ಹನ್ನೆರಡನೇ ಶತಮಾನದ ಕತ್ತಲಲ್ಲಿ ಮುಳುಗಿದ್ದ ಸಮಾಜಕ್ಕೆ ಜ್ಞಾನದ ಜ್ಯೋತಿಯಾಗಿ ಬಂದವರು ಮಹಾಮಾನವತಾವಾದಿ ಬಸವಣ್ಣನವರು. ಜಾತಿ, ಮತ, ಲಿಂಗ ಭೇದದ ಗೋಡೆಗಳನ್ನು ಕೆಡವಿ, ಮನುಕುಲವೆಲ್ಲ ಒಂದೇ ಎಂದು ಸಾರಿದ ಈ ಕ್ರಾಂತಿಕಾರಿ ಪುರುಷನ ಜನ್ಮದಿನವನ್ನು ನಾವಿಂದು 'ಬಸವ ಜಯಂತಿ'ಯಾಗಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ.
ಬಸವಣ್ಣನವರು ಕೇವಲ ಒಬ್ಬ ಧರ್ಮ ಸುಧಾರಕರಲ್ಲ, ಅವರು ವಿಶ್ವದ ಮೊದಲ ಸಂಸತ್ತು ಎನಿಸಿಕೊಂಡ 'ಅನುಭವ ಮಂಟಪ'ದ ರೂವಾರಿ. ಮೇಲು-ಕೀಳೆಂಬ ಭೇದವಿಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಗೌರವ ಸಿಗಬೇಕು ಎಂದು ಪ್ರತಿಪಾದಿಸಿದ ಅವರು, "ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ" ಎಂಬ ವಚನದ ಮೂಲಕ ವಿಶ್ವಬಂಧುತ್ವದ ಅತ್ಯುನ್ನತ ಸಂದೇಶವನ್ನು ಸಾರಿದರು. ಪರಕೀಯ ಭಾವನೆಯನ್ನು ತೊರೆದು ಎಲ್ಲರನ್ನೂ ಅಪ್ಪಿಕೊಳ್ಳುವ ಗುಣವೇ ನಿಜವಾದ ಧರ್ಮ ಎಂಬುದು ಅವರ ಬೋಧನೆಯ ಸಾರವಾಗಿತ್ತು.
ಬಸವಣ್ಣನವರು ಜಗತ್ತಿಗೆ ನೀಡಿದ ಅತ್ಯಂತ ದೊಡ್ಡ ಕೊಡುಗೆ ಎಂದರೆ 'ಕಾಯಕ' ತತ್ವ. ಸೋಮಾರಿತನವನ್ನು ವಿರೋಧಿಸಿ, ಪ್ರತಿಯೊಬ್ಬರೂ ಬೆವರು ಸುರಿಸಿ ದುಡಿಯಬೇಕು ಮತ್ತು ಆ ದುಡಿಮೆಯಲ್ಲಿ ದೈವತ್ವವನ್ನು ಕಾಣಬೇಕು ಎಂದು ಬೋಧಿಸಿದ ಅವರು, 'ಕಾಯಕವೇ ಕೈಲಾಸ' ಎಂಬ ಮಂತ್ರವನ್ನು ನೀಡಿದರು. ದಾಸೋಹದ ಮೂಲಕ ಹಂಚಿ ತಿನ್ನುವ ಸಂಸ್ಕೃತಿಯನ್ನು ಬೆಳೆಸಿದ ಅವರು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಶಿಸ್ತು ಮತ್ತು ನೈತಿಕತೆಯನ್ನು ತಮ್ಮ ವಚನಗಳಲ್ಲಿ ಅತ್ಯಂತ ಸರಳವಾಗಿ ಮೈಗೂಡಿಸಿದ್ದರು. "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವನನೊಲಿಸುವ ಪರಿ" ಎನ್ನುವ ಅವರ ಮಾತುಗಳು ಇಂದಿಗೂ ಮನುಷ್ಯನ ನೈತಿಕ ಬದುಕಿಗೆ ದಾರಿದೀಪವಾಗಿವೆ.
ಧರ್ಮ ಮತ್ತು ಭಕ್ತಿಯನ್ನು ಶ್ರೀಮಂತರ ಸ್ವತ್ತಾಗಿಸದೆ ಸಾಮಾನ್ಯ ಜನರಿಗೂ ತಲುಪುವಂತೆ ಮಾಡಿದ ಕೀರ್ತಿ ಬಸವಣ್ಣನವರದ್ದು. ಕ್ಲಿಷ್ಟಕರವಾದ ಸಂಸ್ಕೃತ ಭಾಷೆಯಲ್ಲಿದ್ದ ವಿಚಾರಗಳನ್ನು ಜನಸಾಮಾನ್ಯರ ಆಡುಭಾಷೆಯಾದ ಕನ್ನಡದಲ್ಲಿ 'ವಚನ'ಗಳ ರೂಪದಲ್ಲಿ ಹರಿಸಿದರು. "ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯ? ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ" ಎನ್ನುವ ಮೂಲಕ ಭಕ್ತಿಯೆಂದರೆ ಆಡಂಬರವಲ್ಲ, ಅದು ಅಂತರಾಳದ ಪವಿತ್ರತೆ ಎಂದು ಸಾರಿದರು. ಸ್ತ್ರೀ ಸಮಾನತೆಗಾಗಿ ಅವರು ಧ್ವನಿ ಎತ್ತಿ, ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ನೀಡಿ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದರು.
ಬಸವಣ್ಣನವರ ತತ್ವಗಳು ಕೇವಲ ಒಂದು ಧರ್ಮಕ್ಕೆ ಅಥವಾ ವರ್ಗಕ್ಕೆ ಸೀಮಿತವಾದುದಲ್ಲ, ಅವು ಇಡೀ ಮನುಕುಲಕ್ಕೆ ಸೇರಿದ ಅಮೂಲ್ಯ ಆಸ್ತಿ. ಇಂದು ಜಗತ್ತು ಎದುರಿಸುತ್ತಿರುವ ಅಶಾಂತಿ, ತಾರತಮ್ಯ ಮತ್ತು ಅಸಮಾನತೆಗಳಿಗೆ ಬಸವಣ್ಣನವರ ವಿಚಾರಧಾರೆಗಳೇ ಸಂಜೀವಿನಿಯಂತಿವೆ. ಅವರ ಜನ್ಮದಿನದ ಈ ಸಂದರ್ಭದಲ್ಲಿ ಬಸವಣ್ಣನವರ ಸಮಾನತೆಯ ಹಾದಿಯಲ್ಲಿ ನಡೆಯುವ ಮತ್ತು ಅವರ ವಚನಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ. ಅವರ ವಿಚಾರಗಳು ನಮ್ಮ ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಸದಾ ಜೀವಂತವಾಗಿರಿಸಲಿ.
ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು...
✍ಲಲಿತಶ್ರೀ ಪ್ರೀತಂ ರೈ