ಎಲ್ಲರನ್ನೂ ಪ್ರೀತಿಸಲು ಕಲಿತಾಗ ಸಿಗುವ ಆನಂದದ ಅನುಭವ ಅತ್ಯದ್ಭುತ. ಪ್ರೀತಿ ಮತ್ತು ಕ್ಷಮೆ ನಮ್ಮ ಮನಸ್ಸಿನ ಭಾರವನ್ನು ಅದೆಷ್ಟೋ ಕಡಿಮೆ ಮಾಡಿ ಬಿಡುತ್ತದೆ. ಅದಕ್ಕೇ ಇರಬೇಕು ಹಿರಿಯರು ಪ್ರೀತಿಗಿಂತ ದೊಡ್ಡ ಪಥ್ಯವಿಲ್ಲ, ಕ್ಷಮೆಗಿಂತ ದೊಡ್ಡ ಶಸ್ತ್ರವಿಲ್ಲ ಎಂದಿದ್ದಾರೆ. ಸಿಟ್ಟು, ಅಸಮಾಧಾನ, ಅಸೂಯೆ, ಅತೃಪ್ತಿಗಳು ಎನ್ನುವ ಅನಗತ್ಯ ಹೊರೆಯನ್ನು ನಮ್ಮ ಮನಸ್ಸಿನಲ್ಲಿ ಹೊತ್ತುಕೊಂಡು ನಾವು ಯಾವಾಗಲೂ ನಡೆಯುತ್ತಿರುತ್ತೇವೆ. ಇದರಿಂದ ನಮ್ಮ ದೇಹವೂ ಹಿಂಸೆ ಪಡುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದ ಜನ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ಕೂಡ ನಾವು ಕಾಣಬಹುದು. ದ್ವೇಷಪೂರಿತ ವರ್ತನೆಗಳಿಂದ ಯಾರಿಗೂ ಲಾಭವಾಗಲು ಸಾಧ್ಯವಿಲ್ಲ. ಸೇಡು ತೀರಿಸುವ ಭರದಲ್ಲಿ ತಮ್ಮನ್ನು ತಾವು ಹಿಂಸಿಸಿಕೊಳ್ಳುವವರು ನಮ್ಮ ಮುಂದಿದ್ದಾರೆ. ಕ್ಷೋಭವಿಲ್ಲದ ಮನಸ್ಸಿಗೆ ಕೆಟ್ಟ ವಿಷಯಗಳಿಂದ ಬಾಧೆಯಾಗುವುದಿಲ್ಲ. ಯಾರೆಷ್ಟು ಕಿರುಕುಳ ಕೊಟ್ಟರೂ ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲದಂತೆ ಅದು ಮುನ್ನಡೆಯುತ್ತದೆ. ಯಾರ ಟೀಕೆ, ತಾತ್ಸಾರ, ಕೊಂಕು ಮಾತುಗಳೂ ಅಂತಹ ಮನಸ್ಸಿನವರ ಜೀವನೋತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ. ಮುಂದೆ ಇದೇ ಶುದ್ಧ ಸಂಕಲ್ಪ ನಮ್ಮೊಳಗಿನಿಂದ ಧನಾತ್ಮಕ ತರಂಗಗಳನ್ನು ನಿರಂತರ ಪ್ರವಹಿಸುವಂತೆ ಮಾಡಿ, ಅಂತಿಮವಾಗಿ ನಮ್ಮನ್ನು ಯಶಸ್ಸಿನ ಶಿಖರವನ್ನು ಏರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನಾನೆಂಬ ಸುಳ್ಳಿನ ಆವರಣದಿಂದ ಆವೃತವಾಗಿರುವ ನಮ್ಮ ಮನಸ್ಸು ಸತ್ಯವನ್ನು ಹೊರಗೆಳೆದು ಒಪ್ಪಿಕೊಂಡಾಗ ಮಾತ್ರ ಶುದ್ಧಿಯಾಗಲೂ ಸಾದ್ಯ. ಅಜ್ಞಾನ, ಅಹಂಕಾರವೆಂಬ ಸುಳ್ಳಿನ ಮೋಡ ಮರೆಯಾದಾಗ ಸತ್ಯವೆಂಬ ಸೂರ್ಯನ ಬೆಳಕು ನಮ್ಮೆಲ್ಲರ ಮನಸ್ಸುಗಳನ್ನು ಅರಳಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಇದಕ್ಕೆಲ್ಲ ನಮ್ಮಲ್ಲಿ ಕ್ಷಮೆಯೆಂಬ ಕಲ್ಪವೃಕ್ಷ ಇರಬೇಕು. ಇಲ್ಲವಾದಲ್ಲಿ ಇದೆಲ್ಲಾ ಸಾಧ್ಯವಿಲ್ಲ. ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂದು ನಾವು ಮೆರೆದಾಡಿದಾಗ, ಇತರರಿಂದ ದೊರೆಯಬಹುದಾದ ಸಹಕಾರವೆಂಬ ಸತ್ಯ ಮರಿಚಿಕೆಯಾಗಿ ಬಿಡುತ್ತದೆ. ಯಾರಿಗೂ ಒಂದಿಷ್ಟೂ ತೊಂದರೆಯಾಗದಂತ ಪರೋಪಕಾರದ ಬಾಳು ಸಾರ್ಥಕ ಬದುಕಿನ ಪರಿಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಈ ಪ್ರಕೃತಿಯಲ್ಲಿ ದೊರೆಯುವ ಶುದ್ಧ ನೀರು ನಮ್ಮ ದೇಹದ ಕೊಳೆಯನ್ನು ತೊಳೆಯಬಹುದು. ಆದರೆ ಗುರು ಹಿರಿಯರ ಮುಖೇನ ಒಳ್ಳೆಯ ವಿಚಾರಗಳು ಮಾತ್ರ ನಮ್ಮ ಅಂತರAಗದ ಒಳಗೆ ಸೇರಿದಾಗ ಅಜ್ಞಾನ ಅಹಂಕಾರಗಳು ದೂರವಾಗಲು ಸಾಧ್ಯ. ಜೀವನದಲ್ಲಿ ಅನೇಕ ಸಮಸ್ಯೆಗಳು ಒಂದೇ ಸಲ ಭಾದಿಸಿದಾಗ ನಮ್ಮ ಮನಸ್ಸು ಪ್ರಕ್ಷುಬ್ದವಾಗುವುದು ಮಾತ್ರವಲ್ಲದೆ ನಿಸ್ತೇಜವಾಗುತ್ತದೆ. ಮನಸ್ಸು ಉದ್ವೇಗಕ್ಕೊಳಗಾದಾಗ ಸರಿಯಾಗಿ ಯೋಚಿಸಲು ಸಾದ್ಯವಿಲ್ಲ. ಅಂತಹ ಸಮಯದಲ್ಲಿ ಜೀವನದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುವುದೂ ಕೂಡ ಕಷ್ಟವಾಗಬಹುದು. ನಮ್ಮ ಮನಸ್ಸು ಶಾಂತವಾಗಿದ್ದಾಗ ಮಾತ್ರ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅದರಿಂದ ಮಾತ್ರ ಸರಿ ದಾರಿಗೆ ಕೊಂಡೊಯ್ಯಲು ಸಾಧ್ಯ. ಸಾಧನೆಯೆಂಬುವುದು ಯಾವಾಗಲೂ ತಾಳ್ಮೆ, ಕ್ಷಮೆ ಇರುವವರ ಸೊತ್ತು. ಕೋಪಿಷ್ಟರಿಗೆ ಇದು ಸುಲಭದಲ್ಲಿ ಸಿಗಲು ಸಾಧ್ಯವಿಲ್ಲ. ಪರಿಶುದ್ಧವಾದ ಸಂಕಲ್ಪ ಅಂತರಂಗದಲ್ಲಿ ಮೂಡಬೇಕಾದರೆ ಮನಸ್ಸು ಶುದ್ಧವಾಗಿರಬೇಕು, ಕಳಂಕ ರಹಿತವಾಗಿರಬೇಕು. ಮತ್ತು ವಿಶಾಲವಾಗಿರಬೇಕು. ವಿಶಾಲವಾದ ಜಮೀನಿನಲ್ಲಿ ಚಿಗುರೊಡೆದ ಆಲದ ಗಿಡ ಮಾತ್ರ ವಿಸ್ತಾರವಾಗಿ ಬೆಳೆದು ನಿಲ್ಲಬಲ್ಲದು. ಅದೆ ಸಂಕುಚಿತ ಸ್ಥಳದಲ್ಲಿ ಬೆಳೆದ ಗಿಡ, ವಿಸ್ತಾರವಾಗಿ ಬೆಳೆದಗಿಡದಂತೆ ಬೆಳೆಯಲು ಸಾದ್ಯವಿಲ್ಲ. ನಮ್ಮ ಮನಸ್ಸು ಕೂಡ ಹಾಗೆ, ಸಂಕುಚಿತವಾದ ಮನಸ್ಸು ತನಗೂ ಅಥವಾ ಇತರರಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಅನೇಕ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ಸರಿಯಾದ ತೀರ್ಮಾನವೇ ನಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಅವಸರದ ಮತ್ತು ತಪ್ಪಾದ ಆಯ್ಕೆ ಜೀವನದಲ್ಲಿ ನೋವುಂಟು ಮಾಡುತ್ತದೆ. ಆದ್ದರಿಂದ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ನಾವು ಸಾಕಷ್ಟು ತಾಳ್ಮೆ, ಸಂಯಮದಿಂದ ಮುನ್ನಡೆಯಬೇಕು. ಸಾವಿರಾರು ಬಿದಿರುಗಳ ನಡುವೆ ಉತ್ತಮವಾದದ್ದನ್ನು ಆಯ್ದು ಕೊಂಡಾಗ ಮಾತ್ರ ಒಳ್ಳೆಯ ಸ್ವರವನ್ನು ಹೊರಡಿಸುವ ಕೊಳಲು ಸಿದ್ದವಾಗಲು ಸಾದ್ಯ. ಇಚ್ಛಾಶಕ್ತಿಯೆನ್ನುವುದು ಕೇವಲ ಬೇಕೆ ಬೇಕೆನ್ನುವ ಆಗ್ರಹವಾಗಿರಬಾರದು. ಇದು ಹೃದಯಾಂತರಾಳದಲ್ಲಿ ಮೂಡುವ ದೈವಿಕ ಪ್ರಚೋದನೆಯಾಗಿರಬೇಕು. ಶುದ್ಧ ಮನಸ್ಸಿನೊಳಗೆ ಮಾತ್ರ ಶುದ್ಧ ಸಂಕಲ್ಪಗಳು ಸಾಕಾರಗೊಳ್ಳುತ್ತದೆ. ಹಾಗಾಗಿ ಯಾವಾಗಲೂ ಮನುಷ್ಯರಲ್ಲಿ ಅಥವಾ ಪ್ರಾಣಿಗಳಲ್ಲಿ ನಮಗೆ ಪ್ರೀತಿಯಿರಬೇಕು. ನಮಗೆ ಯಾರಾದರೂ ಕೆಟ್ಟದ್ದನ್ನು ಬಯಸಿದರೆಂದು ಅವರ ಮೇಲೆ ಸೇಡು ತೀರಿಸಿಕೊಲ್ಳಲು ಹವಣಿಸುವ ಬದಲು ಅವರನ್ನು ಕ್ಷಮಿಸಿ ಬಿಡಬೇಕು. ಆಗ ಮಾತ್ರ ನಮ್ಮ ಮನಸ್ಸು ಕೂಡ ಪ್ರಶಾಂತವಾಗಿರಲು ಸಾಧ್ಯ. ಪ್ರೀತಿ, ಪ್ರೇಮದ ಜೊತೆಗೆ ತಾಳ್ಮೆ ಮತ್ತು ಕ್ಷಮೆಯನ್ನು ಮೈಗೂಡಿಸಿಕೊಂಡು ಮುಂದಿನ ಪೀಳೀಗಗೆ ದಾರಿದೀಪವಾಗೋಣ...