image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಿನುಗುತಾರೆ ಕಲ್ಪನಾ

ಮಿನುಗುತಾರೆ ಕಲ್ಪನಾ

ಮಿನುಗುತಾರೆಯೆಂದೇ ಪ್ರಸಿದ್ಧಿಯಾದ ಕಲ್ಪನಾ 1960 ರಿಂದ 1980ರ ವರೆಗೆ ಕನ್ನಡ ಚಿತ್ರರಂಗವನ್ನು ಆಳಿದ ರಾಣಿ. ಅದೆಷ್ಟೋ ಅಭಿಮಾನಿಗಳು ಅವರ ಹಿಂದೆ ಬಿದ್ದಿದ್ದರು. ಅವರ ಚಿತ್ರಗಳಲ್ಲಿ ಅಭಿನಯದಲ್ಲಿದ್ದ ತನ್ಮಯತೆ ಅಭಿಮಾನಿಗಳ ಹೃದಯವನ್ನು ಸೂರೆಗೊಂಡಿತ್ತು. 1963 ರಲ್ಲಿ ಬಿಡುಗಡೆಯಾದ ಬಿ ಆರ್ ಪಂತುಲು ನಿರ್ದೇಶನದ “ಸಾಕು ಮಗಳು” ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಿದರು. ಅದಾದ ನಂತರ ಲತಾ ಎಂದಿದ್ದ ತನ್ನ ಹೆಸರನ್ನು ಕಲ್ಪನಾ ಎಂದು ಬದಲಾಯಿಸಿಕೊಂಡರು. 1967 ರಲ್ಲಿ ಬಿಡುಗಡೆಯಾದ, ಪುಟ್ಟಣ್ಣ ಕಣಗಲ್ ನಿರ್ದೇಶನದ “ಬೆಳ್ಳಿ ಮೋಡ” ಚಿತ್ರ ಕಲ್ಪನಾರ ವೃತ್ತಿ ಜೀವನಕ್ಕೆ ಮತ್ತೊಂದು ಮೈಲಿಗಲ್ಲಾಯಿತು ಎಂದರೆ ತಪ್ಪಾಗಲಾರದು. 1960 ರ ದಶಕದ ಆರಂಭದಿಂದ 1972 ರ ಅಂತ್ಯದವರೆಗೆ ತನ್ನ ವೃತ್ತಿಜೀವನದ ಅವಧಿಯಲ್ಲಿ, ಕಲ್ಪನಾ ಅವರು ಅಭಿನಯಿಸಿದ ಹೆಚ್ಚಿನ ಚಿತ್ರಗಳು ವಾಣಿಜ್ಯಕವಾಗಿ ಯಶಸ್ವಿ ಹಾಗೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದುಕೊಂಡಿತು. ಪ್ರಶಸ್ತಿಯ ಸುರಿಮಳೆಗೈದ 1971 ರಲ್ಲಿ ಬಿಡುಗಡೆಯಾದ “ಶರಪಂಜರ” ಚಿತ್ರದಲ್ಲಿನ “ಕಾವೇರಿ” ಅವರ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿತ್ತು. ಈ ಚಿತ್ರದ ಅಭಿನಯಕ್ಕಾಗಿ “ಅತ್ಯುತ್ತಮ ನಟಿ” ಚಲನಚಿತ್ರ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರ್ಕಾರ ನೀಡಿತ್ತು. ವಿಶು ಕುಮಾರ್ ನಿರ್ದೇಶನದ ತುಳು ಚಲನಚಿತ್ರ “ಕೋಟಿ ಚೆನ್ನಯ್ಯ” ದಲ್ಲಿ ತಾಯಿ ದೇಯಿಯಾಗಿ ಮಗಳು ಕಿನ್ನಿದಾರುವಾಗಿ ದ್ವೀಪಾತ್ರದಲ್ಲಿ ಅಭಿನಯಸಿದರು. ಆ ಚಿತ್ರದಲ್ಲಿ ‘ಎಕ್ಕಸಕ ಎಕ್ಕಸಕ ಎಕ್ಕಸಕಲ ಅಕ್ಕ ಪಂಡ್‌ದ್ ಲೆಪ್ಪುನಕುಲು ಬತ್ತೆರಿತ್ತೆಲ’ ಎನ್ನುವ ಹಾಡಂತು ತುಳುನಾಡಿನ ಜನರಲ್ಲದೆ ಇತರ ರನ್ನು ಇಷ್ಟಪಡು ವಂತೆ ಮಾಡಿತು. ಮೂಲತ ದಕ್ಷಿಣ ಕನ್ನಡದವರಾದ ಕಲ್ಪನಾರಿಗೆ ಆ ಚಿತ್ರದಲ್ಲಿ ಅಭಿನಯಿಸಲು ತನ್ನ ಮಾತೃಭಾಷೆ ನೆರವಾಯಿತು ಎಂದು ಹೇಳಬಹುದು. 1943 ರ ಜುಲಾಯಿ 18 ರಂದು ತುಳುವ ದಂಪತಿಗಳಾದ  ಕೃಷ್ಣಮೂರ್ತಿ ಮತ್ತು ಜಾನಕಮ್ಮರ ಮಗಳಾಗಿ ಜನಿಸಿದ ಕಲ್ಪನಾ, 35 ವರ್ಷಗಳ ಕಾಲ ಬದುಕಿದ್ದು 15 ವರ್ಷಗಳ ಕಾಲ ಸ್ಯಾಂಡಲ್‌ವುಡ್ ಚಲನ ಚಿತ್ರೋದ್ಯಮದಲ್ಲಿ ಮಿಂಚಿ ಮರೆಯಾದರು. ಬೆಳ್ಳಿ ಮೋಡ, ಹಣ್ಣೆಲೆ ಚಿಗುರಿದಾಗ ಮತ್ತು ಶರಪಂಜರ ಚಿತ್ರಗಳಿಗಾಗಿ ಅವರು ಅತ್ಯುತ್ತಮ ನಟಿಯಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರು.

ಅವರು ಕನ್ನಡ, ತುಳು, ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಎಂಭತಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಯಿಸಿದರೂ ಕೂಡ ಅವರಿಗೆ ಹೆಸರು ತಂದುಕೊಟ್ಟಿದ್ದು ಮತ್ತು ಹೆಚ್ಚಾಗಿ ಅವರು ಅಭಿನಯಿಸಿದ್ದು ಕನ್ನಡ ಬಾಷೆಯಲ್ಲೇ. ತನ್ನ ವೃತ್ತಿಜೀವನದಲ್ಲಿ ಕಲ್ಪನಾ ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಅವರು ಅಭಿನಯಿಸಿದ ಹೆಚ್ಚಿನ ಚಿತ್ರಗಳಲ್ಲಿ ಸ್ತ್ರಿ ಕೇಂದ್ರೀಕೃತ ಪಾತ್ರವೇ ಆಗಿತ್ತು. ಅದರಿಂದ ಪ್ರೇಕ್ಷಕರ, ವಿಮರ್ಶಕರ ಮೆಚ್ಚುಗೆಯನ್ನು ಪಡೆದ ಕಲ್ಪನಾ ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು. ರಾಜ್‌ಕುಮಾರ್, ಗಂಗಾಧರ್ ಮತ್ತು ಉದಯ ಕುಮಾರ್ ಮುಂತಾದ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಕಲ್ಪನಾ ಶರಪಂಜರ, ಗೆಜ್ಜೆ ಪೂಜೆ, ಬೆಳ್ಳಿ ಮೋಡ, ಎರಡು ಕನಸು, ಕಪ್ಪು ಬಿಳುಪು, ಬಯಲು ದಾರಿ, ಗಂಧದ ಗುಡಿ, ಬಂಗಾರದ ಹೂವು ಮುಂತಾದ ಚಲನಚಿತ್ರಗಳಲ್ಲಿ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಂತೆ ಮಾಡಿದರು.

ಕಲ್ಪನಾ ಅವರು ಡ್ರೆಸ್ಸಿಂಗ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅವರ ಹೇರ್ ಸೈಲ್, ಅವರು ಧರಿಸುತ್ತಿದ್ದ ಶ್ರೀಮಂತ ಜರಿ ಸೀರೆಗಳು ಮತ್ತು  ಸಿಫಾನ್ ಸೀರೆಗಳು, ಬ್ಲೌಸ್, ಬೆರಳುಗಳ ಮೇಲೆ ದೊಡ್ಡ ಉಂಗುರಗಳು, ಬಹು ಬಳೆಗಳು ಮತ್ತು ಉದ್ದನೆಯ ನೆಕ್ಲೇಸ್‌ಗಳು ಇದಕ್ಕೆ ಸಾಕ್ಷಿಯಾಗಿದ್ದವು. ಇದು ಕರ್ನಾಟಕದ ಶೈಲಿಗೆ ಅವರದೊಂದು ಕೊಡುಗೆಯೆಂದೇ ಹೇಳಬಹುದು. ಅವರಿಗೆ ಬಾಲ್ಯದಲ್ಲಿ ನಟನೆಯ ಬಗ್ಗೆ ತುಂಬಾ ಒಲವು ಹೊಂದಿದ್ದ ಕಾರಣ ಬಾಲ್ಯದಲ್ಲಿ ಶಾಲೆಯಲ್ಲಿ ನಡೆದ ಎಲ್ಲಾ ಪ್ರತಿಭಾ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಅವರಿಗೆ ಸಿಕ್ಕಿದ ಪ್ರೋತ್ಸಾಹದ ಕಾರಣ ಅವರು ಚಿತ್ರರಂಗದಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ ದುರಾದೃಷ್ಟವಶಾತ್ ಅವರು ಅಭಿನಯಿಸಿದ ಪಾತ್ರದಂತೆ ಅವರ ಜೀವನದಲ್ಲಿ ದುರಂತವೇ ನಡೆದು ಹೋಯಿತು. ಕೊನೆಯ ದಿನಗಳಲ್ಲಿ ರಂಗನಟರಾದ ಗುಡಿಗೇರಿ ಬಸವರಾಜ್ ಜೊತೆ ಜೀವನ ನಡೆಸುತ್ತಿದ್ದ ಕಲ್ಪನಾ 1986 ರ ಮೇ 12 ರಂದು ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ದಾಂಪತ್ಯ ಸಮಸ್ಯೆ ಎಲ್ಲವೂ ಎದುರಾದ ಕಾರಣ 56 ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾದರೆಂದು ಅವರ ಆಗಿನ ಕಾಲದ ನಿಕಟವರ್ತಿಗಳು ಹೇಳುತ್ತಾರೆ. ತನ್ನ ಕೊನೆಯ ದಿನಗಳನ್ನು ಅವರು ಕರ್ನಾಟಕದ ಬೆಳಗಾವಿಯ ಸಂಕೇಶ್ವರ ಬಳಿಯ ಗೋತೂರ್‌ನಲ್ಲಿರುವ ಬಂಗಲೆಯಲ್ಲಿ ಕಳೆದರೆಂದು ತಿಳಿದವರು ಹೇಳುತ್ತಾರೆ. ಒಟ್ಟಾರೆಯಾಗಿ ಯಾರೇನು ಮಾಡಿದರೂ ವಿಧಿಯ ಆಟವನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಡ. ಇಂದು ಮಿನುಗುತಾರೆ ಕಲ್ಪನ ಸಿನಿಲೋಕದ ದ್ರುವತಾರೆಯಾಗಿ ಮೆರೆಯುತ್ತಿದ್ದಾರೆ. 

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ