ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ‘ಬದುಕುವುದು’ ಎಂದರೆ ಕೇವಲ ಉಸಿರಾಡುವುದಲ್ಲ, ಅದು ನಿರಂತರ ಓಟದ ಮ್ಯಾರಥಾನ್‌ನಂತೆ ಪರಿಣಮಿಸಿದೆ. ಬೆಳಗಿನ ಸೂರ್ಯೋದಯದಿಂದ ರಾತ್ರಿಯ ಕತ್ತಲವರೆಗೆ ತಂತ್ರಜ್ಞಾನದ ಪರದೆಯ ಮುಂದೆ ಕುಳಿತು ಕೆಲಸ ಮಾಡುವ ನಾವು, ನಮ್ಮ ಕೆಲಸದ ಒತ್ತಡವನ್ನು ಮನೆಗೂ ಹೊತ್ತು ತರುತ್ತಿದ್ದೇವೆ. ಒಂದು ಕಾಲದಲ್ಲಿ ಕಚೇರಿಯ ಕೆಲಸ ಕಚೇರಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಇಂದು ಸ್ಮಾರ್ಟ್‌ಫೋನ್‌ಗಳು ನಮ್ಮ ಕೈಯಲ್ಲೇ ಕಚೇರಿಯನ್ನು ಹೊತ್ತು ತಿರುಗುವಂತೆ ಮಾಡಿವೆ. ಈ ಅವಿಶ್ರಾಂತ ಓಟದಲ್ಲಿ ನಮ್ಮ ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಜೀವನದ ಅಸ್ತಿತ್ವ ಅಳಿಸಿ ಹೋಗುತ್ತಿರುವುದು ವಿಷಾದನೀಯ. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಇಂದು ಕೇವಲ ಆಯ್ಕೆಯಾಗಿ ಉಳಿದಿಲ್ಲ, ಅದು ಆರೋಗ್ಯಕರ ಬದುಕಿಗಾಗಿ ಅನಿವಾರ್ಯತೆಯಾಗಿದೆ.
ಕೆಲಸದ ಒತ್ತಡ ಹೆಚ್ಚಾದಾಗ ಮಿದುಳು ನಿರಂತರವಾಗಿ ಎಚ್ಚರಿಕೆಯ ಸ್ಥಿತಿಯಲ್ಲಿರುತ್ತದೆ, ಇದರಿಂದಾಗಿ ಮಾನಸಿಕ ಆಯಾಸ ಮತ್ತು ಖಿನ್ನತೆ ಉಂಟಾಗುವುದು ಸಹಜ. ಇಂತಹ ಸಮಯದಲ್ಲಿ ನಾವು ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಒತ್ತಡದಿಂದ ಹೊರಬರಬಹುದು. ಕೆಲಸದ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು, ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಮಾಡುವುದು ಮತ್ತು ಕೆಲಸದ ಅವಧಿಯ ನಂತರ ಡಿಜಿಟಲ್ ಸಾಧನಗಳಿಂದ ದೂರ ಉಳಿಯುವ 'ಡಿಜಿಟಲ್ ಡಿಟಾಕ್ಸ್' ಅನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ಡಿಜಿಟಲ್ ಡಿಟಾಕ್ಸ್ ಎಂದರೆ ಕೇವಲ ಫೋನ್ ಸ್ವಿಚ್ ಆಫ್ ಮಾಡುವುದಲ್ಲ; ಬದಲಾಗಿ ಪರದೆಯ ಬೆಳಕಿನಿಂದ ಹೊರಬಂದು ಪ್ರಕೃತಿಯೊಂದಿಗೆ ಸಮಯ ಕಳೆಯುವುದು, ಪುಸ್ತಕ ಓದುವುದು, ಕುಟುಂಬದ ಸದಸ್ಯರೊಂದಿಗೆ ಮುಖಾಮುಖಿ ಮಾತನಾಡುವುದು ಮತ್ತು ತನ್ನ ನೆಚ್ಚಿನ ಹವ್ಯಾಸಗಳಿಗೆ ಸಮಯ ಮೀಸಲಿಡುವುದಾಗಿದೆ. ನಾವು ಪರದೆಯ ಮೇಲೆ ಕಳೆಯುವ ಪ್ರತಿ ನಿಮಿಷವೂ ನಮ್ಮ ಮೆದುಳನ್ನು ಉತ್ತೇಜಿಸುತ್ತಲೇ ಇರುತ್ತದೆ, ಅದಕ್ಕೆ ವಿಶ್ರಾಂತಿ ನೀಡಲು ಡಿಜಿಟಲ್ ಜಗತ್ತಿನಿಂದ ಕನಿಷ್ಠ ಒಂದು ಗಂಟೆಯಾದರೂ ದೂರವಿರುವುದು ಅವಶ್ಯಕ.
ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯದ ಕುರಿತು ಮುಕ್ತ ಸಂವಾದಗಳು ನಡೆಯದಿರುವುದು ದೊಡ್ಡ ಸಮಸ್ಯೆಯಾಗಿದೆ. ಒತ್ತಡವನ್ನು ಅನುಭವಿಸುವುದು ದೌರ್ಬಲ್ಯವಲ್ಲ, ಅದು ಮಾನವ ಸಹಜ ಪ್ರತಿಕ್ರಿಯೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಕಚೇರಿಯ ಕೆಲಸದ ಹೊರೆಯನ್ನು ಹಂಚಿಕೊಳ್ಳುವುದು, ನಕಾರಾತ್ಮಕ ಆಲೋಚನೆಗಳನ್ನು ಸ್ನೇಹಿತರು ಅಥವಾ ಆಪ್ತರೊಂದಿಗೆ ಹಂಚಿಕೊಳ್ಳುವುದು ಮತ್ತು ಅಗತ್ಯವಿದ್ದರೆ ವೃತ್ತಿಪರ ಸಲಹೆ ಪಡೆಯಲು ಹಿಂಜರಿಯದಿರುವುದು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಕೇವಲ ಉತ್ಪಾದಕತೆಯನ್ನು ಅಳೆಯುವುದಕ್ಕಿಂತ, ಕೆಲಸ ಮಾಡುವವರ ಮಾನಸಿಕ ಕ್ಷೇಮವನ್ನು ಗೌರವಿಸುವ ಸಂಸ್ಕೃತಿ ಬೆಳೆಯಬೇಕು.
ಅಂತಿಮವಾಗಿ ಹೇಳುವುದಾದರೆ ನಾವು ಕೆಲಸ ಮಾಡುವುದು ಬದುಕುವುದಕ್ಕಾಗಿ, ಕೆಲಸವೇ ಬದುಕುಕಲ್ಲ ಎಂಬ ಸತ್ಯವನ್ನು ಮರೆಯಬಾರದು. ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರುವುದು ಸಾಧನೆಯಾಗಬಹುದು, ಆದರೆ ಅದನ್ನು ತಲುಪುವಾಗ ಕಳೆದುಕೊಂಡ ನೆಮ್ಮದಿ ಮತ್ತು ಆರೋಗ್ಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ನಮ್ಮ ಆದ್ಯತೆಗಳನ್ನು ಮರುಪರಿಶೀಲಿಸಿಕೊಳ್ಳಬೇಕು. ವಾರಾಂತ್ಯಗಳಲ್ಲಿ ಕೆಲಸದ ಆಲೋಚನೆಯನ್ನು ಪಕ್ಕಕ್ಕಿಟ್ಟು ಪ್ರಕೃತಿಯ ಮಡಿಲಲ್ಲಿ ಅಥವಾ ಮನೆಯವರೊಂದಿಗೆ ಸಮಯ ಕಳೆದಾಗ ಲಭಿಸುವ ಮಾನಸಿಕ ತೃಪ್ತಿಯೇ ನಿಜವಾದ ಯಶಸ್ಸು. ಇಂದಿನ ಈ ವೇಗದ ಜಗತ್ತಿನಲ್ಲಿ 'ಬೇಡ' ಎಂದು ಹೇಳುವುದನ್ನು ಕಲಿಯುವುದು ಮತ್ತು ನಮ್ಮ ವೈಯಕ್ತಿಕ ಸಮಯವನ್ನು ಗೌರವಿಸುವುದು ಅತ್ಯಂತ ದೊಡ್ಡ ಕೌಶಲ್ಯವಾಗಿದೆ. ನೆನಪಿಡಿ, ಒಂದು ಸುಸ್ಥಿರ ಮತ್ತು ನೆಮ್ಮದಿಯ ಜೀವನವೇ ದೀರ್ಘಕಾಲಿಕ ವೃತ್ತಿಜೀವನದ ಅಡಿಪಾಯ.
✍ ಲಲಿತಶ್ರೀ ಪ್ರೀತಂ ರೈ