image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ದಿನಾಚರಣೆ: ಮಹಿಳೆ ಈ ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವಲೋಕನದ ಅಗತ್ಯತೆ

ಮಹಿಳಾ ದಿನಾಚರಣೆ: ಮಹಿಳೆ ಈ ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವಲೋಕನದ ಅಗತ್ಯತೆ

ಮಹಿಳಾ ದಿನಾಚರಣೆಯು ಕೇವಲ ಒಂದು ದಿನದ ಶುಭಾಶಯಗಳಿಗೆ ಸೀಮಿತವಾಗಬಾರದು. ಮಹಿಳೆಯರಿಗೆ ಮುಕ್ತವಾಗಿ ಬದುಕುವ, ಕನಸು ಕಾಣುವ ಮತ್ತು ಅದನ್ನು ನನಸಾಗಿಸುವ ವಾತಾವರಣ ನಿರ್ಮಾಣವಾದಾಗ ಮಾತ್ರ ಈ ದಿನಕ್ಕೆ ನಿಜವಾದ ಅರ್ಥ ಸಿಗುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಾಧನೆಗಳನ್ನು ಆಚರಿಸುವ ದಿನ. ಆದರೆ, ಈ ಸಂಭ್ರಮದ ನಡುವೆಯೂ ಮಹಿಳೆಯರು ಇಂದಿಗೂ ಅನೇಕ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದು ಕಹಿ ಸತ್ಯ. ಸಮಾನತೆಯ ಹಾದಿಯಲ್ಲಿ ಅವರು ಎದುರಿಸುತ್ತಿರುವ  ಪ್ರಮುಖ ಸವಾಲು ಗಳನ್ನು ನೋಡುವುದಾದರೆ, ಮಹಿಳೆಯರ ಪಾಲಿಗೆ ಇಂದಿಗೂ 'ಸುರಕ್ಷತೆ' ಎಂಬುದು ದೊಡ್ಡ ಪ್ರಶ್ನೆ ಯಾಗಿದೆ. ಮನೆಯ ಒಳಗಿರಲಿ ಅಥವಾ ಹೊರಗಿರಲಿ, ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಮುಂದುವರಿಯುತ್ತಲೇ ಇವೆ. ಸೈಬರ್ ಅಪರಾಧಗಳ ಹೆಚ್ಚಳವು ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಹೊಸ ರೀತಿಯ ಭೀತಿಯನ್ನು ತಂದೊಡ್ಡಿದೆ. ಆರ್ಥಿಕ ಅಸಮಾನತೆ ಮತ್ತು ವೇತನ ತಾರತಮ್ಯವೂ ದೊಡ್ಡ ಸವಾಲೆನ್ನಬಹುದು. ​ಒಂದೇ ರೀತಿಯ ಕೆಲಸವನ್ನು ಮಾಡಿದರೂ ಪುರುಷರಿಗಿಂತ ಮಹಿಳೆಯರಿಗೆ ಕಡಿಮೆ ವೇತನ ನೀಡುವ ಪದ್ಧತಿ ಇಂದಿಗೂ ಅನೇಕ ಕ್ಷೇತ್ರಗಳಲ್ಲಿದೆ. ಇದನ್ನು 'Gender Pay Gap' ಎಂದು ಕರೆಯಲಾಗುತ್ತದೆ. ಇದರೊಂದಿಗೆ, ಉನ್ನತ ಮಟ್ಟದ ಉದ್ಯೋಗಗಳಲ್ಲಿ (Leadership roles) ಮಹಿಳೆಯರ ಪ್ರಾತಿನಿಧ್ಯ ಇಂದಿಗೂ ಕಡಿಮೆ ಇದೆ. ಮನೆಗೆಲಸ ಮತ್ತು ವೃತ್ತಿಜೀವನದ ಸಮತೋಲನವೂ ದೊಡ್ಡ ಸವಾಲೆಂದರೆ ತಪ್ಪಾಗಲಾರದು. 

​ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋದರೂ, ಮನೆಯ ಸಂಪೂರ್ಣ ಜವಾಬ್ದಾರಿ (ಅಡುಗೆ, ಮಕ್ಕಳ ಆರೈಕೆ, ಹಿರಿಯರ ಸೇವೆ) ಅವರ ಮೇಲೆಯೇ ಇರುತ್ತದೆ. ಈ 'ದ್ವಿಮುಖ ಜವಾಬ್ದಾರಿ'ಯಿಂದಾಗಿ ಅನೇಕ ಮಹಿಳೆಯರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಅಥವಾ ತಮ್ಮ ವೃತ್ತಿಜೀವನವನ್ನು ಅರ್ಧಕ್ಕೆ ಬಿಡಬೇಕಾದ ಪರಿಸ್ಥಿತಿ ಒಂದೆಡೆಯಾದರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಶಿಕ್ಷಣದ ವಿಷಯ ಬಂದಾಗ ನಗರ ಪ್ರದೇಶಗಳಲ್ಲಿ ಸುಧಾರಣೆ ಕಂಡುಬಂದಿದ್ದರೂ, ಗ್ರಾಮೀಣ ಭಾಗಗಳಲ್ಲಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಇಂದಿಗೂ ಅಡೆತಡೆಗಳಿವೆ. ಮಹಿಳೆಯರ ಪೌಷ್ಟಿಕಾಂಶ ಮತ್ತು ಮಾನಸಿಕ ಆರೋಗ್ಯದ ಕಡೆಗೆ ನಮ್ಮ ಸಮಾಜದಲ್ಲಿ ಅಷ್ಟಾಗಿ ಗಮನ ಹರಿಸಲಾಗುತ್ತಿಲ್ಲ. ರಕ್ತಹೀನತೆ (Anemia) ಮತ್ತು ಒತ್ತಡದಂತಹ ಸಮಸ್ಯೆಗಳು ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿವೆ.
​ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರನ್ನು  ವ್ಯಕ್ತಿಯಾಗಿ ಗೌರವಿಸುವ ಗುಣ ಮನೆಯಿಂದಲೇ ಆರಂಭವಾಗಬೇಕು. ಕೆಲಸದ ಸ್ಥಳಗಳಲ್ಲಿ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳು ಮತ್ತು ಸಮಾನ ವೇತನದ ನಿಯಮಗಳು ಜಾರಿಯಾಗಬೇಕು. ಹೆಣ್ಣುಮಕ್ಕಳಿಗೆ ಕೇವಲ ಸಾಕ್ಷರತೆ ಮಾತ್ರವಲ್ಲದೆ, ಆರ್ಥಿಕ ಸ್ವಾವಲಂಬನೆ ಕಲಿಸುವ ಶಿಕ್ಷಣ ನೀಡಬೇಕು. ಆಗ ಮಾತ್ರ  ಅಂತರಾಷ್ಟ್ರೀಯ ಮಹಿಳಾ ದಿನದಂದು ನಾವು ಕೋರುವ ಶುಭ ಹಾರೈಕೆಗೆ ಅರ್ಥ ಬರಲು ಸಾಧ್ಯ. 
✍ ಲಲಿತಶ್ರೀ ಪ್ರೀತಂ ರೈ

 

Category
ಕರಾವಳಿ ತರಂಗಿಣಿ