ಹೌದು ನಾವು ಹುಟ್ಟಿನಿಂದ ಸಾಯುವವವರೆಗೆ ತಾರತಮ್ಯದ ಕರಿನೆರಳಿನಲ್ಲಿಯೇ ಬದುಕುತ್ತೇವೆ ಎಂದರೆ ತಪ್ಪಾಗಲಾರದು. ಬಡವರ ಮಕ್ಕಳಾಗಿ ಹುಟ್ಟಿದರೆ, ಕಪ್ಪಾಗಿ ಹುಟ್ಟಿದರೆ, ಕುರಾಪಾಗಿ ಹುಟ್ಟಿದರೆ ಅದೆಲ್ಲದಕ್ಕೂ ಮಿಗಿಲಾಗಿ ಹೆಣ್ಣಾಗಿ ಹುಟ್ಟಿದರೆ, ಹೀಗೆ ಹುಟ್ಟಿದಾಗಿನಿಂದ ತಾರತಮ್ಯದ ಬಿಸಿ ತಟ್ಟಲು ಶುರು ಆಗುತ್ತದೆ. ಇನ್ನು ಬೆಳೆಯುತ್ತಾ ಶಾಲೆಯಲ್ಲೂ ತಾರತಮ್ಯದ ಕರಿ ನೆರಳು ಕಾಡದೇ ಇರುವುದಿಲ್ಲ. ಬಡವರ ಮಕ್ಕಳು ಮತ್ತು ಶ್ರೀಮಂತರ ಮಕ್ಕಳು ಎನ್ನುವ ಬೇದಭಾವ ಶಿಕ್ಷಕರಿಂದಲೇ ಶುರುವಾಗಿ ಬಿಡುತ್ತದೆ. ಮೊದಲ ಬೆಂಚು, ಕಡೆಯ ಬೆಂಚು ಎನ್ನುವ ತಾರತಮ್ಯ ಯಾವಾಗಲೂ ಶಾಲಾ ಕಾಲೇಜುಗಳಲ್ಲಿ ಇದ್ದದ್ದೆ. ಪುಣ್ಯಾ ನನಗೆ ಕಡೆಯ ಬೆಂಚು ಸಿಗಲಿಲ್ಲ. ಕಾರಣ ನೀವು ತಿಳಿದುಕೊಂಡಿರುವ ಹಾಗೆ ನಾನು ವಿದ್ಯಾಬ್ಯಾಸದಲ್ಲಿ ಮುಂದೆ ಇದ್ದೆ ಎಂದಲ್ಲ, ಹಾಗೇ ಶ್ರೀಮಂತ ಮನೆತನದವಳು ಅಲ್ಲ. ನಾನು ಬಡ ಕುಟುಂಬದಿಂದ ಬಂದು ಸಾದಾರಣ ಅಂಕಗಳನ್ನು ಪಡೆದು ಮುಂದೆ ಬೆಂಚಲ್ಲಿ ಕೂರುತಿದ್ದ ವಿದ್ಯಾರ್ಥಿನಿ ಎನ್ನುವುದೇ ಹೆಮ್ಮೆ ನನಗೆ. ಹಾಃ ನಾನು ಹಿಂದೆ ಕುಳಿತರೆ ನಮ್ಮ ಶಿಕ್ಷಕರಿಗೆ ಕಾಣಬೇಕಲ್ಲ. ನಾನು ಕುಳ್ಳಿ. ಹಾಗಾಗಿ ನಮ್ಮ ಯೋಗೇಂದ್ರಪ್ಪ ಸರ್ ಯಾವಾಗಲೂ “ಹೇ ಬಿಟ್ಟೆ... ನೀನು ಮುಂದೆ ಬೆಂಚಿನಲ್ಲಿ ಕೂರ್ಬೇಕು ಆಯ್ತಾ, ಹಿಂದೆ ಕೂತು ನೀನು ಮಾಡುವ ಉಪದ್ರನೂ ಕಾಣಲ್ಲ” ಎನ್ನುತ್ತಿದ್ದರು. ಅಬ್ಬಾ ಹಾಗಂತ ನಾನು ದೊಡ್ಡ ಉಪದ್ರ ಪ್ರಾಣಿ ಅಲ್ಲ. ಓದಿಗಿಂತ ಆಟೋಟದಲ್ಲೇ ಮುಂದಿದ್ದ ನಾನು ಶಿಕ್ಷಕರು ಹಾಜರಿ ಕರೆದ ಕೂಡಲೇ ಕ್ರೀಡಾಂಗಣದಲ್ಲಿದ್ದ ನನ್ನ ಬೇರೆ ತರಗತಿಯ ಸಹಪಾಠಿಗಳನ್ನು ಸೇರಿಕೊಳ್ಳುತ್ತಿದ್ದೆ. ಅದನ್ನು ಗಮನಿಸಿದ್ದ ಯೋಗೇಂದ್ರಪ್ಪರು ಹೀಗೆ ನನ್ನನ್ನು ಮುಂದಿನ ಬೆಂಚಿನಲ್ಲಿ ಕಟ್ಟಿ ಹಾಕಿದ್ದರು. ಬನ್ನಿ ಹೀಗೆ ಮುಂದುವರಿದು ತಾರತಮ್ಯದ ಕರಿನೆರಳು ನಮಗೇಗೆ ಕಾಡುತ್ತದೋ ನೋಡೋಣ. ಶಿಕ್ಷಣ ಮುಗಿಸಿ ಕೆಲಸಕ್ಕೆ ಹೋಗಬೇಕು. ಸರಕಾರಿ ಕೆಲಸ ಬೇಕಾದರೆ ಈ ಧನದಾಯಿ ಆಫೀಸರ್‌ಗಳ ಕಾಟ. ಇಲ್ಲಿಯೂ ತಾರತಮ್ಯ ನೋಡಿ. ದುಡ್ಡಿದ್ದರೆ ಹಾಗೋ ಹೀಗೋ ಕೆಲಸ ಗಿಟ್ಟಿಸಿಕೊಳ್ಳಬಹುದು. ಅದು ಆಗದಿದ್ದಾಗ ಯಾವುದೋ ಒಂದು ಕೆಲಸಕ್ಕೆ ಸೇರಿಬಿಡುತ್ತೇವೆ. ಕಾರಣ ಹೊಟ್ಟೆ ಪಾಡು. ಅಲ್ಲಿ ಸೀನಿಯರ್ ಜೂನಿಯರ್‌ಗಳೆಂಬ ತಾರತಮ್ಯ. ಸೀನಿಯರ್‌ಗಳ ಮುಖಭಾವ ಹೇಗಿರುತ್ತದೆಯೆಂದರೆ ಅವರೇ ಸಮುದ್ರ ಮಂಥನ ಮಾಡಿ ಅಮೃತವನ್ನು ಜೂನಿಯರ್‌ಗಳಿಗಾಗಿ ತಂದಿರುವ ಹಾಗಿರುತ್ತದೆ. ಇನ್ನು ಕೆಲವರಲ್ಲಂತೂ ಸಮುದ್ರೋಲ್ಲಂಘನ ಮಾಡಿದ ಹನುಮಂತನಿಗೂ ಇಲ್ಲದ ಬಿಗುಮಾನ ಇವರಲ್ಲಿರುತ್ತದೆ. ಹೊಸಬರ ಜೊತೆ ಬೆರೆಯದೇ ತನ್ನದೇ ಒಂದು ಜಗತ್ತನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಇನ್ನು ಕೆಲಸದಲ್ಲಿ ಸ್ವಲ್ಪ ಚುರುಕಿಲ್ಲದಿದ್ದರೆ, ಮಾತಿನಲ್ಲಿ ಹುಷಾರಿಲ್ಲದಿದ್ದರೆ ಹೀಗೆ ಮುಂದುವರಿಯುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೆಲಸ ಮಾಡುವ ಜಾಗದಲ್ಲಿ ಹಲವಾರು ತಾಪತ್ರಯ. ಹೆಣ್ಣನ್ನು ಕಂಡ ಕೂಡಲೇ ಹೇಗಾದರೂ ಉಜ್ಜಾಡಿ ಬಿಡೋಣ ಎನ್ನುವ ಹುಚ್ಚು ಕೆಲವು ಗಂಡಸರಿಗೆ. ಇನ್ನು ಹೆಣ್ಣು ಸ್ವಲ್ಪ ಹುಷಾರಿದ್ದು, ಹಾಗೂ ಹೀಗೋ ಭಡ್ತಿಯೋ, ವೇತನ ಹೆಚ್ಚಳವೋ ಸಿಕ್ಕಿಬಿಟ್ಟರೆ, ಅವಳ ಮೇಲಿನ ಹೊಟ್ಟೆ ಹುರಿಗೆ ಅವಳ ಬಗ್ಗೆ ಮೊದಲಿಗೆ ಹಬ್ಬಿಸುವ ಮಾತು "ಮೇಲಿನ ಆಫೀಸರುಗಳ ಜೊತೆ ಬೇರೆಯೇ ಕೆಲಸ ಮಾಡಿದ್ದಾಳೆ" ಕೆಲವು ಕ್ರಿಮಿಗಳ ಪ್ರಕಾರ ಹೆಣ್ಣು ಏನಾದರೂ ಸಾಧನೆ ಮಾಡಿದರೆ "ಅವಳು ಯಾರ ಜೊತೆಯೋ ಮಲಗಿದ್ದಾಳೆ" ಅಷ್ಟೆ. ಈ ಸಮಾಜ ಎಷ್ಟೇ ಆಧುನಿಕತೆಯ ಹಿಂದೆ ಹೋದರೂ ಹೆಣ್ಣನ್ನು ಮನುಷ್ಯಳಾಗಿ ನೋಡುವುದಿಲ್ಲ. ಅವಳ ವಿಧ್ಯೆ, ಪ್ರತಿಭೆ ಯಾವುದಕ್ಕೂ ಬೆಲೆ ಇರುವುದಿಲ್ಲ. ಅದರಲ್ಲೂ ತಾನಾಗುತ್ತಿರುವ ಅನ್ಯಾಯದ ವಿರುದ್ದ ಹೆಣ್ಣು ಕಾನೂನಿನ ಮೊರೆ ಹೋದಳೆಂದರೆ, ಅಲ್ಲೂ ಹಣ ಅವಳಿಗೆ ಕರಿನೆರಳ ಛಾಯೆ ತೋರಿಸುತ್ತದೆ. ಕೊನೆಗೆ ಗಂಡು ತನ್ನ ಕಚ್ಚೆ ಹರಕುತನದ ಬುದ್ದಿಗೆ ಇತ್ತೀಚಿನ ದಿನಗಳಲ್ಲಿ ಹನಿ ಟ್ರಾಪ್ ಎನ್ನುವ ಹೆಸರಿಟ್ಟು ತಾನೂ ಸಾಚಾ ಎನ್ನುವ ಹಾಗೇ ನುಣುಚಿಕೊಳ್ಳುತ್ತಾನೆ. ಹೆಣ್ಣು ಕಸ ಗುಡಿಸುವ ಕೆಲಸದವಳು ಇರಬಹುದು ಅಥವಾ ದೇಶದ ಪ್ರಧಾನಿಯೇ ಆಗಿರಬಹುದು. ಅವಳ ಪ್ರತಿ ಹೆಜ್ಜೆಯಲ್ಲಿಯೂ ಅವಮಾನ ಅನುಭವಿಸುತ್ತಾ, ಹೆಣ್ಣು ಇಂದಿಗೂ ತಾರತಮ್ಯದ ಕರಿನೆರಳಿನಲ್ಲಿಯೇ ಬದುಕುತ್ತಿದ್ದಾಳೆ ಎನ್ನುವುದು ವಿಷಾದನೀಯ.
ಇನ್ನು ಮದುವೆಯ ವಿಷಯಕ್ಕೆ ಬಂದರೆ ಮತ್ತದೇ ತಾರತಮ್ಯ, ಕಪ್ಪು, ಬಿಳುಪು, ದುಡ್ಡು, ಬಂಗಾರ, ವಿದ್ಯೆ, ಮನೆತನ. ಬಿಡಿ ಹಣೆಯಲ್ಲಿ ಬರೆದಿತ್ತು ಮದುವೆಯೇನೋ ಆಯಿತು. ಮುಂದೆ ಒಂದು ವರ್ಷದಲ್ಲಿ ಮಕ್ಕಳಾಗಿ ಬಿಡಬೇಕು ಇಲ್ಲವಾದರೆ ಮುಂದುವರಿಯುತ್ತದೆ ಕರಿನೆರಳ ಆರ್ಭಟ. ಮಕ್ಕಳಾಗಿ ಮಕ್ಕಳ ಬಣ್ಣ, ವಿದ್ಯೆ, ಅವರ ಸಹವಾಸಗಳು ಹೀಗೇ ತಾರತಮ್ಯದ ಕರಿನೆರಳ ಛಾಯೆ ಮುಂದುವರಿದು ವಯಸ್ಸಾಗುತ್ತಿದ್ದಂತೆ ಮತ್ತೆ ಈ ಕರಿನೆರಳ ಛಾಯೆ ವಯಸ್ಸಿನ ಹಿಂದೆ ಬಿದ್ದು ಬಿಡುತ್ತದೆ. ಯುವ ಜನತೆಗೆ ಈ ಹಿರಿಜೀವಗಳ ಬಗ್ಗೆ ಅದೇನೋ ತಾರತಮ್ಯ. ಇವರ ಜೊತೆ ಬೆರೆಯುವುದು ಕೂಡ ಇಷ್ಟವಿಲ್ಲದಿರುವುದೇ ಬೇಜಾರಿನ ಸಂಗತಿ. ಹೊರಗಿನ ಯುವ ಜನತೆ ಬಿಡಿ, ತನ್ನ ಸ್ವಂತ ಮಕ್ಕಳು ಕೂಡ ತನ್ನ ಹೆತ್ತವರಿಂದ ದೂರವೇ. ಆ ವಯಸ್ಸಿನಲ್ಲಿ ಹೆಂಡತಿಯೋ ಅಥವ ಗಂಡನೋ ಜೊತೆಯಿದ್ದರೆ ಪರವಾಗಿಲ್ಲ ಇಲ್ಲವಾದರೆ ಅ ದೇವನೇ ಬಲ್ಲ ಈ ತಾರತಮ್ಯದ ಕರಿನೆರಳಿನಲ್ಲಿ ಬಳಲುವ ಮುದಿ ಜೀವಗಳ ಬೇನೆಯ. ಮುಂದೆ ಸಾವಿನಲ್ಲೂ ತಾರತಮ್ಯ ಕರಿಛಾಯೇಯ ಅಟ್ಟಹಾಸವಿದೆ. ಬಡವನಾದರೆ ಒಂದು ತುಂಡು ಹೂವಿನಲ್ಲಿ ಮುಗಿಸುವ ಕೆಲವರು ಶ್ರೀಮಂತರೇನಾದರೂ ಸತ್ತರೆ ಶ್ರೀಗಂಧದ ಮಾಲೆಯ ಹೊತ್ತು ತರುವರು. ಇದೆಲ್ಲವನ್ನು ನೋಡಿದಾಗ ಇದೆಂತಾ ಲೋಕವಯ್ಯ ಅನ್ನಿಸುತ್ತದೆ. ಬಡವನಾಗಿಯೋ, ಕಪ್ಪಾಗಿಯೋ, ಕುರೂಪಿಯಾಗಿಯೋ, ಅದೃಷ್ಟ ಹೀನನಾಗಿಯೋ ಹುಟ್ಟಿರುವುದು ಯಾರ ತಪ್ಪು? ಇದೆಲ್ಲವನ್ನೂ ನಾವು ಯೋಚಿಸಬೇಕು.
ನಾವು ಇನ್ನೊಬ್ಬರನ್ನು ತಾರತಮ್ಯದಿಂದ ನೋಡುತ್ತೇವೆ ಸರಿ ನಾಳೆ ನಮ್ಮದೇ ಕುಟುಂಬದವರು ಇದೇ ಕರಿನೆರಳ ಛಾಯೆಯಲ್ಲಿ ಬಸವಳಿದರೆ ಹೇಗಿರಬಹುದು? ಎನ್ನುವುದನ್ನೆಲ್ಲಾ ನಾವು ಮನಗಂಡು ನಮ್ಮ ಮುಂದಿನ ಪೀಳಿಗೆಗೆ, ಅವರ ಕಿರಿ ವಯಸ್ಸಿನಲ್ಲಿಯೇ ಮಾನವತ್ವದ ಪಾಠ ಹೇಳಿ ಮನುಷ್ಯರಾಗಿ ಬದುಕುವುದನ್ನು ತಿಳಿಹೇಳುವುದು ನಮ್ಮ ಕರ್ತವ್ಯವಾಗಬೇಕು. ಅದನ್ನು ಬಿಟ್ಟು ಹಿರಿಯರಾದ ನಾವೇ ಮಕ್ಕಳಲ್ಲಿ ತಾರತಮ್ಯ ತೋರಿದರೆ ಮುಂದೆ ಬೆಳೆದು ಅವರೂ ಇದೇ ಹಾದಿಯಲ್ಲಿ ನಡೆಯುವುದರಲ್ಲಿ ಸಂದೇಹವಿಲ್ಲ. ಅದಕ್ಕೆಲ್ಲ ಎಡೆ ಮಾಡಿಕೊಡದೆ ಮುಂದಿನ ಪೀಳಿಗೆಗೆ ದಾರಿ ದೀಪವಾಗೋಣ.
✍ ಲಲಿತಶ್ರೀ ಪ್ರೀತಂ ರೈ