ಒಂದೇ ಗಾಳಿ, ಒಂದೇ ನೀರು, ಅದೇ ವಿಶಾಲ ಭೂಮಿ. ಈ ವಿಶ್ವದ ಸೃಷ್ಟಿಯ ಮೂಲಾಧಾರ ಎಲ್ಲರಿಗೂ ಒಂದೇ. ಸೂರ್ಯ ಎಲ್ಲರಿಗೂ ಸಮಾನವಾಗಿ ಬೆಳಕನ್ನು ಚೆಲ್ಲುತ್ತದೆ, ಮಳೆ ಎಲ್ಲರನ್ನೂ ಒಂದೇ ರೀತಿಯಲ್ಲಿ ತಂಪಾಗಿಸುತ್ತದೆ. ಆದರೆ, ಈ ಪ್ರಕೃತಿಯ ಮಡಿಲಲ್ಲಿ ಹುಟ್ಟಿಕೊಂಡ ಮನುಕುಲ ಮಾತ್ರ ಪ್ರದೇಶದಿಂದ ಪ್ರದೇಶಕ್ಕೆ ತನ್ನದೇ ಆದ ವಿಶಿಷ್ಟ ಬಣ್ಣಗಳನ್ನು, ಸೊಗಡನ್ನು ಅಳವಡಿಸಿಕೊಂಡಿರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಪ್ರಕೃತಿಯ ನಿಯಮ ಒಂದೇ ಆದರೂ, ಆಯಾ ನೆಲದ ಜಲ, ಹವಾಮಾನ ಮತ್ತು ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಮನುಷ್ಯನ ಬದುಕು, ಉಡುಗೆ-ತೊಡುಗೆ, ಆಚಾರ-ವಿಚಾರ ಹಾಗೂ ಆಹಾರ ಪದ್ಧತಿಗಳು ಹೇಗೆ ಅದ್ಭುತವಾಗಿ ರೂಪಾಂತರಗೊಳ್ಳುತ್ತವೆ ಎನ್ನುವುದೇ ವಿಸ್ಮಯಕಾರಿ. ಕಾಲಿಡುವ ನೆಲ ಬದಲಾದಂತೆ ಬದುಕಿನ ಹಾದಿ ಬದಲಾಗುವ ಈ ಪರಿ ನಿಜಕ್ಕೂ ಸೌಂದರ್ಯದ ಪರಮಾವಧಿ.
ನಮ್ಮ ವಿಶಾಲ ಭಾರತ ದೇಶವನ್ನೇ ನೋಡಿ. ಇಲ್ಲಿ ಪ್ರತಿ ನೂರು ಕಿಲೋಮೀಟರ್‌ಗೆ ಭಾಷೆ, ಆಚರಣೆ ಮತ್ತು ಸಂಸ್ಕೃತಿ ಬದಲಾಗುತ್ತದೆ ಎನ್ನುವುದು ಹಿರಿಯರ ಅನುಭವದ ಮಾತು. ನಮ್ಮ ದಕ್ಷಿಣದ ಕರಾವಳಿಯ ತೀರ ಪ್ರದೇಶದಲ್ಲಿ ನಿಂತರೆ, ಇಲ್ಲಿನ ಜನರ ಬದುಕು ಸಮುದ್ರದ ಅಲೆಗಳೊಂದಿಗೆ ಬೆಸೆದುಕೊಂಡಿದೆ. ತೆಂಗಿನ ಮರಗಳ ಸಾಲು, ಸಮುದ್ರದ ಅಲೆಗಳ ಜೊತೆ ಮೀನುಗಾರಿಕೆಯ ಸೊಗಡು. ಬಿಸಿಬಿಸಿಯಾದ ಕುಚಲಕ್ಕಿ ಅನ್ನ ಹಾಗೂ ಮೀನಿನ ಸಾರು ಕರಾವಳಿಯವರ ಪ್ರತಿದಿನದ ಆಹಾರ ಪದ್ಧತಿಯಾದರೆ ಪ್ರತಿ ಆಚರಣೆಗಳಿಗೂ ಒಂದೊಂದು ಆರೋಗ್ಯ ವರ್ದಕ ಆಹಾರ ಪದ್ದತಿ ಇನ್ನಷ್ಟು ವಿಶೇಷವಾದರೆ, ಪವಿತ್ರ ಮತ್ತು ವಿಭಿನ್ನ ಆಚರಣೆಗಳು, ಮೈಜುಮ್ಮೆನಿಸುವ ದೈವಾರಾಧನೆ ಮತ್ತು ರಾತ್ರಿವಿಡೀ ಕಣ್ತುಂಬಿಕೊಳ್ಳುವ ಯಕ್ಷಗಾನದ ತಾಳ-ಲಯಗಳು ಇಲ್ಲಿನ ಸಂಸ್ಕೃತಿಯ ಜೀವನಾಡಿಗಳು. ಇಲ್ಲಿನ ಸಂಜೆಗಳು ಚೆಂಡೆ-ಮದ್ದಳೆಯ ಸದ್ದಿನೊಂದಿಗೆ ಜೀವಪಡೆದುಕೊಳ್ಳುತ್ತವೆ.
ಇದೇ ಭಾರತದ ಮತ್ತೊಂದು ಮೂಲೆಗೆ, ಅಂದರೆ ಪಶ್ಚಿಮ ಬಂಗಾಳದ ಹಸಿರು ಬಯಲುಗಳಿಗೆ ಹೋದರೆ ಚಿತ್ರಣ ಸಂಪೂರ್ಣ ಭಿನ್ನ. ಅಲ್ಲಿ ಗಂಗೆಯ ಒಡಲಿನಲ್ಲಿ ಬೆಳೆದ ಭತ್ತ ಮತ್ತು ಮೀನು ಜನರ ಮುಖ್ಯ ಆಹಾರ. ಅನ್ನ ಮತ್ತು 'ಮಾಚೆರ್ ಝೋಲ್' ಇಲ್ಲದೆ ಅಲ್ಲಿನ ಊಟವೇ ಪೂರ್ಣಗೊಳ್ಳುವುದಿಲ್ಲ. ಇನ್ನು ಅವರ ಸಾಂಸ್ಕೃತಿಕ ಪರಂಪರೆಯ ಕಿರೀಟವಾದ 'ದುರ್ಗಾ ಪೂಜೆ'ಯ ದಿನಗಳಲ್ಲಿ ಇಡೀ ರಾಜ್ಯವೇ ಹಬ್ಬದ ಸಂಭ್ರಮದಲ್ಲಿ ಮಿಂದೆಳುತ್ತದೆ. ಬೀದಿಬೀದಿಗಳಲ್ಲಿ ತಲೆಎತ್ತುವ ಬೃಹತ್ ಪೆಂಡಾಲ್‌ಗಳು, ಕಲಾತ್ಮಕ ಮೂರ್ತಿಗಳು ಮತ್ತು ಧೂಪ-ದೀಪಗಳ ಪರಿಮಳದಲ್ಲಿ ಇಡೀ ಬಂಗಾಳವೇ ಸಾಂಸ್ಕೃತಿಕ ಲೋಕವಾಗಿ ಬದಲಾಗುತ್ತದೆ.
ಮತ್ತೆ ಉತ್ತರದ ಹಿಮಾಲಯದ ತಪ್ಪಲಿಗೆ ಅಥವಾ ಪಂಜಾಬ್‌ನ ಮಣ್ಣಿಗೆ ಕಾಲಿಟ್ಟರೆ ಅಲ್ಲಿನ ವಾತಾವರಣವೇ ಬೇರೆ. ಚಳಿ ಹೆಚ್ಚಿರುವ ಈ ಪ್ರದೇಶಗಳಲ್ಲಿ ದೇಹಕ್ಕೆ ಉಷ್ಣತೆ ನೀಡುವ ಗೋಧಿ ಆಧಾರಿತ ಆಹಾರಗಳು ಮುಖ್ಯ ಸ್ಥಾನ ಪಡೆಯುತ್ತವೆ. ಬಿಸಿಬಿಸಿಯಾದ ಮಕ್ಕೆ ಕಿ ರೋಟಿ ಮತ್ತು ಸರಸೋ ಕಾ ಸಾಕ್, ಬೆಣ್ಣೆ ತುಪ್ಪದ ಘಮಲು ಪಂಜಾಬಿಗಳ ಜೀವಪರಂಪರೆಯ ಭಾಗ. ಇನ್ನು ಭಾಂಗ್ರಾ ನೃತ್ಯದ ಹುಮ್ಮಸ್ಸು ಮತ್ತು ಬೈಸಾಖಿ ಹಬ್ಬದ ಕಳೆ ಅಲ್ಲಿನ ಜನರ ಜೀವನೋತ್ಸಾಹವನ್ನು ಜಗತ್ತಿಗೆ ಸಾರುತ್ತದೆ. ಮರುಭೂಮಿಯ ಒಡಲಾದ ರಾಜಸ್ಥಾನದಲ್ಲಿ ನೀರಿಗಿಂತ ಹೆಚ್ಚಾಗಿ ಹಾಲಿನ ಉತ್ಪನ್ನಗಳು ಮತ್ತು ಮಸಾಲೆಭರಿತ 'ದಾಲ್ ಬಾಟಿ ಚುರ್ಮಾ' ಆಹಾರದ ಪ್ರಮುಖ ಭಾಗವಾಗುತ್ತದೆ. ಅಲ್ಲಿನ ಉಡುಗೆಯ ಬಣ್ಣಗಳು ಮರುಭೂಮಿಯ ಬಿಸಿಲಿಗೆ ತಕ್ಕಂತೆ ರಂಗುರಂಗಾಗಿರುತ್ತವೆ ಮತ್ತು ಜನಪದ ಗೀತೆಗಳ ಸ್ವರಗಳು ಮರಳಿನಲ್ಲಿ ಅಲೆಅಲೆಯಾಗಿ ತೇಲಿಬರುತ್ತವೆ.
ಭಾರತದ ವರ್ಣರಂಜಿತ ಪರಂಪರೆ ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ದೇಶದ ಮೂಲೆಮೂಲೆಗಳಲ್ಲೂ ಪ್ರಕೃತಿಯೊಂದಿಗೆ ಬೆಸೆದ ವಿಶಿಷ್ಟ ಜೀವನಶೈಲಿಗಳ ಸುಂದರ ದರ್ಶನವಾಗುತ್ತದೆ. ಈಶಾನ್ಯ ಭಾರತದ ಅಸ್ಸಾಂನಲ್ಲಿ ಮಳೆಕಾಡುಗಳು ಮತ್ತು ಬ್ರಹ್ಮಪುತ್ರ ನದಿಯ ತಟದಲ್ಲಿ ಬಿದಿರು ಮತ್ತು ಮೀನುಗಳೇ ಅಡುಗೆಯ ಪ್ರಮುಖ ಭಾಗ. ಕೃಷಿ ಕ್ರಾಂತಿಯ ಸಂಕೇತವಾದ 'ಬೆಹು' ನೃತ್ಯ ಮತ್ತು ಬಣ್ಣಬಣ್ಣದ ರೇಷಿಮೆಯ ಸೀರೆಗಳು ಅಲ್ಲಿನ ಹೆಮ್ಮೆ. ಕಾವೇರಿ ನದಿ ತೀರದ ಫಲವತ್ತಾದ ಮಣ್ಣು ಮತ್ತು ದೇವಾಲಯಗಳ ನಾಡಾದ ತಮಿಳುನಾಡಿನಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ, ದೋಸೆ ಹಾಗೂ ಫಿಲ್ಟರ್ ಕಾಫಿಯ ಘಮಲು ಮನೆಮಾತು. ಕಾಂಚೀಪುರಂ ರೇಷಿಮೆ ಸೀರೆಗಳ ವೈಭವ ಮತ್ತು ಭರತನಾಟ್ಯ ದ್ರಾವಿಡ ಸಂಸ್ಕೃತಿಯ ಮಹತ್ವವನ್ನು ಸಾರುತ್ತದೆ. ಅರೇಬಿಯನ್ ಸಮುದ್ರದ ತೀರ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಇರುವ ಮಹಾರಾಷ್ಟ್ರದಲ್ಲಿ ಮಳೆಗಾಲದ ಚಳಿಯನ್ನು ಎದುರಿಸಲು 'ಕಾಂದಾ ಭಜಿ' ಮತ್ತು ಮುಂಬೈನ 'ವಡಾಪಾವ್' ಜನಪ್ರಿಯವಾಗಿದ್ದು, ಗಣೇಶೋತ್ಸವದ ವೈಭವ ಮತ್ತು ಲಾವಣಿ ನೃತ್ಯದ ಲಯಬದ್ಧ ಹೆಜ್ಜೆಗಳು ಇಡೀ ದೇಶದ ಗಮನ ಸೆಳೆಯುತ್ತವೆ.
ಭೂಮಿಯ ಮೇಲಿನ ಭೌಗೋಳಿಕ ಗಡಿಗಳು ಮನುಷ್ಯನ ರಾಜಕೀಯ ವಿಭಜನೆಗಳಷ್ಟೇ ಹೊರತು, ಪ್ರಕೃತಿಯ ನಿಯಮ ಎಲ್ಲೆಡೆ ಒಂದೇ. ಭಾರತದ ಗಡಿಯನ್ನು ದಾಟಿ ಜಾಗತಿಕ ಮಟ್ಟಕ್ಕೆ ಹೋದಾಗಲೂ, ಅಲ್ಲಿನ ನೆಲ-ಜಲಕ್ಕೆ ತಕ್ಕಂತೆ ಮನುಕುಲದ ಬದುಕು ಹೇಗೆ ರೂಪಾಂತರಗೊಂಡಿದೆ ಎನ್ನುವುದು ಸೋಜಿಗ ಮೂಡಿಸುತ್ತದೆ. ಹಿಮದಿಂದ ಕೂಡಿದ ಕಠಿಣ ಚಳಿಗಾಲವಿರುವ ನಾರ್ವೆ, ಸ್ವೀಡನ್‌ನಂತಹ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ಸೂರ್ಯನ ಬೆಳಕು ಕೆಲವೇ ತಿಂಗಳು ಸಿಗುವುದರಿಂದ, ಒಣಗಿಸಿದ ಅಥವಾ ಹೊಗೆಯಾಡಿಸಿದ ಮೀನು, ಆಲೂಗಡ್ಡೆ ಮತ್ತು ಬೆಚ್ಚಗಿನ ಸೂಪ್‌ಗಳು ಮುಖ್ಯವಾಗುತ್ತವೆ. ಇವರು ಪ್ರಕೃತಿಯೊಂದಿಗೆ ಸರಳವಾಗಿ ಬದುಕುವ 'ಹೈಗೆ' ಎನ್ನುವ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ದ್ವೀಪ ರಾಷ್ಟ್ರವಾದ ಜಪಾನ್‌ನಲ್ಲಿ ಜ್ವಾಲಾಮುಖಿ ಹಾಗೂ ಭೂಕಂಪಗಳು ಹೆಚ್ಚಿದ್ದರೂ, ಸಮುದ್ರ ತೀರದ ಹತ್ತಿರವಿರುವುದರಿಂದ ಇವರ ಮುಖ್ಯ ಆಹಾರ ಹಸಿ ಮೀನು ಮತ್ತು ಅಕ್ಕಿಯಿಂದ ತಯಾರಿಸಿದ 'ಸುಶಿ'. ಸರಳವಾದ 'ಕಿಮೋನೋ' ಉಡುಗೆ, 'ಚೆರಿ ಬ್ಲಾಸಮ್' ಹಬ್ಬ ಮತ್ತು ಹೂವಿನ ಜೋಡಣೆಯ ಕಲೆ ಜಪಾನಿನ ವಿಶಿಷ್ಟ ಮುಖಗಳನ್ನು ಜಗತ್ತಿಗೆ ಪರಿಚಯಿಸುತ್ತವೆ. ಬಿಸಿಲಿನ ಬೇಗೆಯಿರುವ ಮರುಭೂಮಿ ಮತ್ತು ಕಾಡುಗಳ ನಾಡಾದ ಮೆಕ್ಸಿಕೋದಲ್ಲಿ ಜೋಳ ಮತ್ತು ಮೆಣಸಿನಕಾಯಿಗಳದೇ ಸಾಮ್ರಾಜ್ಯವಾಗಿದ್ದು, ಬಿಸಿಬಿಸಿಯಾದ 'ಟಾಕೋಸ್' ಮತ್ತು 'ಬುರಿಟೋಸ್' ಅಲ್ಲಿನ ರಾಷ್ಟ್ರೀಯ ಆಹಾರ. ಮೃತಪಟ್ಟ ಪೂರ್ವಿಕರನ್ನು ಸ್ಮರಿಸುವ 'ಡೇ ಆಫ್ ದಿ ಡೆಡ್' ಹಬ್ಬದಲ್ಲಿ ಕಣ್ಣೀರಿನ ಬದಲು ಬಣ್ಣದ ಹೂವುಗಳು ಮತ್ತು ಸಿಹಿತಿಂಡಿಗಳೊಂದಿಗೆ ಸಾವನ್ನು ಸಂಭ್ರಮಿಸುವ ವಿಸ್ಮಯಕಾರಿ ಸಂಸ್ಕೃತಿ ಇವರದು.
ಹೀಗೆ, ಮಣ್ಣಿನ ವಾಸನೆ ಎಲ್ಲೆಡೆಯೂ ವಿಭಿನ್ನ. ದಕ್ಷಿಣದ ಕರಾವಳಿಯ ತೆಂಗಿನ ಮರಗಳ ಸಾಲಿನಿಂದ ಹಿಡಿದು ಜಪಾನ್‌ನ ಚೆರಿ ಬ್ಲಾಸಮ್ ತೋಟಗಳವರೆಗೆ, ಪಂಜಾಬ್‌ನ ಗೋಧಿ ಹೊಲಗಳಿಂದ ಹಿಡಿದು ಮೆಕ್ಸಿಕೋವಿನ ಮರುಭೂಮಿಗಳವರೆಗೆ ಮನುಷ್ಯನ ಬದುಕು ಆಯಾ ನೆಲದ ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಾ ಸಾಗುತ್ತದೆ. ಬಾಳಿನ ಬಣ್ಣಗಳು ನೂರೆಂಟಾದರೂ, ಎಲ್ಲರನ್ನೂ ಬೆಸೆಯುವ ಆ ಪ್ರಕೃತಿಯ ಬಳ್ಳಿ ಮಾತ್ರ ಒಂದೇ. ಈ ವೈವಿಧ್ಯತೆಯೇ ವಿಶ್ವದ ಅತಿ ದೊಡ್ಡ ಸೌಂದರ್ಯ ಮತ್ತು ಮಾನವ ಕುಲದ ನಿಜವಾದ ಸಂಪತ್ತು.
✍ ಲಲಿತಶ್ರೀ ಪ್ರೀತಂ ರೈ