ಮಹಿಳೆಯರ ಮನಮಿಡಿಯುವ ಕೃತಿಗಳನ್ನೇ ಆರಿಸಿ, ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿ, ಸಾಲು ಸಾಲಾಗಿ ಯಶಸ್ವಿ ಚಿತ್ರಗಳನ್ನು ಕೊಟ್ಟು ಮನೆ ಮಾತಾಗಿದ್ದ ನಿರ್ದೇಶಕರು ಕೆ ವಿ ಜಯರಾಮ್. ಮೂಲತಃ ಮೈಸೂರಿನ ಬೆಳ್ಳೂರು ಸಮೀಪದಲ್ಲಿರುವ ಎಳ್ಳು ಕೊಪ್ಪದಲ್ಲಿ ವಾಸವಾಗಿ, ಸಿವಿಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸತ್ತಿದ್ದ ವೈಕುಂಠ ಗೌಡ ಮತ್ತು ಕೆಂಪಮ್ಮ ದಂಪತಿಗಳ ಮಗನಾದ ಕೆ ವಿ ಜಯರಾಮ್‌ರವರು 1968 ರಲ್ಲಿ ಎಂ ಅರ್ ವಿಠಲ್‌ರವರ “ಬಾಳಪಂಜರ” ಚಿತ್ರದ. ಮೂಲಕ ಸಹಾಯಕ ಸಂಕಲನಕಾರರಾಗಿ ಚಿತ್ರರಂಗ ಪ್ರವೇಶಿಸಿದರು. ಅಲ್ಲಿಂದ 60 ರಿಂದ 70 ಚಿತ್ರಗಳಿಗೆ ಕೃಷ್ಣ, ಮಣಿ, ಭಕ್ತವತ್ಸಲಂ, ಚಿನ್ನಪ್ಪ ಮುಂತಾದವರ ಕೈ ಕೆಳಗೆ ಸಹಾಯಕ ಸಂಕಲನಕಾರರಾಗಿ ದುಡಿದರು. ನಂತರ ಎಮ್ ಆರ್ ವಿಠಲ್ ರವರ “ಯಾರ ಸಾಕ್ಷಿ” ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾದ ಕೆ ವಿ ಜಯರಾಮ್ ಎಮ್ ಆರ್ ವಿಠಲ್ ರವರ ಬಳಿ ಸುಮಾರು ಹತ್ತು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ದುಡಿದರು. ಮಾರುತಿ ಶಿವರಾಂ ರವರ “ಪರಸಂಗದ ಗೆಂಡೆತಿಮ್ಮ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. 1979 ರಲ್ಲಿ ಟಿ ಕೆ ರಾಮ್‌ರವರ ಕ್ರೈಂ ಥ್ರಿಲ್ಲರ್ ಕಾದಂಬರಿಯನ್ನು ಆಧರಿಸಿ “ಮರಳು ಸರಪಣಿ” ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲೊಬ್ಬ ಭರವಸೆಯ ನಿರ್ದೇಶಕರಾದರು. ಅದರ ನಂತರ ಸುಮಾರು 20 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ ಕೆ ವಿ ಜಯರಾಮ್ “ಶ್ವೇತ ಗುಲಾಬಿ” ಚಿತ್ರದ ಮೂಲಕ ನಿರ್ಮಾಪಕರಾದರು. ಸುದರ್ಶನ ದೇಸಾಯಿಯವರ ಅಪೂರ್ವ ಕನಸುಗಾರ ಎಂಬ ಕಾದಂಬರಿಯ ಒಂದು ಎಳೆಯನ್ನು ಪೋಣಿಸಿ ಕಾದಂಬರಿಕಾರನ ಕೈಯ್ಯಲ್ಲೇ ಸಂಭಾಷಣೆ ಬರೆಸಿ “ಶರವೇಗದ ಸರದಾರ” ಎಂಬ ಚಿತ್ರವನ್ನು ಮಾಡಿದರು.
“ಮುದುಡಿದ ತಾವರೆ ಅರಳಿತು” ಚಿತ್ರದ ಮೂಲಕ ಸಂಭಾಷಣಕಾರರಾಗಿ ತನ್ನ ಸಹೋದರ ಕೆ ವಿ ರಾಜು ಅವರ “ಇಬ್ಬನಿ ಕರಗಿತು” ಚಿತ್ರದಲ್ಲಿ ಡ್ಯಾನ್ಸರ್ ಅನುರಾಧ, “ಅರುಣರಾಗ” ಚಿತ್ರದಲ್ಲಿ ಸಯ್ಯದ್ (ಸತ್ಯಜಿತ್) “ಗಾಜಿನ ಮನೆ” ಚಿತ್ರದಲ್ಲಿ ಸಾಹಿತಿಯಾಗಿ ನಾಗೇಂದ್ರ ಪ್ರಸಾದ್, ಸಂಗೀತ ನಿರ್ದೇಶಕರಾಗಿ ಗಂಧರ್ವ, “ವರ್ಣಚಕ್ರ” ಚಿತ್ರದಲ್ಲಿ ಸಂಗೀತ ನಿರ್ದೇಶಕ ಸಂಗೀತ ರಾಜ (ಎಸ್ ಪಿ ವೆಂಕಟೇಶ್) “ರಂಜಿತಾ” ಚಿತ್ರದ ಮೂಲಕ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕರಾಗಿ ಅಗತ್ತ್ಯ “ಬೆತ್ತಲೆ ಸೇವೆ” ಚಿತ್ರದ ಮೂಲಕ ಸಂಭಾಷಣಕಾರರಾಗಿ ಬಿ ಎಲ್ ವೇಣು ಹೀಗೆ ಹಲವಾರು ಕಲಾವಿದರನ್ನು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ ವಿ ಜಯರಾಮ್ ಅವರದ್ದು. ಇವರ ಜೊತೆ ಸಕಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಕೆ. ವಿ ರಾಜು, ಶ್ರೀಧರ್, ಜಿ ಕೆ ಮುದ್ದುರಾಜ್ ಮುಂತಾದವರು ನಿರ್ದೇಶಕರಾಗಿದ್ದಾರೆ.
ಕೆ ವಿ ಜಯರಾಮ್ ಮಾಡಿರುವ “ಬಾಡದ ಹೂ” “ಮುದುಡಿದ ತಾವರೆ ಅರಳಿತು” “ಇಬ್ಬನಿ ಕರಗಿತು” “ಒಲವಿನ ಆಸರೆ” “ಮತ್ಸರ” “ಅರುಣರಾಗ” “ಮೇಘ ಮಂದಾರ” “ರಂಜಿತಾ” ಹೀಗೆ ಹೆಚ್ಚಿನ ಚಿತ್ರಗಳು ಯಶಸ್ವಿಯಾಗಿದ್ದಲ್ಲದೆ ಚಿತ್ರದ ಹಾಡುಗಳು ಕೂಡ ಜನ ಜನಿತವಾಗಿದೆ. ಇದೇ ಕಾರಣಕ್ಕಾಗಿ ಕೆ ವಿ ಜಯರಾಮ್ ಅವರು ಸಿನಿಲೋಕದ ಧ್ರುವತಾರೆಯಾಗಿ ಜನರ ಮನದಲ್ಲಿ ನೆಲೆಸಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್