ರೈತನನ್ನು ಭಾರತದ ಭಾಗ್ಯವಂತನೆಂದು ಹಾಡಿ ಹೊಗಳುವ, ಕಟ್ಟಾ ಕ್ರಾಂತಿಗೀತೆ ಕೇಳಿದಿರಾದರೆ “ಗೀತಪ್ರಿಯ” ಎಂಬ ಅಪೂರ್ವ ಸಾಹಿತಿ, ಚಿತ್ರ ನಿರ್ದೇಶಕರ ಪರಿಚಯ ಇರದೇ ಇರಲಾರರು. ಬೆಸುಗೆ ಎಂಬ ಪದ ಒಂದೇ ಹಾಡಿನಲ್ಲಿ ಎಷ್ಟು ಸಾರಿ ಬರುತ್ತೆ ಎಂದು ಕಲಾಪ್ರೇಮಿಗಳು ಲೆಕ್ಕಹಾಕುವಂತೆ ಮಾಡಿದ್ದಲ್ಲದೆ “ಬೆಸುಗೆ” ಚಿತ್ರಕ್ಕಾಗಿ ಬೆಸುಗೆ, ಬೆಸುಗೆ ಬೆಸುಗೆ, ಸಾಹಿತ್ಯ ಬರೆದು ಗೀತಪ್ರಿಯ ಇನ್ನಷ್ಟು ಚಿತ್ರರಂಗಕ್ಕೆ ಹತ್ತಿರವಾದರು. “ಬೆಸುಗೆ” ಚಿತ್ರಕ್ಕಾಗಿ ಯಾರ ಹೂವು ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ ಎಂದು ತಿರಸ್ಕರಿಸಿದ ಪ್ರೇಮಿಯನ್ನು ಕುರಿತು ಭಗ್ನಪ್ರೇಮದ ಸಾಹಿತ್ಯ ಬರೆದರು. ಸಮಾಜದಲ್ಲಿರುವ ಸೋಮಾರಿಗಳಿಗೆಂದೆ ಭಗವಂತ ಕೈಕೊಟ್ಟ ದುಡಿಯೋಕ್ಕಂತ, ಅದನ್ಯಾಕೆ ಎತ್ತುವೆ ಹೊಡೋಯೊಕಂತ ಎಂಬ ಸಂದೇಶವಿರುವ ಹಾಡುಗಳನ್ನು ಬರೆದರು.
“ಬೆಳುವಳದ ಮಡಿಲಲ್ಲಿ” ಚಿತ್ರಕ್ಕಾಗಿ ಬೆವರ ಹನಿ ಬಿದ್ದಾಗ ಒಂದೊಂದು ಹನಿಯು ಮುತ್ತಾಯ್ತದೋ ಎಂಬ ಕೃಷಿಕನಿಗೆ ಸ್ಪೂರ್ತಿ ತುಂಬುವ ಸಾಹಿತ್ಯ ಬರೆದರು. “ಹೊಂಬಿಸಿಲು” ಚಿತ್ರಕ್ಕಾಗಿ ಜೀವವೀಣೆ ನೀನು ಮಿಡಿತದ ಸಂಗೀತ, ಬಾವಗೀತೆ ಬಾಳಿನೊಲುಮೆಯ ಸಂಕೇತ ಎಂಬ ಗೀತೆಯನ್ನು ಬರೆದು ಪ್ರೇಮಿಗಳ ಹೃದಯ ಝಳ್ಳೆನಿಸುವಂತೆ ಚಿತ್ರಿಸಿದ್ದರು. ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂಬ ದಾಂಪತ್ಯ ತತ್ವವನ್ನು ಸಾರುವ ಗೀತೆಯನ್ನು ಬರೆದರು. ಹೀಗೆ ಹೇಳುತ್ತಾ ಬರೆಯುತ್ತಾ ಹೋದರೆ ಮುಗಿಯದಷ್ಟು ಸಾಹಿತ್ಯಗಳು ಗೀತಪ್ರಿಯರವರಿಂದ ರಚಿತವಾಗಿದೆ.
ಇವರು 1955 ರಲ್ಲಿ ‘ಶ್ರೀರಾಮ ಪೂಜಾ” ಎಂಬ ಚಿತ್ರಕ್ಕೆ ಎರಡು ಹಾಡು ಬರೆಯುವುದರ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟವರು. “ಭಾಗ್ಯಚಕ್ರ” ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯುವುದರೊಂದಿಗೆ ಗೀತಪ್ರಿಯ ಎಂಬುದಾಗಿ ಮರುನಾಮಕರಣಗೊಂಡು, ಒಂದರ ಹಿಂದೊಂದು ಮರೆಯಲಾಗದ ಅಮರಗೀತೆಗಳನ್ನು ಕಲಾಭಿಮಾನಿಗಳಿಗೆ ನೀಡಿ ಕಲಾಮಾತೆ ಪುತ್ರನೆನಿಸಿಕೊಂಡರು. ಪು. ತಿ. ನರಸಿಂಹಾಚರ್, ಬೆಳ್ಳಾವೆ ನರಸಿಂಹ ಶಾಸ್ತ್ರಿಗಳಿಂದ ಸ್ಪೂರ್ತಿಗೊಂಡಿದ್ದ ಗೀತಪ್ರಿಯರು ಅರ್ಥಪೂರ್ಣ ಸಾಹಿತ್ಯವನ್ನೇ ಬರೆದರು. ಶಿಸ್ತು, ಸಂಯಮ, ಸಮಯ ಪಾಲನೆಯಿಂದ ತಮ್ಮ ಕ್ರಿಯಾಶೀಲ ಛೌಕಟ್ಟನ್ನು ದಾಟದಂತೆ, ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ, ನಿರ್ದೇಶಕರ, ಸಾಹಿತಿಗಳ ಸ್ಥಾನಮಾನ ಹೆಚ್ಚಿಸಿದಂತವರ ಸಾಲಿನಲ್ಲಿ ಗೀತಪ್ರಿಯ ಕೂಡ ಒಬ್ಬರು.
ಇವರ ಮೂಲ ಹೆಸರು ಲಕ್ಷ್ಮಣರಾವ್ ಮೋಹಿತೆ. ರಾಮರಾವ್ ಮೋಹಿತೆ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ 1932ರಲ್ಲಿ ಮಗನಾಗಿ ಜನಿಸಿದ ಲಕ್ಷ್ಮಣರಾವ್ ಅವರಿಗೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಸಹಕಾರದೊಂದಿಗೆ ಕಲಾಸೇವೆ ಮಾಡುವ ಅವಕಾಶ ಲಭಿಸಿತು. ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ, ನಲವತ್ತು ಚಿತ್ರಗಳನ್ನು ನಿರ್ದೇಶಿಸಿದ ಗೀತಪ್ರಿಯ 2016 ರಲ್ಲಿ ವಿಧವಶರಾದರು. ಇವರು ಸಾಹಿತ್ಯ ಬರೆಯುತ್ತಿದ್ದ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅವರಿಗೆ ಕಥೆ ಹೇಳಿ, ನಿರ್ಮಾಪಕ ವೆಂಕಟಾಚಲರವರಿಗೂ ಕಥೆ ಹೇಳಿ ಒಪ್ಪಿಸಿ, ಹಳ್ಳಿಯಲ್ಲಿರುವ ನಾಯಕ ಬಹಿಷ್ಕಾರಗೊಂಡು ಮತ್ತೊಂದೂರಿಗೆ ಬಂದು, ಬಂಜರು ಭೂಮಿಯಲ್ಲಿ ಬಾವಿ ತೆಗೆದು, ವ್ಯವಸಾಯ ಮಾಡುವ ಛಲವಾದಿ ಯುವಕನ ಕಥೆಯನ್ನಾದಾರಿಸಿದ “ಮಣ್ಣಿನ ಮಗ” ಎಂಬ ಚಿತ್ರವನ್ನು ನಿರ್ದೇಶಿಸಿದರು. ಬರೆಯದ ಕೈಗಳು ಬರೆಯುತ್ತಿದೆ,
ಇದೇನು ಸಭ್ಯತೆ, ಇದೇನು ಸಂಸ್ಕೃತಿ ಎಂಬ ಹಾಡುಗಳನ್ನು ಬರೆದು ಚಿತ್ರಕ್ಕೆ ಮೆರುಗು ಕೊಟ್ಟರು. ಗೀತಪ್ರಿಯರು ಸಾಹಿತ್ಯ ಬರೆಯುವ ಸಂದರ್ಭದಲ್ಲಿ ಅವರ ಗೀತೆಗಳಿಂದ ಸಮ್ಮೋಹನಗೊಂಡ ಎಂ ಪಿ ಶಂಕರ್ ನಾನು ನಿರ್ಮಾಪಕನಾಗಿ ಮೊದಲು ಮಾಡುವ ಚಿತ್ರವೇ ನಿನ್ನ ನಿರ್ದೇಶನದಲ್ಲಿ ಎಂದು ಗೀತಪ್ರಿಯರಿಗೆ ಮುಂಗಡ ಹಣ ಕೊಟ್ಟಿದ್ದರು. ಆದರೆ ಕಾರಣಾಂತರಗಳಿಂದ ಅದು ಗೀತಪ್ರಿಯರಿಗೆ ಎರಡನೇ ಚಿತ್ರವಾಯ್ತು. 1969 ರಲ್ಲಿ ತೆರೆಕಂಡ “ಕಾಡಿನ ರಹಸ್ಯ” ಚಿತ್ರವೇ ಅದು. ಸಾಮಾನ್ಯ ಯುವಕನೊಬ್ಬ ತಾನು ಅತ್ಯಂತ ಪ್ರೀತಿಯಿಂದ ಸಾಕಿದ ನಾಯಿಯನ್ನು ಸಾಲಕ್ಕಾಗಿ ಸಾಹುಕಾರರ ಮನೆಯಲ್ಲಿ ಒತ್ತೆಯಿಟ್ಟಾಗ, ಆ ನಾಯಿ ಸಾಹುಕಾರನ ಕುಟುಂಬದ ಪ್ರಾಣ ಉಳಿಸಿ, ಸಾಹುಕಾರನ ಮನ ಪರಿವರ್ತನೆ ಗೊಳಿಸುವಂತಹ ಅಪರೂಪದ ಕಥೆಯಿರುವ “ಜೋಡಿ ಜೀವ” ಎಂಬ ಚಿತ್ರವನ್ನು ನಿರ್ದೇಶಿಸಿ ಹೆಗ್ಗಳಿಕೆಗೆ ಪಾತ್ರವಾದರು.
“ಪುಟಾಣಿ ಏಜೆಂಟ್ 123” ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸಿದರು. “ಯಾವ ಜನ್ಮದ ಮೈತ್ರಿ” ‘ಸುವರ್ಣ ಸೇತುವೆ” “ಮೌನಗೀತೆ” ಬಾಳೊಂದು ಬಾವಗೀತೆ” ಯಂತಹ ಯಶಸ್ವಿ ಚಿತ್ರಗಳನ್ನು ನೀಡಿದರು. “ಮಣ್ಣಿನ ಮಗ” ಚಿತ್ರಕ್ಕಾಗಿ ರಾಷ್ಟಪ್ರಶಸ್ತಿ ಪಡೆದಿರುವ ಗೀತಪ್ರಿಯರಿಗೆ ಚಿತ್ರರಂಗದ ಸೇವೆಗಾಗಿ “ಪುಟ್ಟಣ್ಣ ಕಣಗಾಲ್’ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ನೀಡಿದೆ. ಅಲ್ಲದೆ ಇನ್ನಿತರ ಪ್ರಶಸ್ತಿಗಳನ್ನು ಬಾಚಿಕೊಂಡ ಗೀತಪ್ರಿಯರು, ಅರ್ಥಪೂರ್ಣ ಸಾಹಿತ್ಯದೊಂದಿಗೆ ಪ್ರತಿ ಚಿತ್ರವನ್ನು ಕಾವ್ಯದಂತೆ ಚಿತ್ರಿಸಿ, ಕಲಾಪ್ರೇಮಿಗಳ ಹೃದಯಾಂತರಾಳದಲ್ಲಿ ಸಿನಿಲೋಕದ ಧ್ರುವತಾರೆಯಾಗಿ ಅಚ್ಚಳಿಯದೆ ಉಳಿದಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್