image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

“ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಞ"

“ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಞ"

"ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಙ" ಎನ್ನುವ ಸರ್ವಜ್ಞರ ಮಾತಿನಂತೆ ಈ ಜಗತ್ತಿನಲ್ಲಿ ಎಲ್ಲರೂ ತನ್ನಂತೆಯೇ, ಇನ್ನೊಂದು ಜೀವಕ್ಕೂ ನೋವಾಗುತ್ತದೆ. ಆದ್ದರಿಂದ ಗೊತ್ತಿದ್ದೂ ತಾನು ಪರರನ್ನು ನೋಯಿಸಬಾರದು ಎಂಬ ವಿವೇಕ ನಮ್ಮಲ್ಲಿ ಜಾಗೃತವಾದರೆ ನಿಜಕ್ಕೂ ನಾವು ಮಾನವರಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎನ್ನುವುದನ್ನು ನಾವು ಅರಿಯಬೇಕು. ಕೆಲವು ಸಲ ಕೆಲವರ ಹಾವಬಾವ ಹೇಗಿರುತ್ತದೆ ಎಂದರೆ ತಾನು ಹುಟ್ಟಿರುವುದೇ ಬೇರೆಯವರನ್ನು ನೋಯಿಸಲು ಎನ್ನುವ ಹಾಗಿರುತ್ತದೆ. ಅದೇ ನೋವು ಅವರನ್ನು ಆವರಿಸಿದರೆ ಗೊತ್ತಾಗುತ್ತದೆ ಆ ನೋವಿನ ನೋವು. “ದಯವಿಲ್ಲದ ಧರ್ಮವಾವುದೇವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ, ದಯವೇ ಧರ್ಮದ ಮೂಲವಯ್ಯ” ಎಂದ  ಬಸವಣ್ಣನವರ ಪ್ರಕಾರ ದಯೆ, ಮನುಷ್ಯತ್ವಕ್ಕಿಂತ ಧರ್ಮ ಬೇರಿಲ್ಲ. ಹೌದು ನಾವು ಹಿಂದೂ, ಮುಸ್ಲಿಂ, ಕ್ರೈಸ್ತ ಅಂತ ಬೇರೆ ಬೇರೆ ಜಾತಿ ಧರ್ಮದಲ್ಲಿ ಹುಟ್ಟಿದರೂ ಮಾನವತಾ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ. ಮನುಷ್ಯನ ಸುಖ ಜೀವನಕ್ಕೆ ದಯೆ, ಕರುಣೆ, ಅನುಕಂಪ ಇವೆಲ್ಲ ಅವಶ್ಯ. ವಿಶ್ವದ ಎಲ್ಲ ಧರ್ಮವೂ ಸಾರುವುದು ಮಾನವೀಯತೆಯನ್ನು. ಎಲ್ಲ ಧರ್ಮಗಳ ತಳಹದಿ ಮಾನವೀಯತೆ. ಮಾನವೀಯತೆಯ ಹುಟ್ಟು ದಯಾಮಯವಾದ ಮನಸ್ಸಿನಿಂದ ಮಾತ್ರ ಸಾಧ್ಯ ಎನ್ನುವುದನ್ನು ನಾವು ಅರಿಯಬೇಕು. ಜಗತ್ತಿನ ಎಲ್ಲ ಜೀವನಾಡಿಗಳಲ್ಲೂ ದಯೆ ಎಂಬ ಅಂತಃಕರಣ ಇರಬೇಕು ಎಂದು ಬಸವಣ್ಣನಾದಿಯಾಗಿ ಎಲ್ಲ ಶರಣರೂ  ಹೇಳಿದ್ದಾರೆ.  ದಯೆಯೇ ಧರ್ಮದ ಮೂಲ ಎಂದು ಹೇಳುವ ಬಸವಣ್ಣ ದಯೆ ಇಲ್ಲದ ಧರ್ಮ ವಿನಾಶಕಾರಿಯಾದದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಮಾನತೆಯ ಸಾರವನ್ನು ಸಾರಿದ ಬಸವಣ್ಣನ ಕೃತಿಯ ಮೂಲ ಕೂಡ ದಯೆ ಅಥವಾ ಮಾನವೀಯತೆ ಎಂದರೆ ತಪ್ಪಾಗಲಾರದು. ಮಾನವೀಯತೆ ಯಾಕೆ ಬೇಕು? ಅಂತ ಕೆಲವು ಸಲ ನಮಗೆ ಅನಿಸದೇ ಇರುವುದಿಲ್ಲ. ಕಾರಣ ನಾವು ಸಹಾನುಭೂತಿ ತೋರಿದ ಮನುಷ್ಯರಿಂದ ನವiಗೆ ಆಗುವ ನೋವು. ಅದೇ ಪ್ರಾಣಿಗಳಿಗೆ ನಾವು ಸಹಾನುಭೂತಿ ತೋರಿದರೆ ಅವುಗಳಿಂದ ನಮಗೆ ನೋವಾಗಲು ಸಾದ್ಯವಿಲ್ಲ. ಹಾಗಂತ ನಾವು ಮಾನವೀಯತೆ ತೋರಿ ಒಬ್ಬರಿಗೆ ಉಪಕಾರ ಮಾಡಿಯೂ ಅವರಿಂದ ಅಪಕಾರ ಆದಾಗ ಅಂತವರನ್ನು ಕ್ಷಮಿಸಿ ಮುನ್ನಡೆಯಬೇಕಂತೆ.  ಯಾರಾದರೂ ನನಗೆ ಅವಮಾನ ಮಾಡಿದಾಗ ನಾನೇನಾದರೂ ಅವರ ಜತೆ ಜಗಳಕ್ಕೆ ನಿಂತರೆ  “ನಾಯಿ ಕಚ್ಚಿತು ಅಂತ ನಾವು ಅದಕ್ಕೆ ಕಚ್ಚಿದರೆ ನಮಗೂ ನಾಯಿಗೂ ಇರುವ ವ್ಯತ್ಯಸ ಏನು ಹೇಳು” ಅಂತ ಅಮ್ಮ ಆಗಾಗ ನನಗೆ ಹೇಳುತ್ತಿದ್ದ ಮಾತು ನೆನಪಾಗುತ್ತದೆ. ದಯೆ ಮತ್ತು ಮಾನವೀಯತೆ ಎರಡು ಒಂದೇ ನಾಣ್ಯದ ಎರಡು ಮುಖಗಳು.   ಕೈಲಾಗದವರಿಗೆ ನಮ್ಮ ಮಾನವೀಯ ಧರ್ಮದಲ್ಲಿ ನಮ್ಮ  ಕೈಲಾದ ಸಹಾಯ ಮಾಡುವುದೇ ಮನುಷ್ಯತ್ವ.    ಮಾತು, ಮನಸ್ಸು ಮತ್ತು ಕರ್ಮಗಳಿಂದ ಯಾವ ಜೀವಿಗೂ ನೋವನ್ನುಂಟು ಮಾಡದಿರುವುದು, ದುಃಖಿಗಳ ದುಃಖಗಳನ್ನು ಕಂಡು ಮರುಗುವುದಲ್ಲದೇ ಅವರ ದುಃಖಗಳನ್ನು ದೂರ ಮಾಡಲು ನಿಸ್ವಾರ್ಥವಾಗಿ ನಮ್ಮ ಶಕ್ತಿ ಮೀರಿ ಪ್ರಯತ್ನಿಸುವುದು ದಯೆ ಅಥವಾ ಮಾನವೀಯತೆ ಎಂದೆನಿಸುತ್ತದೆ.  ಇಂಥಹ ದಯಾಗುಣವು ಧರ್ಮಕ್ಕೆ ಆಧಾರ ಸ್ವರೂಪವಾಗಿದೆ. ದಯೆಯಿಲ್ಲದ ಧರ್ಮವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಒಂದು ವೇಳೆ ಅಂಥ ಧರ್ಮವಿದ್ದರೂ ಅದು ಪ್ರಯೋಜನಕಾರಿಯಾದ ಧರ್ಮವಲ್ಲ. ಈ ಕಾರಣಕ್ಕಾಗಿಯೇ ಬಸವಣ್ಣನವರು ‘ದಯವಿಲ್ಲದ ಧರ್ಮ ಅದಾವುವುದಯ್ಯ?’ ಎಂದು ಕೇಳುತ್ತಾರೆ. ದಯೆ ಇಲ್ಲದ ಧರ್ಮವು ಏನು ತಾನೆ ಮಾಡಬಲ್ಲುದು? ಆದ್ದರಿಂದ ದಯವೇ ಧರ್ಮದ ಮೂಲವೆಂದು ಅವರು ಸ್ಪಷ್ಟಪಡಿಸುತ್ತಾರೆ. ಇತರರ ದುಃಖಗಳನ್ನು ಕಂಡು ಸಂತಸಪಡುವುದು ಮನಸ್ಸಿನ  ಮಾಲಿನ್ಯದ ಸಂಕೇತವಾಗಿದೆ. ಈ ರೀತಿಯ ಮನಸ್ಥಿತಿ ಹೊಂದಿರುವ ಯಾವ ಮನುಷ್ಯನೂ ಮಾನಸಿಕವಾಗಿ ನೆಮ್ಮದಿಯಿಂದ ಬದುಕಲು ಸಾದ್ಯವಿಲ್ಲ.  ಆದ್ದರಿಂದ ಬದುಕಿನಲ್ಲಿ ಸುಖ­ಶಾಂತಿಗಳನ್ನು ಬಯಸುವವರು ತಮ್ಮ ಹೃದಯದಲ್ಲಿ ದಯೆ, ಮಾನವೀಯತೆಯನ್ನು ತುಂಬಿಕೊಳ್ಳಬೇಕು. ಇತರರ ದುಃಖಗಳನ್ನು ಕಂಡು ಮನಸ್ಸು ಮರುಗಬೇಕು ಹಾಗೆ ಇತರರ ಸುಖವನ್ನು ಕಂಡು ಮನಸ್ಸು ಪ್ರಸನ್ನವಾಗಬೇಕು ಅದನ್ನು ಬಿಟ್ಟು ಇನ್ನೊಬ್ಬರ ದುಃಖವನ್ನು ಕಂಡು ಹಿಗ್ಗುವುದು ಮತ್ತು ಇತರರ ಸುಖವನ್ನು ಕಂಡು ಮತ್ಸರ ಪಡುವುದರಿಂದ ಮುಂದೊಂದು ದಿನ ನಿಮಗೆ ದುಃಖ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆಯಬಾರದು. “ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸಪಂಡಿತಃ” ಎಂಬ ಸುಭಾಷಿತದ ಅರ್ಥ  “ತನ್ನಂತೆ ಇತರರನ್ನು ಕಾಣುವ, ಇತರರ ಬಗ್ಗೆ ಸಂವೇದನಶೀಲನಾಗಿರುವ ವ್ಯಕ್ತಿಯೇ ನಿಜವಾದ ಜ್ಞಾನಿ”   ಇಂಥಹ ಜ್ಞಾನಿಗಳು ಸಕಲ ಜೀವರಾಶಿಗಳನ್ನು ಮನುಷ್ಯತ್ವದಿಂದ ನೋಡುವುದರ ಜೊತೆಗೆ  ಸಕಲ ಜೀವಿಗಳಲ್ಲಿ ತನ್ನನ್ನು ಕಂಡುಕೊಳ್ಳುತ್ತಾರೆ. ಆದ್ದರಿಂದ ಜ್ಞಾನಿಗಳು, ಅಧ್ಯಾತ್ಮ ಸಾಧಕರು ದುಃಖಿತರಿಗೆ ಬರೀ ಶಾಬ್ದಿಕ ಸಾಂತ್ವನ ತೋರದೆ ಅವರ ದುಃಖವನ್ನು ದೂರ ಮಾಡುವ ಎಲ್ಲ ಪ್ರಯತ್ನಗಳನ್ನು ಮಾಡಿ ಭಗವಂತನಿಗೆ ಪ್ರಿಯರೆನಿಸುತ್ತಾರೆ. ದಯೆ ಅಥವಾ ಮನುಷ್ಯತ್ವವೇ ಪ್ರಧಾನವಾಗಿರುವ ಮಾನವತಾ ಧರ್ಮವನ್ನು ಶ್ರೇಷ್ಠ ಧರ್ಮವೆಂದು ಕರೆಯುವುದು ತಪ್ಪಲ್ಲ ಎನ್ನುವುದು ನನ್ನ ಅನಿಸಿಕೆ. ಜಗತ್ತಿನ ಎಲ್ಲ ಪ್ರಮುಖ ಧರ್ಮಗಳು ಸಕಲ ಜೀವಿಗಳಲ್ಲಿ ದಯೆಯ ಭಾವವನ್ನು ಹೊಂದಿರಬೇಕು ಎಂಬುದನ್ನೇ ಬೋಧಿಸುತ್ತವೆ. ಯಾರೂ ಯಾರೊಡನೆಯೂ ದ್ವೇಷಭಾವವುಳ್ಳವರಾಗಬಾರದು. ಏಕೆಂದರೆ ಮನುಷ್ಯ ಮಾತ್ರ ಮತ್ತೊಂದು ಜೀವಿಯ ಸಹಾಯಕ್ಕೆ ಬರಲು ಸಾಧ್ಯ. ಆದ್ದರಿಂದ ವೈರವನ್ನು ಸಾಧಿಸದೇ ಜೀವಿಗಳಲ್ಲಿ ದಯಾಭಾವವುಳ್ಳವರಾಗಬೇಕು. ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದ ಮಾತು “ಸಾಧ್ಯವಾದರೆ ಇನ್ನೊಬ್ಬರಿಗೆ ಒಳಿತನ್ನು ಮಾಡು ಇಲ್ಲವಾದರೆ ನಿನ್ನ ಪಾಡಿಗೆ ಇದ್ದುಬಿಡು. ಆದರೆ ಯಾರಿಗೂ ಕೆಡುಕನ್ನು ಬಯಸಬೇಡ. ನೀನು ಇನ್ನೊಬ್ಬರಿಗೆ ಕೆಡುಕು ಬಯಸಿದರೆ, ತಲೆಗೆ ಹಾಕಿದ ನೀರು ಹೇಗೆ ಕಾಲಿಗೆ ಇಳಿಯಲೇ ಬೇಕೋ ಹಾಗೆ ನಿನ್ನ ತಪ್ಪಿಗೆ ನೀನೇ ಇಂದಲ್ಲ ನಾಳೆ ಶಿಕ್ಷೆ ಅನುಭವಿಸಬೇಕಾಗುತ್ತದೆ” ಅವರು ಹೇಳುತ್ತಿದ್ದ ಸಂದರ್ಭದಲ್ಲಿ ಅದೆಲ್ಲಾ ನಿಜ ಇರಲಾರದು ಎನಿಸಿದ್ದರೂ ಕಾಲ ಕಳೆದಂತೆ, ಬದುಕಿನ ಬುತ್ತಿಯಲ್ಲಿ ಅನುಭವಗಳು ತುಂಬುತ್ತಿದ್ದಂತೆ ಅವರ ಮಾತು ನಿಜ ಅನ್ನಿಸಲು ಶುರುವಾಗಿದೆ. ಇನ್ನೊಬ್ಬರಿಗೆ ಕೆಡುಕು ಬಯಸಿ ಆ ಕ್ಷಣಕ್ಕೆ ಖುಷಿ ಪಟ್ಟವರು ಮುಂದೊಂದು ದಿನ ಅವರ ಸಮಯ ಕೆಟ್ಟಾಗ ನಮ್ಮ ಮುಂದೆಯೇ ಮುಗ್ಗರಿಸಿ ಬಿದ್ದದ್ದನ್ನು ನಾವು ಅದೆಷ್ಟೋ ಬಾರಿ ಕಂಡಿದ್ದೇವೆ ಅಲ್ಲವೆ?. ಹಾಗಾಗಿ ಇನ್ನೊಬ್ಬರಿಗೆ ಕೆಡುಕನ್ನು ಬಯಸದೇ ಮಾನವತಾಧರ್ಮದಲ್ಲಿ ಬದುಕಿ, ಯುವ ಪೀಳಿಗೆಗೆ ಮಾನವತಾ ಧರ್ಮದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಮುನ್ನಡೆಯೋಣ.....

 ✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ