image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮದುವೆ ನಿಮ್ಮ ಕನಸಿಗೆ ಬೇಲಿಯಾಗದಿರಲಿ...

ಮದುವೆ ನಿಮ್ಮ ಕನಸಿಗೆ ಬೇಲಿಯಾಗದಿರಲಿ...

ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ವಿಶೇಷವಾದ ಅನುಭಾವ. ಅದರಲ್ಲೂ ಭಾರತೀಯ ಸಂಪ್ರದಾಯದಲ್ಲಿ ಮದುವೆಯಲ್ಲಿ ವಿಶಿಷ್ಟವಾದ ಆಚರಣೆಗಳಿವೆ. ಆ ಆಚರಣೆಯು ಒಂದು ಗಂಡು ಮತ್ತು ಹೆಣ್ಣಿನ ಸಂಬಂದಕ್ಕೆ ಕಾನೂನಾತ್ಮಕ ಅರ್ಥನೂ ಹೌದು. ಮದುವೆ ಒಂದು ಅವಿನಾಭಾವ ಸಂಬಂದಕ್ಕೆ ನಾಂದಿಯೂ ಎನ್ನಬಹುದು. ಪ್ರೀತಿ, ಅನು ಸಂಧಾನ, ವಾತ್ಸಲ್ಯ ಹೀಗೆ ಎರಡು ಜೀವಗಳು ಜೀವನ ಪೂರ್ತಿ ಜೊತೆಗಿರಲು ಮದುವೆಯೇ ಸೇತುವೆಯಾಗುತ್ತದೆ. ಮದುವೆ ಹೆಚ್ಚಾಗಿ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಇದ್ದಂತೆ ಗಾಂದರ್ವ ವಿವಾಹಕ್ಕೆ ಈಗ ಬೆಲೆಯಿಲ್ಲ. ಅದು ಇಂದು ಅನೈತಿಕವಾಗಿ ಬಿಡುತ್ತದೆ. ಇಂದು ಪ್ರೇಮ ವಿವಾಹಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರತಿಯೊಬ್ಬನು ತನ್ನ ಮದುವೆಯ ಬಗ್ಗೆ ಕನಸು ಕಟ್ಟಿ ಕೊಂಡಿರುತ್ತಾನೆ. ಒಬ್ಬೊಬ್ಬರದು ಒಂದೊಂದು ತರನಾದ ವಿಚಿತ್ರ ಕನಸುಗಳು ಎಂದರೆ ತಪ್ಪಾಗಲಾರದು. ಕೆಲವು ಸಲ ಮದುವೆಯಿಂದ ತನ್ನ ಜೀವನದ ಸಾಧನೆಗೆ ಅಡ್ಡಿಯಾಗಬಹುದು ಎಂದು ಭಾವಿಸುವವರು ಇದ್ದಾರೆ. ಅದಕ್ಕೆ ಕಾರಣ ಮದುವೆಯ ನಂತರ ಹೆಚ್ಚಾಗುವ ಜವಬ್ಧಾರಿಯ ಹೊರೆ ಇರಬಹುದೇನೋ. ಅದರಲ್ಲಿಯೂ ಹೆಣ್ಣು ಮಕ್ಕಳು ಮದುವೆಯಾದರೆ ಅಲ್ಲಿಗೆ ಮುಗಿಯಿತು, ಅತ್ತೆ, ಮಾವ ಗಂಡ, ಮಕ್ಕಳು ಎಲ್ಲಾ ಜವಾಬ್ಧಾರಿಗಳನ್ನು ಹೊತ್ತುಕೊಂಡು ತಮ್ಮ ಕನಸುಗಳನ್ನು ಮೂಟೆ ಕಟ್ಟಿ ಬಿಸಾಕಿದವರೆ ಹೆಚ್ಚು ಎಂದರೆ ತಪ್ಪಾಗಲಾರದು. ಎಷ್ಟೋ ಸಲ ಅಮ್ಮಂದಿರು ತನ್ನ ಮಕ್ಕಳಲ್ಲಿ ಅವರ ಕನಸನ್ನು ಜೀವಂತವಾಗಿರಿಸಲು ಪ್ರಯತ್ನಸುವುದನ್ನು ಕಾಣಬಹುದು. ಕೆಲವು ಕಡೆ ಗಂಡ ಹೆಂಡಿರಲ್ಲಿ ಅವರ ಕನಸುಗಳನ್ನು ನನಸಿನತ್ತ ಕೊಂಡೊಯ್ಯಲು ಅವಕಾಶಗಳಿರುತ್ತದೆ. ಆದರೆ ಹೆಚ್ಚಿನ ಕುಟುಂಬದಲ್ಲಿ ಹೆಣ್ಣಿಗೆ ಮದುವೆ ಎನ್ನುವುದು ಕನಸಿಗೆ ಬೇಲಿಯಾಗಿರುವ ನಿದರ್ಶನಗಳು ಹೆಚ್ಚಾಗಿರುತ್ತದೆ. ಮದುವೆಗೆ ಮುಂಚೆ ಹೆಣ್ಣು ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಮುಂದಿರುತ್ತಾರೆ. ಆದರೆ ಮದುವೆ ಆದ ನಂತರ ನಾನು ಹೌಸ್ ವೈಫ್ ಎನ್ನುವುದನ್ನು ನೋಡುತ್ತೇವೆ. ಅದಕ್ಕೆ ಇರಬೇಕು ಮದುವೆಯಾದವರು ಬೇರೆಯವರ ಮದುವೆ ಎಂದರೆ “ಮುಗಿಯಿತು” ಎನ್ನುವುದು. ಹೆಣ್ಣು ಮಕ್ಕಳು ಮದುವೆಗೆ ಮುಂಚೆ ಇರುವ ಆಸಕ್ತಿಗಳಿಗೆ ಮದುವೆ ನಂತರವೂ ನೀರು ಗೊಬ್ಬರ ಬಿದ್ದರೆ ಈ ದೇಶದಲ್ಲಿನ ಪ್ರತಿ ಹೆಣ್ಣು ಮಗು ಒಂದಿಲ್ಲೋಂದು ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಆದರೆ ಮದುವೆಯ ನಂತರ ಹೆಣ್ಣು ಮಕ್ಕಳ ಕನಸಿಗೆ ಬೇಲಿ ಬಿದ್ದು ಬಿಡುತ್ತದೆ. ಅಥವಾ ಸ್ವತಃ ಹೆಣ್ಣು ಮಕ್ಕಳೇ ತನ್ನ ಕನಸಿಗೆ ಬೇಲಿ ಹಾಕಿಕೊಂಡು ಬಿಡುತ್ತಾರೆ. ಅದಕ್ಕೆ ಬಲವಾದ ಕಾರಣವೂ ಇದೆ. ಒಂದು ಕಡೆ ಪತಿಯಾದವನ್ನು ತನ್ನ ಹೆಂಡತಿಯ ಆಸೆ, ಆಕಾಂಕ್ಷೆಗಳ ಬಗ್ಗೆ ಕಾಳಜಿವಹಿಸದೇ ಇರುವುದು. ಇನ್ನೊಂದೆಡೆ ಅತ್ತೆ, ಮಾವ ಅಥವಾ ಸಂಬಂಧಿಕರು ಏನು ಹೇಳುತ್ತಾರೋ ಎನ್ನುವ ಭಯವೇ ಹೆಣ್ಣು ತನ್ನ ಕನಸಿಗೆ ತಾನೆ ಬೇಲಿ ಹಾಕಿಕೊಳ್ಳಲು ಪ್ರಮುಖ ಕಾರಣ ಇರಬಹುದು. ಅದು ಬದಲಾಗಬೇಕು. ಹೆಣ್ಣಿಗೂ ಮದುವೆಯ ಆಚೆಯೂ ಒಂದು ಕನಸಿನ ಪ್ರಪಂಚವಿದೆ. ಅದನ್ನು ಈಡೇರಿಸಲು ಬೇರೆ ಯಾರಾದರೂ ನಮಗೆ ಬೆಂಗಾವಲಾಗಬಲ್ಲರು ಎನ್ನುವುದು ತಪ್ಪು ಕಲ್ಪನೆ. ಅಂತಹ ಕಲ್ಪನೆಯನ್ನು ಬಿಟ್ಟು ನಮ್ಮ ಕನಸಿಗೆ ನಾವೇ ಬೇಲಿ ಹಾಕಿಕೊಳ್ಳುವುದನ್ನು ಬಿಟ್ಟು ಬಿಡಬೇಕು. ಸಂಸಾರ, ಸಂಬಂಧಗಳ ಜೊತೆ ಜೊತೆಗೆ ಇದನ್ನು ನಮ್ಮ ಕನಸಿಗೆ ರೆಕ್ಕೆ ಕಟ್ಟಿದಾಗ ಮಾತ್ರ ನಿಮ್ಮ ಕನಸು ಹಾರಾಡಲು ಸಾಧ್ಯ ಎನ್ನುವುದನ್ನು ಮೊದಲಿಗೆ ಅರಿತುಕೊಳ್ಳಬೇಕು. ಅದನ್ನು ಬಿಟ್ಟು ನಮ್ಮ ಹೆಣ್ಣು ಮಕ್ಕಳು ತಮ್ಮ ಕನಸನ್ನು ಮಕ್ಕಳಿಗೆ ಹೇರಲು ಪ್ರಯತ್ನಿಸುವುದು  ಇದೆ. ತಮ್ಮ ಮಕ್ಕಳಿಗೆ ಅವರದೇ ಆದ ಕನಸುಗಳಿರುತ್ತದೆ. ಅಪ್ಪ ಅಮ್ಮಂದಿರ ಕನಸಿಗೆ ಕೊಂಡಿಯಾಗಲು ಮಕ್ಕಳು ತಮ್ಮ ಕನಸುಗಳನ್ನೆ ಕಳೆದುಕೊಂಡುಬಿಡುತ್ತಾರೆ. ಇನ್ನು ಹೆಂಡತಿ ಕನಸಿಗೆ ಗಂಡನಾದವನು ಬೇಲಿ ಹಾಕುವ ಕೆಲಸ ಮಾಡಬಾರದು. ಹೆಂಡತಿಯಾದವಳ ಕನಸನ್ನು ನನಸಿನೆಡೆಗೆ ಕೊಂಡೊಯ್ಯುವ ಕೆಲಸ ಗಂಡನಾದವನು ಮಾಡಬೇಕು. ಈ ಕೆಲಸ ಎಲ್ಲಾ ಗಂಡಸರು ಮಾಡುವುದಿಲ್ಲವೆಂದಲ್ಲ. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆ ಕೆಲಸ ಮಾಡುತ್ತಾರೆ. ನನ್ನ ಗೆಳತಿಯೊಬ್ಬಳು ಹೇಳುತ್ತಾಳೆ “ನನ್ನ ಕನಸು ಈಡೇರಿಸಿಕೊಳ್ಳುವಲ್ಲಿ ನನ್ನ ಗಂಡನ ಅಭ್ಯಂತರವೇನಿಲ್ಲ. ಆದರೆ ಸಹಕಾರವೂ ಏನು ಇಲ್ಲ. ಅವರ ಮಾತು ಒಂದೆ ಮನೆ, ಮಕ್ಕಳು, ಅತ್ತೆ ಮಾವ ಎಲ್ಲಾ ಜವಾಬ್ಧಾರಿಗಳನ್ನು ಹೊತ್ತುಕೊಂಡು ಅದರ ಜೊತೆ  ನಿನ್ನ ಅಸೆ ಏನಿದೆಯೋ ಅದನ್ನು ಈಡೇರಿಸಿಕೊ ಎನ್ನುತ್ತಾರೆ”. ಇಷ್ಟೆಲ್ಲಾ ಕೆಲಸಗಳನ್ನು ಮುಗಿಸುವಷ್ಟರಲ್ಲಿ ಸುಮ್ಮನೆ ಮಲಗಿಕೊಂಡರೆ ಸಾಕು, ಇನ್ನೇನು ಬೇಡ ಅನ್ನಿಸಿಬಿಡುತ್ತದೆ. ಮತ್ತೆಲ್ಲಿ ಕನಸಿನ ಬೆನ್ನೇರಿ ಹೋಗುವುದು. ಅವಳು ಈ ಮಾತು ಆಡುವಾಗ ತನ್ನ ಗಂಡನ ಸಹಕಾರ ಸಿಕ್ಕಿದ್ದರೆ ಚೆನ್ನಾಗಿತ್ತು ಎನ್ನುವುದು ಅರ್ಥವಾಗುತ್ತದೆ. ಹೆಚ್ಚಿನ ಗಂಡಸರ ಆಸೆಯೂ ಅದೆ. ಅವರು ಮನೆಯ ಯಾವುದೇ ಜವಾಬ್ಧಾರಿ ತೆಗೆದುಕೊಳ್ಳಲು ಸಿದ್ದ ಇರುವುದಿಲ್ಲ. ಎಲ್ಲ ನೋಡಿಕೊಂಡು ನನ್ನ ಹೆಂಡತಿ ಸಾಧನೆ ಮಾಡಿದರೆ ಅವರದೇನು ಅಡ್ಡಿ ಇರುವುದಿಲ್ಲ. ಹೆಂಡತಿ ಒಬ್ಬಳಿಗೆ ಸಂಸಾರದ ನೊಗದ ಬಾರ ಬಿದ್ದರೆ ಅವಳು ಜರ್ಜರಿತಳಾಗುತ್ತಾಳೆ. ಗಂಡನಾದವನಿಗೂ ದುಡಿಮೆಯ ಜೊತೆ ಸಂಸಾರದ ಭಾದ್ಯತೆಗಳಿವೆ. ಅದನ್ನು ಅರಿತುಕೊಂಡಾಗ ಮಾತ್ರ ಹೆಂಡತಯ ಕನಸಿಗೆ ಬೇಲಿ ಬೀಳದೇ ಇರಬಹುದು. ಇದನ್ನೆಲ್ಲಾ ಅರಿತು ಮುಂದಿನ ಪೀಳಿಗೆಗೆ ದಾರಿ ದೀಪವಾಗೋಣ...

Category
ಕರಾವಳಿ ತರಂಗಿಣಿ