ಜೀವನದಲ್ಲಿ ಮನುಷ್ಯ ಸಾಧಿಸಿದ ಪ್ರತಿಯೊಂದು ಹೆಜ್ಜೆಯೂ, ಗಳಿಸಿದ ಪ್ರತಿಯೊಂದು ಯಶಸ್ಸಿನ ಮೆಟ್ಟಿಲೂ ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದರೆ, ಈ ಯಶಸ್ಸು ಕೆಲವೊಮ್ಮೆ ಮನಸ್ಸಿನಲ್ಲಿ 'ನಾನೆಂಬ' ಅಹಂಕಾರದ ಬೀಜವನ್ನು ಬಿತ್ತುತ್ತದೆ. ನಾವು ಗಳಿಸಿದ ಅಧಿಕಾರ, ಜ್ಞಾನ, ಸಂಪತ್ತು ಅಥವಾ ದೈಹಿಕ ಬಲವು ನಮಗೆ ಶಾಶ್ವತವೆಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಆದರೆ ನಿಸರ್ಗದ ನಿಯಮವನ್ನು ಗಮನಿಸಿದರೆ, ಇಲ್ಲಿ ಯಾವುದೂ ಶಾಶ್ವತವಲ್ಲ ಮತ್ತು ಅತಿಯಾದ ಅಹಂಕಾರವು ವಿನಾಶದ ಮುನ್ಸೂಚನೆ ಎಂಬುದನ್ನು ಅರಿತುಕೊಳ್ಳಬಹುದು. ಕಲ್ಲನ್ನು ನೀರಿಗೆ ಎಸೆದಾಗ ಅದು ತಾನೇ ಹಗುರವಾಗಿರದ ಕಾರಣ ತನ್ನ ಭಾರದಿಂದಲೇ ತಳ ಸೇರುತ್ತದೆ. ಅದೇ ರೀತಿ, ಜೀವನದಲ್ಲಿ ಅಹಂಕಾರವೆಂಬ ಭಾರವನ್ನು ಹೊತ್ತುಕೊಂಡವನು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಒಂದು ಹಂತದಲ್ಲಿ ತನ್ನದೇ ಅಹಂಕಾರದ ಭಾರಕ್ಕೆ ಸಿಲುಕಿ ಜೀವನವೆಂಬ ಸಾಗರದಲ್ಲಿ ಮುಳುಗುವುದು ಅನಿವಾರ್ಯ.
ವಿನಯವು ಮನುಷ್ಯನಿಗೆ ಸಿಗುವ ಅತ್ಯಂತ ದೊಡ್ಡ ಆಭರಣ. ಒಂದು ಮರವು ಫಲಭರಿತವಾದಷ್ಟೂ ಹೇಗೆ ಬಾಗುತ್ತದೆಯೋ, ಜ್ಞಾನಿಯಾದವನೂ ಅಷ್ಟೇ ವಿನಯವಂತನಾಗಿರುತ್ತಾನೆ. ಅಹಂಕಾರವು ಕೇವಲ ಮನುಷ್ಯನ ದೃಷ್ಟಿಕೋನವನ್ನು ಕಿರಿದುಗೊಳಿಸುವುದಲ್ಲದೆ, ಅವನ ವಿವೇಚನಾ ಶಕ್ತಿಯನ್ನು ಮರೆಮಾಚುತ್ತದೆ. ತನ್ನ ಬಲವನ್ನು ಅತಿಯಾಗಿ ನಂಬಿದಾಗ ಎದುರಾಳಿಯ ಶಕ್ತಿ ಅಥವಾ ಪರಿಸ್ಥಿತಿಯ ಗಂಭೀರತೆ ಅರ್ಥವಾಗುವುದಿಲ್ಲ. ಆಗತಾನೆ ಮನುಷ್ಯ ತಪ್ಪು ಹೆಜ್ಜೆಗಳನ್ನು ಇಡಲು ಪ್ರಾರಂಭಿಸುತ್ತಾನೆ. ನಾವು ಬಲಶಾಲಿಗಳಾಗಿರಬಹುದು, ಆದರೆ ಆ ಬಲದ ಮದವು ನಮ್ಮನ್ನು ಮಣ್ಣುಗೂಡಿಸುವುದರಲ್ಲಿ ಸಂಶಯವಿಲ್ಲ. ಅಹಂಕಾರವು ವ್ಯಕ್ತಿಯನ್ನು ಏಕಾಂಗಿಯಾಗಿಸುತ್ತದೆ, ಏಕೆಂದರೆ ಅದು ಇತರರ ಪ್ರೀತಿ ಮತ್ತು ಗೌರವವನ್ನು ದೂರವಿಡುತ್ತದೆ.
ನೈಜ ಶಕ್ತಿಯು ಇರುವುದು ಅಹಂಕಾರದ ನಿರ್ಮೂಲನೆಯಲ್ಲಿದೆ. ನೀರು ತೇಲುತ್ತದೆ, ಏಕೆಂದರೆ ಅದು ತನಗಾಗಿ ಯಾವುದೇ ನಿರ್ದಿಷ್ಟ ಆಕಾರವನ್ನಾಗಲಿ, ಭಾರವನ್ನಾಗಲಿ ಇಟ್ಟುಕೊಂಡಿರುವುದಿಲ್ಲ.
ಸವಾಲುಗಳು ಎದುರಾದಾಗ ಅಹಂಕಾರವನ್ನು ಬದಿಗೊತ್ತಿ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಅವಶ್ಯಕ. ನಮ್ಮ ಬಲವು ಪ್ರದರ್ಶನಕ್ಕಲ್ಲ, ಬದಲಾಗಿ ಇತರರ ಬಾಳನ್ನು ಬೆಳಗಲು ಬಳಕೆಯಾಗಬೇಕು. ಅಹಂಕಾರವನ್ನು ಕಳಚಿ ಇಟ್ಟು ವಿನಯದ ಹಾದಿಯಲ್ಲಿ ಸಾಗಿದಾಗ ಮಾತ್ರ, ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ತೇಲುವ ತಾಕತ್ತು ನಮಗೆ ಬರುತ್ತದೆ. ನೆನಪಿರಲಿ, ವಿನಯವಿದ್ದವನು ಎಂದಿಗೂ ಸೋಲಲಾರ, ಆದರೆ ಅಹಂಕಾರದ ಭಾರ ಹೊತ್ತವನು ಗೆದ್ದರೂ ಅದು ಶಾಶ್ವತವಲ್ಲ.
✍ ಲಲಿತಶ್ರೀ ಪ್ರೀತಂ ರೈ