image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಾಡುಗಾರಿಕೆಯಿಂದ “ಭಾಗವತರು’ ಅನ್ನೋ ಬಿರುದನ್ನು ಪಡೆದವರು " ಹೊನ್ನಪ್ಪ ಭಾಗವತರ್"

ಹಾಡುಗಾರಿಕೆಯಿಂದ “ಭಾಗವತರು’ ಅನ್ನೋ ಬಿರುದನ್ನು ಪಡೆದವರು " ಹೊನ್ನಪ್ಪ ಭಾಗವತರ್"

ಹೊನ್ನಪ್ಪ ಭಾಗವತರ್ ಅವರು ಒಬ್ಬ ಭಾರತೀಯ ರಂಗಭೂಮಿ ಕಲಾವಿದ, ಚಲನಚಿತ್ರ ನಟ,ನಿರ್ಮಾಪಕ, ಸಂಗೀತಗಾರ ಮತ್ತು ಗಾಯಕರಾಗಿ ಪ್ರಸಿದ್ಧರಾದವರು. ತನ್ನ ನಟನೆ ಮತ್ತು ಹಾಡುಗಾರಿಕೆಯಿಂದ “ಭಾಗವತರು’ ಅನ್ನೋ ಬಿರುದನ್ನು ಪಡೆದವರು. ಅವರು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅವರ ಮಗ ಭರತ್ ಭಾಗವತರ್ ಕೂಡ ಕನ್ನಡ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟರಾಗಿದ್ದರು. ಅಲ್ಲದೆ ಅವರ ಮೊಮ್ಮಗಳು ಭರತ್ ಭಾಗವತರ್ ಮಗಳು ಮೇಘಶ್ರೀ ಭಾಗವತರ್ ಸಿನಿಮಾಗಳಲ್ಲಿ ಮತ್ತು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಹೊನ್ನಪ್ಪ ಭಾಗವತರ್ 1915 ರಲ್ಲಿ ನೆಲಮಂಗಲದ ಚೌಡಸಂದ್ರದಲ್ಲಿ ಜೀವನೋಪಾಯಕ್ಕಾಗಿ ನೇಯ್ಗೆ ಮಾಡುತ್ತಿದ್ದ ಕುಟುಂಬವೊಂದರಲ್ಲಿ, ಚಿಕ್ಕಲಿಂಗಪ್ಪ ಮತ್ತು ಕಲ್ಲಮ್ಮ ದಂಪತಿಗಳ ಮಗನಾಗಿ ಜನಿಸಿದರು. ಹೊನ್ನಪ್ಪರಿಗೆ 5 ವರ್ಷ ತುಂಬುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಆ ನಂತರದ ದಿನಗಳಲ್ಲಿ ತಾಯಿಯ ಭಜನೆ ಮತ್ತು ಸಂಗೀತವನ್ನು ಕೇಳುತ್ತಾ ಬೆಳೆದ ಹೊನ್ನಪ್ಪರು ಬೆಂಗಳೂರು ನಗರವನ್ನು ಸೇರಿಕೊಂಡರು. ದಕ್ಷಿಣ ಭಾರತೀಯ ಭಾಷೆಗಳಲ್ಲಿ ಹರಿಕಥಾ ವಿದ್ವಾನ್ ಮತ್ತು ಶಾಸ್ತ್ರೀಯ ಸಂಗೀತಗಾರರಾಗಿದ್ದ ಮೂರ್ತಿಯವರನ್ನು ಬೇಟಿಯಾದರು. ಹೊನ್ನಪ್ಪರ ಸಂಬಂಧಿಕರಾದ ಮೂರ್ತಿಯವರು ಶಾಸ್ತ್ರೀಯ ಸಂಗೀತವನ್ನು ಹೊನ್ನಪ್ಪರಿಗೆ ಕಲಿಸಿದರು. ಹೊನ್ನಪ್ಪ ರು ಮೂರ್ತಿಯವರ ಶಿಷ್ಯರಾದರು. ನಂತರ ಹೊನ್ನಪ್ಪರು

ಹಾರ್ಮೋನಿಯಂ ವಾದಕ ಅರುಣಾಚಲಪ್ಪ ಅವರ ಬಳಿ ಕೂಡ ಶಿಷ್ಯನಾಗಿ ಸಂಗೀತವನ್ನು ಕಲಿತರು. ಹೊನಪ್ಪರು ಒಂದು ಸಾರಿ ಸೇಲಂನಲ್ಲಿ ನಾಟಕವನ್ನು ಪ್ರದರ್ಶಿಸಿಸುವ ಸಂದರ್ಭದಲ್ಲಿ ತಮಿಳು ಚಿತ್ರರಂಗದ ಆಗಿನ ಉದಯೋನ್ಮುಖ ನಟರಾಗಿದ್ದ ಎಂ.ಕೆ. ತ್ಯಾಗರಾಜರು, ಹೊನ್ನಪ್ಪ ಭಾಗವತರನ್ನು ತಮ್ಮ ಅಂಬಿಕಾಪತಿ ಚಿತ್ರದಲ್ಲಿ ಪೋಷಕ ಪಾತ್ರಕ್ಕಾಗಿ ಚಿತ್ರದ ನಿರ್ದೇಶಕ ಎಲ್ಲಿಸ್ ಅವರಿಗೆ ಶಿಫಾರಸು ಮಾಡಿದರು. ಆ ನಂತರದ ದಿನಗಳಲ್ಲಿ ಅವರ ಅಭಿನಯ, ಹಾಡುಗಾರಿಕೆ, ಎಲ್ಲದರಲ್ಲೂ ಯಶಸ್ವಿಯಾದರು. ಹೊನ್ನಪ್ಪ ಭಾಗವತರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಹೊನ್ನಪ್ಪ ಅವರು ಲಲಿತಕಲಾ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಕನ್ನಡ ಮತ್ತು ತಮಿಳಿನಲ್ಲಿ ಚಿತ್ರಗಳು ನಿರ್ಮಾಣವಾಗಿವೆ. 1955 ರಲ್ಲಿ, “ಮಹಾಕವಿ ಕಾಳಿದಾಸ” ಎಂಬ ಕನ್ನಡ ಚಿತ್ರವನ್ನು ಆ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಿದರಿಂದ ಅದು ಮೊದಲನೇ ಚಿತ್ರವಾಯಿತು. ಅವರು 1956 ರಲ್ಲಿ ಬಿಡುಗಡೆಯಾದ ತಮಿಳು ಭಾಷೆಯ ಚಲನಚಿತ್ರ ಉಝವುಕ್ಕುಂ ತೊಝಿಲುಕ್ಕುಂ ವಂಧನೈ ಸೇವೋಂ ಚಿತ್ರವನ್ನು ಕೂಡ ಅದೇ ಸಂಸ್ಥೆಯಡಿಯಲ್ಲಿ ನಿರ್ಮಿಸಿದರು. “ಸುಭದ್ರ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹೊನ್ನಪ್ಪ ಭಾಗವತರ್ ಅವರು ಬಿ. ಸರೋಜಾದೇವಿಯಂತಹ ನಟಿಯನ್ನು ಚಿತ್ರರಂಗಕ್ಕೆ ಕರೆತಂದವರು.

1960 ರಲ್ಲಿ ಹೊನ್ನಪ್ಪ ಭಾಗವತರು “ನಾದಬ್ರಹ್ಮ ಸಂಗೀತ ವಿದ್ಯಾಲಯ” ಎಂಬ ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಅವರು ಕನ್ನಡ ಚಲನಚಿತ್ರ ಸಲಹಾ ಮಂಡಳಿಯ ಸದಸ್ಯರಾದರು ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದರು. ಹೊನಪ್ಪ ಭಾಗವತರ್ 2 ಅಕ್ಟೋಬರ್ 1992 ಇಹಲೋಕವನ್ನು ತ್ಯಜಿಸಿದರು. ಚಿತ್ರರಂಗದ ಒಳಗೆ ಹೊರಗೆ ದುಡಿದು, ಚಿತ್ರರಂಗಕ್ಕೆ ಸೇವೆ ಸಲ್ಲಿಸಿ, ತನ್ನದೆ ಶೈಲಿಯಲ್ಲಿ ಚಿತ್ರರಂಗದಲ್ಲಿ ನೆಲೆಕಂಡುಕೊಂಡು, ಇತರರನ್ನು ಚಿತ್ರರಂಗಕ್ಕೆ ಕರೆತಂದು, ಅವಕಾಶ ಮಾಡಿಕೊಟ್ಟು ಹೊನ್ನಪ್ಪ ಭಾಗವತರ್ ಸಿನಿಲೋಕದ ಧ್ರುವತಾರೆಯಾಗಿದ್ದಾರೆ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ