ಒಂದು ಕಾಲಘಟ್ಟದಲ್ಲಿ ಕುಮಾರತ್ರಯರಾದ ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ ಕುಮಾರ್ ಈ ಮೂರು ಜನ ಕಲಾವಿದರು ಕನ್ನಡ ಚಿತ್ರರಂಗದ ಅಪರಂಜಿಗಳು. ಇವತ್ತಿನ ಲೇಖನ ಕಲ್ಯಾಣ್ ಕುಮಾರ್ ಕುರಿತಾದದ್ದು. ನಟನೆಯಲ್ಲಿ ಕಲಾಭಿಮಾನಿಗಳನ್ನು ಬೆರಗು ಮೂಡಿಸಿದ್ದ ಕಲ್ಯಾಣ್ ಕುಮಾರ್ ಶಿಖರದೆತ್ತರಕ್ಕೆ ಬೆಳೆಯಬೇಕಿದ್ದರೂ ತನ್ನ ಸ್ವಯಂ ಅಪರಾಧ ಮತ್ತು ತನ್ನವರು ಮಾಡಿದ ತಪ್ಪಿನಿಂದ ಹಿಂದೆ ಸರಿಯಬೇಕಾಯ್ತು.
ಆದರೂ ಕಲ್ಯಾಣ್ ಕುಮಾರ್ ಅಭಿನಯಿಸಿದ ಅದೆಷ್ಟೋ ಚಿತ್ರಗಳು ಪ್ರೇಕ್ಷಕರ ಮನಸೂರೆಗೊಂಡಿದೆ. ಕಲ್ಯಾಣ್ ಕುಮಾರ್ 1928 ರ ಜುಲೈ 28 ರಂದು ಬೆಂಗಳೂರಿನಲ್ಲಿ, ತಮಿಳು ಮಾತನಾಡುವ ಅಯ್ಯಂಗಾರ್ ಕುಟುಂಬದಲ್ಲಿ ಚೊಕ್ಕಣ್ಣನಾಗಿ ಜನಿಸಿದರು. ಅವರ ಹೆತ್ತವರು ವೈದ್ಯನಾಗಬೇಕೆಂದು ಬಯಸಿದ್ದರೂ ಕೂಡ ಅವರಿಗೆ ನಟನೆಯಲ್ಲಿದ್ದ ಆಸಕ್ತಿ, ಅವರನ್ನು ಚಿತ್ರರಂಗ ಕೈ ಬೀಸಿ ಕರೆಯಿತು. ಒಂದೊಂದೆ ಚಿತ್ರಗಳಲ್ಲಿ ತನ್ನ ಅಭಿನಯದ ಕುಶಲತೆಯನ್ನು ಬಿಚ್ಚಿಟ್ಟ ಕಲ್ಯಾಣ್ ಕುಮಾರ್ ಐತಿಹಾಸಿಕ ಶಿಲ್ಪಕಲೆಯಲ್ಲಿ ಹೆಸರು ಮಾಡಿದ ಅಮರಶಿಲ್ಪಿ ಜಕಣಾಚಾರಿ ಆದರು.
1964 ರಲ್ಲಿ ಬಿಡುಗಡೆಯಾದ ಕನ್ನಡ ಭಾಳೆಯ “ನಟಶೇಖರ” ಚಿತ್ರದಲ್ಲಿ ಕಲಾವಿದೆ ಮತ್ತು ರಾಜಕಾರಣಿ ಜಯಲಲಿತಾ ಅವರ ತಾಯಿ ಸಂಧ್ಯಾ ಮತ್ತು ಚಿಕ್ಕಮ್ಮ ವಿದ್ಯಾವತಿ ಜೊತೆ ನಟಿಸಿದರು. ಚಿತ್ರರಂಗಕ್ಕೆ ಪ್ರವೇಶಗೊಂಡ ಮೇಲೆ ಚೊಕ್ಕಣ್ಣ ಅಂತಿದ್ದ ತನ್ನ ಹೆಸರನ್ನು ಕಲ್ಯಾಣ್ ಕುಮಾರ್ ಎಂದು ಮರು ನಾಮಕರಣ ಮಾಡಿಕೊಂಡರು. ಕಲ್ಯಾಣ್ ಕುಮಾರ್ ಸಾಮಾಜಿಕ ಸಂಘರ್ಷವನ್ನು ಚಿತ್ರಿಸುವ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಮಾವನ ಮಗಳು, ಅರಿಶಿನ ಕುಂಕುಮ, ಬೇಡಿ ಬಂದವರು, ಕಥಾ ಸಂಗಮ, ಮತ್ತು ಕಾಲೇಜು ರಂಗದಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಜಿ.ವಿ. ಅಯ್ಯರ್ 1962 ರಲ್ಲಿ ಮಾಡಿದ “ಭೂದಾನ” ಚಲನಚಿತ್ರದಲ್ಲಿ ಕಲ್ಯಾಣ್ ಕುಮಾರ್, ರಾಜ್ ಕುಮಾರ್ ಮತ್ತು ಉದಯಕುಮಾರ್ ಜೊತೆಯಲ್ಲಿ ಕಾಣಿಸಿಕೊಂಡರು. ಇದು ಈ ಮೂವರು ಒಟ್ಟಿಗೆ ಕಾಣಿಸಿಕೊಂಡ ಏಕೈಕ ಚಿತ್ರ.
ಜಯಾಲಲಿತ ಜೊತೆ ನಾಯಕನಾಗಿ ಅಭಿನಯಿಸಿದ ಕಲ್ಯಾಣ್ ಕುಮಾರ್, ಅವರ ಕಾಲದ ಎಲ್ಲಾ ಪ್ರಮುಖ ನಾಯಕಿಯರುಗಳಾದ ಬಿ ಸರೋಜಾದೇವಿ, ಸಾಹುಕಾರ ಜಾನಕಿ, ಕಲ್ಪನಾ, ಜಯಂತಿ, ಭಾರತಿ, ಆರತಿ, ರೂಪಾದೇವಿ ಅವರೊಂದಿಗೆ ನಟಿಸಿದ್ದಾರೆ. 1966 ರಲ್ಲಿ ಬಿಡುಗಡೆಗೊಂಡ “ಸುಬ್ಬಾ ಶಾಸ್ತ್ರಿ” 1967 ರಲ್ಲಿ ಬಿಡುಗಡೆಗೊಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ಬೆಳ್ಳಿ ಮೋಡ” ಇವೆರಡೂ ಚಿತ್ರಗಳು ಕಲ್ಯಾಣ್ ಕುಮಾರ್ ರವರಿಗೆ ಯಶಸ್ಸನ್ನು ತಂದು ಕೊಟ್ಟವು. ಕಲ್ಯಾಣ್ ಕುಮಾರ್ 1960 ರಲ್ಲಿ ಬಿ ವಿಠಲಾಚಾರ್ಯ, ನಾಗೇಂದ್ರ ರಾವ್ ಮತ್ತು ಬಿ ಆರ್ ಪಂತುಲು ಅವರು ಮಾಡಿದ ಕನ್ನಡ, ತೆಲುಗು ದ್ವಿಭಾಷಾ ಚಲನಚಿತ್ರಗಳಲ್ಲಿ ಅಲ್ಲದೆ ಅನೇಕ ತಮಿಳು ಭಾಷೆ ಚಿತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದರು. 1980 ರ ದಶಕದ ಆರಂಭದಲ್ಲಿ “ತಾಯಿಯ ನುಡಿ” ಎಂಬ ಚಿತ್ರದಲ್ಲಿ ತನ್ನವರಿಗಾಗಿ ಬದುಕುವ ಪಾತ್ರವನ್ನು ನಿರ್ವಹಿಸಿ ಕಣ್ಣೀರಿನ ಕೋಡಿ ಹರಿಸಿದ್ದ ಕಲ್ಯಾಣ ಕುಮಾರ್ ಅವರಿಗೆ “ತಾಯಿಯ ನುಡಿ” ಚಿತ್ರ ಮರು ಜೀವ ಕೊಟ್ಟಿತು. ಈ ಚಿತ್ರದ ನಂತರ ಸಿಂಹ ಘರ್ಜನೆ, ಶುಭ ಮುಹೂರ್ತ, ಲಕ್ಷ್ಮಿ ಕಟಾಕ್ಷ, ಮರಳಿ ಗೂಡಿಗೆ ಚಿತ್ರಗಳಲ್ಲಿ ಯಶಸ್ವಿ ಪಾತ್ರಗಳನ್ನು ನಿರ್ವಹಿಸಿದರು. ಇದರ ಮಧ್ಯೆ ಚಿತ್ರ ನಿರ್ಮಾಣಗಳಲ್ಲೂ ತೊಡಗಿಕೊಂಡಿದ್ದರು.
ಅವರು ಕನ್ನಡ ಚಲನಚಿತ್ರ ನಾಯಕಿಯಾಗಿದ್ದ ರೇವತಿಯವರನ್ನು ಮದುವೆಯಾಗಿದ್ದರು. ಈ ದಂಪತಿಗಳ ಮಗ ಭರತ್ ಕಲ್ಯಾಣ್ ದೂರದರ್ಶನ ನಟರಾಗಿದ್ದು, ಅವರು ಮುಖ್ಯವಾಗಿ ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಲ್ಯಾಣ್ ಕುಮಾರ್ ಮತ್ತು ಕಲ್ಪನಾರ ಪ್ರಣಯದ ಪ್ರಸಂಗ ಬಿರುಗಾಳಿ ಎಬ್ಬಿಸಿತಾದರೂ ಕೊನೆಗೆ ಅದಕ್ಕೆ ತೆರೆ ಎಳೆದರು. ಅತ್ಯಂತ ಅದ್ದೂರಿ ಮತ್ತು ಅತ್ಯಾಧುನಿಕ ಜೀವನ ಶೈಲಿಗೆ ಮಾರುಹೋಗಿದ್ದ ಕಲ್ಯಾಣ್ ಕುಮಾರ್ 1999 ರ ಆಗಸ್ಟ್ 1 ರಂದು ನಿಧನರಾದರು. ಐದು ದಶಕಗಳ ಕಾಲ ಚಲನಚಿತ್ರಗಳಲ್ಲಿ ಅಭಿನಯಿಸಿ ತನ್ನದೆ ಆದ ಛಾಪು ಮೂಡಿಸಿದ್ದ ಕಲ್ಯಾಣ್ ಕುಮಾರ್ ಸಿನಿಲೋಕದ ಧ್ರುವತಾರೆಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್