ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯಬೇಡ” ಈ ನುಡಿಮುತ್ತುಗಳಲ್ಲಿ ಅದೆಂತಹ ಮಧುರಾಮೃತವಿದೆಯಲ್ಲವೇ? ಜಗದ ಜಂಜಾಟದಲ್ಲಿ ಸ್ವಾರ್ಥ ಲಾಲಸೆಗಳಲ್ಲಿ ಮನಸ್ಸು ಬೆಂಡಾಗಿ ಸಾಕೆನ್ನುವ ಸಮಯದಲ್ಲಿ ನಮ್ಮನ್ನು ಕಾಯುವವನೊಬ್ಬನಿದ್ದಾನೆ ಎಂದರೆ ಆ ಹೊತ್ತಿಗೆ ಮನಸ್ಸು ತುಂಬಿ ಬರದೇ ಇರಲು ಸಾಧ್ಯವೇ? ನಾನು ನಾನೆಂದು ಮೆರೆಯುವ ಜನರೆದುರು ನಾವು ನಾವಾಗಿಯೇ ಬದುಕಿ ತೋರಿಸಬೇಕೆಂಬ ಹಂಬಲವಿದ್ದರೂ, ಅದು ಸಾದ್ಯವಾಗದೇ ಒದ್ದಾಡುವ ಜನರು ಅದೆಷ್ಟಿಲ್ಲ ಈ ಭೂಮಿಯಲ್ಲಿ. ಅಂತಹ ಜನರಿಗಾಗಿಯೇ ನಮ್ಮ ಹಿರಿಯರು ಇಂತಹ ನುಡಿ ಮುತ್ತುಗಳ ಮೂಲಕ ಸಂತೈಸಿರಬೇಕು.
ನಾನು, ನನ್ನದು ಎಂಬ ಅಭಿಮಾನಕ್ಕೆ ಕಾರಣವಾದುದೇ ಅಹಂಕಾರ. ದೇಹವೇ ನಾನೆಂಬ ಭಾವ ಇರುವವರೆಗೆ ಈ ಅಹಂಕಾರವು ನಮ್ಮಲ್ಲಿ ಮನೆಮಾಡಿಕೊಂಡಿರುತ್ತದೆ. ‘ಅಹಂಕಾರವೆಂಬ ಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ’ ಎಂದು ಬಸವಣ್ಣನವರು ಅಹಂಕಾರವನ್ನು ‘ಮದವೇರಿದ ಆನೆ ಇದ್ದ ಹಾಗೆ’ ಎನ್ನುತ್ತಾರೆ. ಅಹಂಕಾರದಲ್ಲಿ ಮೆರೆಯುವವರಿಗೆ ಎಂದೆಂದಿಗೂ ಮನ:ಶಾಂತಿ ಇರಲಾರದು. ತಾನು ಸುಖವಾಗಿ ಇರುವೆ ನೆಂದು ಈ ಜಗಕ್ಕೆ ಕೂಗಿ ಹೇಳಿದರೂ, ಅವರು ಎಂದೆಂದಿಗೂ ಮನಸ್ಸಿನಲ್ಲಿ ದ್ವೇಷ, ಅಸೂಯೆ ಎನ್ನುವ ಕಿಚ್ಚನ್ನು ಹೊತ್ತು ತಿರುಗುತಿರುತ್ತಾರೆ. ಅಂತವರು ಅವರದೇ ಒಡಲಲ್ಲಿ ಬಚ್ಚಿಟ್ಟಿರುವ ಕಿಚ್ಚಿನ ಬೇಗೆಯಲ್ಲಿ ಬೆಂದು ನೊಂದಿರುವುದಂತು ಖಂಡಿತ. ಆದರೂ ನಾನು ಎನ್ನುವ ಅಹಂಕಾರ ಅವರನ್ನು ಸರಿ ದಾರಿಯಲ್ಲಿ ನಡೆಯಲು ಬಿಡುವುದಿಲ್ಲ. “ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರೂ ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ’ ಎಂಬ ಅಲ್ಲಮಪ್ರಭುವಿನ ವಚನದಲ್ಲಿ ನಾನೆಂಬ ಅಹಂಕಾರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ. ಅಹಂಕಾರವುಳ್ಳವರು ಆಸೆ-ಆಮೀಷ, ಕಾಮ-ಕ್ರೋಧ ಮತ್ತು ಮದ-ಮತ್ಸರಗಳಿಗೆ ಬಲಿಯಾಗಿ ತಮ್ಮ ವಿವೇಕವನ್ನೇ ಕಳೆದುಕೊಳ್ಳುತ್ತಾರೆ. ಮಹಾನ್ ಜ್ಞಾನಿಗಳೇ ಅಹಂಕಾರದಿAದ ಅಧಃಪತನ ಹೊಂದಿರುವಾಗ ಸಾಮಾನ್ಯರ ಪಾಡಂತೂ ಹೇಳತೀರದು. ಅಹಂಕಾರದಲ್ಲಿ ಮೆರೆದ ರಾಜ ಮಹಾರಾಜರೇ ಮಣ್ಣಲ್ಲಿ ಮಣ್ಣಾಗಿರುವುದನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಇನ್ನು ಇನ್ನೊಬ್ಬರ ಬಗ್ಗೆ ಕಿಡಿಕಾರುತ್ತಾ, ಇನ್ನೊಬ್ಬರನ್ನು ಕೆಟ್ಟ ದೃಷ್ಟಿಯಲ್ಲೇ ನೋಡುವ ಈ ತೃಣ ಸಮಾನರಾದ ನಾವೆಲ್ಲಿ.
ನಮ್ಮ ಅಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು “ಮರದ ಹುಳು ಯಾವಾಗಲೂ ಹೇಗೆ ಮರವನ್ನೇ ತಿನ್ನುತ್ತದೋ ಹಾಗೇ ಮನುಷ್ಯನಲ್ಲಿರುವ ಮದ ಮತ್ಸರಗಳು ಅವರನ್ನೇ ಹಾಳು ಮಾಡುವುದರಲ್ಲಿ ಸಂದೇಹವಿಲ್ಲ” ಅಂತ. ಅಹಂಕಾರವು ಮನಸ್ಸನ್ನು ಆವರಿಸಿದಾಗ ಭಗವಂತನು ನಮ್ಮ ಮನಸಿನಿಂದ ನಮಗರಿವಿಲ್ಲದಂತೆ ದೂರ ಹೋಗುತ್ತಾನೆ. ಅಹಂಕಾರವಿಲ್ಲದ ಶುದ್ಧ ಮನಸ್ಸು ತಾನೆ ಶಿವಲಿಂಗವೆನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಅಂತಹ ಶುದ್ಧ ಮನಸ್ಸಿನಲ್ಲಿ ಮಾತ್ರ ಭಗವಂತನು ನೆಲೆಯಾಗುವುದಕ್ಕೆ ಸಾದ್ಯ. ಆದ್ದರಿಂದಲೇ ‘ಅಹಂಕಾರಿಯಾಗದೇ ಶರಣೆನ್ನು ಮನವೆ’ ಎಂದು ಬಸವಣ್ಣನವರು ಮನಸ್ಸಿಗೆ ತಿಳಿ ಹೇಳುತ್ತಾರೆ. ಇನ್ನು ಜಾತಿ, ಆಸ್ತಿ, ಅಂತಸ್ತುಗಳೆಂದು ಮೆರೆಯುವ ನಾವು ಸಾದಿಸಿದ್ದಾದರೂ ಏನನ್ನು? ದಿನವೆಲ್ಲಾ ಕೂಲಿ ಮಾಡಿ ದಣಿದು ಮಲಗುವ ಒಬ್ಬ ಕೂಲಿಯವನಿಗೆ ಬರುವ ನಿದ್ದೆಯ ಸುಖ, ಕೊಪ್ಪರಿಗೆ ಮೇಲೆ ಮಲಗುವ ಒಬ್ಬ ಶ್ರೀಮಂತನಿಗೆ ಸಿಗಲು ಸಾದ್ಯವೇ? ಇನ್ನು ಜಾತಿ ಜಾತಿ ಎಂದು ಬಡಿದುಕೊಳ್ಳು ಈ ಸಮಾಜದಲ್ಲಿ ಒಂದೊಂದು ಜಾತಿಯವರ ದೇಹದಲ್ಲಿ ಒಂದೊಂದು ರೀತಿಯ ರಕ್ತದ ಕಣವಿರಲು ಸಾದ್ಯವೇ?
“ಕೆಸರೊಳು ತಾವರೆ ಪುಟ್ಟಲು, ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೇ? ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣಲಿಲ್ಲವೇ?”- ತಾವರೆ ಹೂವು ಹುಟ್ಟಿದ್ದು ಕೆಸರಲ್ಲಾದರೂ ದೇವರಿಗೆ ಮುಡಿಸುವುದಿಲ್ಲವೆ. ಹಸುವಿನ ಮಾಂಸದಿಂದಲೇ ಉತ್ಪತ್ತಿಯಾದ ಹಾಲನ್ನು ಅಮೃತಕ್ಕೆ ಸಮಾನವೆಂದು ಬಳಸುತ್ತಿಲ್ಲವೇ ಎಂದು ಕನಕದಾಸರು ಹೇಳುತ್ತಾರೆ. ಮನುಷ್ಯ ಈ ಲೋಕದಲ್ಲಿ ತಾನು ಕಂಡು, ಕೇಳಿ ಪಡೆದುಕೊಂಡಂತಹ ತಿಳುವಳಿಕೆಯ ಜೊತೆ ಜೊತೆಗೆ, ಮಾನವನ ಬದುಕಿನ ಆಗುಹೋಗುಗಳಿಗೆ ಕಾರಣವಾಗಿರುವ ವಾಸ್ತವದ ಸಂಗತಿಗಳನ್ನು ಅರಿತುಕೊಂಡು, ಒಳ್ಳೆಯ ನಡೆನುಡಿಗಳಿಂದ ಕೂಡಿದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಒಳ್ಳೆಯ ನಡೆ ನುಡಿಗಳು ಎಂದರೆ ತನಗೆ ತನ್ನವರಿಗೆ ಒಳಿತನ್ನು ಬಯಸುವಂತೆಯೇ ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ಸಾಮಾಜಿಕ ವರ್ತನೆ. ನಾನು ನನ್ನದೆಂಬ ಅಹಂಕಾರವನ್ನು ಬಿಟ್ಟು, ನಾವೆಲ್ಲರೂ ಒಂದೇ ಈ ಜಗದಲ್ಲಿ ಎನ್ನುವ ಸತ್ಯವನ್ನು ಅರಿತು ಬದುಕಿ ಮುಂದಿನ ಪೀಳಿಗೆಗೆ ದಾರಿ ದೀಪವಾಗವಾಗೋಣ...
✍ಲಲಿತಶ್ರೀ ಪ್ರೀತಂ ರೈ