image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ರಾಮೀಣ ಭಾರತದ ಆರ್ಥಿಕ ಕ್ರಾಂತಿಯ ಹರಿಕಾರ: ಕರ್ಮಯೋಗಿ ಮಣಿಭಾಯಿ ದೇಸಾಯಿ

ಗ್ರಾಮೀಣ ಭಾರತದ ಆರ್ಥಿಕ ಕ್ರಾಂತಿಯ ಹರಿಕಾರ: ಕರ್ಮಯೋಗಿ ಮಣಿಭಾಯಿ ದೇಸಾಯಿ

ಭಾರತದ ಸ್ವಾತಂತ್ರ್ಯ ಸಂಗ್ರಾಮವು ಕೇವಲ ಬ್ರಿಟಿಷರನ್ನು ದೇಶದಿಂದ ಓಡಿಸುವುದಕ್ಕೆ ಸೀಮಿತವಾಗಿರಲಿಲ್ಲ; ಅದು ಹಳ್ಳಿಗಳ ಪುನರುತ್ಥಾನದ ಕನಸನ್ನೂ ಹೊಂದಿತ್ತು. ಮಹಾತ್ಮ ಗಾಂಧೀಜಿಯವರ ಆ 'ಗ್ರಾಮ ಸ್ವರಾಜ್ಯ'ದ ಕನಸನ್ನು ನನಸಾಗಿಸಲು ತಮ್ಮ ಇಡೀ ಜೀವನವನ್ನೇ ಧಾರೆ ಎರೆದ ಧೀಮಂತ ವ್ಯಕ್ತಿತ್ವ ಮಣಿಭಾಯಿ ದೇಸಾಯಿ. 1920ರ ಏಪ್ರಿಲ್ 27ರಂದು ಗುಜರಾತ್‌ನ ಸೂರತ್ ಜಿಲ್ಲೆಯ ಕೋಸ್ಮಾಡ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಮಣಿಭಾಯಿ, ಬಾಲ್ಯದಿಂದಲೇ ಶಿಸ್ತು ಮತ್ತು ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡವರು. ಉತ್ತಮ ಶಿಕ್ಷಣ ಪಡೆದಿದ್ದ ಇವರಿಗೆ ಸುಖಜೀವನ ನಡೆಸುವ ಎಲ್ಲಾ ಅವಕಾಶಗಳಿದ್ದವು, ಆದರೆ ದೇಶಪ್ರೇಮದ ಕಿಚ್ಚು ಅವರನ್ನು ಬೇರೆಯದೇ ಹಾದಿಗೆ ಕರೆದೊಯ್ದಿತು.

ಮಣಿಭಾಯಿ ಅವರ ಬದುಕಿನ ಮಹತ್ವದ ತಿರುವು ಬಂದಿದ್ದು 1945ರಲ್ಲಿ. ಆಗಷ್ಟೇ ಪದವಿ ಮುಗಿಸಿದ್ದ ಯುವಕ ಮಣಿಭಾಯಿ ಪುಣೆಯ ಸಮೀಪದ 'ಉರುಳಿ ಕಾಂಚನ್'ನಲ್ಲಿ ಬೀಡುಬಿಟ್ಟಿದ್ದ ಮಹಾತ್ಮ ಗಾಂಧೀಜಿಯವರನ್ನು ಭೇಟಿಯಾದರು. ಗಾಂಧೀಜಿಯವರು ಆ ಗ್ರಾಮದಲ್ಲಿ ನಿಸರ್ಗೋಪಚಾರ ಕೇಂದ್ರವೊಂದನ್ನು ಆರಂಭಿಸಲು ನಿರ್ಧರಿಸಿದ್ದರು. "ನನ್ನೊಂದಿಗೆ ಈ ಗ್ರಾಮ ಸೇವೆಯಲ್ಲಿ ಕೈಜೋಡಿಸುವೆಯಾ?" ಎಂದು ಗಾಂಧೀಜಿ ಕೇಳಿದಾಗ, ಕಿಂಚಿತ್ತೂ ಯೋಚಿಸದೆ ಮಣಿಭಾಯಿ ಸಮ್ಮತಿಸಿದರು. ಅಂದು ಗಾಂಧೀಜಿಯವರ ಮುಂದೆ ಅವರು ಮಾಡಿದ 'ಗ್ರಾಮ ಸೇವೆ'ಯ ಸಂಕಲ್ಪ ಅವರ ಸಾವಿನವರೆಗೂ ಅಚಲವಾಗಿತ್ತು. ಉರುಳಿ ಕಾಂಚನ್ ಎಂಬ ಒಣಭೂಮಿಯ ಹಳ್ಳಿಯನ್ನು ಅವರು ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು. ಆರಂಭದಲ್ಲಿ ಕುಡಿಯುವ ನೀರು, ಸ್ವಚ್ಛತೆ ಮತ್ತು ಶಿಕ್ಷಣದ ಕಡೆಗೆ ಗಮನಹರಿಸಿದ ಅವರು, ನಂತರ ರೈತರ ಬದುಕನ್ನು ಬದಲಿಸಲು ಕೃಷಿಯೇ ಮೂಲಾಧಾರ ಎಂಬುದನ್ನು ಅರಿತರು.

ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಮಣಿಭಾಯಿ ಕಂಡುಕೊಂಡ ದಾರಿ 'ಹೈನುಗಾರಿಕೆ'. ಭಾರತದ ಸ್ಥಳೀಯ ತಳಿಗಳ ಹಸುಗಳು ಕಡಿಮೆ ಹಾಲು ನೀಡುತ್ತಿದ್ದ ಕಾಲವದು. ಇದನ್ನು ಗಮನಿಸಿದ ಮಣಿಭಾಯಿ, ವಿದೇಶಿ ತಳಿಗಳೊಂದಿಗೆ ಸ್ಥಳೀಯ ತಳಿಗಳ ಸಂಕರಣ (Cross-breeding) ಮಾಡುವ ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಕ್ರಾಂತಿಕಾರಿ ಯೋಜನೆ ರೂಪಿಸಿದರು. ಇದಕ್ಕಾಗಿಯೇ 1967ರಲ್ಲಿ 'ಭಾರತೀಯ ಆಗ್ರೋ ಇಂಡಸ್ಟ್ರೀಸ್ ಫೌಂಡೇಶನ್' (BAIF) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಕೇವಲ ಒಂದು ಸಣ್ಣ ಕಚೇರಿಯಿಂದ ಆರಂಭವಾದ ಈ ಸಂಸ್ಥೆ, ಇಂದು ಭಾರತದಾದ್ಯಂತ ಲಕ್ಷಾಂತರ ರೈತರಿಗೆ ತಾಂತ್ರಿಕ ನೆರವು ನೀಡುವ ಬೃಹತ್ ಸಂಘಟನೆಯಾಗಿ ಬೆಳೆದಿದೆ. ಬರಿ ಹೈನುಗಾರಿಕೆ ಮಾತ್ರವಲ್ಲದೆ, ಬರಡು ಭೂಮಿಯಲ್ಲಿ ಹಣ್ಣಿನ ತೋಟಗಳನ್ನು ಬೆಳೆಸುವ 'ವಾಡಿ' ಪದ್ಧತಿಯನ್ನು ಅವರು ಜನಪ್ರಿಯಗೊಳಿಸಿದರು. ಬುಡಕಟ್ಟು ಜನಾಂಗದವರು ಗುಳೇ ಹೋಗುವುದನ್ನು ತಡೆದು, ಅವರ ಕೈಗೆ ಸ್ಥಿರವಾದ ಆದಾಯ ಸಿಗುವಂತೆ ಮಾಡಿದ್ದು ಮಣಿಭಾಯಿ ಅವರ ಸಾಧನೆಯ ಶಿಖರ.
ಮಣಿಭಾಯಿ ದೇಸಾಯಿ ಅವರ ನಿಸ್ವಾರ್ಥ ಸೇವೆಯನ್ನು ಜಗತ್ತು ಗುರುತಿಸಿತು.

1982ರಲ್ಲಿ ಏಷ್ಯಾದ ನೋಬೆಲ್ ಎಂದೇ ಕರೆಯಲ್ಪಡುವ 'ರಾಮನ್ ಮ್ಯಾಗ್ಸೆಸೆ' ಪ್ರಶಸ್ತಿ ಅವರಿಗೆ ಲಭಿಸಿತು. ಅದಕ್ಕೂ ಮುನ್ನವೇ ಭಾರತ ಸರ್ಕಾರ ಇವರಿಗೆ 'ಪದ್ಮಶ್ರೀ' ನೀಡಿ ಗೌರವಿಸಿತ್ತು. ಇಷ್ಟೆಲ್ಲಾ ಸಿದ್ಧಿ-ಪ್ರಸಿದ್ಧಿಗಳ ನಡುವೆಯೂ ಮಣಿಭಾಯಿ ಕೊನೆಯವರೆಗೂ ಸರಳ ಗಾಂಧಿವಾದಿಯಾಗಿಯೇ ಉಳಿದರು. ಅವರ ಜೀವನವೇ ಒಂದು ಸಂದೇಶವಾಗಿತ್ತು. ಸತತ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಹಳ್ಳಿಗಳ ಏಳಿಗೆಗಾಗಿ ಶ್ರಮಿಸಿದ ಈ ಮಹಾನ್ ಚೇತನ 1993ರ ನವೆಂಬರ್ 14ರಂದು ಇಹಲೋಕ ತ್ಯಜಿಸಿತು. ಮಣಿಭಾಯಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಹಚ್ಚಿದ 'ಬೈಫ್' ಎಂಬ ಜ್ಯೋತಿ ಇಂದು ಕೋಟ್ಯಂತರ ರೈತರ ಮನೆಯಲ್ಲಿ ಸಮೃದ್ಧಿಯ ಬೆಳಕನ್ನು ನೀಡುತ್ತಿದೆ. ಗ್ರಾಮೀಣ ಭಾರತದ ನೈಜ ಅಭಿವೃದ್ಧಿಯ ಚರಿತ್ರೆಯಲ್ಲಿ ಮಣಿಭಾಯಿ ದೇಸಾಯಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಉಳಿಯುವಂತದ್ದು.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ