ಮಂಗಳೂರು ರಂಗರಾವ್ ಮತ್ತು ಕಾವೇರಿಬಾಯಿ ದಂಪತಿಗಳ ಮಗಳಾಗಿ ಭಟ್ಕಳದಲ್ಲಿ ಸೆಪ್ಟೆಂಬರ್ 18 1928ರಲ್ಲಿ ಜನಿಸಿದ ಪಂಡರಿಬಾಯಿಯವರು ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಂತರದ ದಿನಗಳಲ್ಲಿ ನಾಯಕನ ತಾಯಿಯಾಗಿ ದಕ್ಷಿಣ ಭಾರತದ ಭಾಷೆಗಳಲ್ಲಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತಾ ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಾ ಬಂದ ಅಪರೂಪದ ನಟಿ. ಅವರನ್ನು ಸಿನಿಮಾರಂಗದವರಂತೂ ಅಮ್ಮಾ ಎಂದೇ ಕರೆಯುತ್ತಿದ್ದರು.
ಯಾಕೆಂದರೆ ತಾಯಿಯಾಗಿ ಅವರ ಮನೋಜ್ಞ ಅಭಿನಯ ಎಲ್ಲರ ಮನ ತಟ್ಟುವಂತಿತ್ತು. ದಕ್ಷಿಣ ಭಾರತದ ಎಲ್ಲಾ ನಟರ ಚಿತ್ರಗಳಲ್ಲೂ ಸುಮಾರು 60 ವರ್ಷಗಳ ಕಾಲ ಅದೆಷ್ಟೋ ಚಿತ್ರಗಳಲ್ಲಿ ಅಭಿನಯಿಸಿ ತನ್ನ ಮರೆಯಲಾಗದ ನಟನೆಯಿಂದ ಸಿನಿಮಾಲೋಕದಲ್ಲಿ ಧ್ರುವತಾರೆಯಂತಾದರು. ಅಂತಹ ಒಂದು ಅಧ್ಬುತ ನಟಿ ಪಂಡರಿ ಬಾಯಿ. 1943 ರಲ್ಲಿ "ವಾಣಿ" ಎಂಬ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಂಡರಿ ಬಾಯಿಯವರು ತಮಿಳು ಬಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಾ ಬಹಾರ್ ಎಂಬ ಹಿಂದಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ತಮಿಳಿನ ಪರಾಶಕ್ತಿ ಚಿತ್ರದಲ್ಲಿ ನಾಯಕಿಯಾಗಿ ನಂತರ ರಾಜ್‌ಕುಮಾರ್ ನಾಯಕರಾಗಿದ್ದ "ಗುಣ ಸಾಗರಿ" ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದರು. ಬೇಡರ ಕಣ್ಣಪ್ಪ ಚಿತ್ರವು ಪಂಡರೀಬಾಯಿಯವರನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರುವಂತೆ ಮಾಡಿತು. ಇದಕ್ಕೆ ಕಾರಣ ಪಂಡರೀಬಾಯಿಯವರು ನಾಯಕಿಯಾಗಿ ಮನೋಜ್ಞವಾಗಿ ಅಭಿನಯಿಸಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದದ್ದು.
ನಂತರದ ದಿನಗಳಲ್ಲಿ ಅಣ್ಣಾವ್ರ ಜೊತೆ ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ಅವರಿಬ್ಬರ ಅಭಿನಯ ಎಲ್ಲಿಯವರೆಗೆ ಯಶಸ್ಸಾಗಿತೆಂದರೆ ಅಣ್ಣಾವ್ರ ಚಿತ್ರಗಳಲ್ಲಿ ಅವರ ತಾಯಿಯ ಪಾತ್ರಕ್ಕಾದರೂ ಪಂಡರೀಬಾಯಿಯವರು ಬೇಕಿತ್ತು. ಅವರನ್ನು ಬಿಟ್ಟು ಚಿತ್ರ ಮಾಡಲು ಸಾಧ್ಯ ಇಲ್ಲವೆಂಬಂತಿದ್ದರು. ಅವರು ಅಭಿನಯಿಸಬೇಕಾದ ಪಾತ್ರಕ್ಕೆ ಬೇರೆ ಯಾರನ್ನೋ ತಂದು ಅಭಿನಯ ಮಾಡಿಸಲು ಅಣ್ಣಾವ್ರ ಸಂಸ್ಥೆ ಸಿದ್ಧರಿರಲಿಲ್ಲ. ಅದಕ್ಕಾಗಿ ಅವರಿಗಾಗಿ ಕಾದು ಅವರನ್ನು ಕರೆ ತಂದು ಪಾತ್ರ ಮಾಡಿಸುತ್ತಿದ್ದರು. ದಕ್ಷಿಣ ಭಾರತದ ಎಲ್ಲಾ ಕಲಾವಿದರೊಂದಿಗೆ ಅಭಿನಯಿಸಿದ ಪಂಡರಿಬಾಯಿಯವರು 1994 ರಲ್ಲಿ ರಸ್ತೆ ಅಪಘಾತವೊಂದರಲ್ಲಿ ತನ್ನ ಎಡಗೈಯನ್ನು ಕಳೆದುಕೊಂಡು ಪಡಬಾರದ ಕಷ್ಟ ಅನುಭವಿಸಿದರು. ಆದರೂ ಅಂತಾ ಸಂದರ್ಭದಲ್ಲಿ ಕೂಡ ಅವರು ಆಬಿನಯಿಸುವುದನ್ನು ಬಿಡಲಿಲ್ಲ.
ಅದೇ ಸಂದರ್ಭದಲ್ಲಿ ಉದಯ್‌ಪ್ರಕಾಶ್ ನಿರ್ದೇಶನದಲ್ಲಿ ಬಿ ಎನ್ ಗಂಗಾಧರ್ ನಿರ್ಮಾಣದಲ್ಲಿ ಶಶಿಕುಮಾರ್‌ರವರ ನಾಯಕತ್ವದಲ್ಲಿ ತಯಾರಾದ “ಬಾರೋ ನನ್ನ ಮುದ್ದಿನ ಕೃಷ್ಣ” ಚಿತ್ರದಲ್ಲಿ ಶಶಿಕುಮಾರ್ ಸಾಕು ತಾಯಿಯಾಗಿ ಅಭಿನಯಿಸಿದರು. ಆ ಚಿತ್ರಕ್ಕೆ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರಿಂದ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನ್ನದಾಯಿತು. ರಂಗ ಕಲಾವಿದೆಯಾಗಿ ಸಿನಿಮಾ ಕಲಾವಿದೆಯಾಗಿ ಹೆಸರು ಮಾಡಿದ ಪಂಡರೀಬಾಯಿಯವರು ಸ್ವತಃ ಪಾಂಡುರಂಗ ಪ್ರೊಡಕ್ಷನ್ ಎಂಬ ಸಂಸ್ಥೆ ಯನ್ನು ಹುಟ್ಟು ಹಾಕಿ ಅದರ ಮುಖಾಂತರ ಕೆಲವು ರಾಯರ ಸೊಸೆ, ಅನುರಾಧ ಮುಂತಾದ ಚಿತ್ರಗಳನ್ನು ನಿರ್ಮಿಸಿದರು.
ಅವರು ತನ್ನ ಐವತ್ತನೇ ವಯಸ್ಸಿನಲ್ಲಿ ರಾಮರಾವ್ ಎಂಬವರನ್ನು ಮದುವೆಯಾದರು. ಚಿತ್ರರಂಗದಲ್ಲಿ ಪಂಡರಿಬಾಯಿಯವರ ತಂಗಿ ಮೈನಾವತಿಯವರು ಕೂಡ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಂಡರಿಬಾಯಿಯವರು ಕನ್ನಡ, ತಮಿಳು, ತೆಲುಗು, ಹಿಂದಿ. ತುಳು, ಕೊಂಕಣಿ ಮುಂತಾದ ಭಾಷೆಗಳಲ್ಲಿ ಸುಮಾರು ಐನೂರಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸಿನಿಲೋಕದ ದ್ರುವತಾರೆಯಾಗಿ ಮೆರೆದಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್