ನಾದಮಯ ಈ ಲೋಕವೆಲ್ಲ ನಾದಮಯ, ನಲಿಯುತಾ ಹೃದಯ ಹಾಡನು ಹಾಡಿದೆ, ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು, ಸಪ್ತಪದಿ ಇದು ಸಪ್ತಪದಿ ಎನ್ನುವಂತಹ ಅದೆಷ್ಟೋ ಅದ್ಭುತವಾದ ಕನ್ನಡ ಹಾಡುಗಳನ್ನು ಕನ್ನಡ ಚಿತ್ರಗಳಿಗೆ ನೀಡಿರುವಂತಹ ಸೌಮ್ಯ ಸ್ವಭಾವದ, ಹೆಸರುವಾಸಿಯಾಗಿರುವ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್. ಇವರು 1966 ರಲ್ಲಿ ಬಿಡುಗಡೆಗೊಂಡ “ಕಠಾರಿ ವೀರ” ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. 1941 ಜುಲೈ 18 ರಂದು ಜನಿಸಿದ ಇವರು ಮೂಲತಃ ಒಡಿಶಾದವರು. ಇವರ ತಂದೆ ಲಕ್ಷ್ಮಣ ಸ್ವಾಮಿ ಜ್ಯೋತಿಷಿಯಾಗಿದ್ದರು. ಉಪೇಂದ್ರ ಕುಮಾರ್ ಏಳನೇ ತರಗತಿಯವರೆಗೆ ಅಧ್ಯಯನ ಮಾಡಿ ತನ್ನ ಚಿಕ್ಕಪ್ಪ ಅಪ್ಪಾರಾವ್ ಅವರ ಸಹಾಯದಿಂದ ಸಂಗೀತ ಕಲಿಯಲು ಮುಂದಾದರು. ಇವರು ಹಿಂದುಸ್ತಾನಿ ಶಾಸ್ತ್ರೀಯ, ಪಾಶ್ಚಿಮಾತ್ಯ ಮತ್ತು ಭಾರತೀಯ ತಂತಿ ವಾದ್ಯಗಳಲ್ಲಿ ಕಠಿಣ ತರಬೇತಿಯನ್ನು ಪಡೆದರು.
ಉತ್ಕಲಾ ಸಂಗೀತ ಮತ್ತು ನೃತ್ಯ ಕಾಲೇಜಿನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ಓಡಿಯಾ ಸಂಗೀತ ಮತ್ತು ಸಿತಾರ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಉಪೇಂದ್ರಕುಮಾರ್ ಗಾಯನ ಮತ್ತು ಸಿತಾರ್‌ನಲ್ಲಿ ಸಂಗೀತ ತರಗತಿಗಳನ್ನು ಪಡೆದುಕೊಂಡ ನಂತರ 1966 ರಲ್ಲಿ ಪ್ರಭಾವಶಾಲಿ ಚಲನಚಿತ್ರ ನಿರ್ದೇಶಕ ವೈ.ಆರ್. ಸ್ವಾಮಿ, ನಿರ್ದೇಶನದಲ್ಲಿ ಡಾ. ರಾಜ್ ಕುಮಾರ್ ಅಭಿನಯದ, “ಕಠಾರಿ ವೀರ” ಚಿತ್ರದಲ್ಲಿ ಅವಕಾಶ ಪಡೆದುಕೊಂಡರು. ಈ ಚಿತ್ರದ ಹಾಡುಗಳು ಜನಪ್ರಿಯವಾಯಿತು. ಹಾಗೇಯೆ ಅಣ್ಣಾವ್ರ ಚಿತ್ರಗಳಿಗೆ ಉಪೇಂದ್ರ ಕುಮಾರ್ ಹತ್ತಿರವಾದರು. ಉಪೇಂದ್ರ ಕುಮಾರ್ ಕನ್ನಡ ಚಲನಚಿತ್ರಗಳಲ್ಲಿ ಒಡಿಯಾ ಜಾನಪದ ಸಂಗೀತವನ್ನು ಸಂಯೋಜಿಸುತ್ತಿದ್ದರು. ಮಧುರವಾದ ಹಾಡುಗಳನ್ನು ನೀಡುವಲ್ಲಿ ಯಶಸ್ವಿಯಾದರು. ಸಿಪಾಯಿ ರಾಮು (1972), ಪ್ರೇಮದ ಕಾಣಿಕೆ (1976), ಶಂಕರ್ ಗುರು (1978), ಧರ್ಮಸೆರೆ (1979), ರವಿಚಂದ್ರ (1980), ಕಾಮನ ಬಿಲ್ಲು (1983), ರಥ ಸಪ್ತಮಿ (1986), ನಂಜುಂಡಿ ಕಲ್ಯಾಣ (1989), ಹೃದಯ ಹಾಡಿತು (1991), ಜೀವನ ಚೈತ್ರ (1992), ಸಪ್ತಪದಿ(1992) ಈ ಚಿತ್ರಗಳ ಸಂಗೀತ ಉಪೇಂದ್ರ ಕುಮಾರ್ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಚಿತ್ರಗಳು ಸೇರಿದಂತೆ ಇನ್ನೂರಕ್ಕು ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ಉಪೇಂದ್ರಕುಮಾರ್ ಅವರು ಕರ್ನಾಟಕ ಸರಕಾರದಿಂದ ಸಿಗುವ ಅತ್ತುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
ರಾಜಕುಮಾರ್ ಅವರ ಹೆಚ್ಚಿನ ಚಿತ್ರಗಳಿಗೆ ಸಂಗೀತ ನೀಡಿರುವ ಉಪೇಂದ್ರ ಕುಮಾರ್ ಕನ್ನಡದ ಜೊತೆಗೆ ಒಡಿಯಾ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಒಡಿಯಾ ಚಲನಚಿತ್ರಗಳಲ್ಲಿ ಉಪೇಂದ್ರ ಕುಮಾರ್ ಅವರ ಕೆಲಸದ ನೆನಪಿಗಾಗಿ 2009 ರಲ್ಲಿ ಸಜಲ ಸ್ಮೃತಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಚಲನಚಿತ್ರ ನಟಿ ಹೆಚ್ ಪಿ ಸರೋಜಾ ಅವರ ಸಹೋದರಿ ಹೆಚ್ ಪಿ ಗೀತಾ ಅವರನ್ನು ವಿವಾಹವಾಗಿರುವ ಉಪೇಂದ್ರ ಕುಮಾರ್ 2002ರ ಜನವರಿ 24 ರಂದು ತನ್ನ ಅರುವತ್ತನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದರು. ಆದರೂ ಅವರು ಮಾಡಿರುವ ರಾಗ ಸಂಯೋಜನೆಯ ಅದೆಷ್ಟೋ ಗೀತೆಗಳು ಕಲಾಭಿಮಾನಿಗಳ ಹೃದಯವನ್ನು ಗೆದ್ದು ಸಿನಿಲೋಕದ ಧ್ರುವತಾರೆಯಾಗಿದ್ದಾರೆ.