image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಗನ ಮುಟ್ಟುವ ಅಹಂಕಾರಕ್ಕೆ ಗುಬ್ಬಚ್ಚಿಯ ಮುಗ್ಧತೆಯೇ ಒಂದು ಚಾಟಿ!

ಗಗನ ಮುಟ್ಟುವ ಅಹಂಕಾರಕ್ಕೆ ಗುಬ್ಬಚ್ಚಿಯ ಮುಗ್ಧತೆಯೇ ಒಂದು ಚಾಟಿ!

ಹದ್ದು ಎಷ್ಟೇ ಎತ್ತರದಲ್ಲಿ ಹಾರಲಿ, ಅದು ಯಾರ ಮೇಲೂ ಪ್ರೀತಿಯನ್ನು ಹಂಚುವುದಿಲ್ಲ, ಒಂಟಿತನ ಮತ್ತು ಏಕಾಂತದ ಹಾದಿ ಅದರದ್ದು. ಆದರೆ ನಮ್ಮ ಅಂಗಳದ ಗುಬ್ಬಚ್ಚಿ ಹಾಗಲ್ಲ. ಅದು ಮನುಷ್ಯನ ಜೊತೆ ಜೊತೆಗೇ ಬದುಕುವುದನ್ನು ಕಲಿತಿದೆ. ಅನ್ನದ ಅಗುಳಿಗಾಗಿ ಮನುಷ್ಯನ ಮೇಜಿನ ಮೇಲೆಯೇ ಕಾಲಿಡುವ ಆ ಧೈರ್ಯ, ಮಡಿಕೆ-ಕುಡಿಕೆಗಳ ಸಂದುಗಳಲ್ಲಿ ಗೂಡುಕಟ್ಟಿಕೊಂಡು ನಮ್ಮೊಂದಿಗೇ ಸಂಸಾರ ಹೂಡುವ ಅದರ ಜಾಣ್ಮೆ ಯಾವುದೂ ಸಾಧಾರಣವಲ್ಲ.

ಆಕಾಶದಲ್ಲಿ ತನ್ನ ರೆಕ್ಕೆಗಳನ್ನು ಅಗಲಿಸಿ, ಎತ್ತರದಿಂದ ಕೆಳಗೆ ಕಣ್ಣು ಹಾಯಿಸಿ, ಬೇಟೆಯಾಡುವ ಗರುಡ ಅಥವಾ ಗಿಡುಗನೆಡೆಗೆ ಆಕರ್ಷಿತರಾಗುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದರ ಭೀಮಕಾಯ, ಗಾಂಭೀರ್ಯ ಮತ್ತು ರೌದ್ರತೆ ಕೆಲವರಿಗೆ ಶಕ್ತಿಯ ಪ್ರತೀಕದಂತೆ ಕಾಣಬಹುದು. ಆದರೆ, ನಮ್ಮ ಮನೆಯ ಹಂಚಿನ ಮೇಲೆ, ಕಿಟಕಿಯ ಸರಳುಗಳ ಬಳಿ, ಅಂಗಳದ ಧೂಳಿನಲ್ಲಿ ತಿಂಡಿ ಅರಸುತ್ತಾ, ನಮ್ಮೆಲ್ಲರ ಬದುಕಿನ ನಡುವೆ ಮುದ್ದಾಗಿ ಬೆರೆಯುವ ಆ ಪುಟ್ಟ ಗುಬ್ಬಚ್ಚಿ ನೀಡುವ ಸಂದೇಶವೇ ಬೇರೆ.

ಒಂದು ಮರದಲ್ಲಿ ಹಲವಾರು ಪಕ್ಷಿಗಳು ಗೂಡು ಕಟ್ಟಿಕೊಂಡು ಬದುಕಬಲ್ಲದು. ಆದರೆ ಅದರ ಜೊತೆ ಹದ್ಸು, ಗಿಡುಗಗಳು ಬದುಕಲು ಸಾಧ್ಯವಿಲ್ಲ. ಒಂದು ಹದ್ದು ಬಂತೆಂದರೆ ಅಲ್ಲಿ ನೆಲೆಸಿದ್ದ ಹಲವಾರು ಜೀವಗಳು ಬಲಿಯಾಗಬಹುದು, ಅಥವಾ ಜೀವ ಉಳಿಸಿಕೊಳ್ಳಲು ಓಡಿಹೋಗಬಹುದು. 

ಇಂದು ಮನುಷ್ಯನ ಅಹಂಕಾರ ಎಲ್ಲೆ ಮೀರಿ ಬೆಳೆದಿದೆ. ತಾನು ಸೃಷ್ಟಿಸಿದ ಕಾಂಕ್ರೀಟ್ ಕಾಡುಗಳು, ಆಕಾಶದೆತ್ತರಕ್ಕೆ ಚಾಚಿದ ಗೋಪುರಗಳು, ಮೋಡಗಳನ್ನು ಮುಟ್ಟುವ ರಾಕೆಟ್‌ಗಳು ತನ್ನ ಸರ್ವಶ್ರೇಷ್ಠತೆಗೆ ಸಾಕ್ಷಿ ಎಂದು ಆತ ಬೀಗುತ್ತಿದ್ದಾನೆ. ಭೂಮಿಯ ಒಡೆಯ ತಾನೇ ಎಂದು ಹಿಗ್ಗುತ್ತಿದ್ದಾನೆ. ತನ್ನ ಐಷರಾಮಿ ಜೀವನ, ಕಾರು-ಬೈಕ್‌ಗಳ ಸದ್ದು ಮತ್ತು ಮೊಬೈಲ್ ಟವರ್‌ಗಳ ವಿಕಿರಣಗಳಿಂದ ಇಡೀ ಪ್ರಕೃತಿಯನ್ನು ನಿಯಂತ್ರಿಸಬಲ್ಲೆ ಎಂದು ಅಹಂಕಾರ ಪಡುತ್ತಿದ್ದಾನೆ.

ಈ ಮನುಷ್ಯನ ಬೃಹತ್ ಅಹಂಕಾರದ ಕೋಟೆಯನ್ನು ಆ ಪುಟ್ಟ ಗುಬ್ಬಚ್ಚಿ ತನ್ನ ಪುಟ್ಟ ಕೊಕ್ಕಿನಿಂದಲೇ ಛಿದ್ರಗೊಳಿಸುತ್ತಿದೆ. ಯೋಚಿಸಿ ನೋಡಿ.. ಮನುಷ್ಯ ಕಟ್ಟಿದ ಆ ಮಹಡಿ ಮನೆಯ ಅತ್ಯಂತ ಎತ್ತರದ ಶೋಕಿಯ ಗೋಡೆಯ ಮೇಲೊಂದು ಸಣ್ಣ ಗೂಡುಕಟ್ಟಿಕೊಂಡು, ಮನುಷ್ಯನಿಗೆ ಎಂಜಲು ಎಂದೆನಿಸಿದ ಅಗುಳನ್ನೇ ಪ್ರೀತಿಯಿಂದ ತಿಂದು, ಆ ಅಂಗಳದಲ್ಲೇ ಕಲಕಲ ನಗುವಿನಿಂದ ಕುಣಿದಾಡುವ ಗುಬ್ಬಚ್ಚಿ ಮನುಷ್ಯನಿಗೆ ಒಂದು ದೊಡ್ಡ ಸತ್ಯವನ್ನು ಹೇಳುತ್ತದೆ. "ನೀನು ಎಷ್ಟೇ ದೊಡ್ಡವನಾಗು, ನೀನು ಕಟ್ಟಿದ ಸಾಮ್ರಾಜ್ಯ ಎಷ್ಟೇ ಅಸಾಧ್ಯವಾಗಿರಲಿ,  ನಿನ್ನ ಅಹಂಕಾರದ ಅರಮನೆಯಲ್ಲಿ ವಾಸಿಸಲು ನನಗ್ಯಾವುದೂ ಬೇಕಾಗಿಲ್ಲ. ನಿನ್ನ ಅಂಗಳದ ಸಣ್ಣ ಮೂಲೆಯೊಂದೇ ಸಾಕು, ನಾನು ನಿನಗಿಂತಲೂ ನೆಮ್ಮದಿಯಾಗಿ ಬದುಕಿ ತೋರಿಸುತ್ತೇನೆ".

ಮನುಷ್ಯ ತಾನು ಸೃಷ್ಟಿಸಿದ ತಂತ್ರಜ್ಞಾನದ ಸುಳಿಗೆ ಸಿಲುಕಿ, ನೈಸರ್ಗಿಕ ನೆಮ್ಮದಿಯನ್ನು ಕಳೆದುಕೊಂಡು ನಿದ್ರೆಗಾಗಿ ಮಾತ್ರೆಗಳನ್ನು ನುಂಗುತ್ತಾನೆ. ಆದರೆ, ಯಾವ ಭದ್ರತೆಯೂ ಇಲ್ಲದ ಆ ಪುಟ್ಟ ಗುಬ್ಬಚ್ಚಿ, ಸೂರ್ಯ ಮುಳುಗುತ್ತಿದ್ದಂತೆ ತನ್ನ ಗೂಡಿನಲ್ಲಿ ಮರಿಗಳೊಂದಿಗೆ ಯಾವುದೇ ಚಿಂತೆಯಿಲ್ಲದೆ ಗಾಢ ನಿದ್ರೆಗೆ ಜಾರುತ್ತದೆ. ಇದು ಮನುಷ್ಯನ ಬುದ್ಧಿವಂತಿಕೆಗೆ ಮತ್ತು ಅಹಂಕಾರಕ್ಕೆ ಬೀಳುವ ದೊಡ್ಡ ಏಟಲ್ಲವೇ?
ನಾವು ಮೊಬೈಲ್ ಟವರ್‌ಗಳನ್ನು ಹಾಕಿ, ಪರಿಸರವನ್ನು ಕಲುಷಿತಗೊಳಿಸಿ ಗುಬ್ಬಚ್ಚಿಗಳನ್ನು ಓಡಿಸಿದೆವು ಎಂದುಕೊಂಡೆವು. ಆದರೆ ವಾಸ್ತವದಲ್ಲಿ, ಗುಬ್ಬಚ್ಚಿಗಳು ನಮ್ಮಿಂದ ದೂರಾಗುತ್ತಿಲ್ಲ. ನಾವೇ ಮಾನವೀಯತೆಯನ್ನು ಕಳೆದುಕೊಂಡು ಆ ಮುದ್ದು ಜೀವಗಳಿಂದ ದೂರಾಗುತ್ತಿದ್ದೇವೆ.

ನಮ್ಮ ಅಹಂಕಾರದ ಜಗತ್ತಿನಲ್ಲಿ ಪ್ರೀತಿ, ಸರಳತೆ ಮತ್ತು ಸಹಬಾಳ್ವೆ ಇಲ್ಲವಾಗಿವೆ. ಹೌದು, ಆಕಾಶದಲ್ಲಿ ಹಾರುವ ಹದ್ದು ಬಹುಶಃ ನಮ್ಮ ಶಕ್ತಿಗೆ ಕನ್ನಡಿಯಾಗಬಹುದು. ಆದರೆ ನಮ್ಮ ಮನೆಯ ಅಂಗಳದಲ್ಲಿ ಹಾರುವ ಗುಬ್ಬಚ್ಚಿ ಮಾತ್ರ ನಮ್ಮ ಬದುಕಿನ ಅಹಂಕಾರವನ್ನು ಅಣಕಿಸುತ್ತಾ, "ಸ್ವಲ್ಪ ಸರಳವಾಗಿ ಬದುಕುವುದನ್ನು ಕಲಿತುಕೋ ಮನುಷ್ಯ" ಎಂದು ಮೂಗು ಮುರಿಯುತ್ತಲೇ ನಮ್ಮೊಂದಿಗೆ ನಗುತ್ತಿದೆ!

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ