image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಛಾಯಾಗ್ರಹಕ ಬಿ ಸಿ ಗೌರಿಶಂಕರ್...

ಛಾಯಾಗ್ರಹಕ ಬಿ ಸಿ ಗೌರಿಶಂಕರ್...

ಒಂದು ಚಿತ್ರ ತಯಾರಾಗಬೇಕಾದರೆ ನಿರ್ದೇಶಕ ಕಥೆ ಬರೆದು ನಿರ್ಮಾಪಕನನ್ನು ಒಪ್ಪಿಸಿ ಎಲ್ಲಾ ತಂಡವನ್ನು ಆಯ್ಕೆ ಮಾಡಿದರೂ ನಿರ್ದೇಶಕನಷ್ಟೇ ಜವಾಬ್ದಾರಿ ಇರುವ ಕೆಲಸವೇ ಛಾಯಾಗ್ರಹಣ. ಕೆಲವರು ನಿರ್ದೇಶಕರು ಹೇಳಿದಷ್ಟು ಚಿತ್ರಿಸಿಕೊಡುತ್ತಾರೆ. ಇನ್ನು ಕೆಲವರು ಸಿನಿಮಾ ಆದರೆ ಸಾಕು ಅನ್ನುವವರು ಇದ್ದಾರೆ.

ಇನ್ನು ಕೆಲವರು ನಿರ್ದೇಶಕರ ಜೊತೆ ಕಥೆ ಕೇಳುತ್ತಲೆ ಅದಕ್ಕೆ ಒಂದು ರೂಪ ಕೊಡಲು ಪ್ಲಾನ್ ಮಾಡುತ್ತಾರೆ. ಅಲ್ಲದೆ ಇದರಲ್ಲಿ ಏನಾದರೂ ಹೊಸತನ ಕೊಡಲೇಬೇಕೆಂದು ಹಂಬಲಿಸುತ್ತಾರೆ. ಅಂಥದ್ದೇ ಒಂದು ಅಪರೂಪದ ನೈಪುಣ್ಯತೆಯನ್ನು ಒಳಗೊಂಡ ತಂತ್ರಜ್ಞ ಬಿ ಸಿ ಗೌರಿಶಂಕರ್. ಇವರು 1977 ರಲ್ಲಿ ಕನ್ನಡ ಭಾಷೆಯಲ್ಲಿ ತಯಾರಾದ “ಅನುರೂಪ”ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅರಿವು, ಸ್ಪಂದನ, ಮಿಂಚಿನ ಓಟ, ಧ್ರುವತಾರೆ, ಮೈಸೂರು ಮಲ್ಲಿಗೆ, ಓಂ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ಸರಕಾರದಿಂದ ಪಡೆದುಕೊಂಡಿದ್ದಾರೆ. ಗೌರಿಶಂಕರ್ ಅವರು ಒಂದರಿಂದ ಒಂದು ಅದ್ಭುತವಾದ ಚಿತ್ರಗಳನ್ನೇ ಸೆರೆಹಿಡಿದಿದ್ದಾರೆ. 1987 ರಲ್ಲಿ ಪುಷ್ಪಕ ವಿಮಾನ, 1992 ರಲ್ಲಿ ಮೈಸೂರು ಮಲ್ಲಿಗೆ, 1995 ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಭೂಗತ ಜಗತ್ತಿಗೆ ಸಂಭಂದಪಟ್ಟ ಚಲನಚಿತ್ರ ಓಂ, 1996 ರಲ್ಲಿ ಜನುಮದ ಜೋಡಿ, 1998ರಲ್ಲಿ ಮುಂಗಾರಿನ ಮಿಂಚು ಹೀಗೆ ಒಂದಕ್ಕಿಂತ ಒಂದು ಭಿನ್ನವಾದ ಚಿತ್ರಗಳಲ್ಲಿ ತನ್ನ ಛಾಯಾಗ್ರಹಣದ ಮೂಲಕ ಕೈಚಳಕ ತೋರಿಸಿದರು. ಜನುಮದ ಜೋಡಿ ಚಲನಚಿತ್ರದಲ್ಲಿ ಅವರು ಶಿವರಾಜಕುಮಾರ್, ಶಿಲ್ಪಾ ಮತ್ತು ಪವಿತ್ರ ಲೋಕೇಶ್ ಅವರ ಮೇಲೆ “ಮಣಿ ಮಣಿಗೊಂದು ದಾರಾ” ಹಾಡು ಸೂರ್ಯಾಸ್ತದ ಹಿನ್ನೆಲೆಯಲ್ಲಿ ಮೂಡಿ ಬರಬೇಕಾದ ಕಾರಣ ಒಂಬತ್ತು ದಿನಗಳವರೆಗೆ ಚಿತ್ರಿಸಿದರು. ಮೈಸೂರು ಮಲ್ಲಿಗೆ ಚಿತ್ರದ “ದೀಪವು ನಿನ್ನದೆ ಗಾಳಿಯು ನಿನ್ನದೇ” ಹಾಡನ್ನು ಅವರು ಒಂದು ಸಣ್ಣ ದೀಪದ ಬೆಳಕಿನಲ್ಲಿ ಸುಧಾರಾಣಿ ಮೇಲೆ ಚಿತ್ರಿಸಿದರು. ಗೌರಿಶಂಕರ್ ಅವರು ಕಲೆ ಮತ್ತು ವಾಣಿಜ್ಯ ಚಿತ್ರಗಳೆರಡರಲ್ಲೂ ಸೈ ಅನ್ನಿಸಿಕೊಂಡಿದ್ದರು. 1988 ರಲ್ಲಿ ಅವರು ಅಂಬರೀಷ್, ಗೌತಮಿ, ರಮೇಶ್ ಅರವಿಂದ್ ಅವರು ಅಭಿನಯಿಸಿದ ಏಳು ಸುತ್ತಿನ ಕೋಟೆ ಚಿತ್ರವನ್ನು ನಿರ್ದೇಶಿಸಿದರು.

ಅಲ್ಲದೆ ಕೆಂಡದ ಮಳೆ ಮತ್ತು ಆಟ ಬೊಂಬಾಟ ಚಿತ್ರಗಳಿಗು ಇವರದ್ದೇ ನಿರ್ದೇಶನ. ಸಮಯದ ಗೊಂಬೆ, ಬೆಟ್ಟದ ಹೂವು, ಒಂದು ಮುತ್ತಿನ ಕಥೆ, ಜನುಮ ಜನುಮದ ಅನುಭಂದ, ಗಾಳಿಮಾತು, ಗೀತ, ಮುನಿಯನ ಮಾದರಿ, ಆಲೆಮನೆ, ಹೊಸಬೆಳಕು, ಅಮರ ಮಧುರ ಪ್ರೇಮ, ಅಂತರಾಳ, ಕಾಮನ ಬಿಲ್ಲು, ಎರಡು ನಕ್ಷತ್ರಗಳು, ಗಾಯತ್ರಿ ಮದುವೆ. ಜ್ವಾಲಾಮುಖಿ, ಮರಳಿ ಗೂಡಿಗೆ, ಅಪೂರ್ವ ಸಂಗಮ, ವಿಜಯೋತ್ಸವ, ಮನಮೆಚ್ಚಿದ ಹುಡುಗಿ, ಅದೇ ರಾಗ ಅದೇ ಹಾಡು, ಆಸೆಗೊಬ್ಬ ಮೀಸೆಗೊಬ್ಬ, ಹೃದಯ ಹಾಡಿತು, ಗಂಡು ಸಿಡಿಗುಂಡು, ಮಣ್ಣಿನ ದೋಣಿ, ಅಂಗೈಲಿ ಅಪ್ಸರೆ, ಚಿನ್ನಾರಿ ಮುತ್ತ, ಒಡ ಹುಟ್ಟಿದವರು, ಸಾಗರ ದೀಪ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಸಿಂಗಾರವ್ವ ಆನಂದ್, ಭೂಮಿ ತಾಯಿಯ ಚೊಚ್ಚಲ ಮಗ, ಚಿಗುರಿದ ಕನಸು ಹೀಗೆ ಬೇರೆ ಬೇರೆ ಚಿತ್ರಗಳಿಗೆ ತನ್ನದೆ ಶೈಲಿಯಲ್ಲಿ ಛಾಯಾಗ್ರಹಣ ಮಾಡಿ ಹೆಸರು ಗಳಿಸಿದರು. ಗೌರಿಶಂಕರ್ ಅವರು ಬೆಂಗಳೂರಿನಲ್ಲಿ ಫೆಬ್ರವರಿ 26, 1950 ರಂದು ಬಿ. ಚನ್ನಬಸಪ್ಪ ಮತ್ತು ಶಶಿಮುಖಿ ದಂಪತಿಗೆ ಮಗನಾಗಿ ಜನಿಸಿದರು. ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ ಡಿಪ್ಲೊಮಾ ಮಾಡಿ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಲಕಾಲ ಕೆಲಸ ಮಾಡಿದರು. ಗೌರಿಶಂಕರ್ ಅವರು ಹೊಸ ಬೆಳಕು, ಪ್ರಾಯ ಪ್ರಾಯ ಪ್ರಾಯ ಮತ್ತು ಅಂತರಾಳ ಚಿತ್ರಗಳಲ್ಲಿ ಚಿತ್ರಗಳಲ್ಲಿ ನಟಿಸಿದ ಕನ್ನಡ ನಟಿ ಮಮತಾ ರಾವ್ ಅವರನ್ನು ವಿವಾಹವಾದರು. ಅವರ ಮಗಳು ರಕ್ಷಿತಾ 2000 ರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದರು.ಅಲ್ಲದೆ ನಿರ್ದೇಶಕರಾದ ಪ್ರೇಮ್ ಅವರನ್ನು ವರಿಸಿದರು. ಗೌರಿಶಂಕರ್ ದಿನಗಳು ಕಳೆಯುತ್ತಿದ್ದಂತೆ ಆರೋಗ್ಯದ ಸಮಸ್ಯೆಗೆ ಒಳಗಾದರು, ಶ್ವಾಸಕೋಶ ಮತ್ತು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಸಿ. ಗೌರಿಶಂಕರ್ ಅವರು 2004ರ ನವೆಂಬರ್ 11 ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ತಮ್ಮ ಕಾರ್ಯವೈಖರಿಯಿಂದ ಅದೆಷ್ಟೋ ಚಿತ್ರಗಳಲ್ಲಿ ಕೆಲಸ ಮಾಡಿ ಚಿತ್ರರಂಗದಲ್ಲಿ ಸಿನಿಲೋಕದ ಧ್ರುವತಾರೆಯಾಗಿ ನೆಲೆನಿಂತಿದ್ದಾರೆ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ