ನಿಮ್ಮ ಆತ್ಮಸಾಕ್ಷಿಗೂ ಇನ್ನೊಬ್ಬರ ಆತ್ಮಸಾಕ್ಷಿಗೂ ಹೋಲಿಕೆ ಸರಿಯೇ ಎಂದು ಯಾರಾದರೂ ಪ್ರಶ್ನಿಸಿದರೆ ಇದು ಜಟಿಲವಾದ ಪ್ರಶ್ನೆ. ಉತ್ತರಿಸಲು ಸ್ವಲ್ಪ ಕಷ್ಟವಾಗಬಹುದು. ಆದರೆ ನಾನು ಹೇಳುತ್ತೇನೆ “ಅದು ಸಾಧ್ಯವೇ ಇಲ್ಲ” ಎಂದು. ಜನ ಮಾತಿಗೆ ಮುಂಚೆ ತನ್ನ ಮನಃಸಾಕ್ಷಿ ಅಥವಾ ಅತ್ಮಸಾಕ್ಷಿಯ ಬಗ್ಗೆ ಮಾತಾಡುವುದನ್ನು ನಾವು ನೋಡಬಹುದು. ಆದರೆ ಆ ಆತ್ಮಸಾಕ್ಷಿ ಇರುವುದು ನಿಜವೇ? ಇದು ಇರುವುದಾದರೂ ಯಾರಿಗೆ? ಇರುವುದಾದರೂ ಎಲ್ಲಿ? ಎಲ್ಲರ ಆತ್ಮಸಾಕ್ಷಿ ಒಂದೇ ರೀತಿ ಇರುವುದೇ? ಅದು ದೋಷಮುಕ್ತವೆಂದು ಎಲ್ಲರಿಗೂ ನಂಬಿಕೆಯಿದೆಯೇ? ಇಂತಹ ಪ್ರಶ್ನೆಗಳು ಕೂಡ ಕೆಲವು ಸಲ ನಮ್ಮನ್ನು ಕಾಡದೇ ಇರುವುದಿಲ್ಲ. ಕೆಲವು ಸಲ ನನಗಂತೂ ಈ ಆತ್ಮಸಾಕ್ಷಿಯೆಂಬುದೇ ಸುಳ್ಳು, ಒಬ್ಬ ಮನುಷ್ಯ ಸಾಂಧರ್ಬಿಕವಾಗಿ ಆತ್ಮಸಾಕ್ಷಿ ಎನ್ನುವ ಪಧವನ್ನು ಬಳಸಿ ತನ್ನ ಎದುರುಗಡೆ ಇರುವವನನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಾನೆ ಅಷ್ಟೆ ಅನ್ನಿಸಿಬಿಡುತ್ತದೆ. ಇನ್ನು ಆತ್ಮಸಾಕ್ಷಿ ಎನ್ನುವುದೊಂದು ಇರುವುದೇ ಆದರೆ ನಾವು ಹುಟ್ಟಿದ ಕುಟುಂಬ ಹಾಗೂ ಬೆಳೆಯುವ ವಾತಾವರಣವು ನಮ್ಮ ಆತ್ಮಸಾಕ್ಷಿಯನ್ನು ಗಾಢವಾಗಿ ಸ್ವಾಧೀನಪಡಿಸಿಕೊಂಡಿರುತ್ತದೆ. ದೇಶ, ವಂಶ, ಕಾಲ, ಜಾತಿ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳು ಕೂಡಾ ಪ್ರಭಾವ ಬೀರಿರುವುದರಲ್ಲಿ ಸಂಶಯವಿಲ್ಲ. ನಾವೆಲ್ಲಾ ಒಂದೇ ಅಂತ ನಾವೆಷ್ಟೇ ಬೊಬ್ಬಿಟ್ಟರೂ ಎಲ್ಲರ ಆಚಾರ ವಿಚಾರಗಳು ಬೇರೆ ಬೇರೆಯಾಗಿರುತ್ತದೆ. ಮನುಷ್ಯರಲ್ಲಿ ವಿಭಿನ್ನ ಪ್ರಕೃತಿಯವರೂ, ಸ್ವಭಾವವುಳ್ಳವರೂ ಇದ್ದಾರೆ. ಹಾಗೆಯೇ ಅವರ ಆಸೆ, ಅಭಿಲಾಷೆಗಳು ವಿಭಿನ್ನವಾಗಿದೆ. ವೈಜ್ಞಾನಿಕ ನಿಲುವುಗಳಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲರ ಚಿಂತನೆಗಳು ಎಂದೆಂದಿಗೂ ಬಿನ್ನವೇ. ಹಾಗಿರುವಾಗ ಎಲ್ಲರ ಆತ್ಮಸಾಕ್ಷಿಯೂ ಬಿನ್ನವಾಗಿರಲೇ ಬೇಕು ಅಲ್ಲದೆ. ಅವರ ಸಹವಾಸಗಳು ಎಲ್ಲವೂ ಆತ್ಮಸಾಕ್ಷಿಯ ಮೇಲೆ ಪರಿಣಾಮ ಬೀರುತ್ತದೆ. ಅವರು ಕೆಟ್ಟ ವಾತಾವರಣದಲ್ಲಿ ಬೆಳೆದಿದ್ದರೆ ಅವರಿಗೆ ಒಳಿತು ಕೆಡುಕುಗಳ ಅಥವಾ ಅದು ಸಾಮಾಜಿಕವಾಗಿ ಯಾವ ರೀತಿ ಪರಿಣಾಮ ಆಗಬಹುದು ಎನ್ನುವುದನ್ನು ಅವರ ಆತ್ಮಸಾಕ್ಷಿ ಎಚ್ಚರಿಸಲು ಸಾಧ್ಯವಿಲ್ಲ. ಕಾರಣ ಅವನ ಆತ್ಮಸಾಕ್ಷಿಯ ಪ್ರಕಾರ ಅವನು ಮಾಡುವುದೇ ಸರಿಯಾಗಿರುತ್ತದೆ. ಬೇರೆಯವರು ಮಾಡಿದ್ದೆಲ್ಲವೂ ತಪ್ಪಾಗಿ ಕಾಣುತ್ತದೆ. ಒಳಿತು-ಕೆಡುಕು, ನ್ಯಾಯ ಅನ್ಯಾಯಗಳನ್ನು ಮನುಷ್ಯನ ಆತ್ಮಸಾಕ್ಷಿಗೆ ಬಿಟ್ಟರೆ ಅದು ಮಹಾಮೂರ್ಖತನವಾಗುತ್ತದೆ. ಮನುಷ್ಯನ ಆತ್ಮಸಾಕ್ಷಿಯಲ್ಲಿ ದೌರ್ಬಲ್ಯವಿಲ್ಲವೆಂದು ನಂಬುವುದಕ್ಕೆ ಆಗುವುದಿಲ್ಲ. ಆತ್ಮಸಾಕ್ಷಿಯಲ್ಲಿ ದೌರ್ಬಲ್ಯ ಇಲ್ಲವೆಂದಾದಲ್ಲಿ ಖಂಡಿತವಾಗಿಯೂ ಈ ಸಮಾಜದಲ್ಲಿ ಕೊಲೆ, ದರೋಡೆ, ಅತ್ಯಾಚಾರಗಳಂತಹ ಕೃತ್ಯಗಳು ನಡೆಯಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲ ಕಾನೂನು, ನ್ಯಾಯಾಂಗ ವ್ಯವಸ್ಥೆಯ ಅಗತ್ಯವೂ ಇರಲಿಲ್ಲ. ಮನುಷ್ಯ ಯಾವತ್ತಿಗೂ ದೇಹೇಚ್ಛೆಯ ಗುಲಾಮನಾಗಿ ಬದುಕುತ್ತಿರುತ್ತಾನೆ. ಇದರ ಪರಿಣಾಮ ಇಂತಹ ಘಟನೆಗಳು ನಡೆಯುತ್ತದೆ. ಮನುಷ್ಯ ಎಷ್ಟೇ ಮುಂದುವರಿದರೂ, ಬೆಳೆದರೂ ಜೀವನದಲ್ಲಿ ಆಗಾಗ ತನ್ನ ದಾರಿಯನ್ನು ತಿರುಗಿ ನೋಡಬೇಕಂತೆ. ನಾನು ಯಾರು? ಎಲ್ಲಿಂದ ಬಂದೆ? ಹಿಂದೆ ಹೇಗಿದ್ದೆ? ಈಗ ಹೇಗಿದ್ದೇನೆ? ಎಲ್ಲಿ ಹೋಗಬೇಕಾಗಿದೆ? ಜೀವನದ ಉದ್ದೇಶವೇನು? ಅದು ಯಾವ ರೀತಿಯಿರಬೇಕು? ಆಗ ಮಾತ್ರ ಮನುಷ್ಯ, ಮನುಷ್ಯನಾಗಿ ಮುಂದುವರಿಯಲು ಸಾಧ್ಯ. ಈ ಸಮಾಜದಲ್ಲಿ ನಮ್ಮ ಆತ್ಮಸಾಕ್ಷಿಯ ಮಾತು ಕೇಳಿ ಮಾನವೀಯವಾಗಿ ಬದುಕಲು ಬಯಸಿದರೆ, ನಾವು ಇತರರಿಂದ ಅಸಡ್ಡೆಗೆ ಒಳಗಾಗುತ್ತೇವೆ. ಕಾರಣ ನಮ್ಮ ಮಾನವೀಯತೆಯೇ ಇನ್ನೊಬ್ಬರ ಆತ್ಮಸಾಕ್ಷಿಗೆ ದೌರ್ಬಲ್ಯವಾಗಿ ಕಾಣಿಸಿಬಿಡುತ್ತದೆ. ಹಾಗಂತ ನಾವು ಆತ್ಮಸಾಕ್ಷಿ ಮರೆತು ಎಲ್ಲರಂತೆ ಬದುಕಿಬಿಡೋಣ ಎಂದರೆ ನಮ್ಮ ಆತ್ಮಸಾಕ್ಷಿ ಅದನ್ನು ಒಪ್ಪದಿರಬಹುದು. ಮತ್ತೆ ಇಲ್ಲಿ ಬೆಳೆದ ವಾತಾವರಣ ನಮ್ಮನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ಆದರೆ ಎದುರಿನ ವ್ಯಕ್ತಿಯಲ್ಲಿ ನಾವು ಅದನ್ನು ಬಯಸುವುದು ತಪ್ಪಾಗುತ್ತದೆ. ಕಾರಣ ಅವರ ಮಾನಸಿಕ ಸ್ಥಿತಿಗತಿಗಳ ಕೈಗೊಂಬೆಯಾಗಿ ಅವರ ಆತ್ಮಸಾಕ್ಷಿ ನಲಿದಾಡುತ್ತಿರುತ್ತದೆ. ಅದಕ್ಕಾಗಿ ಇದೆಲ್ಲಾ ತೊಳಲಾಟಗಳಿಂದ ಹೊರಬಂದು ನಾವು ನಿಜವಾಗಿಯೂ ಸರಿಯಾದುದನ್ನು ಮಾಡುತ್ತಿದ್ದೇವೆಯೇ ಎಂದು ನಿರಂತರವಾಗಿ ವಿಶ್ಲೇಷಿಸುವುದು ಅವಶ್ಯಕತೆಯಿಲ್ಲ. ಸ್ವಾರ್ಥದಿಂದ ಮುಕ್ತನಾದವನು ಯಾರೂ ಇಲ್ಲ, ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸ್ವಾರ್ಥ ಇದ್ದೇ ಇರುತ್ತದೆ. ಮನುಷ್ಯನಲ್ಲಿ ಆತ್ಮಸಾಕ್ಷಿ ಇದ್ದಿದ್ದೇ ಆದರೆ ಆ ಸ್ವಾರ್ಥದಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಬದುಕಬೇಕೆನ್ನುವುದನ್ನು ನಮ್ಮ ಆತ್ಮಸಾಕ್ಷಿ ಎಚ್ಚರಿಸುವ ಕೆಲಸ ಮಾಡಬೇಕು. ಆಗ ಮಾತ್ರ ಎಲ್ಲರೂ ಸಂತೋಷವಾಗಿ ಬದುಕು ಸಾಗಿಸಬಹುದು ಎನ್ನುವುದನ್ನು ಮನಗಂಡು ಮುಂದಿನ ಪೀಳಿಗೆಗೆ ದಾರಿದೀಪವಾಗೋಣ...
✍ ಲಲಿತಶ್ರೀ ಪ್ರೀತಂ ರೈ