ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು, ಆಕಾಶ ದೀಪವು ನೀನು, ಆಕಾಶದಿಂದ ಧರೆಗಿಳಿದ ರಂಬೆ, ಆಲಯ ಮೃಗಾಲಯ, ಬಾನಲ್ಲು ನೀನು ಭುವಿಯಲ್ಲು ನೀನು, ಬಿಸಿಲಾದರೇನು ಮಳೆಯಾದರೇನು, ಬಂದೆಯ ಬಾಳಿನ ಬೆಳಕಾಗಿ, ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ, ಮಾಮರವೆಲ್ಲೋ ಕೋಗಲೆಯೆಲ್ಲೋ, ನಾ ನಿನ್ನ ಮರೆಯಲಾರೆ, ನಾನಾಡುವ ನುಡಿಯೇ ಕನ್ನಡನುಡಿ, ತೇರಾ ಏರಿ ಅಂಬರದಾಗೆ, ಯುಗ ಯುಗಗಳೇ ಸಾಗಲಿ, ನೋಟದಾಗೆ ನಗೆಯ ಬೀರಿ ಮುಂತಾದ ಯಶಸ್ವಿ ಹಾಡುಗಳನ್ನು ಕೇಳಿದಿರಾದರೆ ಅದನ್ನು ಸಂಯೋಜಿಸಿದ ಸಂಗೀತ ನಿರ್ದೇಶಕರಾದ ಯಶಸ್ವಿ ಜೋಡಿ ರಾಜನ್- ನಾಗೇಂದ್ರ ಗೊತ್ತಿರದೆ ಇರಲಾರರು. ಅಂದಿನ ಚಿತ್ರಗಳೇ ಹಾಗೆ. ಒಂದು ಚಿತ್ರ ತಯಾರಾಗಬೇಕಾದರೆ ಮೊದಲು ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡು ಚಿತ್ರದ ನಿರ್ದೇಶಕರು ಅವರೊಂದಿಗೆ ಸನ್ನೀವೇಶಗಳ ಬಗ್ಗೆ ಚರ್ಚಿಸಿ ಅದಕ್ಕೆ ಹೊಂದಾಣಿಕೆಯಾಗುವ ಸಾಹಿತಿಗಳನ್ನು ಹಾಕಿ ಹಾಡುಗಳನ್ನು ಸಿದ್ಧಗೊಳಿಸುತ್ತಿದ್ದರು. ಮೆಲೋಡಿ ಹಾಡುಗಳು ಬೇಕು ಅಂತಾದರೆ ನಿರ್ಮಾಪಕ ನಿರ್ದೇಶಕರು ರಾಜನ್-ನಾಗೇಂದ್ರ ಬಳಿ ಹೋಗಿ ಅವರಲ್ಲಿ ಚಿತ್ರದ ಕಥೆ ಹೇಳಿ ಅವರನ್ನು ಒಪ್ಪಿಸುತ್ತಿದ್ದರು.
ರಾಜನ್-ನಾಗೇಂದ್ರ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಮುಖ ಸಂಗೀತ ಸಂಯೋಜಕರಾಗಿದ್ದರು. ನಾಗೇಂದ್ರ ರವರು ಅಣ್ಣ. ರಾಜನ್‌ರವರು ತಮ್ಮನಾಗಿದ್ದರೂ ರಾಜನ್‌ರವರ ಹೆಸರನ್ನು ಮೊದಲು ಬರುವಂತೆ ಮಾಡ್ಕೊಂಡು ರಾಜನ್ ನಾಗೇಂದ್ರ ಎಂಬ ಹೆಸರಿನಲ್ಲಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. ರಾಜನ್ ತನ್ನ ಅಣ್ಣ ನಾಗೇಂದ್ರ ಜೊತೆ ಗೂಡಿ ಅದ್ಭುತವಾದ ಹಾಡುಗಳನ್ನು ನೀಡಿ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರ ರಂಗದಲ್ಲಿ ಮೆರೆದರು. ಈ ಜೋಡಿ ಇನ್ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಿಗೂ ಸಂಗೀತ ನೀಡಿ ಭಾರತೀಯ ಸಂಗೀತ ನಿರ್ದೇಶಕರೆನಿಸಿಕೊಂಡರು. ರಾಜನ್ ಮತ್ತು ನಾಗೇಂದ್ರಪ್ಪನವರು ಮೈಸೂರಿನ ಶಿವರಾಮಪೇಟೆಯಲ್ಲಿ ಮಧ್ಯಮ ವರ್ಗದ ಸಂಗೀತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ರಾಜಪ್ಪ ಹಾರ್ಮೋನಿಯಂ ಮತ್ತು ಕೊಳಲು ವಾದಕರಾಗಿದ್ದು ಮೂಕಿ ಚಲನಚಿತ್ರಗಳಿಗೆ ಹಿನ್ನೆಲೆ ಸಂಗೀತ ನುಡಿಸಿದವರಾಗಿದ್ದರು.
ತನ್ನ ಮನೆತನವೇ ಸಂಗೀತ ಕುಟುಂಬವಾದ್ದರಿಂದ ಸ್ವಲ್ಪ ಸಮಯದೊಳಗೆ, ರಾಜನ್ ಪಿಟೀಲಿನಲ್ಲಿ ಮತ್ತು ನಾಗೇಂದ್ರ ಜಲ ತರಂಗದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದರು. ಆದ್ದರಿಂದ ಮೈಸೂರು ಅರಮನೆಯಲ್ಲಿ ಹಿಂದುಸ್ಥಾನಿ, ಕರ್ನಾಟಕ ಮತ್ತು ಪಾಶ್ಚಾತ್ಯ ಸಂಗೀತದ ಸಂಗೀತ ಕಾರ್ಯಕ್ರಮಗಳನ್ನು ಕೇಳುವ ಅವಕಾಶ ಪಡೆದುಕೊಂಡರು. ನಂತರ ಬೆಂಗಳೂರಿಗೆ ಬಂದು ಅಭ್ಯಾಸ ನಡೆಸಿದ ಕಾರಣ ರಾಜನ್ ಮತ್ತು ನಾಗೇಂದ್ರ ಇಬ್ಬರೂ ಜಯಾ ಮಾರುತಿ ಆರ್ಕೆಸ್ಟ್ರಾ ಮೂಲಕ ಸಾರ್ವಜನಿಕ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಅಷ್ಟರಲ್ಲಿ ಮದ್ರಾಸ್‌ಗೆ ಹೋಗುವ ಅವಕಾಶ ಬಂದ ಕಾರಣ ಆ ಸಮಯದಲ್ಲಿ ಟಾಕಿ ಚಲನಚಿತ್ರಗಳನ್ನು ನಿರ್ಮಿಸಲು ಹೆಸರುವಾಸಿಯಾಗಿದ್ದ ಎಚ್. ಆರ್. ಪದ್ಮನಾಭ ಶಾಸ್ತ್ರಿ ಅವರ ಅಡಿಯಲ್ಲಿ ಸಂಗೀತವನ್ನು ಕಲಿತರು. ಇದು ಅವರಿಗೆ ಚಲನಚಿತ್ರೋಧ್ಯಮದಲ್ಲಿ ಗಟ್ಟಿಯಾಗಿ ನೆಲೆಯೂರಲು ಬುನಾದಿ ಹಾಕಿ ಕೊಟ್ಟಿತು ಎಂದರೆ ತಪ್ಪಾಗಲಾರದು. ವಿಠ್ಠಲಾಚಾರ್ಯರ ‘ಚಂಚಲಕುಮಾರಿ’ ಚಿತ್ರಕ್ಕೆ ರಾಗ ಸಂಯೋಜನೆ ಮಾಡುವುದರ ಮೂಲಕ ಸಂಗೀತ ನಿರ್ದೇಶಕರಾದ ರಾಜನ್ ನಾಗೇಂದ್ರ ಚಿತ್ರರಂಗದಲ್ಲಿ ಮೆಲೋಡಿ ರಾಜನೆನಿಸಿಕೊಂಡರು.
1973 ರಲ್ಲಿ ಕರ್ನಾಟಕದಾದ್ಯಂತ ಜನಪ್ರಿಯಗೊಂಡ “ಗಂಧದ ಗುಡಿ” ಹಾಡುಗಳಿಂದ ರಾಜನ್ ನಾಗೇಂದ್ರ ಮನೆಮಾತಾದರು. 70ರ ದಶಕದಲ್ಲಿ ನ್ಯಾಯವೇ ದೇವರು, ಗಂಧದ ಗುಡಿ, ದೇವರ ಗುಡಿ, ಭಾಗ್ಯವಂತರು, ಎರಡು ಕನಸು, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಬಯಲು ದಾರಿ, ಪಾವನ ಗಂಗಾ, ಗಿರಿ ಕನ್ಯೆ ಇನ್ನೂ ಅನೇಕ ಚಿತ್ರದ ಹಾಡುಗಳು ಸೂಪರ್ ಹಿಟ್‌ಗಳಾಗಿವೆ. ಘಂಟಸಾಲ, ಕಲಾ ಗೋವಿಂದರಾಜನ್, ಪಿ. ಬಿ. ಶ್ರೀನಿವಾಸ್, ಡಾ.ರಾಜ್ ಕುಮಾರ್, ಕಿಶೋರ್ ಕುಮಾರ್, ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಪಿ.ಜಯಚಂದ್ರನ್, ರಾಜೇಶ್ ಕೃಷ್ಣ, ಪಿ.ಲೀಲಾ, ಎಸ್. ಜಾನಕಿ, ವಾಣಿ ಜೈರಾಮ್, ರಾಣಿ, ಎಲ್ ಆರ್ ಈಶ್ವರಿ, ಪಿ ಸುಶೀಲ, ಚಿತ್ರ ಹೀಗೆ ಅನೇಕ ಗಾಯಕರುಗಳು ರಾಜನ್- ನಾಗೇಂದ್ರ ರಾಗ ಸಂಯೋಜನೆಯ ಹಾಡುಗಳನ್ನು ಹಾಡಿದ್ದಾರೆ.
ನವೆಂಬರ್ 2000ದಲ್ಲಿ ನಾಗೇಂದ್ರರು ವಿಧವಶವಾದ ಕಾರಣ ರಾಜನ್ ಒಬ್ಬಂಟಿಗನಾದರು. ಆದರೂ ರಾಜನ್ ತನ್ನ ಮಗನೊಂದಿಗೆ ರಾಗ ಸಂಯೋಜನೆ ಮಾಡುತ್ತಿದ್ದರು. ಕೆಲವು ವರ್ಷದ ನಂತರ ರಾಜನ್ ಕೂಡ ನಿಧನರಾದರು. ಕಲಾರಸಿಕರಿಗೆ ಯಶಶ್ವಿ ಹಾಡುಗಳನ್ನು ಕೊಟ್ಟಿರುವ ರಾಜನ್-ನಾಗೇಂದ್ರ ರವರು ಸಿನಿಲೋಕದ ಧ್ರುವತಾರೆಯಾಗಿ ಜನಮಾನಸದಲ್ಲಿ ನೆಲೆಸಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್