ಕನ್ನಡ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಅಪ್ರತಿಮ ನಟ ಟಿ ಎನ್ ಬಾಲಕೃಷ್ಣ ಬಾಲಣ್ಣನೆಂದೆ ಹೆಸರುವಾಸಿಯಾದವರು. ಒಂದೇ ನಮೂನೆಯ ಪಾತ್ರಗಳಿಗೆ ಜೋತುಬೀಳದೆ ಬೇರೆ ಬೇರೆ ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತ ಕಲಾ ರಸಿಕರ ಮನಸ್ಸನ್ನು ಗೆದ್ದವರು. ಸುಮಾರು ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಬಾಲಣ್ಣ, ಡಾ. ರಾಜ್ ಕುಮಾರ್ ಜೊತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲಣ್ಣಗೆ ಶ್ರವಣ ಸಮಸ್ಯೆ ಇದ್ದರೂ, ತನ್ನ ಜೊತೆ ಅಭಿನಯಿಸುತ್ತಿದ್ದ ಕಲಾವಿದರು ಮಾತಾನಾಡುವಾಗ ಅವರ ತುಟಿ ಚಲನೆಯನ್ನು ಗಮನಿಸಿ ಸಂಭಾಷಣೆ ಹೇಳುತ್ತಾ ಶ್ರವಣ ಸಮಸ್ಯೆ ಇದೆ ಎಂಬುದು ಗೊತ್ತಾಗದ ರೀತಿಯಲ್ಲಿ ಅಭಿನಯಿಸುತ್ತಿದ್ದ ಚಾಣಾಕ್ಷರು ಬಾಲಣ್ಣ. 1916 ರ ನವೆಂಬರ್ ಎರಡರಂದು ಅರಸೀಕೆರೆಯಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದ ಬಾಲಣ್ಣ ಬಾಲ್ಯದಲ್ಲಿ ತುಂಬಾ ಸಂಕಷ್ಟಗಳನ್ನು ಎದುರಿಸಬೇಕಾಯಿತು. ರಂಗಭೂಮಿಯಲ್ಲಿ ನಟನೆ ಮಾಡುವ ಮುಂಚೆ ನಾಟಕ ಕಂಪನಿಯೊಂದರ ರಂಗ ವೇದಿಕೆಯ ಚಿತ್ರಗಾರನಾಗಿ ಕಾರ್ಯನಿರ್ವಹಿಸಿದರು. ನಂತರ ಗೇಟ್ ಕೀಪರಾದರು. ಬಾಲಣ್ಣನವರು ಪ್ರಾರಂಭದಲ್ಲಿ ಅಂದರೆ 1929 ರಲ್ಲಿ “ಶ್ರೀ ರಾಮ ಪಟ್ಟಾಭಿಷೇಕ” ನಾಟಕದಲ್ಲಿ ಅಭಿನಯಿಸಿದರು. ನಂತರದ ದಿನಗಳಲ್ಲಿ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದ ಬಾಲಣ್ಣ ಹೆಸರಾಂತ ಕಂಪನಿಯಾದ ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಸೇರಿದರು. ಬಾಲಣ್ಣನವರು ಗುಬ್ಬಿ ವೀರಣ್ಣನವರ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಬಿ ಅರ್ ಪಂತುಲು, ನಾಟಕಗಳಲ್ಲಿನ ಬಾಲಣ್ಣನ ಅಭಿನಯ ನೋಡಿ ಅವರಿಗೆ ಚಲನಚಿತ್ರಗಳಲ್ಲಿ ಅವಕಾಶ ನೀಡಿದರು. ಅಲ್ಲಿಂದ ಚಲನಚಿತ್ರ ನಟರಾಗಿ ವೃತ್ತಿ ಜೀವನ ಆರಂಭಿಸಿದ ಬಾಲಣ್ಣ ಹಾಸ್ಯ, ಖಳನಾಯಕ, ತಂದೆ, ಮಾವ ಹೀಗೆ ಅತೀ ಹೆಚ್ಚು ವಿಧಗಳ ಪಾತ್ರವನ್ನು ಮಾಡಿ ಕಲೆಯ ಕೇಂದ್ರ ಬಿಂದುವಾದರು. “ಮುರಿಯದ ಮನೆ” “ಬಂಗಾರದ ಮನುಷ್ಯ” “ಗಂಧದ ಗುಡಿ” “ ಕಾಮನ ಬಿಲ್ಲು” ಮುಂತಾದ ಅದೆಷ್ಟೊ ಮಹೋನ್ನತ ಚಿತ್ರಗಳಲ್ಲಿ ಅಭಿನಯಿಸಿದರು. ಅಗಿನ ಕಾಲದಲ್ಲಿ ಕನ್ನಡ ಚಿತ್ರಗಳ ಎಲ್ಲಾ ಕೆಲಸ ಕಾರ್ಯಗಳನ್ನು ಚೆನೈ ನಲ್ಲಿ ಮಾಡಬೇಕಾದ ಅನಿವಾರ್ಯತೆ ಇದ್ದು, ಅದರಿಂದ ತೊಂದರೆಗೆ ಈಡಾಗುತ್ತಿದ್ದ ನಿರ್ಮಾಪಕರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿ 20 ಎಕ್ರೆ ಜಾಗದಲ್ಲಿ “ಅಭಿಮಾನ್ ಸ್ಟುಡಿಯೋ” ಸ್ಥಾಪಿಸಿದರು. ಅದರೆ ಅವರಿಗೆ ಸರಿಯಾದ ರೀತಿಯಲ್ಲಿ ಸಹಕಾರ ಸಿಗದೆ ಇದ್ದುದರಿಂದ ಇನ್ನಷ್ಟು ತೊಂದರೆಗಳನ್ನು ಬಾಲಣ್ಣ ಎದುರಿಸಬೇಕಾಯಿತು. ಬಾಲಣ್ಣವವರು ಅಷ್ಟು ಕಷ್ಟ ಪಟ್ಟು ಮಾಡಿದ ಸ್ಟುಡಿಯೋ ಬಾಲಣ್ಣನವರ ಮಕ್ಕಳು, ಮೊಮ್ಮಕ್ಕಳು ನೋಡಿಕೊಂಡಿದ್ದರೂ, ಹೆಚ್ಚಿನ ಧಾರಾವಾಹಿಗಳು, ಸಿನಿಮಾಗಳು ಅಲ್ಲಿ ಚಿತ್ರೀಕರಣ ನಡೆದಿದ್ದರೂ ಇಂದು ದಿಕ್ಕಿಲ್ಲದಂತಾಗಿದೆ. 1995 ರಲ್ಲಿ ಜುಲೈ 18 ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದ ಬಾಲಣ್ಣ ಮತ್ತಷ್ಟು ದಿನಗಳು ಬದುಕಿ ಉಳಿಯುತ್ತಿದ್ದರೆ ಅವರ ಕನಸಿನ ಕೂಸಾಗಿದ್ದ ಅಭಿಮಾನ್ ಸ್ಟುಡಿಯೋ ಕನ್ನಡ ಚಿತ್ರರಂಗಕ್ಕೊಂದು ಸಿನಿಮಾ ತಯಾರಿಸುವ ಮನೆಯಾಗುತ್ತಿತ್ತು. ಅವರ ನಿಧನದಿಂದ ಸ್ಟುಡಿಯೋಗೆ ಕತ್ತಲೆ ತುಂಬಿ ಹೋಯಿತು. ಏನೇ ಆದರೂ ಬಾಲಣ್ಣ ಪಟ್ಟ ಶ್ರಮ ಮತ್ತು ಅವರ ಅಭಿನಯದಿಂದ ಕಲಾಪ್ರೇಮಿಗಳ ಹೃದಯದಲ್ಲಿ ಟಿ ಎನ್ ಬಾಲಕೃಷ್ಣ ಧ್ರುವ ತಾರೆಯಾಗಿ ನೆಲೆಸಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್