ಒಂದು ಕಾಲದ ಸುಪ್ರಸಿದ್ಧ ಕಲಾವಿದೆ ಎಮ್ ವಿ ರಾಜಮ್ಮ. ಕಲಾಭಿಮಾನಿಗಳು ಮರೆಯಲಾಗದ ನಟಿ. ಇವರು 1936 ರಲ್ಲಿ ಬಿಡುಗಡೆಯಾದ “ಸಂಸಾರ ನೌಕೆ” ಚಿತ್ರದ ಮೂಲಕ ಪಂತುಲು ಅವರಿಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡವರು. ರಾಜಮ್ಮ ಅವರು ಸಂಸಾರ ನೌಕೆ, ಗೌತಮ ಬುದ್ಧ ಮತ್ತು ಸುಭದ್ರೆಯಂತಹ ನಾಟಕಗಳಲ್ಲಿ ಹಲವಾರು ಸ್ಪೂರ್ತಿದಾಯಕ ಪಾತ್ರಗಳನ್ನು ನಿರ್ವಹಿಸಿದರು. ರಾಜಮ್ಮ ಅವರು ಸುಮಾರು 20 ವರ್ಷಗಳ ಕಾಲ ಅನೇಕ ಚಿತ್ರಗಳಲ್ಲಿ ಪಂತುಲು ಅವರ ಒಟ್ಟಿಗೆ ಕೆಲಸ ಮಾಡಿದರು. ಹಿನ್ನೆಲೆ ಗಾಯಕಿಯಾಗಿ, ನಾಯಕಿಯಾಗಿ ನಂತರ ತಾಯಿಯಾಗಿ ಅಭಿನಯಿಸಿದ ಕಲಾಚತುರೆ. ದಕ್ಷಿಣ ಭಾರತದಾದ್ಯಂತ ಚಲನಚಿತ್ರಗಳಲ್ಲಿ ಅಭಿನಯಿಸಿ ವೃತ್ತಿಜೀವನವನ್ನು ಆನಂದಿಸಿದವರು.
1940 ರ ಹಿಟ್ ಚಲನಚಿತ್ರ ‘ಉತ್ತಮ ಪುತಿರನ್’ ಎಂಬ ತಮಿಳು ಚಲನಚಿತ್ರದಲ್ಲಿ ಅಭಿನಯಿಸಿ ಹೆಸರುವಾಸಿಯಾದರು. 1943 ರಲ್ಲಿ ಜ್ಯೋತಿಶ್ ಸಿನ್ಹಾ ನಿರ್ದೇಶಿಸಿದ ಕನ್ನಡ ಚಲನಚಿತ್ರ ‘ರಾಧಾ ರಮಣ’ ಎಂಬ ಚಿತ್ರವನ್ನು ತಮ್ಮ ಸ್ವಂತ ಹೋಮ್ ಬ್ಯಾನರ್ ವಿಜಯಾ ಫಿಲಂಸ್ ಅಡಿಯಲ್ಲಿ ನಿರ್ಮಿಸುವುದರ ಮೂಲಕ ಮೊದಲ ಮಹಿಳಾ ನಿರ್ಮಾಪಕಿಯಾದರು. ಕನ್ನಡ ಚಲನಚಿತ್ರರಂಗದಲ್ಲಿ ಮೊದಲ ಮತ್ತು ಅಗ್ರಗಣ್ಯ ಮಹಿಳಾ ನಿರ್ಮಾಪಕಿ ಎಂದು ಪ್ರಖ್ಯಾತಿ ಪಡೆದರು. ‘ರಾಧ ರಮಣ’ ಚಿತ್ರದಲ್ಲಿ ಬಿ ಆರ್ ಪಂತುಲು ನಾಯಕನಾಗಿ ಅಭಿನಯಿಸಿದರು. ಅವರ ಜೊತೆ ನಾಯಕಿಯಾಗಿ ರಾಜಮ್ಮಾ ಕಾಣಿಸಿಕೊಂಡರು. ಬಾಲಕೃಷ್ಣ ಮತ್ತು ಜಿ ವಿ ಅಯ್ಯರ್ ಅವರಂತಹ ಕಲಾವಿದರು ಈ ಚಿತ್ರದ ಮೂಲಕ ಪರಿಚಯವಾದರು. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು, ಅದರ ಪರಿಣಾಮವಾಗಿ ಅವರು 1960 ರಲ್ಲಿ “ಮಕ್ಕಳ ರಾಜ್ಯ’ ಎಂಬ ಚಲನಚಿತ್ರವನ್ನು ನಿರ್ಮಿಸಿದರು. ಎಮ್ ಎಸ್ ಉಮೇಶ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಚಿತ್ರದಲ್ಲಿ ಪುಟ್ಟಣ್ಣ ಕಣಗಲ್ ಸಹಾಯಕ ನಿರ್ದೇಶರಾಗಿ ಕೆಲಸ ಮಾಡಿದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.
ರಾಜಮ್ಮ ಎಲ್ಲಾ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದರು. ತಾಯಿ ದೇವರು, ಜಗ ಮೆಚ್ಚಿದ ಮಗ, ಒಂದು ಹೆಣ್ಣಿನ ಕಥೆ, ಬಂಗಾರದ ಪಂಜರ, ಸಂಪತ್ತಿಗೆ ಸವಾಲು, ದಾರಿ ತಪ್ಪಿದ ಮಗ, ಬೆಸುಗೆ ಹೀಗೆ ಸುಮಾರು ನಾಲ್ಕು ದಶಕಗಳ ಕಾಲ ತನ್ನ ವೃತ್ತಿಜೀವನದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಸುಮಾರು ನೂರ ಎಪ್ಪತ್ತು ಚಿತ್ರಗಳಲ್ಲಿ ನಟಿಸಿ ತಮ್ಮ ನಟನಾ ಸಾಮರ್ಥ್ಯದಿಂದ ಸಿನಿಲೋಕದ ದ್ರುವತಾರೆಯಾಗಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್