image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಲನಟನಿಂದ ಬಹುಮುಖ ಪ್ರತಿಭೆಯಾಗಿ ಮಿನುಗಿದ ಸಿನಿಲೋಕದ ಧ್ರುವತಾರೆ 'ಯಡಕಲ್ಲು ಗುಡ್ಡದ ಮೇಲೆ' ಚಿತ್ರದ ನಾಯಕ ಚಂದ್ರಶೇಖರ್

ಬಾಲನಟನಿಂದ ಬಹುಮುಖ ಪ್ರತಿಭೆಯಾಗಿ ಮಿನುಗಿದ ಸಿನಿಲೋಕದ ಧ್ರುವತಾರೆ 'ಯಡಕಲ್ಲು ಗುಡ್ಡದ ಮೇಲೆ' ಚಿತ್ರದ ನಾಯಕ ಚಂದ್ರಶೇಖರ್

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಯಡಕಲ್ಲು ಗುಡ್ಡದ ಮೇಲೆ’ ಚಿತ್ರವನ್ನು ನೋಡಿದವರಿಗೆ ಚಂದ್ರಶೇಖರ್ ಎಂಥಹ ನಟನೆಂಬುದು ತಿಳಿದಿರುತ್ತದೆ. ಆ ಚಿತ್ರದಲ್ಲಿ ಜಯಂತಿ ಮತ್ತು ಆರತಿ ಮಧ್ಯೆ ನಂಜುಂಡನ ಪಾತ್ರದಲ್ಲಿ ಅಭಿನಯಿಸಿದ ಸ್ಪುರದ್ರೂಪಿ ಹುಡುಗನೇ ಚಂದ್ರಶೇಖರ್. ಆದರೆ ಇವರು ‘ನಮ್ಮ ಮಕ್ಕಳು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಎಂಟ್ರಿಕೊಟ್ಟವರು.

ಆನಂತರ ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ‘ವಂಶವೃಕ್ಷ’ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಚಂದ್ರಶೇಖರ್ ಅಭಿನಯಿಸಿ ಜನಪ್ರಿಯವಾಗಿ ಪರಿಚಿತರಾಗಿದ್ದರು. ಇದಾದ ನಂತರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿ ಹೆಸರು ಮಾಡಿದರೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮತ್ತೊಂದು ಚಿತ್ರ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಚಂದ್ರಶೇಖರ್ ಅಭಿನಯಿಸಿ ತನ್ನ ನಟನಾ ಸಾಮಾರ್ಥ್ಯವನ್ನು ತೋರಿಸಿದರು. ಅನಂತ್ ನಾಗ್ ಅವರೊಂದಿಗೆ ಮತ್ತೊಂದು ಕಲಾತ್ಮಕ ಚಿತ್ರವಾದ ಹಂಸಗೀತೆಯಲ್ಲಿ ನಟಿಸಿದರು. ಅಣ್ಣಾವ್ರ ಜೊತೆ ‘ರಾಜಾ ನನ್ನ ರಾಜಾ’ ಚಿತ್ರದಲ್ಲಿ ಅಭಿನಯಿಸಿ ಮಿಂಚಿದರು. ಹೀಗೆ ಚಿತ್ರರಂಗದಲ್ಲಿ ತನ್ನ ಚಾಪನ್ನು ಮೂಡಿಸುತ್ತಾ ಚಂದ್ರಶೇಖರ್ ಒಬ್ಬ ಜನಪ್ರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಬೆಳೆದರು.

ಇದೆಲ್ಲಾ ಕಾರಣ ಅವರಲ್ಲಿದ್ದ ಚಿತ್ರರಂಗದ ಒಲವು ಮತ್ತು ಅವರ ಪರಿಶ್ರಮವಾದರೂ ರಂಗಭೂಮಿ ಪ್ರಧಾನ ಪಾತ್ರವಹಿಸುತ್ತದೆ. ರಂಗಭೂಮಿಯಲ್ಲಿ ಪಳಗಿದವರಿಗೆ ಚಿತ್ರರಂಗದಲ್ಲಿ ಬೆರೆಯಲು ಅಷ್ಟೇನು ಕಷ್ಟ ಆಗಲಾರದು. ಚಂದ್ರಶೇಖರ್ ನ್ಯಾಷನಲ್ ಹೈಸ್ಕೂಲಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಪ್ರಣಯರಾಜ ಶ್ರೀನಾಥ್ ಮತ್ತು ಸಿ.ಆರ್. ಸಿಂಹ ಅವರ ಸಹಕಾರದಿಂದ ಅವರ ಜೊತೆ ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಅಲ್ಲದೆ ಬಿ.ವಿ. ಕಾರಂತ್ ನಿರ್ದೇಶನದ ‘ಹಯವದನ’ ನಾಟಕದಲ್ಲಿ ಚಂದ್ರಶೇಖರ್, ವೈಶಾಲಿ ಕಾಸರವಳ್ಳಿ, ಸುಂದರ್ ರಾಜ್ ಅಭಿನಯಿಸುತ್ತಿದ್ದರಂತೆ. ಅದಕ್ಕಾಗಿ ಬೆಂಗಳೂರಿನ ರಂಗಮಂದಿರದಲ್ಲಿ ತಿಂಗಳುಕಟ್ಟಲೆ ತರಬೇತಿ ಪಡೆದುಕೊಂಡಿದ್ದನ್ನು ‘ಪೂರ್ವಪರ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಮಾತಿಗೆ ಸಿಕ್ಕಾಗ ನೆನಪಿಸಿಕೊಂಡಿದ್ದರು.

ಕಲಾರಂಗ ಒಬ್ಬರನ್ನು ಹೇಗೆ ಆವರಿಸಿಕೊಳ್ಳುತ್ತೆ ಅನ್ನೋದಕ್ಕೆ ಚಂದ್ರಶೇಖರ್ ಕೂಡ ಉದಾಹರಣೆ ಆಗಬಲ್ಲರು. ಆ ಸಾಮರ್ಥ್ಯದಿಂದಲೇ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದಲ್ಲಿ ತಯಾರಾಗಬೇಕಿದ್ದ ಚಿತ್ರವೊಂದಕ್ಕೆ ನಿರ್ದೇಶಕ ಆರ್. ನಾಗೇಂದ್ರ ರಾವ್ ಅವರು ನಡೆಸಿದ ಆಡಿಷನ್ ಮೂಲಕ ‘ನಮ್ಮ ಮಕ್ಕಳು’ ಚಿತ್ರದ ಪಾತ್ರವೊಂದಕ್ಕೆ ಆಯ್ಕೆಯಾದರು. 10ನೇ ತರಗತಿ ಓದುತ್ತಿರುವಾಗಲೇ ಚಿತ್ರರಂಗಕ್ಕೆ ಬಣ್ಣ ಹಚ್ಚಿದರು. ನಿನ್ನೊಲುಮೆ ನಮಗಿರಲಿ ತಂದೆ ಎಂಬ ಆಧ್ಯಾತ್ಮಿಕ ಹಾಡೊಂದು ಈ ಚಿತ್ರದಲ್ಲಿ ಜನಜನಿತವಾಗಿದ್ದನ್ನು ನಾವು ಗಮನಿಸಬಹುದು. 1969 ರಲ್ಲಿ ಬಂದ ‘ನಮ್ಮ ಮಕ್ಕಳು’ ಚಿತ್ರದಲ್ಲಿ ಅಶ್ವಥ್, ಪಂಡರಿಬಾಯಿ, ಬಾಲಕೃಷ್ಣ, ಕಲ್ಪನಾ ಮುಂತಾದ ಅಗ್ರಗಣ್ಯ ಕಲಾಬಳಗವೇ ಆ ಚಿತ್ರದಲ್ಲಿತ್ತು.

ಆ ಚಿತ್ರದ ಬಳಿಕ ಚಂದ್ರಶೇಖರ್ ನ್ಯಾಷನಲ್ ಕಾಲೇಜು ಸೇರಿದರು. ಅಲ್ಲಿ ವಿಷ್ಣುವರ್ಧನ್ ಅವರ ಸ್ನೇಹ ಗಳಿಸಿದರು. ಇಬ್ಬರು ಗಿರೀಶ್ ಕಾರ್ನಾಡರ ‘ವಂಶವೃಕ್ಷ’ ಚಿತ್ರದಲ್ಲಿ ಬಣ್ಣ ಹಚ್ಚಿದರು. ಹೀಗೆ ಕಲಾಸೇವೆಯನ್ನು ಮುಂದುವರಿಸಿದ ಚಂದ್ರಶೇಖರ್ ಸಂಸ್ಕಾರ, ಪಾಪ ಪುಣ್ಯ, ಸೀತೆಯಲ್ಲ ಸಾವಿತ್ರಿ, ಕಸ್ತೂರಿ ವಿಜಯ, ಒಂದು ರೂಪ ಎರಡು ಗುಣ, ಮನೆ ಬೆಳಕು, ಹಂಸ ಗೀತೆ, ಸೂತ್ರದ ಗೊಂಬೆ, ಪರಿವರ್ತನೆ, ಕನಸು ನನಸು, ಬೆಸುಗೆ, ಮುಯ್ಯಿಗೆ ಮುಯ್ಯಿ, ಶಂಕರ್ ಗುರು, ಶನಿ ಪ್ರಭಾವ, ದೇವರ ದುಡ್ಡು, ಸೊಸೆ ತಂದ ಸೌಭಾಗ್ಯ, ಶ್ರೀಮಂತನ ಮಗಳು, ಹಾಲು ಜೇನು ಮುಂತಾದ 40 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆದರು.

1984 ರಲ್ಲಿ ಶೀಲಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿ ಕೆನಡಾದಲ್ಲಿ ನೆಲೆಸಿದರು. ಆಗಾಗ ಕರುನಾಡಿಗೆ ಬಂದು ಹೋಗುತ್ತಿದ್ದ ಚಂದ್ರಶೇಖರ್ ‘ಹಾಗೇ ಸುಮ್ಮನೆ’ ಚಿತ್ರದಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಎರಡನೇ ಬಾರಿಗೆ ಪ್ರವೇಶ ಪಡೆದರು. ಕಾರಂಜಿ, ಜೀವ, ಚೆಲುವೆಯ ನಿನ್ನ ನೋಡಲು, ರಾಜು ಕನ್ನಡ ಮೀಡಿಯಂ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ಮಾಡುತ್ತಾ ಬಂದರು. ‘ಪೂರ್ವಪರ’ ಚಿತ್ರದ ಮೂಲಕ ನಿರ್ದೇಶಕರಾದರು. ಮಲಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ನರ್ತಕಿ ಲಕ್ಷ್ಮಿ ಗೋಪಾಲಸ್ವಾಮಿಯನ್ನು ಕರೆತಂದು ಅಭಿನಯಿಸಲು ಅವಕಾಶ ಕಲ್ಪಿಸಿಕೊಟ್ಟರು. ಅಲ್ಲದೆ ಅವರೇ ಚಿತ್ರವನ್ನು ನಿರ್ಮಿಸಿದರು ಕೂಡ.

ಆ ನಂತರ ಕಥೆ ಚಿತ್ರಕಥೆ ರಚಿಸಿ ನಿರ್ಮಿಸಿ ನಿರ್ದೇಶಿಸಿದ ಚಿತ್ರ ಕೆಂಪಮ್ಮನ ಕೋರ್ಟು ಕೇಸ್. ತೆಲುಗಿನಲ್ಲಿ ಪ್ರೇಮಮಯಿ ಹೀಗೆ ಚಿತ್ರದ ನಿರ್ದೇಶಕರಾದರು, ನಿರ್ಮಾಪಕರಾದರು. ‘30 ಗಂಟೆ 30 ದಿನ 30 ನಿಮಿಷ’ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡು ನಂತರ ಮತ್ತೆ ಕೆನಡಾಗೆ ಹೋದ ಸಂದರ್ಭದಲ್ಲಿ ಹೃದಯದಲ್ಲಿ ಹೆಪ್ಪುಗಟ್ಟಿದ ಪರಿಣಾಮವಾಗಿ ಹೃದಯಾಘಾತದಿಂದ 63ನೇ ವಯಸ್ಸಿನಲ್ಲಿಯೇ ನಿಧನ ಹೊಂದಿದರು. ಚಂದ್ರಶೇಖರ್ ನಿಧನಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಚಿತ್ರರಂಗದ ಅನೇಕ ಗಣ್ಯರು ಅವರ ಸಹಪಾಠಿಗಳು ಸಂತಾಪ ಸೂಚಿಸಿದರು.

ಶಿವಸ್ವಾಮಿ ಮತ್ತು ರತ್ನ ದಂಪತಿಗಳಿಗೆ ಮಗನಾಗಿ ಜನಿಸಿದ ಚಂದ್ರಶೇಖರ್ ರಂಗಭೂಮಿ ನಿರ್ದೇಶಕ ಬಿ.ಎಸ್. ನಾರಾಯಣ ರಾವ್ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಿದ್ದರು. ಟೊರಂಟೊ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಅವಕಾಶವನ್ನು ತಾನು ನಿರ್ದೇಶಿಸಿದ ‘ಪೂರ್ವಪರ’ ಚಿತ್ರದಲ್ಲಿ ಗಳಿಸಿಕೊಂಡರು. ರಾಜ್‌ಕುಮಾರ್ ಅವರ ಅಭಿನಯವನ್ನು ನೋಡುತ್ತಾ ಬೆಳೆದವರು ಚಂದ್ರಶೇಖರ್. ಇಂಡಿಯನ್ ಹೈಕಮಿಷನ್‌ನ ವೀಸಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. 1991 ರಲ್ಲಿ ‘ತ್ರಿಭಂಗ’ ಎಂಬ ಕಿರುಚಿತ್ರವನ್ನು ಮೇಕಿಂಗ್ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡ ಕಾರಣ ಕನ್ನಡ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಲು ಅವಕಾಶವಾಯಿತು ಎಂದು ಹೇಳಬಹುದು.

ಮಗಳು ತಾನ್ಯಳನ್ನು ಚಿತ್ರರಂಗಕ್ಕೆ ಸೇರಿಸಬೇಕೆಂದು ಮತ್ತೆ ಬೆಂಗಳೂರಿಗೆ ಬಂದ ಚಂದ್ರಶೇಖರ್ ಕೊನೆಗೂ ತನ್ನ ಆಸೆಯನ್ನು ಪೂರೈಸಲಾಗದೆ ಹೊರಟೇ ಬಿಟ್ಟರು.
ಬಯಸದೆ ಚಿತ್ರರಂಗಕ್ಕೆ ಬಂದು ನಟನಾಗಿ, ಬರಹಗಾರನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಲನಚಿತ್ರರಂಗದಲ್ಲಿ ಸೇವೆ ಸಲ್ಲಿಸಿ ನಾಟಕಗಳಲ್ಲಿ, ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಾಯಕನಟನಾಗಿ, ಪೋಷಕ ಪಾತ್ರಗಳನ್ನು ಮಾಡುತ್ತಾ ಹೆಸರುವಾಸಿಯಾದ ಕೂದವಳ್ಳಿ ಚಂದ್ರಶೇಖರ್ ನಮ್ಮ ಕರಾವಳಿ ತರಂಗಿಣಿ ಪತ್ರಿಕೆಯ ಈ ವಾರದ ಸಿನಿಲೋಕದ ಧ್ರುವತಾರೆಯಾಗಿದ್ದಾರೆ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ