image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಳ ಪಯಣದ ಕೊನೆಯ ನಿಲ್ದಾಣದ ಅರಿವಿಲ್ಲದ ಮನುಷ್ಯನ ಉಸಿರು ನಿಂತ ಮೇಲೆ ಉಳಿಯುವುದು ಏನು..?

ಬಾಳ ಪಯಣದ ಕೊನೆಯ ನಿಲ್ದಾಣದ ಅರಿವಿಲ್ಲದ ಮನುಷ್ಯನ ಉಸಿರು ನಿಂತ ಮೇಲೆ ಉಳಿಯುವುದು ಏನು..?

ಮನುಷ್ಯನ ಬದುಕು ಎಷ್ಟು ವಿಚಿತ್ರ! ಇಂದು ನಗುತ್ತಾ, ಮಾತನಾಡುತ್ತಾ ಓಡಾಡುವ ಮನುಷ್ಯ, ನಾಳೆ ಇರುತ್ತಾನೋ ಇಲ್ಲವೋ ಎಂಬ ಗ್ಯಾರಂಟಿ ಇಲ್ಲದ ಜಗತ್ತಿನಲ್ಲಿ ನಾವಿದ್ದೇವೆ. ತಂತ್ರಜ್ಞಾನ ಬೆಳೆದಂತೆ ಬದುಕಿನ ವೇಗವೂ ಹೆಚ್ಚಾಗಿದೆ, ಆದರೆ ಜೀವದ ಮೌಲ್ಯ ಮಾತ್ರ ಕ್ಷೀಣಿಸುತ್ತಿದೆ. ವಿಪರ್ಯಾಸವೆಂದರೆ, ಅಕಾಲಿಕ ಮರಣಗಳು ಇಂದು ಸಾಮಾನ್ಯವಾಗುತ್ತಿವೆ. ಯುವಕರು, ಮಕ್ಕಳು, ಬದುಕಿನ ಕನಸು ಹೊತ್ತವರು ಹೀಗೆ ನೋಡನೋಡುತ್ತಿದ್ದಂತೆಯೇ ಈ ಲೋಕವನ್ನು ತೊರೆಯುತ್ತಿದ್ದಾರೆ.

​ಒಬ್ಬ ವ್ಯಕ್ತಿ ವಿಧಿವಶನಾದಾಗ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ದಿನದ ಮಟ್ಟಿಗೆ ಶ್ರದ್ಧಾಂಜಲಿಯ ಸ್ಟೇಟಸ್‌ಗಳು ತುಂಬಿ ತುಳುಕುತ್ತವೆ. ಆದರೆ, ಮರುದಿನವೇ ಜಗತ್ತು ತನ್ನ ಪಾಡಿಗೆ ತಾನು ಓಡಲು ಪ್ರಾರಂಭಿಸುತ್ತದೆ. ಸತ್ತವರು ಪ್ರಪಂಚದ ಪಾಲಿಗೆ ಬರೀ ಒಂದು ನೆನಪಾಗಿ, ಕಾಲಕ್ರಮೇಣ ಮರೆಯಾಗುತ್ತಾರೆ. ಆದರೆ, ಆ ನೋವನ್ನು ಶಾಶ್ವತವಾಗಿ ಹೊತ್ತುಕೊಳ್ಳುವವರು ಯಾರು? ಆತನನ್ನು ಹೆತ್ತು ಸಾಕಿ ಬೆಳೆಸಿದ ತಂದೆ-ತಾಯಿ, ಜೊತೆಗಿದ್ದ ಸಂಗಾತಿ ಮತ್ತು ತಂದೆಯ ನೆರಳು ಕಳೆದುಕೊಂಡ ಮುಗ್ಧ ಮಕ್ಕಳು. ಅವರ ಪಾಲಿಗೆ ಆ ಸಾವು ಕೇವಲ ಒಂದು ದಿನದ ಸುದ್ದಿಯಲ್ಲ, ಅದು ಅವರ ಇಡೀ ಬದುಕಿನ ಅಡಿಪಾಯವನ್ನೇ ಅಲ್ಲಾಡಿಸುವ ತೀವ್ರವಾದ ಶೂನ್ಯ.
​ಇಷ್ಟೆಲ್ಲಾ ಸತ್ಯಗಳು ನಮ್ಮ ಕಣ್ಣ ಮುಂದೆಯೇ ಇದ್ದರೂ, ನಾವು ಯಾಕೆ ಇಂದಿಗೂ 'ನಾನು', 'ನನ್ನದು' ಎಂಬ ಅಹಂಕಾರದ ಕವಚದಲ್ಲಿ ಬದುಕುತ್ತಿದ್ದೇವೆ? ನಮ್ಮ ಅಹಂಕಾರಕ್ಕೆ ಬೆಲೆ ಏನು? ನಾಳೆ ಕಣ್ಣು ಮುಚ್ಚಿದಾಗ ನಾವು ದಕ್ಕಿಸಿಕೊಂಡ ಕೋಟಿ ಕೋಟಿ ಸಂಪತ್ತಾಗಲಿ, ನಾವು ಮೆರೆದ ಅಧಿಕಾರವಾಗಲಿ ನಮ್ಮ ಜೊತೆ ಬರುವುದಿಲ್ಲ. ಸತ್ತ ಮೇಲೆ ಉಳಿಯುವುದು ನಾವು ಗಳಿಸಿದ ಹಣವಲ್ಲ, ನಾವು ನೀಡಿದ ಪ್ರೀತಿ ಮತ್ತು ಇತರರ ಮನಸ್ಸಿನಲ್ಲಿ ನಾವು ಬಿಟ್ಟು ಹೋಗುವ ಒಳ್ಳೆಯ ನೆನಪುಗಳು ಮಾತ್ರ.

ನಾವು ಇಂದು ಉಸಿರಾಡುತ್ತಿದ್ದೇವೆ ಎಂದರೆ ಅದು ದೇವರ ವರ. ಈ ಉಸಿರು ಯಾವಾಗ ನಿಲ್ಲುತ್ತದೋ ನಮಗೇ ಗೊತ್ತಿಲ್ಲ. ಅಹಂಕಾರದಿಂದ ಒಬ್ಬರನ್ನು ನೋಯಿಸುವುದು, ದ್ವೇಷ ಸಾಧಿಸುವುದು ಅಥವಾ ಕ್ಷುಲ್ಲಕ ವಿಷಯಗಳಿಗೆ ಪ್ರತಿಷ್ಠೆಯನ್ನು ಅಡ್ಡ ಬರಿಸಿಕೊಳ್ಳುವುದು ಎಷ್ಟು ಅರ್ಥಹೀನ? ನಾವು ಬದುಕಿರುವುದು ಪರಸ್ಪರ ಪ್ರೀತಿಸಲು ಮತ್ತು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ನೀಡಲು. ನಾವು ಹೋದ ಮೇಲೆ ನಮ್ಮ ನೆನಪನ್ನು ಬದುಕಿಸುವ ಶಕ್ತಿ ಇರುವುದು ನಮ್ಮ ಪ್ರೀತಿಯಲ್ಲಿ ಮಾತ್ರ.
​ಬದುಕು ಒಂದು ಸಣ್ಣ ನೀರ ಮೇಲಿನ ಗುಳ್ಳೆ. ಇಲ್ಲಿ ಅಹಂಕಾರಕ್ಕೆ ಜಾಗವಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳೋಣ. ಸಿಕ್ಕಿರುವ ಈ ಅಲ್ಪ ಸಮಯದಲ್ಲಿ ನಗು ಹಂಚೋಣ, ಸಂಬಂಧಗಳನ್ನು ಪ್ರೀತಿಸೋಣ. ಯಾಕೆಂದರೆ, ಮಣ್ಣಾಗುವ ಈ ದೇಹಕ್ಕಿಂತ, ಪ್ರೀತಿಯಿಂದ ಬೆರೆತ ಮನಸ್ಸುಗಳೇ ಶಾಶ್ವತ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ