ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಹೃದಯದಲ್ಲಿ ನೆಲೆಸಿದ, ತನ್ನ ಅಭಿನಯ ಚಾತುರ್ಯತೆಯಿಂದ ಅಭಿನಯ ಶಾರದೆ ಎಂದೆ ಪ್ರಸಿದ್ಧಿ ಹೊಂದಿದ್ದ ಮೇರುನಟಿ ಜಯಂತಿಯವರು 1963 ರಲ್ಲಿ "ಜೇನುಗೂಡು" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಅಭಿನಯಿಸಿದರು.
ಇವರ ಮೂಲ ಹೆಸರು ಕಮಲ ಕುಮಾರಿ. 1945 ರ ಜನವರಿ ತಿಂಗಳ 9 ರಂದು ಭಾರತದ ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯಾದ ಬಳ್ಳಾರಿಯಲ್ಲಿ ಜನಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಬಾಲಸುಬ್ರಮಣ್ಯಂ ಮತ್ತು ಸಂತಾನಲಕ್ಷ್ಮಿ ದಂಪತಿಗಳಿಗೆ ಮೂವರು ಸಹೋದರರ ಮಧ್ಯೆ ಜನಿಸಿದ ಜಯಂತಿಯವರನ್ನು ಅವರ ತಾಯಿ, ಶಾಸ್ತ್ರೀಯ ನರ್ತಕಿಯನ್ನಾಗಿ ಮಾಡಬೇಕೆಂದು ಆಸೆ ಪಟ್ಟರು.
ಅದೇ ರೀತಿ ಮಕ್ಕಳನ್ನು ಕರೆದುಕೊಂಡು ಮದ್ರಾಸ್‌ಗೆ ತೆರಳಿ ಅಲ್ಲಿ ನೃತ್ಯ ಶಾಲೆಯಲ್ಲಿ ಸೇರಿಸಿದರು. ಆ ನೃತ್ಯ ಶಾಲೆಯಲ್ಲಿ ವಿಧ್ಯಾರ್ಥಿನಿಯಾಗಿದ್ದ ತಮಿಳಿನ ಪ್ರಸಿದ್ಧ ನಟಿ ಮನೋರಮಾ ಸ್ನೇಹಿತೆಯಾದರು. ಬಾಲ್ಯದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಕಮಲ ಕುಮಾರಿ ತೆಲುಗಿನ “ಮಾಂಗಲ್ಯಮ್” ಚಿತ್ರದ ಮೂಲಕ ನಾಯಕಿಯಾದರು. ಆ ನಂತರ ಕಮಲ ಕುಮಾರಿಗೆ ಒಂದರ ಮೇಲೊಂದು ಅವಕಾಶಗಳು ಸಿಕ್ಕತೊಡಗಿದವು. ಒಂದೊಂದು ಚಿತ್ರಗಳಲ್ಲಿ ಅಭಿನಯಿಸುತ್ತಾ ತನ್ನ ಅಭಿನಯದ ಮೆರುಗು ಇನ್ನಷ್ಟು ಸಿನಿಮಾಗಳ ಅವಕಾಶವನ್ನು ತನ್ನತ್ತ ಸೆಳೆಯುವಂತೆ ಮಾಡಿತು. ಅದರಿಂದಲೇ 1962 ರಿಂದ 1979 ರವರೆಗೆ ತಮಿಳು ಚಿತ್ರಗಳಲ್ಲಿ ಪ್ರಮುಖ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ತಮಿಳು ಭಾಷೆಯಲ್ಲಿ ಎಂ.ಜಿ.ಆರ್ ಸೇರಿದಂತೆ ಜೆಮಿನಿ ಗಣೇಶನ್ ಮತ್ತು ನಾಗೇಶ್, ರಾಮಚಂದ್ರನ್, ಮುತ್ತುರಾಮನ್ ಮತ್ತು ಜೈಶಂಕರ್ ಹೀಗೆ ಎಲ್ಲಾ ಪ್ರಮುಖ ತಾರೆಯರೊಂದಿಗೆ ಅಭಿನಯಿಸಿದರು. ಬಾಲ್ಯದಲ್ಲಿ ಎನ್.ಟಿ.ರಾಮರಾವ್‌ರವರ ಚಿತ್ರಗಳನ್ನು ಅವರ ಅಭಿನಯವನ್ನು ಇಷ್ಟ ಪಡುತ್ತಿದ್ದ ಜಯಂತಿಯವರು ಅವರನ್ನು ನೋಡಲು ಸ್ಟುಡಿಯೋಗೆ ಹೋಗುತ್ತಿದ್ದರು. ಹಾಗೆಯೇ ಚಲನಚಿತ್ರಗಳಲ್ಲಿ ನಟಿಸಲೇಬೆಕೆಂಬ ಮಹಾದಾಸೆಯಿಂದ ಕಮಲ ಕುಮಾರಿ ಹಟತೊಟ್ಟರು.
ಅವರ ಈ ಛಲವೇ ಅವರನ್ನು ಬೇರೆ ಬೇರೆ ಚಿತ್ರಗಳಲ್ಲಿ ಅಭಿನಯಿಸುವಂತೆ ಮಾಡಿತು. ಚಿತ್ರರಂಗದಲ್ಲಿ ಹೆಸರು ಬದಲಾವಣೆ ಮಾಡುವುದು ಒಂದು ವಾಡಿಕೆ. ಹಾಗೇಯೇ ಹೆಸರು ಬದಲಾವಣೆ ಮಾಡಿದರೆ ಅದೃಷ್ಟ ಖುಲಾಯಿಸುತ್ತೆ ಅನ್ನೋ ನಂಬಿಕೆ ಕೂಡ ಚಿತ್ರರಂಗದಲ್ಲಿ ಇತ್ತು. ಈಗಲೂ ಇದೆ. ಅದೇ ರೀತಿ ಕಮಲ ಕುಮಾರಿ ಜಯಂತಿಯಾದರು. ನಟಿಯಾದ ನಂತರಅವರು ಸ್ವಲ್ಪ ದಪ್ಪವಾದ ಕಾರಣ ಜಯಂತಿಯವರಿಗೆ ಚೆನ್ನಾಗಿ ನೃತ್ಯ ಮಾಡಲು ಅಸಾಧ್ಯವಾಗಿತ್ತು. ಆಗ ಕೆಲವರು ಜಯಂತಿಯವರನ್ನು ಅಪಹಾಸ್ಯಕ್ಕೀಡು ಮಾಡಿದರು. ಹದಿಹರೆಯದ ವಯಸ್ಸಿನಲ್ಲಿ, ಕೆಲವು ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಬಿಟ್ ಭಾಗಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತು.
ಅದರಿಂದ ಬೇಸತ್ತು ಮೌನವಾದಾಗ ಜಯಂತಿಯವರಿಗೆ ವೈ ಆರ್ ಸ್ವಾಮಿಯವರ “ಜೇನುಗೂಡು” ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆ ಚಿತ್ರದಲ್ಲಿ ನಟಿಸಿದ ನಂತರ ಜಯಂತಿ ಅವರ ಜೀವನವು ಬದಲಾಯಿತು. ಆ ನಂತರ ಅಣ್ಣವ್ರ ಜೊತೆ ೪೯ ಚಿತ್ರಗಳಲ್ಲಿ ಅಭಿನಯಿಸಿದರು. ಮತ್ತು ಕನ್ನಡದ ಹೆಚ್ಚಿನ ನಟರೊಂದಿಗೆ ಅಭಿನಯಿಸಿ ಚಿತ್ರರಂಗದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ನಟಿಯಾದರು. ಜಯಂತಿವರು ಪಂಚಭಾಷಾ ತಾರೆಯಾಗಿದ್ದು, ಇವರ ಅಭಿನಯಕ್ಕೆ 7 ಬಾರಿ ರಾಜ್ಯ ಪ್ರಶಸ್ತಿಗಳು ಹಾಗೂ 2 ಬಾರಿ ಫಿಲಮ್ ಫೇರ್ ಪ್ರಶಸ್ತಿಗಳು ದೊರೆತಿವೆ. ಇವರು ಕನ್ನಡ ಚಿತ್ರರಂಗದ ಎಲ್ಲಾ ದಿಗ್ಗಜ ನಟರೊಂದಿಗೆ ನಟಿಸಿದ್ದು, ಮೇರು ನಟರಾದ ಡಾ|| ರಾಜ್‌ಕುಮಾರ್ ಅವರ ಜೊತೆಯಲ್ಲಿ 49 ಚಿತ್ರಗಳಲ್ಲಿ ನಟಿಸಿದ್ದಾರೆ.
ಆದರೆ ಅವರ ದಾಂಪತ್ಯ ಜೀವನದಲ್ಲಿ ಆಗಾಗ ಬಿರುಕುಬಿಟ್ಟು ಒಬ್ಬರೊಂದಿಗೆ ಬಾಳಲು ಅವರಿಗೆ ಅಸಾಧ್ಯವಾಯಿತು. ಅವರ ಮಗ ಕೃಷ್ಣ ಕುಮಾರ್ ಕನ್ನಡದ ನಟಿ ಅನುಪ್ರಭಾಕರ್ ಅವರನ್ನು ಮದುವೆ ಆಗಿದ್ದರು. ನಾನು ವಿಜಯ ಕರ್ನಾಟಕ ವಾರಪತ್ರಿಕೆಗಾಗಿ ವಾರಗೊಬ್ಬ ಸಿನಿಅತಿಥಿಗಳನ್ನು ಇಂಟರ್‌ವ್ಯೂ ಮಾಡುವ ಸಂದರ್ಭದಲ್ಲಿ ಜಯಂತಿಯವರಲ್ಲಿ ಮುಕ್ತವಾಗಿ ಮಾತಾನಾಡುವ ಅವಕಾಶ ನನಗೆ ಒದಗಿ ಬಂತು. 2018ರ ಮಾರ್ಚ್ 17 ರಂದು ನಟಿ ಜಯಂತಿ ನಿಧನರಾದರು ಎಂದು ಸುಳ್ಳು ವರದಿ ಆದವು. ಆಗಿನ್ನು 73 ವರ್ಷದವಾರಾಗಿದ್ದ ಜಯಂತಿಯವರಿಗೆ ಉಸಿರಾಟದ ತೊಂದರೆ ಆದ ಕಾರಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದ್ದರಿಂದ ಜಯಂತಿಯವರು ಮರುಜನ್ಮ ಪಡೆದರು ಎಂದು ಹೇಳಿದರೆ ತಪ್ಪಾಗಲಾರದು, ಆದರೆ 2021ರ ಜುಲಾಯಿ 26 ರಂದು ಅವರು ಇಹಲೋಕವನ್ನೇ ತ್ಯಜಿಸಿದರು. ಅವರ ಎಲ್ಲಾ ಅಭಿಮಾನಿ ಬಳಗ ಹಾಗೂ ಚಿತ್ರರಂಗ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರೂ ಅಂದೇ ಕರ್ನಾಟಕದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದರಿಂದ ಟಿವಿ ಚಾನಲ್‌ಗಳಲ್ಲಿ ಆ ಸುದ್ಧಿ ಹೆಚ್ಚು ಪ್ರಚಾರ ಪಡೆಯಲಿಲ್ಲ ಎಂದು ಹೇಳಬಹುದು. ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲೆಂದು “ಕರಾವಳಿ ತರಂಗಿಣಿ " ವಾರಪತ್ರಿಕೆಯ ತಂಡ ಪ್ರಾರ್ಥಿಸುತ್ತದೆ.
✍ ಎನ್ನಾರ್ ಕೆ ವಿಶ್ವನಾಥ್