“ಮಯೂರ” ಚಿತ್ರದ ಈ ಮೌನವ ತಾಳೇನು ಓ ರಾಜಾ, “ಸಂಪತ್ತಿಗೆ ಸವಾಲ್” ಚಿತ್ರದ ರಾಜಾ ಮುದ್ದು ರಾಜಾ ನೂಕುವಂತ ಕೋಪ ನನ್ನಲೇಕೆ ಎಂಬ ಹಾಡನ್ನು ಮರೆಯದಿರುವವರು ಡಾ. ರಾಜ್‌ಕುಮಾರ್ ಜೊತೆ ಮಂಜುಳಾರವರ ಅಭಿನಯವನ್ನು ಸಹ ಮರೆಯಲಾರರು. ಪ್ರಭಾತ್ ಕಲಾವಿದರು ಎಂಬ ನಾಟಕ ತಂಡದೊಂದಿಗೆ ನಟನಾ ವೃತ್ತಿಯನ್ನು ಪ್ರಾರಂಬಿಸಿದ ಮಂಜುಳಾ, 1966 ರಲ್ಲಿ “ಮನೆ ಕಟ್ಟಿ ನೋಡು” ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿ 1972ರಲ್ಲಿ ಬಿಡುಗಡೆಯಾದ ಹಿರಿಯ ನಿರ್ದೇಶಕ ಎಂ ಆರ್ ವಿಠಲ್‌ರವರ “ಯಾರ ಸಾಕ್ಷಿ” ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಮಂಜುಳಾ ತನ್ನ ಪಾತ್ರಗಳಿಗೆ ಜೀವ ತುಂಬುವಲ್ಲಿ ಸಮರ್ಥರಾಗಿದ್ದರು.
ಅಣ್ಣಾವ್ರ ಜೊತೆ ಮೂರುವರೆ ವಜ್ರ, ಸಂಪತ್ತಿಗೆ ಸವಾಲ್, ಶ್ರೀ ಶ್ರೀನಿವಾಸ ಕಲ್ಯಾಣ, ಎರಡುಕನಸು, ಭಕ್ತ ಕುಂಬಾರ, ದಾರಿ ತಪ್ಪಿದ ಮಗ, ಮಯೂರ, ನೀ ನನ್ನ ಗೆಲ್ಲಲಾರೆ ಮುಂತಾದ ಚಿತ್ರಗಳಲ್ಲಿ ಮಂಜುಳಾ ನಟಿಸಿದರೂ ಶ್ರೀನಾಥ್ ಅವರ ಜೊತೆ ಅತೀ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
“ಬೆಸುಗೆ” “ಪಟ್ಟಣಕ್ಕೆ ಬಂದ ಪತ್ನೀಯರು” “ಪ್ರೀತಿಮಾಡು ತಮಾಷೆನೋಡು” “ಹೆಣ್ಣು ಸಂಸಾರದ ಕಣ್ಣು” “ಸೂತ್ರದ ಗೊಂಬೆ” “ “ತಾಯಿಗಿಂತ ದೇವರಿಲ್ಲ” “ಮಧುರ ಸಂಗಮ” “ಮಂಜಿನ ತೆರೆ” “ಪಾಯಿಂಟ್ ಪರಿಮಳ” “ “ಪ್ರೇಮಾನುಬಂಧ” “ಶಿಕಾರಿ” “ಗುಣ ನೋಡಿ ಹೆಣ್ಣು ಕೊಡು” ಹೀಗೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಶ್ರೀನಾಥ್, ಮಂಜುಳಾ ಜೋಡಿ ಯಶಸ್ವಿಯಾಗಿತ್ತು.
1950ರ ಅಂಚಿನಲ್ಲಿ ತುಮಕೂರು ಜಿಲ್ಲೆಯ ಹೊನ್ನೇನಹಳ್ಳಿಯಲ್ಲಿ ಲಿಂಗಾಯತ ಕುಟುಂಬಕ್ಕೇ ಸೇರಿದ ಸಬ್ ಇನ್ಸ್ ಪೆಕ್ಟರ್ ಶಿವಣ್ಣ ಮತ್ತು ದೇವೆರಮ್ಮ ದಂಪತಿಗಳ ಮಗಳಾಗಿ ಜನಿಸಿದ ಮಂಜುಳಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ನೂರಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಂಜುಳಾರವರು ಕನ್ನಡ ಚಲನಚಿತ್ರಗಳಲ್ಲಿನ ಪ್ರಮುಖ ಹಾಗೂ ಯಶಸ್ವಿ ನಟಿಯರುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
1977 ರಲ್ಲಿ ಬಿಡುಗಡೆಯಾಗಿರುವ “ದೀಪ’ ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡ ಮಂಜುಳಾ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮಂಜುಳಾ, ವಿಷ್ಣುವರ್ಧನ್ ಜೊತೆ ಅಭಿನಯಿಸಿದ “ಸೊಸೆ ತಂದ ಸೌಭಾಗ್ಯ” ಶಂಕರ್ ನಾಗ್ ಜೊತೆ ಅಭಿನಯಿಸಿದ “ಸೀತರಾಮು” ಯಶಸ್ವಿಯಾಗಿದ್ದಲ್ಲದೆ ರಾಮಕೃಷ್ಣ, ಕಮಲ್‌ಹಾಸನ್, ರಜನಿಕಾಂತ್ ಮುಂತಾದ ನಟರೊಂದಿಗೂ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಂಜುಳಾ “ಹುಡುಗಾಟದ ಹುಡುಗಿ” ಮತ್ತು “ಕನಸು ನನಸು” ಚಿತ್ರಗಳಲ್ಲಿ ಕೆಲಸ ಮಾಡಿರುವ ಚಲನಚಿತ್ರ ನಿರ್ದೇಶಕ ಅಮೃತಂ ಅವರನ್ನು ಮದುವೆಯಾದರು.
ಅಭಿನಯ ಎಂಬ ಬಾಲೆಯನ್ನು ದತ್ತು ಪಡೆದುಕೊಂಡ ಮಂಜುಳಾರಿಗೆ ಅಭಿಷೇಕ್ ಎಂಬ ಮಗ ಕೂಡ ಇದ್ದಾರೆ. 1970-8೦ರಲ್ಲಿ ಚಿತ್ರರಂಗದಲ್ಲಿ ಯಶಸ್ವಿ ಯಾಗಿದ್ದ ಮಂಜುಳಾ, ಮದುವೆಯ ಸುದ್ದಿಯನ್ನು ಪ್ರಚಾರ ಮಾಡಿದ ನಂತರ ಅವರ ಜನಪ್ರಿಯತೆಯು ಕುಸಿಯಿತು. ಅದಲ್ಲದೆ ತೂಕದ ಸಮಸ್ಯೆಗಳಿಂದ ಬಳಲುತ್ತಿದ್ದರು. ಅದರಿಂದ ಅವಕಾಶ ವಂಚಿತ ರಾದ ಮಂಜುಳಾ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಯಿತು.
ಕೊನೆಗೆ 1986 ಸೆಪ್ಟೆಂಬರ್‌ನಲ್ಲಿ ಅಡುಗೆ ಒಲೆಗೆ ಸಿಲುಕಿ ದುರಂತಮಯವಾಗಿ ಸಾವನ್ನಪ್ಪಿದರು. ಅತ್ತ್ಯುತ್ತಮ ನಟಿಯಾದ ಮಂಜುಳಾ ಈಗ ನಮ್ಮುಂದೆ ಇಲ್ಲದಿದ್ದರೂ ಅವರು ಅಮೋಘ ಅಭಿನಯ ನೀಡಿರುವ ಚಿತ್ರಗಳು ನಮ್ಮ ಕಣ್ಣ ಮುಂದಿವೆ. ಮಂಜುಳಾರವರು ಸಿನಿಲೋಕದ ಧ್ರುವತಾರೆಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್