image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಲ್ಯ ಕಳೆದುಕೊಂಡ ನತದೃಷ್ಟರು

ಬಾಲ್ಯ ಕಳೆದುಕೊಂಡ ನತದೃಷ್ಟರು

ಬಾಲಕಾರ್ಮಿಕ ಪದ್ದತಿಯನ್ನು ರದ್ದು ಮಾಡುವ ಬಗೆಗಿನ ಗೋಡೆ ಬರಹವೊಂದು ನನ್ನನ್ನು ಬಾಲ್ಯದ ಕಡೆ ಎಳೆದುಕೊಂಡು ಹೋಗಿ ಬಿಟ್ಟಿತು. ನಾನು ಚಿಕ್ಕವಳಿದ್ದಾಗ ಇಂತಹ ಪದ್ದತಿ ಇದ್ದಿದ್ದರೆ ನಾನು ವಿದ್ಯೆ ಕಲಿಯಲು ಸಾಧ್ಯವೇ ಆಗುತ್ತಿರಲ್ಲವೇನೊ. ಕಿತ್ತು ತಿನ್ನುವ ಬಡತನದಲ್ಲಿದ್ದ ಅಮ್ಮನಿಂದ ನಮ್ಮನ್ನು ಓದಿಸುವುದು ಮರಿಚಿಕೆಯಾಗಿರುತ್ತಿತ್ತು. ಅಂತಹ ಸಮಯದಲ್ಲಿ ಅಮ್ಮನಿಗೆ ಹೆಗಲು ಕೊಟ್ಟವರು ನನ್ನ ಅಣ್ಣ ಎನ್ನಾರ್ ಕೆ ವಿಶ್ವನಾಥ್. ಚಿಕ್ಕ ವಯಸ್ಸಿನಲ್ಲೇ ಕಲ್ಲು ಕಡಿಯುವ ಕೆಲಸ, ಬೀಡಿ ಕಟ್ಟುವ ಕೆಲಸ ಹೀಗೆ ಕೂಲಿ ನಾಲಿ ಮಾಡಿ ಅವರ ವಿದ್ಯಾಭ್ಯಾಸದ ಜೊತೆಗೆ ನನ್ನನ್ನು ಸಾಕುವುದರೊಂದಿಗೆ ವಿದ್ಯಾಬ್ಯಾಸದ ಹೊರೆ ಹೊತ್ತುಕೊಂಡವರು ನನ್ನ ಅಣ್ಣ. ಅಂತಹ ಸಮಯದಲ್ಲಿ ಯಾರಾದರೂ ಪುಣ್ಯಾತ್ಮರು ಮಕ್ಕಳನ್ನು ಕೆಲಸ ಮಾಡಿಸಬಾರದು ಅಂದಿದ್ದರೆ, ಅಬ್ಭಾ ನೆನೆಸಿಕೊಂಡರು ಭಯ ಆಗುತ್ತದೆ. ಇದು ನಮ್ಮ ಕಥೆ ಮಾತ್ರವಲ್ಲ. ಎಷ್ಟೋ ಬಡ ಮಕ್ಕಳ ಕಥೆ. ಇನ್ನು ಎಷ್ಟೋ ಮಕ್ಕಳು ರಜಾ ಅಥವಾ ಬಿಡುವಿನ ವೇಳೆಯಲ್ಲಿ ತಮ್ಮ ಜೊತೆಯವರು ಆಟ ಆಡುವುದನ್ನು ಆಸೆಗಣ್ಣಿನಲ್ಲಿ ನೋಡುತ್ತಾ ತಾನು ಮಾತ್ರ  ಆಟದ ಕಡೆ ಹೋಗದೇ ಕೆಲಸ ಮಾಡಿ ತನ್ನವರ ಹೊಟ್ಟೆ ತುಂಬಿಸಿ, ತನ್ನ ಮತ್ತು ತನ್ನವರ ಜೀವನದ ಹಾದಿಗೆ ಬೆಳಕಾಗಿದ್ದಾರೆ.  ಒಂದು ದೃಷ್ಟಿಯಿಂದ ಬಾಲಕಾರ್ಮಿಕ ಪದ್ದತಿ ಅಳಿಸಿ ಹೋಗಬೇಕು, ನಿಜ ಆದರೆ ಬಡತನವೆಂಬ ಮಹಾಮಾರಿ ಇರುವವರೆಗೆ ಇದು ಸಾದ್ಯವೇ?  ಮಕ್ಕಳು ರಜಾ  ಸಮಯದಲ್ಲಿ ಕೆಲಸಮಾಡಿ ಅದರಿಂದ ಬಂದ ಹಣದಲ್ಲಿ ತನ್ನ ಮತ್ತು ತನ್ನ ಒಡಹುಟ್ಟಿದವರ ಆಸೆ, ಕನಸುಗಳನ್ನು ಈ ಮೂಲಕ ಸ್ವಾಭಿಮಾನದಿಂದ  ಈಡೆರಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಹೌದು ಎಷ್ಟೋ ಬಡ ಮಕ್ಕಳು ತನ್ನ ಬಾಲ್ಯವನ್ನು ಕಳೆದುಕೊಂಡು ತನ್ನ ಒಡ ಹುಟ್ಟದವರಿಗೆ ಬಾಲ್ಯ ಕೊಟ್ಟಿದ್ದಾರೆ. ಎಲ್ಲಿ ಒಳ್ಳೆಯದಿರುತ್ತದೋ  ಅಲ್ಲಿ ಕೆಟ್ಟದ್ದು ಕೂಡ ಇರಲೇ ಬೇಕು ಅಂತ ಅಮ್ಮ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತಿದೆ. ಈ ಬಾಲ ಕಾರ್ಮಿಕ ಪದ್ದತಿ ಎಂದರೆ ಏನು? ಇದರಿಂದ ಅನುಕೂಲ ಹಾಗೂ ಅನಾನುಕೂಲ ಯಾರಿಗೆ ? ಎನ್ನುವುದನ್ನೆಲ್ಲಾ ಕೆಣಕುತ್ತಾ ಹೋದರೆ, ಮಕ್ಕಳ ದಿನನಿತ್ಯದ ಹಾಗು ದೀರ್ಘಾವಧಿ ದುಡಿಮೆಯ ಉದ್ಯೋಗವನ್ನು ಬಾಲ ಕಾರ್ಮಿಕ ಪದ್ದತಿ ಎಂದು ಕರೆಯಲಾಗುತ್ತದೆ. ಇದನ್ನು ಹಲವು ಅಂತರರಾಷ್ಟ್ರೀಯ ಸಂಘಗಳು ಶೋಷಣೀಯ ಎಂದು ಪರಿಗಣಿಸಿವೆ ಮತ್ತು ಹಲವಾರು ದೇಶಗಳಲ್ಲಿ ಈ ಪದ್ಧತಿ ಕಾಯಿದೆಗೆ ವಿರೋಧವಾದದ್ದು.  ೧೯ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟನ್ನಲ್ಲಿ ಬಾಲಕಾರ್ಮಿಕರ ವಿರುದ್ಧದ ಮೊದಲನೆಯ ಸಾಮಾನ್ಯ ಕಾಯಿದೆ ಮತ್ತು ಕಾರ್ಖಾನೆಗಳ ಕಾಯಿದೆಯನ್ನು ಜಾರಿಗೊಳಿಸಲಾಯಿತು. ೯ ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಕೆಲಸ ಮಾಡಲು ಬಿಡುತ್ತಿರಲ್ಲಿಲ್ಲ ಮತ್ತು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನವೊಂದಕ್ಕೆ ದುಡಿಮೆಯನ್ನು ೧೨ ಘಂಟೆಗಳಿಗೆ ಮಿತಿಗೊಳಿಸಲಾಯಿತು.   ೧೯೭೩ರ ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಸುಮಾರು ೧೪ರಿಂದ ೧೬ರ ವಯಸ್ಸಿನ ಒಳಗಿನ ಮಕ್ಕಳನ್ನು ಸ್ವಾಧೀನಕ್ಕೆ ಒಳಪಡಿಸಿಕೊಳ್ಳಬಹುದೆಂಬ ನೀತಿಯನ್ನು ಅಮೆರಿಕಾವು ಅಳವಡಿಸಿಕೊಂಡಿತು.  ಅಮೆರಿಕಾದ ಬಾಲ ಕಾರ್ಮಿಕ ಕಾಯಿದೆಗಳು, ಪೋಷಕರ ಸಹಕಾರವಿಲ್ಲದೆ ಮತ್ತು ಯಾವುದೇ ನಿರ್ಬಂಧವಿಲ್ಲದೆ ಉದ್ಯಮದಲ್ಲಿ ದುಡಿಯುವ ಕಿರಿ ನಿಗದಿತ ವಯಸ್ಸನ್ನು ೧೬ ಎಂದು ಪರಿಗಣಿಸಿವೆ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಮಕ್ಕಳನ್ನು, ಅತ್ಯಂತ ಕಿರಿ ವಯಸ್ಸಾದ ೪ ವರ್ಷದವರನ್ನೂ, ಕಾರ್ಖಾನೆಗಳ ಅಪಾಯಕಾರಿ ಹಾಗು ಮಾರಕವಾಗಿ ದುಡಿಸಿಕೊಳ್ಳಲಾಗಿತ್ತು. ಇದನ್ನು ಕೆಲವು ಶ್ರೀಮಂತ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಬಹಿಷ್ಕರಿಸಿವೆ.  ೧೯೦೯ ರಲ್ಲಿ ನ್ಯೂಯಾರ್ಕ್ ಸಿಟಿಯ ಲೇಬರ್ ಡೇ ಪರೇಡ್ ನಲ್ಲಿ ಇಬ್ಬರು ಹುಡುಗಿಯರು ಬಾಲಕಾರ್ಮಿಕ ಪದ್ದತಿಯನ್ನು ಮಕ್ಕಳ ಗುಲಾಮಗಿರಿ ಎಂದು ಕರೆದು ವಿರೋಧಿಸಿದರು.  ೧೮೪೭ರ ಮತ್ತೊಂದು ಕಾಯಿದೆಯ ಪ್ರಕಾರ ಮಕ್ಕಳು ಮತ್ತು ವಯಸ್ಕರಿಗೆ ದಿನಕ್ಕೆ ೧೦ ಘಂಟೆಗಳ ಕಾಲ ದುಡಿಯುವುದನ್ನು ಮಿತಿಗೊಳಿಸಲಾಯಿತು. ಬಾಲ ಕಾರ್ಮಿಕ ಪದ್ಧತಿಯು ಪ್ರಪಂಚದ ಕೆಲವು ಭಾಗಗಳಲ್ಲಿ ಇಂದಿಗೂ ಸಾಮಾನ್ಯವಾಗಿದೆ, ಅವುಗಳಲ್ಲಿ ಕಾರ್ಖಾನೆ ಕೆಲಸ, ಗಣಿಗಾರಿಕೆ, ವೇಶ್ಯಾವೃತ್ತಿ, ಕಲ್ಲು ಒಡೆಯುವ ಕೆಲಸ, ಕೃಷಿ-ಬೇಸಾಯ, ವ್ಯವಹಾರಗಳಲ್ಲಿ ಪೋಷಕರಿಗೆ ಸಹಾಯ ಮಾಡುವುದು.  ಇದರಲ್ಲಿ ಬಡ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ಇಂದಿಗೂ ನಾವು ನೋಡಬಹುದು. ಇವೆಲ್ಲದರ ವಿರೋದವಾಗಿ ಹಲವಾರು ಹೋರಾಟಗಳು ನಡೆದರೂ, ಪ್ರಪಂಚದಾದ್ಯAತ ಸುಮಾರು ೨೫೦ ಮಿಲಿಯನ್ ಮಕ್ಕಳು ದುಡಿಯುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ. ಇಂತಹ ಪದ್ದತಿಯನ್ನು ಹೋಗಲಾಡಿಸಲು ಬೇಕಾಗಿರುವುದು ಆರ್ಥಿಕ ಸಮತೋಲನ. ಉಳ್ಳವರು ಮನೆಗಳ ಮೇಲೆ ಮನೆ ಕಟ್ಟುತ್ತಿದ್ದಾರೆ. ಬಡವರು ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಬಾಲಕಾರ್ಮಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದನ್ನು ತಡೆಯಲು ಕ್ರಿಯಾತ್ಮಕವಾಗಿ ಕೆಲಸಮಾಡುವ ಉದ್ದೇಶದಿಂದ ೧೨ನೇ ಜೂನ್‍ರಂದು ಅಂತರರಾಷ್ಟ್ರೀಯ ಬಾಲಕಾರ್ಮಿಕ ವಿರೋಧಿ ದಿನವನ್ನೇನೋ ಆಚರಿಸುತ್ತಿದೆ ಆದರೆ ಅಪ್ಪ ಅಮ್ಮನ ಕಿತ್ತು ತಿನ್ನುವ ಬಡತನಕ್ಕೆ ಏನು ಪರಿಹಾರ?

Category
ಕರಾವಳಿ ತರಂಗಿಣಿ