image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಕ್ತಿಯ ಪರಾಕಾಷ್ಟೆ ಎನ್ನಲೆ...

ಭಕ್ತಿಯ ಪರಾಕಾಷ್ಟೆ ಎನ್ನಲೆ...

ಇಂದು ಯುವ ಪೀಳಿಗೆ ಆಧ್ಯಾತ್ಮಿಕತೆಯತ್ತ ವಾಲುತ್ತಿದ್ದಾರೆ ಎಂದು ಖುಷಿ ಪಡುವುದೋ ಅಥವಾ ಹುಚ್ಚಾಟದಲ್ಲಿ ಮೆರೆಯುತ್ತಿದ್ದಾರೆಂದು ಬೇಜಾರಾಗುವುದೋ ಯಾವುದು ತಿಳಿಯುತ್ತಿಲ್ಲ. ಅಮ್ಮ ಬೈದು ನಮ್ಮ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಪಾಠ ಮಾಡುತ್ತಿದ್ದರು. ಆದರೆ ಅವರಲ್ಲಿದ್ದ ತನ್ನ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ತಿಳಿದಿರಬೇಕು ಹಂಬಲ ಇಂದು ಅರ್ಥವಾಗುತ್ತಿದೆ. ಇಷ್ಟ ಇತ್ತೋ ಇಲ್ಲವೋ ಅವರು ಹೇಳುವುದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೆವು. ಇದು ನನ್ನೊಬ್ಬಳ ಕಥೆಯಲ್ಲ. 80- 90ರಲ್ಲಿ ಹುಟ್ಟಿರುವ ಎಲ್ಲರ ಅನುಭವ. ಆ ಸಮಯದಲ್ಲಿ ಹುಟ್ಟಿರುವವರು ಬಾಲ್ಯವನ್ನು ತುಂಬಾ ಚೆನ್ನಾಗಿ ಅನುಭವಿಸಿದ್ದಾರೆ ಎನ್ನುವುದು ನನ್ನ ಭಾವನೆ.   ಆ ಸಮಯದಲ್ಲಿ ಕಿತ್ತು ತಿನ್ನುವ ಬಡತನ ಹೆಚ್ಚಾಗಿತ್ತು. ಆದರೆ ನಮ್ಮ ಕಾಲಕ್ಕಾಗಲೆ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದ ಸಮಯ. ಅಂದಿನ ಮಕ್ಕಳಿಗೆ ಸ್ವಾತಂತ್ರ ಇತ್ತು. ಸುತ್ತ ಮುತ್ತ ಬೇಕಾಗುವಷ್ಟು ಮಕ್ಕಳು ಜೊತೆಯಿರುತ್ತಿದ್ದರು. ಅಪ್ಪ ಅಮ್ಮನೋ ಹೊಟ್ಟೆಪಾಡಿನ ಯೋಚನೆಯಲ್ಲಿದ್ದರೆ, ಹಳ್ಳಿಗಳಲ್ಲಂತೂ ರಜಾದಲ್ಲಿ ಮಕ್ಕಳು ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಯಾವುದೋ ಒಂದು ಮನೆಯಲ್ಲಿ ಊಟವೋ, ಚಹಾವೋ ಅಥವಾ ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು ಹಂಪಲೋ ಹೊಟ್ಟೆ ತುಂಬುತ್ತಿದ್ದದ್ದು ಅಂತು ಪಕ್ಕ. ನೆನಪಿರಲಿ ಮೇಯಲು ಹೋದ ದನ ಕರುಗಳು ಸಾಯಂಕಾಲ ಹಟ್ಟಿ ಸೇರುವ ಹಾಗೆ ಮಕ್ಕಳು ಅವರವರ ಮನೆ ಸೇರಿ ಬಿಡುತ್ತಿದ್ದರು. ಅಂದು ಟಿವಿಯ ಹಂಗೂ ಇಲ್ಲ ಮೊಬೈಲಿನ ಗುಂಗೂ ಇಲ್ಲ. ಮನೆಗೆ ಬಂದಿದ್ದೆ ಸ್ನಾನ, ಊಟ ನಂತರ ಕಣ್ತುಂಬ ನಿದ್ದೆ. ಆಹ್ಹಾ ಸ್ನಾನ ಮಾಡಿಸುವಾಗ ಏನು ಮಣ್ಣಿನಲ್ಲಿ ಹೊರಲಾಡಿದ್ದೀಯ ಅಂತ ಅಮ್ಮಂದಿರಿಂದ ನಾಲ್ಕು ಏಟು ತಿನ್ನದಿದ್ದರೆ ಸಮಾದಾನನೇ ಇಲ್ಲ ಬಿಡಿ. ಇನ್ನು ಶಾಲಾ ದಿನಗಳಲ್ಲಿ ಶಾಲೆಗೆ ಹೋಗುವುದು, ಬರುವುದೇ ಒಂದು ಹಬ್ಬ. ಹತ್ತಿಪ್ಪತ್ತು ಮಕ್ಕಳ ದಂಡು, ಇರುವ, ಬರುವ ಮರಗಳಿಗೆ ಕಲ್ಲು ಬಿಸಾಕಿ ಅದರ ಕಾಯಿಯೋ, ಹಣ್ಣೋ ಕಿತ್ತು ತಿನ್ನುವ ಖುಷಿಯೇ ಬೇರೆ. ಕತ್ತಲಾಗುವ ಮೊದಲು ಹಟ್ಟಿ ಸೇರಿಕೊಳ್ಳಬೇಕು. ಸ್ವಲ್ಪ ತಡವಾದರೂ ಬೆತ್ತ ಪುಡಿ ಪುಡಿ. ಇಂದಿನ ಮಕ್ಕಳಿಗೇನಾದರೂ ಅಂತಹ ಏಟು ಬಿದ್ದರೆ ಅಪ್ಪ, ಅಮ್ಮನ ವಿಡಿಯೋ ಟ್ರೋಲ್ ಆಗಿ ಅವರನ್ನು ಜೈಲಲ್ಲಿ ಕೂರಿಸುವವರೆಗೂ ಬಿಡುವುದಿಲ್ಲ ಬಿಡಿ. ಆದರೆ ಅಂದಿನ ಮಕ್ಕಳಿಗೆ ಅಪ್ಪ ಅಮ್ಮಂದಿರ ಹತ್ತಿರ ಏಟು ತಿನ್ನುವುದೇ ಮಜಾ. ನಮ್ಮಮ್ಮ ಹೊಡೆಯುವಷ್ಟು ಹೊಡೆದು ಕೋಪ ಇಳಿದ ಮೇಲೆ ಮುದ್ದು ಮಾಡಿ ಎಣ್ಣೆ ಹಚ್ಚುತ್ತಿದ್ದದ್ದೇ ಚಂದ. ಆ ಪ್ರೀತಿಯ ಮುಂದೆ ಕೋಪ, ನೋವು ಮಂಗಮಾಯ. ಇದೆಲ್ಲಾ ನೆನೆಸಿಕೊಂಡರೆ ಇಂದಿನ ಮಕ್ಕಳಿಗೆ ಇಂತಹ ಖುಷಿ ಕೊಡುವ ವಿಷಯವೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ಬೆಳಗಾಗುವ ಮೊದಲೇ ಶಾಲೆಯ ವ್ಯಾನ್ ಬಂದು ನಿಂತು ಬಿಡುತ್ತದೆ ಮನೆಯ ಮುಂದೆ, ಮಕ್ಕಳು ಕಣ್ಣುಜ್ಜಿಕೊಂಡು ವ್ಯಾನ್ ಹತ್ತಿದರೆ ಶಾಲೆಯ ಆವರಣ, ನಂತರ ಕ್ಲಾಸ್ ರೂಂ. ಸ್ವಲ್ಪ ಚುರುಕಾಗಿರುವ ಮಕ್ಕಳಾದರೆ ತರಗತಿಯಲ್ಲಿ ಇರುವ ಮಕ್ಕಳೆಲ್ಲಾ ಗೆಳೆಯ ಗೆಳತಿಯರು. ಇಲ್ಲವಾದರೆ ತರಗತಿಯ ಒಂದು ಮೂಲೆಯಲ್ಲಿ ಕುಳಿತು ಪಾಠ ಕೇಳಿ, ಬೆಲ್ ಹೊಡೆಯುತ್ತಿದ್ದಂತೆ ಹೊರ ಬಂದು ಸ್ವಿಮಿಂಗೋ, ಸಂಗೀತನೋ ಅಥವಾ ಡ್ಯಾನ್ಸ್ ಕ್ಲಾಸೋ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ನಂತರ ಟ್ಯೂಷನ್ ಹಾಳು ಮೂಳು ಅಂತ ಮುಗಿಸಿ ನಿದ್ದೆಗೆ ಜಾರುವ ಮೊದಲು ಮೊಬೈಲು ಟೈಮ್ ಬೇರೆ ಇರುತ್ತದೆ. ಅದೆಷ್ಟು ಹೊತ್ತು ಮೊಬೈಲ್ ನೋಡುತ್ತೆ ಎನ್ನುವುದು ಅಪ್ಪ ಅಮ್ಮ ಎಚ್ಚರವಾಗಿರುವುದರ ಮೇಲೆ ಅವಲಂಬಿಸಿರುತ್ತದೆ. ಮತ್ತೆ ಅದೇ ಪುನಾರಾವರ್ತನೆ. ಮತ್ತೆ ಮಕ್ಕಳಿಗೆಲ್ಲಿ ಸ್ವಾತಂತ್ರ. ಅವುಗಳಿಗೆಲ್ಲಿಯ ಆಚಾರ ವಿಚಾರಗಳ ಅರಿವು. ಫೇಸ್ ಬುಕ್ ಅಥವಾ ಇನ್ಸಾಟ್ ಗ್ರಾಂನಲ್ಲಿ ಬಂದಿದ್ದೇ ವೇದ ವಾಕ್ಯ. ಅಪ್ಪ, ಅಮ್ಮ, ಅಜ್ಜಿಯು ಹೇಳಬೇಕಾದ ಅನುಭವದ ಮಾಹಿತಿ ಇಂದು ಗೂಗಲಿನಲ್ಲಿ ಹುಡುಕಬೇಕಾಗಿದೆ. ಹೀಗಿರುವಾಗ ದೇವರು ದಿಂಡಿರೆಂದರೆ ಎಲ್ಲಿಯ ಭಕ್ತಿ. ಇಂದಿನ ಭಕ್ತಿ ಎಂದರೆ ಇನ್ಸಸ್ಟಾ ಗ್ರಾಂ ಪೊಸ್ಟ್ ಹಾಕುವುದು. ಒಂದು ಕಾಲದಲ್ಲಿ ತುಳುನಾಡಿನಲ್ಲಿ ದೈವಗಳೆಂದರೆ ಎಂತಹ ಭಯ, ಭಕ್ತಿ. ಅದರಲ್ಲೂ ಭೂತದ ಕೋಲ ಎಂದರೆ ಇನ್ನಷ್ಟು ಭಕ್ತಿ. ಆದರೆ ಇಂದಿನ ಯುವ ಪೀಳಿಗೆ ಭೂತ ಕೋಲದ ಸಂದರ್ಭದಲ್ಲಿ ಪಾತ್ರಧಾರಿಯ ಜೊತೆ ಸೆಲ್ಫಿ ತೆಗೆದು ಜಾಲತಾಣದಲ್ಲಿ ಹರಿಬಿಡುವಷ್ಟು ಭಕ್ತಿಯ ಪರಾಕಾಷ್ಟೆಗೆ ಏರಿರುತ್ತಾರೆ ಎನ್ನುವುದೇ ವಿಷಾಧನೀಯ. ನಮ್ಮ ಸಂಸ್ಕೃತಿ ಸಂಪ್ರದಾಯಗಳು ಎತ್ತ ಸಾಗುತ್ತಿದೆ ಎನ್ನುವುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಾಟಿ ಎನ್ನುವಂತೆ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಟೀಕಿಸುವ ಮುಟ್ಠಾಳುರು ಕೂಡ ಸೇರಿಕೊಳ್ಳುತ್ತಾರೆ. ಈ ಕೆಲಸದಲ್ಲಿ ಅನ್ಯ ಧರ್ಮೀಯರು ಒಂದು ಕಡೆಯಾದರೆ ನಮ್ಮಲ್ಲೇ ಹುಟ್ಟಿ ನಮ್ಮ ಸಂಸ್ಕೃತಿಯನ್ನು ಹಿಯಾಳಿಸುವ ಮನಸ್ಥಿತಿಯವರು ಒಂದು ಕಡೆ. ಇವೆಲ್ಲದರ ಮದ್ಯೆ ನಮ್ಮ ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಅವರಿಗೆ ದಾರಿ ದೀಪವಾಗೋಣ...

Category
ಕರಾವಳಿ ತರಂಗಿಣಿ