image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

“ಮಾತು ಮನೆ ಕೆಡಿಸಿತು..ತೂತು ಒಲೆ ಕೆಡಿಸಿತು”

“ಮಾತು ಮನೆ ಕೆಡಿಸಿತು..ತೂತು ಒಲೆ ಕೆಡಿಸಿತು”

ನಾನು ಯಾವಗಲೂ ಹೇಳುವುದೊಂದೆ “ಈ ಗಾದೆ ಮಾತುಗಳನ್ನು ಸುಮ್ಮನೆ ಕಾಟಾಚಾರಕ್ಕೆ ನಮ್ಮ ಹಿರಿಯರು ಹೇಳಿಲ್ಲ”, ಅವರ ಜೀವನದಲ್ಲಿ ಆದ ಅನುಭವಗಳನ್ನು ಅದೆಷ್ಟು ಚೆನ್ನಾಗಿ ಪೋಣಿಸಿ ತನ್ನ ಕಿರಿಯರಿಗೆ ಬುದ್ದಿವಾದದ ರೀತಿಯಾಗಿ ಹೇಳಿದ್ದಾರೆ. ಅಂತಹ ಮಾತು ಅಥವ ಗಾದೆಯನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡರೆ ಸ್ವಲ್ಪ ಮಟ್ಟಿಗಾದರೂ ಈ ಸಮಾಜದಲ್ಲಿ ಇನ್ನೊಬ್ಬರಿಗೆ ಉಪಕಾರ ಆಗದಿದ್ದರೂ ಅಪಕಾರ ಆಗದಂತೆ ಬದುಕಬಹುದೇನೋ. ನಾವು ಜೀವನದಲ್ಲಿ ಎಷ್ಟು ಬೇಕೊ ಅಷ್ಟು, ಏನು ಬೇಕೋ ಅದನ್ನು ಮಾತ್ರ  ಮಾತಾನಾಡುವುದರಿಂದ ಎನೂ ಅನಾಹುತ ಆಗುವುದಿಲ್ಲ. ಅನಾವಶ್ಯಕವಾಗಿ ಆಡುವ ಅಥವಾ ಆಡಿದ ಮಾತುಗಳು ಅನಾಹುತಕ್ಕೆ ಕಾರಣ.  “ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು” ಎನ್ನುವ ಹಾಗೇ, ಕೆಲವು ಸಲ ಕೋಲಿನಿಂದ ಹೊಡೆದ ಪೆಟ್ಠದರೂ ಮಾಸಿ ಹೋಗಬಹುದು ಆದರೆ ಮನಸಿಗೆ ನೋವು ಕೊಟ್ಟ ಮಾತುಗಳನ್ನು ಮರೆಯಲು ಸಾದ್ಯವೇ ಇಲ್ಲ.  ಮಿತಿಯಿಲ್ಲದ ಮಾತುಗಳು ಖಂಡಿತ ಮನ, ಮನೆಯನ್ನು  ಕೆಡಿಸುವುದರಲ್ಲಿ ಸಂದೇಹವೇ ಇಲ್ಲ.   ಮನುಷ್ಯನ ದೇಹದಲ್ಲಿ ಎರಡು ಕೈ, ಎರಡು ಕಾಲು, ಎರಡು ಕಿವಿ, ಎರಡು ಕಣ್ಣು ಆದರೆ ಒಂದೇ ಬಾಯಿ. ಸಧ್ಯ ನಮಗೇನಾದರು ಎರಡು ಬಾಯಿದ್ದಿದ್ದರೆ, ಅಬ್ಭಾ  ಆ ದೇವರೇ ಬಲ್ಲ... ನಮ್ಮ ಬಾಷೆಯಲ್ಲಿ ಕೆಲವರು ಹೇಳುತ್ತಾರೆ “ಆಯಗ್ ರಡ್ಡ್ ನಾಲಗೆಯ” ಅಂದರೆ ಅವನಿಗೆ ಎರಡು ನಾಲಿಗೆ ಅಂತ ಅದನ್ನು ಯಾವಾಗ ಹೇಗೇ ಬೇಕಾದರೂ ತಿರುಗಿಸುತ್ತಾರೆ. ನೀವು ಎದುರು ಬಂದರೆ ನಿಮ್ಮಲ್ಲಿ ನಗು ನಗುತ್ತಾ ಮಾತಾಡಿ, ಕೆಲವು ಸಲ ನಿಮ್ಮನ್ನು ಅಟ್ಟಕ್ಕೆ ಏರಿಸಿ (ಹೊಗಳಿ) ನೀವು ತಿರುಗುತ್ತಿದ್ದಂತೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿರುತ್ತಾರೆ, ಇಂತವರಿಗೇ ಇರಬಹುದು ಎರಡು ನಾಲಿಗೆಯವರು ಎನ್ನುವುದು ಅಂತ ನನ್ನ ಅನಿಸಿಕೆಯಷ್ಟೇ. ಯಾಕೆಂದರೆ ನನ್ನ ಬದುಕಿನಲ್ಲಿ ಆಗಾಗ ಇಂತವರು ಇಣುಕುತ್ತಿರುತ್ತಾರೆ. ನಿಮ್ಮ ಬದುಕಿನಲ್ಲಿ ಹೇಗೋ ಗೊತ್ತಿಲ್ಲ. ಅಂತವರು ನಿಮಗೆ ಸಿಗದಿರಲಿ ಎನ್ನುವುದೇ ನನ್ನ ಅಂಬೋಣ. ಇಂತವರು ತಾನು ದುಡ್ಡು ಕಾಸು, ಆಸ್ತಿ ಅಂತಸ್ತಿನಲ್ಲಿ ಮೀಯುತ್ತಿದ್ದರೂ ನೆಮ್ಮದಿಯಗಿ ಒಂದು ದಿನವೂ ನಿದ್ದೆ ಮಾಡಿರಲು ಸಾದ್ಯವೇ ಇಲ್ಲ. ಯಾಕೆಂದರೆ ಅವರು ಇನ್ನೊಬ್ಬರ ಬಗ್ಗೆ ಕತೆ ಕಟ್ಟುವುದರಲ್ಲೇ ಜೀವನವನ್ನು ಕಳೆದು ಬಿಡುತ್ತಾರೆ. ಒಂದು ರೀತಿಯಲ್ಲಿ ಅವರು ಕೂಡ ಕಲೆಗಾರರೆ. ಒಬ್ಬೊಬ್ಬರಿಗೆ ಒಂದೊAದು ತರದ ಕಲೆ ಒಲಿದಿರುತ್ತದೆ. ಕೆಲವರಿಗೆ ಒಳ್ಳೆಯ ರೀತಿಯ ಕಲೆ, ಕೆಲವರಿಗೆ ಇಂತಹ ವಕ್ರ ಕಲೆಗಳು. ಇದಕ್ಕೆ ನಮ್ಮ ಹಿರಿಯರು “ಮಾತು ಬೆಳ್ಳಿ ಮೌನ ಬಂಗಾರ” ಎಂದೆಲ್ಲಾ ಹೇಳಿ ನಮ್ಮನ್ನು ಎಚ್ಚರಿಸಿರಬೇಕು.   ಮಾತು ಹೇಗಿರಬೇಕು ಅಂತ ಬಸವಣ್ಣನವರ ವಚನದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು” ಇದ್ದಾರೆ ಈ ರೀತಿ ಮಾತನಾಡುವವರು. ಇಂತವರೊಡನೆ ಮಾತನಾಡಿದಾಗ ಮತ್ತೆ ಇನ್ನೊಂದಿಷ್ಟು ಮಾತಾಡುವ ಮನಸಾಗುತ್ತದೆ. ಆದರೆ ಇಂತವರು ಸಿಗುವುದು ಬಹಳ ಕಡಿಮೆಯೆನ್ನಿ. ಇನ್ನು ಅಧಿಕಾರ ಮದದಿಂದ, ಹಣದ ಬಲದಿಂದ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡು ಸೌಜನ್ಯತೆ ಇಲ್ಲದೆ, ದೌರ್ಜನ್ಯ ಮಾಡುವವರಿಗೆ ಬಸವಣ್ಣರ ಈ ವಚನ ಅನ್ವಯಿಸುವುದಿಲ್ಲ ಬಿಡಿ.  ನಿಷ್ಠುರವಾಗಿ ಸತ್ಯವನ್ನು ನುಡಿಯುವವರ ನಾಲಿಗೆಯೂ ಹರಿತವೇ, ಆದರೆ ಅದು ಹಾನಿ ಮಾಡುವುದಿಲ್ಲ. ಶ್ರೀ ಪುರಂದರದಾಸರು ತನ್ನ ದಾಸವಾಣಿಯಲ್ಲಿ “ಆಚಾರವಿಲ್ಲದ ನಾಲಿಗೆ, ನಿನ್ನ ನೀಚಗುಣವ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿ ಕೊಂಡಿರುವAಥ ನಾಲಿಗೆ, ಇದ್ದ ಮಾತನಾಡು ನಾಲಿಗೆ ಹಿಡಿದೊದ್ದರೂ ಹುಸಿಬೇಡ ನಾಲಿಗೆ, ಇದ್ದುಕೊಂಡು ಉಣ್ಣು ಅಮೃತಾನ್ನಗಳನು, ಬುದ್ಧಿಯಲಿರು ಕಂಡೆಯ ನಾಲಿಗೆ, ಬಡವರ ಮಾತಿಗೆ ನಾಲಿಗೆ, ನೀ ಕಡುಚತುರ ನುಡಿಯದಿರು ನಾಲಿಗೆ, ಹಿಡಿದು ಕೊಂಡೊಯ್ವರು ಯಮನ ಭಟರು ನಿನ್ನ, ನುಡಿ ಕಂಡೆಯ ಹರಿಯಂದು ನಾಲಿಗೆ, ಹರಿಪಾದವೆ ಗತಿಯೆಂದು ನಾಲಿಗೆ - ನಿನಗೆ, ಪರರ ಚಿಂತೆಯೇಕೆ ನಾಲಿಗೆ, ಸಿರಿವರ ಪುರಂದರ ವಿಠ್ಠಲರಾಯನನು, ಮರೆಯದೆ ನೆನೆ ಕಂಡೆಯ ನಾಲಿಗೆ” ಎಂತಹ ಅರ್ಥಪೂರ್ಣವಾದ ದಾಸವಾಣಿ. ಈ ಮನುಷ್ಯರು ನಾಲಿಗೆಯನ್ನು ತಮ್ಮತಮ್ಮ ಹಿಡಿತದಲ್ಲಿಟ್ಟುಕೊಂಡರೆ ಎಷ್ಟು ಚೆನ್ನ ಎಂದು ಪರರ ಬಗ್ಗೆ ಭಾವಿಸುತ್ತಾ ನಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ನಾವು ಖಂಡಿತ ತಯಾರಿರುವುದಿಲ್ಲ. ಮಾನವ ಸಂಬAಧಗಳನ್ನು ಬೆಸುಗೆ ಹಾಕಲಾರದ ರೀತಿಯಲ್ಲಿ ಪುಡಿಗಟ್ಟುವ ಶಕ್ತಿಯಿರುವ ಒಂದೇ ಒಂದು ಆಯುಧವೆಂದರೆ ಅದು ನಮ್ಮ ನಾಲಿಗೆ ಮಾತ್ರ.  ಯಾವುದೇ ಶಸ್ತ್ರಗಳಿಗೆ ಹೋಲಿಸಿದರೂ ನಾಲಿಗೆಯ ಹರಿತಕ್ಕೆ ಯಾವುದೂ ಸಮವಿರಲು ಸಾದ್ಯವಿಲ್ಲ.  ಕತ್ತಿಯ ಹರಿತವನ್ನು ನಾವು ಅರಿಯಬಹುದು, ಆದರೆ ನಾಲಿಗೆಯ ಹರಿತವನ್ನು ಅರಿಯುವುದು ಕಷ್ಟವಂತೆ. ನಾಲಿಗೆಯ ಇರಿತ ಎಷ್ಟೊಂದು ಆಳವಿರುತ್ತದೆಯೆಂದರೆ  ಆ ಗಾಯ ನಮ್ಮ ಜೀವಿತಾವದಿಯಲ್ಲೂ ವಾಸಿಯಾಗಲು ಸಾದ್ಯವಿಲ್ಲ. ಆದರೆ ಬೇರೆಯವರ ಮಾತಿನಿಂದ ನಮಗಾದ ಗಾಯವನ್ನು ಮನಸಿನಲ್ಲಿಯೇ ಮುಚ್ಚಿಟ್ಟುಕೊಂಡು ಗಾಯ ವಾಸಿಯಾದ ಹಾಗೇ ಕೆಲವು ಸಲ ನಟಿಸುತ್ತೇವಷ್ಟೇ. ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವ ಈ ನಾಲಿಗೆ ಎಷ್ಟು ಉದ್ದ ಬೇಕಾದರೂ ಚಾಚಬಹುದು, ತನ್ನ ದೋಷಗಳನ್ನು ಮುಚ್ಚಿಟ್ಟು ಇನ್ನೊಬ್ಬರನ್ನು ದೋಷಿಸುವುದೆಂದರೆ ಅದೆಷ್ಟು ಖುಷಿಯೋ ನಮ್ಮ ಜನಕ್ಕೆ.  ಆಚಾರವೆಂಬುದು ನಮ್ಮ ಹೃದಯಕ್ಕೆ ಸಂಬAಧಪಟ್ಟ ವಿಚಾರ. ಆತ್ಮಶುದ್ದಿಯಿಲ್ಲದೆ ಆಡಿದ ಮಾತುಗಳು ಎಬ್ಬಿಸುವ ಅನಾಹುತ ಪ್ರಾಕೃತಿಕ ಅನಾಹುತಗಳಂತೆ ಬಾಳಿನಲ್ಲಿ ಸುನಾಮಿಯನ್ನೇ ಎಬ್ಬಿಸಿರುವುದನ್ನು ನಾವು ನೋಡಿರಬಹುದು. “ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ”, ನಮ್ಮ ಆರೋಗ್ಯಕ್ಕೆ ಬೇಕಾದ ಆಹಾರವನ್ನು ಸಮತೋಲನದಲ್ಲಿ ಸಮಯಕ್ಕೆ ಸರಿಯಾಗಿ ತೆಗೆದುಕೊಂಡಲ್ಲಿ ನಮ್ಮ ಆರೋಗ್ಯವು ಸ್ಥಿರವಾಗಿರುವಂತೆ ಮಾತುಗಳು ನಮ್ಮ ನಾಲಿಗೆಯಿಂದ ಹೊರಳಿ ಹೊರಹೊಮ್ಮುವ ಮುನ್ನ ವಿವೇಚನಾಯುಕ್ತವಾಗಿ ಯೋಚಿಸಿ ಆಡಿದರೆ ಎಲ್ಲರಿಗೂ ಒಳಿತು. “ಚಾಡಿ ಹೇಳಲು ಬೇಡ ನಾಲಿಗೆ” ಇದಂತೂ ಕೆಲವರ ಜನ್ಮಸಿದ್ದ ಹಕ್ಕು ಎಂಬAತಾಗಿದೆ. ಹಾಗಿರುವಾಗ ಹಿರಿಯರ ಬುದ್ದಿಮಾತುಗಳಿಗೆಲ್ಲಿ ಬೆಲೆ ಸಿಕ್ಕೀತು? “ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಕಳೆಯು, ಮಾತಿನಿಂ ಸರ್ವ ಸಂಪದವು ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ”.  ಅಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ನಿನ್ನ ಮಾತು ನಿನ್ನತನ ಹಾಗೆ ನೀನು ಯಾರ ಸಹವಾಸದಲ್ಲಿದ್ದೀಯ ಅಂತ ತೋರಿಸುತ್ತದೆ ಅಂತ. ಹೌದು ಕೆಲವರ ಬಾಯಿಯಿಂದ ಹೊರಡುವ ಪಧಪುಂಜಗಳನ್ನು ಕೇಳಿದಾಗ ಅವರು ಬೆಳೆದ ವಾತಾವರಣ ಮತ್ತು  ಅವರ ಸುತ್ತಲಿನ ಜನರು ಹೇಗಿದ್ದಾರೆ ಎನ್ನುವುದನ್ನು ತೋರುತ್ತದೆ.  “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತಿಹುದು ಸರ್ವಜ್ಙ” ಅಂತ ಸರ್ವಜ್ಙರು ಇದಕ್ಕೇ ಹೇಳಿರಬೇಕು. ನಾವು ಯಾರ ಸಹವಾಸದಲ್ಲಿರುತ್ತೇವೋ ಅವರ ಬುದ್ದಿಯನ್ನು ಬೇಗ ಕಲಿತುಕೊಳ್ಳುತ್ತೇವೆ ಅದರಲ್ಲೂ ಕೆಟ್ಟದ್ದು ಆಕರ್ಷಿಸುವುದು ಬೇಗ. ಡಿ.ವಿ.ಜಿಯವರು ತನ್ನ ಮಂಕುತಿಮ್ಮನ ಕಗ್ಗದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾರೆ “ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ, ಫಲ ಮಾಗುವಂದು ತುತ್ತೂರಿ ದನಿಯಿಲ್ಲ, ಬೆಳಕೀವ ಸೂರ್ಯಚಂದ್ರರದೊAದು ಸದ್ದಿಲ್ಲ, ಹೊಲಿ ನಿನ್ನ ತುಟಿಗಳನು– ಮಂಕುತಿಮ್ಮ. ಹೌದು ನಮ್ಮ ಹಿರಿಯರು ಹೇಳಿರುವ ಅನುಭವೋಕ್ತಿಗಳನ್ನು ಸ್ವಲ್ಪ ಮಟ್ಟಿಗಾದರೂ ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡು ನಮ್ಮ ಮುಂದಿನ ಪೀಳಿಗೆ ಸರಿ ದಾರಿಯಲ್ಲಿ ನಡೆಯಲು ದಾರಿ ದೀಪವಾಗೋಣ...

Category
ಕರಾವಳಿ ತರಂಗಿಣಿ