image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಕೃತಿಯ ಮಡಿಲಿನ ನಿಜವಾದ ಕಾವಲುಗಾರರು: ನಮ್ಮ ಆದಿವಾಸಿಗಳು

ಪ್ರಕೃತಿಯ ಮಡಿಲಿನ ನಿಜವಾದ ಕಾವಲುಗಾರರು: ನಮ್ಮ ಆದಿವಾಸಿಗಳು

ಪ್ರಕೃತಿಯ ಮಡಿಲ ನಿಜವಾದ ಕಾವಲುಗಾರರಾದ ಆದಿವಾಸಿಗಳು ನಮ್ಮ ನಾಡಿನ ಜೀವನಾಡಿಯಾಗಿದ್ದಾರೆ. 'ಆದಿ' ಎಂದರೆ ಮೊದಲ, 'ವಾಸಿ' ಎಂದರೆ ನಿವಾಸಿ. ಅಂದರೆ ಈ ನೆಲದ ಅತಿ ಹಳೆಯ ಸಾಕ್ಷಿಪ್ರಜ್ಞೆಗಳೇ ನಮ್ಮ ಆದಿವಾಸಿಗಳು. ಇವರ ಬದುಕು ಕೇವಲ ಒಂದು ಜೀವನಶೈಲಿಯಲ್ಲ, ಅದೊಂದು ಪ್ರಕೃತಿಯೊಂದಿಗೆ ನಡೆಸುವ ಮೌನ ಪ್ರೀತಿಯ ಹಾಗೂ ಸಹಬಾಳ್ವೆಯ ಕಾವ್ಯ. ಕಾಡನ್ನೇ ತಾಯಿ ಎಂದು ನಂಬಿ, ಅಡವಿ, ನದಿ, ಮಣ್ಣು ಮತ್ತು ಪ್ರಾಣಿಗಳನ್ನು ಕುಟುಂಬದ ಸದಸ್ಯರಂತೆ ಕಾಣುವ ಇವರಲ್ಲಿ  ಹಲವಾರು ಪಂಗಡಗಳಿದೆ.  ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ಸೊಲಿಗರು ಕಾಡಿನ ಸಂರಕ್ಷಣೆಯಲ್ಲಿ ವಹಿಸುವ ಪಾತ್ರ ಅನನ್ಯ. 'ಸೊಲಿಗ' ಎಂದರೆ ಬಿದಿರಿನ ಪೊದೆಗಳ ನಡುವೆ ವಾಸಿಸುವವರು ಎಂದರ್ಥ. ತಮ್ಮದೇ ಆದ ಸೊಲಿಗ ನುಡಿಯನ್ನು ಹೊಂದಿರುವ ಇವರು ಪ್ರಕೃತಿಯ ನಿಜವಾದ ಕಾವಲುಗಾರರು. ಹಾಗೆಯೇ ಮೈಸೂರು ಮತ್ತು ಕೊಡಗಿನ ದಟ್ಟ ಅರಣ್ಯಗಳಲ್ಲಿ ವಾಸಿಸುವ ಜೇನುಕುರುಬ ಮತ್ತು ಬೆಟ್ಟಕುರುಬ ಸಮುದಾಯದವರ ಜೇನುತುಪ್ಪ ಸಂಗ್ರಹಿಸುವ ಕೌಶಲ್ಯ ಅದ್ಭುತವಾದದ್ದು. ಆಧುನಿಕ ಯಂತ್ರಗಳ ಸಹಾಯವಿಲ್ಲದೆ, ಕಾಡಿನ ಯಾವ ಮರದಲ್ಲಿ ಎಲ್ಲಿ ಜೇನಿದೆ ಎಂದು ಅರಿತುಕೊಂಡು, ಪ್ರಕೃತಿಗೆ ಯಾವುದೇ ಹಾನಿಯಾಗದಂತೆ ಜೇನು ತೆಗೆಯುವ ಇವರ ಕಲೆ ವಿಸ್ಮಯಕರ.

ನಮ್ಮ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಸಿರುವ ಕೊರಗ ಜನಾಂಗ ಕರಾವಳಿಯ ಅತ್ಯಂತ ಪ್ರಾಚೀನ ಬುಡಕಟ್ಟು ಸಮುದಾಯವಾಗಿದೆ. ಇವರ ವಿಶಿಷ್ಟವಾದ 'ಕೊರಗ ಬಾಷೆ'ಯು ಈ ನಾಡಿನ ಅತ್ಯಂತ ಪ್ರಾಚೀನ ಮೌಖಿಕ ಭಾಷೆಗಳಲ್ಲಿ ಒಂದಾಗಿದ್ದು, ಯಾವುದೇ ಲಿಪಿಯಿಲ್ಲದಿದ್ದರೂ ತಲೆಮಾರುಗಳಿಂದ ಮಾತಿನ ಮೂಲಕವೇ ಜೀವಂತವಾಗಿ ಉಳಿದುಕೊಂಡು ಬಂದಿರುವ ಇವರ ಭಾಷೆ ಹಾಗೂ ಸಾಂಸ್ಕೃತಿಕ ಸೊಗಡು ನಮ್ಮ ಪ್ರಾದೇಶಿಕ ಶ್ರೀಮಂತಿಕೆಗೆ ಕಿರೀಟಪ್ರಾಯವಾಗಿದೆ. ಬಿದಿರಿನಿಂದ ಅತ್ಯಾಕರ್ಷಕ ಬುಟ್ಟಿಗಳು ಹಾಗೂ ಕರಕುಶಲ ವಸ್ತುಗಳನ್ನು ಮಾಡುವುದರಲ್ಲಿ ನುರಿತರಾಗಿರುವ ಇವರ ಸಾಂಪ್ರದಾಯಿಕ ಆಚಾರ-ವಿಚಾರಗಳು ಕರಾವಳಿಯ ಸಾಂಸ್ಕೃತಿಕ ಅಸ್ತಿತ್ವದ ಪ್ರಮುಖ ಭಾಗವಾಗಿವೆ. ಇನ್ನು ರಾಮನಗರದ ಅರಣ್ಯ ಅಂಚಿನಲ್ಲಿರುವ ಇರುಳಿಗರು ಮತ್ತು ಮಲೆನಾಡಿನ ಕುಡಿಯ ಸಮುದಾಯಗಳ ಬಳಿ ಇರುವುದು ಅಕ್ಷರಶಃ ವಿಸ್ಮಯ ಲೋಕ. ಆಧುನಿಕ ವೈದ್ಯಕೀಯ ವಿಜ್ಞಾನಕ್ಕೂ ನಿಲುಕದ ಅನೇಕ ಕಾಯಿಲೆಗಳಿಗೆ, ತಮ್ಮ ಹಿರಿಯರು ಕಲಿಸಿಕೊಟ್ಟ ಗಿಡಮೂಲಿಕೆಗಳ ಮೂಲಕ ಮದ್ದು ಮಾಡುವ ಜ್ಞಾನ ಇವರಿಗಿದೆ. ಕಾಡಿನಲ್ಲಿ ಸಿಗುವ ಪ್ರತಿಯೊಂದು ಬೇರು, ತೊಗಟೆ ಮತ್ತು ಎಲೆಗಳ ಗುಣಗಳನ್ನು ಅರೆದು ಕುಡಿದಿರುವ ಇವರದ್ದು ಪ್ರಕೃತಿಯೇ ನೀಡಿದ ಔಷಧಾಲಯದ ಬದುಕು. ಇಂದು ಆಧುನಿಕತೆಯ ಭರಾಟೆಯಲ್ಲಿ ಇವರು ಮುಖ್ಯವಾಹಿನಿಗೆ ಬರುತ್ತಿದ್ದರೂ, ತಮ್ಮ ಪ್ರಾಚೀನ ಭಾಷೆ, ಆಚಾರ-ವಿಚಾರಗಳು ಹಾಗೂ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ.

ಮರಗಿಡ, ನದಿ, ಮಣ್ಣು ಮತ್ತು ಪ್ರಕೃತಿಯನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮೂಲನಿವಾಸಿಗಳೇ ನಮ್ಮ ನಾಡಿನ ಅತಿ ದೊಡ್ಡ ಶಕ್ತಿ. ಆದಿವಾಸಿಗಳ ಸಂಸ್ಕೃತಿ, ಅನನ್ಯ ಭಾಷೆಗಳು ಮತ್ತು ಅವರ ಸರಳ ಜೀವನಶೈಲಿಯನ್ನು ಗೌರವಿಸುವುದು ಹಾಗೂ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪ್ರಕೃತಿಯೊಂದಿಗೆ ಕೈಜೋಡಿಸಿ ಬಾಳುವ ಈ ಬುಡಕಟ್ಟು ಜನಾಂಗದವರ ಹಕ್ಕುಗಳು ಮತ್ತು ಅಸ್ತಿತ್ವ ಎಂದೆಂದಿಗೂ ಸುರಕ್ಷಿತವಾಗಿರಲಿ.

ಪ್ರಕೃತಿಯನ್ನು ಪ್ರೀತಿಸುವ, ಕಾಡನ್ನು ಕಾಯುವ ಮತ್ತು ನಮ್ಮ ನೆಲದ ಬೇರುಗಳನ್ನು ಜೀವಂತವಾಗಿರಿಸಿರುವ ಸಮಸ್ತ ಆದಿವಾಸಿ ಬಂಧುಗಳಿಗೆ ವಿಶ್ವ ಆದಿವಾಸಿ ದಿನದ ಹಾರ್ದಿಕ ಶುಭಾಶಯಗಳು!

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ