರ್ ಈ ರೀತಿಯಾಗಿ ಬೇರೆ ಬೇರೆ ಪ್ರಕಾರಗಳ ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ತನ್ನದೆ ಶೈಲಿಯಲ್ಲಿ ಅಭಿನಯಿಸಿ, ಟೈಗರ್ ಪ್ರಭಾಕರ್ ಅವರು ಕಲಾಭಿಮಾನಿಗಳ ಹೃದಯದಲ್ಲಿ ಸಿನಿಲೋಕದ ಧ್ರುವತಾರೆಯಾಗಿ ನೆಲೆಸಿದ್ದಾರೆ.

 ✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ