1967 ರಲ್ಲಿ ವೈ ಆರ್ ಸ್ವಾಮಿ ನಿರ್ದೇಶಿಸಿದ “ಮಮತೆ” ಚಿತ್ರದ ಮೂಲಕ ಸಂಭಾಷಣಕಾರರಾದ ಕುಣಿಗಲ್ ನಾಗಭೂಷಣ್‌ರವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅಭಿನಯಿಸಿದ ಮೊದಲ ಚಿತ್ರ “ನನ್ನ ಕರ್ತವ್ಯ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ದುಡಿದು ಚಿತ್ರರಂಗಕ್ಕೆ ಪ್ರವೇಶಿಸಿದವರು. ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣಾಕಾರರಾಗಿರುವ ಕುಣಿಗಲ್ ನಾಗಭೂಷಣ್, ಆಗ ತಾನೇ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಮುಗಿಸಿ ಬಂದ ರಜನಿಕಾಂತ್‌ರನ್ನು ತಾನೇ ನಿರ್ದೇಶಿಸಿದ ಗಂಗಾಧರ್ ಆರತಿ ಜೋಡಿಯ “ಬಾಳು ಜೇನು” ಎಂಬ ಚಿತ್ರದಲ್ಲಿ ಖಳನಾಯಕನ ಪಾತ್ರಕೊಟ್ಟು ಚಿತ್ರರಂಗಕ್ಕೆ ಪರಿಚಯಿಸಿದರು. ಆದರೆ ರಜನಿಕಾಂತ್ ತಮಿಳುನಾಡಿನ ಸೂಪರ್‌ಸ್ಟಾರ್ ಆದಾಗಲೂ ಅವರ ಬಳಿ ಸಹಾಯ ಹಸ್ತವನ್ನು ಚಾಚದ ಸ್ವಾಭಿಮಾನಿ.
1979 ರಲ್ಲಿ ವಿಷ್ಣುವರ್ಧನ್ ಅಭಿನಯಿಸಿದ “ಸಿಂಹಜೋಡಿ” ಚಿತ್ರಕ್ಕೆ ಸಂಭಾಷಣೆ ಬರೆದು ಯಶಸ್ವಿಯಾದರು. ಅಲ್ಲಿಂದ ಎಡೆಬಿಡದೆ ಸರಾಗವಾಗಿ ಒಂದೊರ ಹಿಂದೊಂದರಂತೆ ಬೇರೆ ಬೇರೆ ಚಿತ್ರಗಳಿಗೆ ಸಂಭಾಷಣೆ ಬರೆದು ತಾನೊಬ್ಬ ಸಮರ್ಥ ಸಂಭಾಷಣೆಕಾರ ಎಂಬುದನ್ನು ನಿರೂಪಿಸಿದರು. ಕುಣಿಗಲ್‌ನ ಪಿಟೀಲು ವಿದ್ವಾಂಸಕರಾದ ಕೆ ಶ್ರೀಕಂಠಯ್ಯ ಮತ್ತು ಪುಟ್ಟಮ್ಮ ದಂಪತಿಗಳಿಗೆ ಮಗನಾಗಿ 1942 ರಲ್ಲಿ ಜನಿಸಿದ ನಾಗಭೂಷಣ್ 1961 ರಲ್ಲಿ ಹಿನ್ನೆಲೆ ಗಾಯಕನಾಗಬೇಕೆಂಬ ಮಹಾದಾಸೆಯಿಂದ ಅವಕಾಶವನ್ನು ಅರಸಿಕೊಂಡು ಚಿತ್ರರಂಗಕ್ಕೆ ಬಂದರು. ಆರ್ ನಾಗೇಂದ್ರ ರಾವ್ ರವರ ಸಲಹೆಯಂತೆ ಎಸ್ ಜೆ ಪಿಯಲ್ಲಿ ಸಿನಿಮಾಟೋಗ್ರಫಿ ಪದವಿ ಪಡೆದು ಮದ್ರಾಸ್ ಸೇರಿದರು.
ಒಂದೆರಡು ವರ್ಷ ಉಪವಾಸ, ವನವಾಸ ಅನುಭವಿಸಿದರೂ ಕಂಗೆಡದೆ ತಾನು ಹಿಡಿದ ಹಠವನ್ನು ಸಾಧಿಸಿ ಚಿತ್ರರಂಗದಲ್ಲಿ ನೆಲೆನಿಂತರು. ಚಿತ್ರಗಳಿಗೆ ಕಥೆ ಬರೆದರು, ಸಂಭಾಷಣೆ ಬರೆದರು, ಚಿತ್ರಗಳನ್ನು ನಿರ್ದೇಶಿಸಿದರು, ಅಭಿನಯಿಸಿದರು. ಕಿರುತೆರೆಯಲ್ಲೂ ಪಾಳ್ಗೊಂಡರು. ಒಟ್ಟಾರೆಯಾಗಿ ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ತನ್ನ ಕಾರ್ಯಕ್ಷಮತೆಯನ್ನು ತೋರಿಸಿಕೊಟ್ಟರು.
“ಗೌರಿ ಗಣೇಶ” ಹಾಗೂ “ಯಾರಿಗೂ ಹೇಳ್ಬೇಡಿ” ಚಿತ್ರಗಳಿಗೆ ಸಂಭಾಷಣೆ ಬರೆದು ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡರು. “ಸಾಂಗ್ಲಿಯಾನ” “ಗಣೇಶನ ಮದುವೆ” “ಗೋಲ್ ಮಾಲ್ ರಾಧಾಕೃಷ್ಣ” “ಹೃದಯ ಗೀತೆ “ “ಸಿಂಹ ಘರ್ಜನೆ” “ಊರಿಗೆ ಉಪಕಾರಿ” “ಅಗ್ನಿ ಪರೀಕ್ಷೆ” ಮುಂತಾದ ಯಶಸ್ವಿ ಚಿತ್ರಗಳಿಗೆ ಸಂಭಾಷಣೆ ಬರೆದು ಯಶಸ್ವಿಯಾದ ನಾಗಭೂಷಣರು ಯಾವತ್ತಿಗೂ ಅಹಂಕಾರ ಪಟ್ಟವರಲ್ಲ. ಚಿತ್ರರಂಗದಲ್ಲಿ ತನ್ನದೆ ಆದ ಶೈಲಿಯನ್ನು ಉಳಿಸಿಕೊಂಡಿದ್ದರು.
ನಾಗಭೂಷಣರ ತಮ್ಮ ಕುಣಿಗಲ್ ವಸಂತ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ನಾಗಭೂಷಣರ ಮಗ ಕೂಡ ಚಿತ್ರರಂಗದಲ್ಲಿದ್ದರು. ಅನಾರೋಗ್ಯದ ಸಮಸ್ಯೆಯಿಂದ 2013 ರಲ್ಲಿ ಕೊನೆಯುಸಿರೆಳೆದ ಕುಣಿಗಲ್ ನಾಗಭೂಷಣರು ಬದುಕಿದ್ದಾಗ ಚಿತ್ರರಂಗದಲ್ಲಿನ ತನ್ನ ಪ್ರಾರಂಭದ ದಿನಗಳಲ್ಲಿ ವೈ ಆರ್ ಸ್ವಾಮಿ ಮತ್ತು ಪೇಕೇಟಿ ಶಿವರಾಂರವರು ಕರೆದು ಅವಕಾಶ ಕೊಡುತ್ತಿದ್ದದನ್ನು ನೆನಪಿಸಿಕೊಳ್ಳುತ್ತಿದ್ದರು. ತಾನು ಬರೆದ ಸಂಭಾಷಣೆ ಯಿಂದ ಕಲಾಭಿಮಾನಿಗಳ ಹೃದಯ ಗೆದ್ದಿರುವ ಕುಣಿಗಲ್ ನಾಗಭೂಷಣರು ಸಿನಿಲೋಕದ ಧ್ರುವತಾರೆಯಾಗಿದ್ದಾರೆ.
✍ಎನ್ನಾರ್ ಕೆ ವಿಶ್ವನಾಥ್