ಜೀವನವೆಂಬುದು ಒಂದು ನಿರಂತರ ಓಟ. ಹುಟ್ಟಿನ ಉಸಿರು ಗಾಳಿಯಲ್ಲಿ ಸೇರಿದ ಮರುಕ್ಷಣವೇ ಈ ಓಟ ಆರಂಭವಾಗುತ್ತದೆ. ಹರಿಯುವ ನದಿಗೆ ತಡೆ ಇಲ್ಲದಂತೆ, ಮನುಷ್ಯನ ಆಸೆ ಮತ್ತು ಅರಸುವಿಕೆಗೂ ಕೊನೆಯಿಲ್ಲ. ಶಾಲೆಯ ಮೆಟ್ಟಿಲು ಹತ್ತಿದಾಗಿನಿಂದ, ಅಂಕಗಳ ಸ್ಪರ್ಧೆ, ಪದವಿಗಳ ಬೆನ್ನಟ್ಟುವಿಕೆ, ನಂತರ ಉದ್ಯೋಗ, ಹಣ, ಅಂತಸ್ತು ಮತ್ತು ಅಧಿಕಾರದ ಬೆನ್ನ ಹಿಂದೆ ಬಿದ್ದಾಗ ಸಮಯವೇ ಕೈ ಜಾರಿದ ಅರಿವಾಗುವುದಿಲ್ಲ. ನಾವೆಲ್ಲರೂ ಯಾವುದೋ ಒಂದು ಅಗೋಚರ ಗುರಿಯತ್ತ ಕಣ್ಣುಮುಚ್ಚಿ ಓಡುತ್ತಿದ್ದೇವೆ, ಆದರೆ ಆ ಗುರಿ ತಲುಪಿದಾಗ ಸಿಗುವ ಸಮಾಧಾನ ಮಾತ್ರ ಮರೀಚಿಕೆಯಂತೆಯೇ ದೂರ ಸರಿಯುತ್ತಿರುತ್ತದೆ.
ಒಬ್ಬ ವ್ಯಕ್ತಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಬಾಲ್ಯದಲ್ಲಿ ಆತ ತನ್ನ ಆಟಿಕೆಗಳಿಗಾಗಿ ಹಂಬಲಿಸುತ್ತಿದ್ದ. ಯೌವನಕ್ಕೆ ಬಂದಾಗ, "ಒಂದು ಒಳ್ಳೆ ಕೆಲಸ ಸಿಕ್ಕಿದರೆ ಸಾಕು, ಜೀವನ ಸಾರ್ಥಕ" ಎಂದುಕೊಂಡನು. ಉದ್ಯೋಗ ಸಿಕ್ಕಿದ ಮೇಲೆ, "ಈಗ ಸ್ವಲ್ಪ ಹಣ ಬೇಕು, ಸ್ವಂತ ಮನೆಯಿದ್ದರೆ ಜೀವನ ಪರಿಪೂರ್ಣ" ಎಂದುಕೊಂಡನು. ಮನೆ ಕಟ್ಟಿದ ಮೇಲೆ, "ಈಗ ಗೌರವ ಮತ್ತು ಅಂತಸ್ತು ಮುಖ್ಯ, ಸಮಾಜದಲ್ಲಿ ಒಂದು ಸ್ಥಾನ ಬೇಕು" ಎಂದು ಓಡಿದನು. ಹೀಗೆ ಹಂತ ಹಂತವಾಗಿ ಸಾಗುತ್ತಾ, ದಶಕಗಳು ಉರುಳಿದ ಮೇಲೆ ಒಂದು ದಿನ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ, ಕೂದಲು ಬೆಳ್ಳಗಾಗಿರುತ್ತದೆ, ಕಣ್ಣಿನ ಸುತ್ತ ಸುಕ್ಕುಗಳು ಮೂಡಿರುತ್ತವೆ. ಅಂದು ಆತ ಗಳಿಸಿದ ಎಲ್ಲವೂ ಕೈಯಲ್ಲಿದೆ, ಆದರೆ ಆ ವಸ್ತುಗಳ ಜೊತೆಗೆ ಆನಂದಿಸಲು ಬೇಕಾದ ಆ 'ಮನಸ್ಸು' ಮತ್ತು 'ಸಮಯ' ಮಾತ್ರ ಉಳಿದಿರುವುದಿಲ್ಲ. ಆತ ಗೆದ್ದಿದ್ದಾನೆ, ಆದರೆ ಅಂತರಾಳದಲ್ಲಿ ಎಲ್ಲೋ ಒಂದು ಕಡೆ 'ಏನೋ ಕಳೆದುಕೊಂಡೆ' ಎಂಬ ಅತೃಪ್ತಿ ಕಾಡುತ್ತಲೇ ಇರುತ್ತದೆ.
ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಪೂರ್ಣರು.
ಗೆಳೆತನದ ಸೋಗಿನಲ್ಲಿ ಸ್ವಾರ್ಥವನ್ನು ಹುಡುಕುತ್ತೇವೆ, ಪ್ರೀತಿಯ ಹೆಸರಿನಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತೇವೆ. ಕನಸುಗಳ ಬೆನ್ನತ್ತಿ ಹೋಗುವಾಗ, ನಮ್ಮ ಪಕ್ಕದಲ್ಲೇ ಇರುವ ಪ್ರೀತಿಪಾತ್ರರ ಮುಖದ ಮೇಲಿನ ನಗುವನ್ನು ಗಮನಿಸಲು ಮರೆತುಬಿಡುತ್ತೇವೆ. ಕೊನೆಗೆ ಸಾವಿನ ಅಂಚಿನಲ್ಲಿ ನಿಂತಾಗ ಅರಿವಾಗುವುದು ಇಷ್ಟೇ—ನಾವು ಗಳಿಸಿದ ಅಸ್ತಿ-ಅಂತಸ್ತುಗಳು ನಮ್ಮೊಂದಿಗೆ ಬರುವುದಿಲ್ಲ, ನಾವು ಅನುಭವಿಸಿದ ಕ್ಷಣಗಳು ಮತ್ತು ಹಂಚಿಕೊಂಡ ಪ್ರೀತಿ ಮಾತ್ರ ಉಳಿಯುತ್ತದೆ ಎಂದು.ಆದರೆ ಆ ಸತ್ಯ ಅರಿವಾಗುವ ಹೊತ್ತಿಗೆ, ಓಟದ ದಣಿವು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುತ್ತದೆ.
ಯಾವುದೇ ಮನುಷ್ಯನ ಜೀವನದ ಪೂರ್ಣತೆ ಎನ್ನುವುದು ಹೊರಗಿನ ಸಂಪಾದನೆಯಲ್ಲಿಲ್ಲ, ಅದು ಒಳಗಿನ ಸಮಾಧಾನದಲ್ಲಿದೆ. ನಾವು ಓಡುವುದು ಎಲ್ಲಿಗೆ? ಯಾವುದೋ ಒಂದು ಕಲ್ಪನೆಯ 'ಪರಿಪೂರ್ಣತೆ'ಗೆ. ಆದರೆ ಜೀವನವೇ ಒಂದು ಅಪೂರ್ಣ ಚಿತ್ರ. ಆ ಅಪೂರ್ಣತೆಯಲ್ಲೇ ಅಂದವಿದೆ, ಅದನ್ನೇ ಒಪ್ಪಿಕೊಂಡು ಬದುಕುವುದರಲ್ಲಿ ನಿಜವಾದ ಸಾರ್ಥಕತೆ ಇದೆ. ಕೊನೆಯ ಘಟ್ಟದಲ್ಲಿ ನಾವು ನಿಲ್ಲುವಾಗ, ನಮ್ಮ ಕೈಯಲ್ಲಿ ಹಿಡಿದಿರುವ ಆಸ್ತಿಯ ರಾಶಿಗಿಂತ, ಕಣ್ಣು ಮುಚ್ಚುವ ಮುನ್ನ ನಮ್ಮ ತುಟಿಯ ಮೇಲೆ ಮೂಡುವ ಒಂದು ಸಣ್ಣ ತೃಪ್ತಿಯ ನಗು ಮುಖ್ಯ. ಆ ನಗು ಮೂಡಬೇಕಾದರೆ, ನಾವು ಓಡುವುದನ್ನು ನಿಲ್ಲಿಸಿ, ಒಮ್ಮೆ ನಿಂತು ಸುತ್ತಲೂ ನೋಡಬೇಕು. ನಮ್ಮವರನ್ನು ಅಪ್ಪಿಕೊಳ್ಳಬೇಕು. ಪ್ರತಿಯೊಂದು ಸಣ್ಣ ಸಂತೋಷವನ್ನು ಆಸ್ವಾದಿಸಬೇಕು. ನಾವು ಯಾರೂ ಪೂರ್ಣರಲ್ಲ, ಆದರೆ ನಮ್ಮ ನಮ್ಮ ಅಸಂಪೂರ್ಣತೆಯಲ್ಲೇ ಸುಂದರವಾದ ಬದುಕನ್ನು ಕಟ್ಟಿಟ್ಟುಕೊಳ್ಳುವ ಅವಕಾಶವಂತೂ ಖಂಡಿತವಾಗಿಯೂ ನಮ್ಮ ಕೈಯಲ್ಲೇ ಇದೆ.
✍ ಲಲಿತಶ್ರೀ ಪ್ರೀತಂ ರೈ