image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿನಿಮಾ ಅಂದರೆ ಹೀಗೆ ಇರಬೇಕೆಂದು ಅಡಿಪಾಯ ಹಾಕಿಕೊಟ್ಟ ಅಗ್ರಜ ಪುಟ್ಟಣ್ಣ ಕಣಗಾಲ್

ಸಿನಿಮಾ ಅಂದರೆ ಹೀಗೆ ಇರಬೇಕೆಂದು ಅಡಿಪಾಯ ಹಾಕಿಕೊಟ್ಟ ಅಗ್ರಜ ಪುಟ್ಟಣ್ಣ ಕಣಗಾಲ್

ಚಲನಚಿತ್ರರಂಗದಲ್ಲಿ ನಿರ್ದೇಶಕನ ಸ್ಥಾನಕ್ಕೆ ಮಹತ್ವ ತಂದುಕೊಟ್ಟ, ಭಾರತೀಯ ಚಿತ್ರಂಗದ ಹೆಸರುವಾಸಿ ನಿರ್ದೇಶಕ, ಚಿತ್ರರಂಗದಲ್ಲಿ ಒಂದು ಸಿನಿಮಾ ಅಂದರೆ ಹೀಗೆ ಇರಬೇಕೆಂದು ಅಡಿಪಾಯ ಹಾಕಿಕೊಟ್ಟ ಅಗ್ರಜ ಪುಟ್ಟಣ್ಣ ಕಣಗಾಲ್. ಕಲ್ಪನಾ ಮತ್ತು ಕಲ್ಯಾಣ್ ಕುಮಾರ್ ನಟಿಸಿದ, ವಿಮರ್ಶಾತ್ಮಕ ಮತ್ತು ಕಮರ್ಶಿಯಲ್ಲಾಗಿ ಯಶಸ್ವಿಯಾದ “ಬೆಳ್ಳಿಮೋಡ” ಚಿತ್ರದಿಂದ ಪುಟ್ಟಣ್ಣವರ ಯುಗ ಆರಂಭವಾಯಿತು. ಈ ಚಿತ್ರದ ಯಶಸ್ಸಿನಿಂದ ಉತ್ತೇಜಿತರಾದ ಪುಟ್ಟಣ್ಣನವರು ಚಿತ್ರರಂಗದಲ್ಲೇ ಮೈಲಿಗಲ್ಲಾಗುವಂತಹ ಗೆಜ್ಜೆಪೂಜೆ, ಶರಪಂಜರ, ನಾಗರಹಾವು ಮೊದಲಾದ ಅದ್ಭುತವಾದ ಚಿತ್ರಗಳನ್ನು ನಿರ್ದೇಶಿಸಿದರು. ಪುಟ್ಟಣ್ಣನವರು 1960 - 70 ರ ದಶಕದಲಿದ್ದ ಕನ್ನಡ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಅವರ ಹೆಚ್ಚಿನ ಚಲನಚಿತ್ರಗಳಲ್ಲಿ ನಿಷೇಧಿತ ವಿಷಯಗಳಲ್ಲಿದ್ದರೂ, ವಿಮರ್ಶಕರಿಗೆ ಮತ್ತು ಸಾಮಾನ್ಯ ಚಲನಚಿತ್ರ ನೋಡುಗರಿಗೆ ಇಷ್ಟವಾದವು.

ಯಾಕೆಂದರೆ ಪ್ರತಿ ಚಿತ್ರಗಳಲ್ಲೂ ಅವರು ಯಾವುದೇ ವಿಭಾಗದಲ್ಲೂ ಸೊರಗದಂತೆ ನೋಡಿಕೊಳ್ಳುತ್ತಿದ್ದರು. ಗಣಿ ಪ್ರದೇಶಗಳ ನಡುವೆ ಚಿತ್ರೀಕರಿಸಿದ “ಮಾನಸ ಸರೋವರ” ಚಿತ್ರದ ನೀನೇ ಸಾಕಿದ ಗಿಣಿ ಹಾಡಂತು ತನ್ನ ನಿಜವಾದ ಪ್ರೀತಿಯನ್ನು ಕಳೆದುಕೊಂಡ ವ್ಯಕ್ತಿಯ ಸಂಕಟವನ್ನು ಪ್ರತಿಬಿಂಬಿಸುವ ಸನ್ನೀವೇಶಗಳು ಜನರ ಹೃದಯಕ್ಕೆ ತಟ್ಟುವಂತಿತ್ತು. ಪುಟ್ಟಣ್ಣವರು ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳನ್ನೂ ಸಹ ನಿರ್ದೇಶಿಸಿದ್ದರು. ಪುಟ್ಟಣ್ಣನವರ ಮೇಲೆ ಅಪಾರವಾದ ಭಕ್ತಿಯಿದ್ದ ವಿಷ್ಣುವರ್ಧನ್‌ರವರು ನನಗಾಗಿ ದೇವರು ಕೊಟ್ಟ ಶಿಕ್ಷಕ, ನಾನು ಅವರಿಂದ ಒಬ್ಬ ನಟನಾಗಿದ್ದೇನೆ ಎಂದು ಆಗಾಗ ಹೇಳುತ್ತಿದ್ದರು. “ನಾಗರಹಾವು” ಚಿತ್ರ ಮಾಡುವ ಸಂದರ್ಭದಲ್ಲಿ ಜಲೀಲನ ಪಾತ್ರಕ್ಕಾಗಿ ಬಂದಂತಹ ಅಂಬರೀಷ್‌ರನ್ನು ನೋಡಿದ ಆರತಿ ಅವನು ಯಾರು? ರೌಡಿ ತರಹ ಇದ್ದಾನೆಂತಾ ಹೇಳಿದರೂ ಕೇಳದ ಪುಟ್ಟಣ್ಣ ಅವರನ್ನು ಕೂಡ ಮಹಾಕಲಾವಿದನಾಗಿ ರೂಪಿಸಿದರು.ಕಲ್ಪನಾ, ಆರತಿ, ಜಯಂತಿ, ಪದ್ಮ ವಸಂತಿ, ಶ್ರೀನಾಥ್, ರಜನಿಕಾಂತ್, ವಿಷ್ಣುವರ್ಧನ್, ಅಂಬರೀಷ್, ಜೈ ಜಗದೀಶ್, ಚಂದ್ರಶೇಖರ್, ಗಂಗಾಧರ್, ಶಿವರಾಮ್, ವಜ್ರಮುನಿ, ಶ್ರೀಧರ್, ರಾಮಕೃಷ್ಣ ಹೀಗೆ ಅನೇಕ ನಟರು ಮತ್ತು ನಟಿಯರಿಗೆ ಪುಟ್ಟಣ್ಣನವರ ಚಿತ್ರಗಳೆ ರಂಗಶಾಲೆಯಾಯಿತು.

ಪುಟ್ಟಣ್ಣನವರಿಂದ ಅನುಭವ ಪಡೆದ ಈ ಕಲಾವಿದರೆಲ್ಲಾ ಆಲದ ಮರದ ಹಾಗೆ ಬೆಳೆಯಲು ಸಹಕಾರಿಯಾಯಿತು. ಅವರು ಒಂದು ಚಿತ್ರವನ್ನು ಎಷ್ಟು ಪ್ರೀತಿಸುತ್ತಿದ್ದರೆಂದರೆ ಕಲಾವಿದರು ಅವರು ಹೇಳಿದಾಗೆ, ಅವರಿಗೆ ಓಕೆ ಆಗುವರೇಗೂ ಅಭಿನಯಿಸದಿದ್ದರೆ ಆಗಿನ ಕಾಲದ ಶಾಲೆಗಳಲ್ಲಿ ಮೇಸ್ಟ್ರುಗಳು ಮಕ್ಕಳಿಗೆ ಹೊಡೆದು ಪಾಠ ಮಾಡುತ್ತಿದ್ದಂತೆ ಕಲಾವಿದರಿಗೆ ಹೊಡೆದು ಅವರಿಂದ ಅಭಿನಯ ತೆಗೆಸುತ್ತಿದ್ದರು. ಆಗಿನ ಕಾಲದ ಕಲಾವಿದರಿಗೂ ನಾನೊಬ್ಬ ಅಪ್ಪಟ ಕಲಾವಿದನಾಗಬೇಕೆಂಬ ಛಲ ಇದ್ದುದರಿಂದ ಇದು ಸಾಧ್ಯವಾಯ್ತು. ರಾಮಸ್ವಾಮಿ ಮತ್ತು ಸುಬ್ಬಮ್ಮ ದಂಪತಿಗಳಿಗೆ ಡಿಸೆಂಬರ್ 01, 1933 ರಲ್ಲಿ ಮೈಸೂರು ಜಿಲ್ಲೆಯ ಕಣಗಾಲ್‌ನಲ್ಲಿ ಜನಿಸಿದ ಶುಭ್ರವೇಷ್ಟಿ ರಾಮಸ್ವಾಮಿ ಸೀತಾರಾಮ ಶರ್ಮಾ ಅವರು ಎಸ್. ಆರ್. ಪುಟ್ಟಣ್ಣ ಕಣಗಾಲ್ ಎಂದು ಬದಲಾದರು. ಬಡ ಕುಟುಂಬದಿಂದ ಬಂದ ಪುಟ್ಟಣ್ಣ ಯೋಗ್ಯವಾದ ಕೆಲಸಕ್ಕಾಗಿ ಪರಿಶ್ರಮಪಟ್ಟರು. ಕ್ಲೀನರ್, ಸೇಲ್ಸ್ ಮ್ಯಾನ್  ಶಿಕ್ಷಕರೂ ಆಗಿದ್ದರು. ನಂತರ ಪ್ರಚಾರ ಹುಡುಗನಾಗಿ ಕೆಲಸ ಮಾಡಿದ್ದರಿಂದ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಹತ್ತಿರವಾದರು. ಬಿ ಆರ್ ಪಂತುಲು ಅವರ ಸಹಾಯಕರಾಗಿ ಮತ್ತು ಚಾಲಕರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಅಲ್ಲಿಂದ ಹಿಂದೆ ತಿರುಗಿ ನೋಡದ ಪುಟ್ಟಣ್ಣ ಮಾನಸ ಸರೋವರ ತಲುಪಿದರು. ಒಂದರ ಹಿಂದೆ ಒಂದರಂತೆ ಯಶಸ್ಸನ್ನು ಕಂಡ ನಂತರ ಮಸಣದ ಹೂವಿನಂತೆ ಕೊರಗಿದರು. ಅವರು ನಾಗಲಕ್ಷ್ಮಿಯವರನ್ನು ಮದುವೆಯಾಗಿ ಮಕ್ಕಳೊಂದಿಗೆ ಪೂರ್ಣ ಪ್ರಮಾಣದ ಕುಟುಂಬವನ್ನು ಹೊಂದಿದ್ದರೂ, ಆ ನಂತರದ ದಿಗಳಲ್ಲಿ ಕಲ್ಪನಾರ ಜೊತೆ ಭಾವೋದಿಕ್ತ ಸಂಬಂಧಗಳನ್ನು ಹೊಂದಿದ್ದಾರೆಂದು ಚಿತ್ರರಂಗದಲ್ಲಿ ಪ್ರಚಾರವಾದರೂ ಅವರು ಆರತಿಯನ್ನು ವಿವಾಹವಾದರು. ಮಸಣದ ಹೂವೆಂದು ನೀನೇಕೆ ಕೊರಗುವೆ ಎನ್ನುವ ಹಾಡಿನಂತೆ ಅವರದ್ದೇ ನಿರ್ದೇಶನದ “ಮಸಣದ ಹೂ” ಚಿತ್ರವನ್ನು ನಿರ್ದೇಶಿಸುವ ಸಂದರ್ಭದಲ್ಲಿ ಜೂನ್ 5, 1985 ರಂದು ಬೆಂಗಳೂರಿನಲ್ಲಿ ನಿಧನರಾದರು. ಇಂತಹ ಅದ್ಭುತ ನಿರ್ದೇಶಕನನ್ನು ಕಳೆದುಕೊಂಡ ಚಿತ್ರರಂಗ ದುಃಖತಪ್ತವಾಯಿತು. ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಲನಚಿತ್ರ ನಿರ್ದೇಶಕರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದರಿಂದ, ಕರ್ನಾಟಕ ಸರಕಾರ “ಪುಟ್ಟಣ್ಣ ಕಣಗಾಲ್” ಪ್ರಶಸ್ತಿಯನ್ನು ಪ್ರತಿ ವರ್ಷ ಚಲನಚಿತ್ರ ನಿರ್ದೇಶಕರಿಗೆ ನೀಡುತ್ತಾ ಬರುತ್ತಿದೆ. ಇದು ಅವರ ಮಹಾಸಾಧನೆಗಾಗಿ ಸಿಕ್ಕ ಗೌರವ. ನಿರ್ದೇಶಕನಿಗೆ ಒಂದು ಸ್ಥಾನ, ಗೌರವ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ  ತನ್ನ ಜೊತೆಗಾರರೊಂದಿಗೆ ಅಂದರೆ ಆಗಿನ ಅಗ್ರ ನಿರ್ದೇಶಕರ  ಜೊತೆಗೂಡಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವನ್ನು ಕಟ್ಟಿ ಬೆಳೆಸಿದ ಪುಟ್ಟಣ್ಣನವರ ಹುಟ್ಟುಹಬ್ಬವನ್ನು ಅವರೇ ಕಟ್ಟಿ ಬೆಳೆಸಿದ ಸಂಘದ ವತಿಯಿಂದ ನಿರ್ದೇಶಕರಿಗೆ ಮತ್ತು ಅವರ ಕುಟುಂಬದವರಿಗೆ‌ ಉಪಯೋಗವಾಗಿವಂತೆ ಆರೋಗ್ಯ ಶಿಬಿರ ಮಾಡುವ ಮೂಲಕ ಇಂದು ಅಂದರೆ ಡಿ. 1ರಂದು ಆಯೋಜಿಸಲಾಗಿದೆ.  ಅದೆಷ್ಟೋ ನಿರ್ದೇಶಕರಿಗೆ ಮಾರ್ಗದರ್ಶಕರಾದ ಪುಟ್ಟಣ್ಣವರು ಸಿನಿಲೋಕದ ಧ್ರುವತಾರೆಯಾಗಿ ಕಲಾಭಿಮಾನಿಗಳ ಹೃದಯದಲ್ಲಿ ಇಂದಿಗೂ ನೆಲೆಸಿದ್ದಾರೆ ಎಂಬುದು ಹೆಮ್ಮೆಯ ವಿಷಯ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ