image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದ್ಯಾಸಾಗರ್ ಸಿನಿಲೋಕದಲ್ಲಿ "ಕಲಾ ತಪಸ್ವಿ ರಾಜೇಶ್" ಆಗಿ ಮೆರೆದ ಕತೆ...

ವಿದ್ಯಾಸಾಗರ್ ಸಿನಿಲೋಕದಲ್ಲಿ "ಕಲಾ ತಪಸ್ವಿ ರಾಜೇಶ್" ಆಗಿ ಮೆರೆದ ಕತೆ...

1994ರಲ್ಲಿ ಚಲನಚಿತ್ರರಂಗದಲ್ಲಿ ನಾನು ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಮಯ ಅದು. ಖ್ಯಾತ ಛಾಯಗ್ರಾಹಕ ಬಿ ಎನ್ ಹರಿದಾಸ್ ಅವರ ನಿರ್ದೇಶನದಲ್ಲಿ ತಯಾರಾದ ‘ಸೂರ್ಯಪುತ್ರ’ ಚಿತ್ರ. ಆ ಚಿತ್ರಕ್ಕೆ ನಾನು ಸಹರ್ದೇಶಕನಾಗಿ ಕೆಲಸ ಮಾಡಿದೆ. ರಾಮಕುಮಾರ್, ಸಂಗೀತ ನಾಯಕ ನಾಯಕಿಯಾಗಿ ಟಿ ಸೀರೀಸ್ ಸಂಸ್ಥೆಯ ಗುಲ್ಶನ್ ಕುಮಾರ್, ಗುಡಿಗೇರಿ ಬಸವರಾಜ್ ಮುಂತಾದ ಹಿರಿಯ ಕಲಾವಿದರು ಅಭಿನಯಿಸಿದ ಈ ಚಿತ್ರದಲ್ಲಿ ಕಲಾತಪಸ್ವಿ ರಾಜೇಶ್ ಅವರು ಸ್ವಾಮೀಜಿಯ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದರು. ಚಿತ್ರದ ಸನ್ನ್ನಿವೇಶಗಳ ಬಗ್ಗೆ ಚರ್ಚೆ ಮಾಡುತ್ತಾ  ನಾನು ಮತ್ತು ರಾಜೇಶ್ ಅವರು ಆತ್ಮೀಯರಾದೆವು. ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ನಾನು 2003ರಲ್ಲಿ ಸುಧಾರಾಣಿ ಪ್ರಧಾನ ಪಾತ್ರದ “ತಾಳಿಕಟ್ಟುವ ಶುಭವೇಳೆ” ಚಿತ್ರವನ್ನು ನಿರ್ದೇಶನ ಮಾಡಿದಾಗ ಅನೇಕ ಹಿರಿಯ ಕಲಾವಿದರು ನನ್ನಲ್ಲಿದ್ದ ಆತ್ಮೀಯತೆಯಿಂದ ಅಭಿನಯಿಸಿದ್ದರು. ಹಾಗೆಯೇ ಕಲಾತಪಸ್ವಿ ರಾಜೇಶ್ ಅವರು ಕೂಡ ನನ್ನ ಆತ್ಮೀಯತೆಗೆ ಬೆಲೆಕೊಟ್ಟು ಪ್ರಧಾನ ಪಾತ್ರವನ್ನೆ ನಿರ್ವಹಿಸಿದರು. ಶಿಸ್ತು ಸಂಯಮಕ್ಕೆ ಹೆಸರುವಾಸಿಯಾಗಿದ್ದ ರಾಜೇಶ್ ಅವರು ಅಷ್ಟು ಸುಲಭದಲ್ಲಿ ಯಾರ ಮಾತಿಗೂ ಬೆಲೆ ಕೊಡುತ್ತಿರಲಿಲ್ಲ. ಅಣ್ಣಾವ್ರ ಕಾಲದಲ್ಲಿ ನಾಯಕರಾಗಿದ್ದ ರಾಜೇಶ್ ಪಾತ್ರಗಳನ್ನು ಮತ್ತು ಸಿನಿಮಾ ತಂಡವನ್ನು ಅಲೆದು ನೋಡುತ್ತಿದ್ದದ್ದು ಮಾತ್ರವಲ್ಲದೆ ಅವರಿಗೆ ಸಿನಿಮಾಗಳ ಪಾತ್ರಗಳು ಹಿಡಿಸಿದರೆ ಮತ್ತು ಸಿನಿಮಾ ತಂಡ ಓಕೆ ಆಗಿ ಎಲ್ಲವೂ ಸಮಂಜಸವೆನಿಸಿದರೆ ಮಾತ್ರ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರು.

ಒಂದು ಸಾರಿ ಸಿನಿಮಾವನ್ನು ಒಪ್ಪಿಕೊಂಡ ಮೇಲೆ ಆ ಪಾತ್ರದ ಒಳಗೆ ಹೊಕ್ಕು ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು.ರಾಜೇಶ್ ಅವರು ಬೆಂಗಳೂರಿನಲ್ಲಿ ಏಪ್ರಿಲ್ 15, 1932 ರಂದು ಕನ್ನಡ ಕುರುಬ ಗೌಡ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ವಿದ್ಯಾಸಾಗರ್. ಬಾಲ್ಯದಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡು ತಂದೆ, ತಾಯಿಗೆ ತಿಳಿಯದಂತೆ ಸುದರ್ಶನ ನಾಟಕ ಮಂಡಳಿ ಸೇರಿದರು. ಆರಂಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರು ನಂತರ ಶಕ್ತಿ ನಾಟಕ ಮಂಡಳಿಯನ್ನು ರಚಿಸಿದರು. ಅನೇಕ ಜನಪ್ರಿಯ ನಾಟಕಗಳನ್ನು ಪ್ರದರ್ಶಿಸಿದರು. ‘ನಿರುದ್ಯೋಗಿ ಬಾಳು’ ಎಂಬ ನಿರುದ್ಯೋಗದ ಬಗ್ಗೆ ನಾಟಕವನ್ನು ಬರೆದರು. ನಂತರ ಅವರು ನಾಟಕ. ನಿರ್ದೇಶಿಸಿ, ಅಭಿನಯಿಸಿ ಜನರಿಂದ ಮೆಚ್ಚುಗೆ ಗಳಿಸಿದರು. ಹಿರಿಯ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ‘ವೀರ ಸಂಕಲ್ಪ’ ಚಿತ್ರದಲ್ಲಿ ವಿದ್ಯಾಸಾಗರ್ ಅವರನ್ನು ಪರಿಚಯಿಸಿದರು. ಆ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಅವರಿಗೆ ‘ಶ್ರೀ ರಾಮಾಂಜನೇಯ ಯುದ್ಧ’ ಚಿತ್ರದ ಅವಕಾಶ ಬಂತು. ರಾಜಕುಮಾರ್ ಶ್ರೀರಾಮನಾಗಿ, ರಾಜೇಶ್ ಭರತನಾಗಿ, ಉದಯಕುಮಾರ್ ಆಂಜನೇಯನಾಗಿ ಅಭಿನಯಿಸಿದ ಚಿತ್ರ ಯಶಸ್ವಿಯಾಗಿತ್ತು. ಆಗ ರಾಜೇಶ್ ಅವರಿಗೆ ಬಿ ಆರ್ ಪಂತುಲು ಅವರ ‘ಗಂಗೆ ಗೌರಿ’ ಚಿತ್ರಕ್ಕೆ ಅವಕಾಶ ಕೊಟ್ಟರು. ಆದರೂ ಸಮಸ್ಯೆಯೊಂದು ಉಧ್ಭವಿಸಿ ರಾಜೇಶ್ ಅವರು ಕಾರಣಾಂತರಗಳಿಂದ ಮತ್ತೆ ಬೆಂಗಳೂರಿಗೆ ಬಂದಾಗ ಮುಂಬೈನ ನಾರಾಯಣ ಸೇಠ್ ಅವರ ಸಂಪರ್ಕಕ್ಕೆ ಬಂದು ಸಿ. ವಿ. ಶಿವಶಂಕರ್ ಬಳಿ ಕರೆದೊಯ್ದರು. ಅದು ಅವರ ಜೀವನದ ಹೊಸ ಆರಂಭವೆಂದು ಹೇಳಬಹುದು. 1968ರಲ್ಲಿ ತೆರೆಕಂಡ ನಮ್ಮ ‘ಊರು ಚಿತ್ರ’ ನಿರ್ದೇಶನ ಸಿ.ವಿ. ಶಿವಶಂಕರ್, ಆಗಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಇದಕ್ಕೆ 100 ಪ್ರತಿಶತ ತೆರಿಗೆ ವಿನಾಯಿತಿ ನೀಡಿದರು. ಚಿತ್ರದ ನಿರ್ಮಾಪಕ ಬಿ. ಎಸ್. ನಾರಾಯಣ್, ದಿವಂಗತ ಶ್ರೀ ಸೂರ್ಯನಾರಾಯಣ ರಾವ್ ಮತ್ತು ಲೇಟ್ ಜೆ ಎನ್ ಶೆಟ್ಟಿ ಅವರು ವಿದ್ಯಾಸಾಗರ್  ಅವರನ್ನು ರಾಜೇಶ್ ಎಂದು ಮರುನಾಮಕರಣ ಮಾಡಿದರು. ಅದರ ನಂತರ ರಾಜೇಶ್ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬಂತು. ನಮ್ಮ ಊರು ಚಿತ್ರದ “ಹೋಗದಿರಿ ಸೋದರರೇ” ಹಾಡು ಯಶಸ್ವಿಯಾಯ್ತು. ಅವರು ನಾಯಕನಾದ ನಂತರ ಮತ್ತೆ ರಾಜಕುಮಾರ್ ಜೊತೆ ದೇವರ ಮಕ್ಕಳು, ಪ್ರತಿಧ್ವನಿ, ಕ್ರಾಂತಿವೀರ ಚಿತ್ರಗಳಲ್ಲಿ ನಟಿಸಿದ್ದಾರೆ. ‘ದೇವರ ಗುಡಿ’ಯಲ್ಲಿ ವಿಷ್ಣುವರ್ಧನ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು 1975ರಿಂದ ದೇವರ ದುಡ್ಡು, ಬದುಕು ಬಂಗಾರವಾಯಿತು, ಬೆಳುವಲದ ಮಡಿಲಲ್ಲಿ, ಮುಗಿದ ಕಥೆ, ಇವೆಲ್ಲವೂ ಒಂದರ ಹಿಂದೆ ಒಂದರಂತೆ ಹಿಟ್ ಆದವು. ‘ಬೆಳುವಲದ ಮಡಿಲಲ್ಲಿ’

ರಾಜೇಶ್ ಅವರಿಗೆ ಜೀವನಕೊಟ್ಟ ಚಿತ್ರವಾಯ್ತು. ಕಲಿಯುಗ, ಪಿತಾಮಹ. ಸತ್ಯನಾರಾಯಣ ಪೂಜಾ ಫಲ, ಕರ್ಣ ಮುಂತಾದ ಚಿತ್ರಗಳಲ್ಲಿ ಪಾತ್ರವನ್ನು ನಿರ್ವಹಿಸಿ ಯಶಸ್ವಿಯಾದರು. 1960 ಮತ್ತು 70ರ ದಶಕದಲ್ಲಿ ನಾಯಕನಾಗಿ ಆಭಿನಯಿಸಿದ ರಾಜೇಶ್ ಅವರು ಆನಂತರ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾ ಬಂದರು. ಅಂಬರೀಶ್ ಮತ್ತು ಶಂಕರ್‌ನಾಗ್ ಅಭಿನಯಿಸಿದ ಜಯಭೇರಿ ಚಿತ್ರದಲ್ಲಿ ಖಳನಾಯಕನಾಗಿ ಕೂಡ ಅಭಿನಯಿಸಿದರು. ‘ರಥಸಪ್ತಮಿ’ ಚಿತ್ರದ ಮೂಲಕ ಶಿವರಾಜ್‌ಕುಮಾರ್ ಜೋಡಿಯಾಗಿ ಅಭಿನಯಿಸಿದ ಆಶಾರಾಣಿ ರಾಜೇಶ್ ಅವರ ಮಗಳು. ಜನಪ್ರಿಯ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಹೆಸರು ಮಾಡಿರುವ ನಟ ಅರ್ಜುನ್ ಸರ್ಜಾ ರಾಜೇಶ್ ಅವರ ಅಳಿಯ. ಕರ್ನಾಟಕ ವಿಶ್ವವಿದ್ಯಾಲಯವು 2012 ರಲ್ಲಿ ರಾಜೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಾಜೇಶ್ ಅವರು ತನ್ನ 89 ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 19 ಫೆಬ್ರವರಿ 2022 ರಂದು ನಿಧನರಾದರು.ನೂರವೈತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭನಯಿಸಿ ಕಲಾರಸಿಕರಿಗೆ ಪ್ರೀತಿ ಪಾತ್ರರಾದ ಕಲಾತಪಸ್ವಿ ರಾಜೇಶ್ ಸಿನಿಲೋಕದ ಧ್ರುವತಾರೆಯಾಗಿ ಮಿಂಚಿದರು.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ