“ಯತ್ರನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ” "ಕಾರ್ಯೇಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತ, ಶಯನೇಷು ರಂಭಾ ನಾರಿ ಕ್ಷಮಯಾಧರಿತ್ರಿ" ಎಂತಹ ಕಲ್ಪನೆ ನೋಡಿ ನಮ್ಮ ಹಿರಿಯರದ್ದು. ವೇದಗಳ ಕಾಲದಲ್ಲಿದ್ದ ಗಾರ್ಗಿ, ಮೈತ್ರೈಯಿಯರ ಬೌದ್ದಿಕ ಸಾಧನೆ ನಾವು ಕೇಳಿದ್ದೇವೆ. ಪುರಾಣಗಳಲ್ಲಿ ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾದ ಸರ್ವಶಕ್ತಿಯನ್ನು ಹೆಣ್ಣಿನಲ್ಲಿ ಕಂಡಿದ್ದೇವೆ. ಮನುಸ್ಪೃತಿಯಲ್ಲಿ “ಯತ್ರನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ” ಅಂದರೆ ಎಲ್ಲಿ ಸ್ತಿçಯನ್ನುಗೌರವಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿದಂತೆ ಎಂದಿದ್ದಾನೆ. ಆದರೆ ಮನುವಿನ ದ್ರಷ್ಟಿಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಸರಿಯಲ್ಲ, ಗುಲಾಮಳಾಗಿಯೇ ಅವಳು ಸಮಾಜದಲ್ಲಿ ಮುಂದುವರಿಯಬೇಕಿತ್ತು. ಅವಳು ಅಕ್ಷರಲೋಕ ಪ್ರವೇಶ ಮಾಡಿದರೆ ಹೊರಗಡೆ ಜಗತ್ತಿನಲ್ಲಿ ನಡೆಯಬಹುದಾದ ವಿಷಯ ತಿಳಿದು ಮುಂದುವರೆದರೆ ಪುರುಷನ ತೋಳತೆಕ್ಕೆಯಿಂದ ದೂರ ಹೋಗಿ ಸ್ವಚ್ಛಂದವಾಗಿ ವಿಹರಿಸಿ, ಸ್ವಂತವಾಗಿ ವಿಚಾರ ಮಾಡಿ ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಂಡು ಸಬಲಳಾಗುತ್ತಾಳೆ ಎನ್ನುವುದು ವಾದವಾಗಿತ್ತು. ಒಂದು ಜೀವವನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು ಸಲಹುವ ಶಕ್ತಿ ಮಹಿಳೆಯಲ್ಲಿದೆ. ಹಾಗೆ ಅವಳಲ್ಲಿ ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಹುಟ್ಟಿನಿಂದಲೇ ಬಂದು ಬಿಡುತ್ತದೆ. ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಹೆಣ್ಣಿಗೆ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ಕಟ್ಟುಪಾಡುಗಳನ್ನು ಹಾಕಲಾಗಿದೆ. ಸ್ವತಂತ್ರ ರೀತಿಯಲ್ಲಿ ಮನೆಯಿಂದ ಹೊರಗೆ ಹೋಗಿ ವ್ಯವಹಾರ ನಡೆಸುವುದು ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಂತ ಕಷ್ಟವೇ ಆಗಿತ್ತು ಮತ್ತು ಆಗಿದೆ ಕೂಡ. ಜಾಗತೀಕರಣದಿಂದ ಮಹಿಳೆ ಅನೇಕ ಪ್ರಯೋಜನ ಪಡೆದಿದ್ದರೂ, ಶೋಷಣೆಯಿಂದ ಇಂದಿಗೂ ಮುಕ್ತವಾಗಿಲ್ಲ ಎನ್ನುವುದು ವಿಷಾದನೀಯ. ಹೆಣ್ಣಿನ ವಿರುದ್ಧ ನಡೆಯುತ್ತಿರುವ ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ ಸಮಾಜದಲ್ಲಿ ಗಂಡು ಹೆಣ್ಣಿನ ನಡುವಿನ ತಾರತಮ್ಯ ಹೋಗಬೇಕು. ಹೆಣ್ಣು ಭೋಗದ ವಸ್ತು ಎನ್ನುವ ಭ್ರಮೆಯಿಂದ ಗಂಡು ಹೊರ ಬರಲೇಬೇಕು. ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳು ಗಂಡಿನಿಂದ ಅವಮಾನಿತರಾಗಿ, ಅತ್ಯಾಚಾರಕ್ಕೀಡಾದಾಗ ಠಾಣೆಯ ಮೆಟ್ಟಿಲು ಹತ್ತಲು ಭಯ ಬೀಳುತ್ತಾರೆ. ಕಾರಣ ಮತ್ತೆ ಠಾಣೆಯಲ್ಲಿ ಅವಳಿಗೆ ಆಗಬಹುದಾದ ಅವಮಾನ. ಇದಕ್ಕೆಲ್ಲಾ ಕಾರಣವಾಗುವುದು ಆರೋಪಿತನ ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಯ ಪ್ರಭಾವದಿಂದ ಪ್ರಭಾವಿತರಾದ ಪೊಲೀಸ್ ಅಧಿಕಾರಿಗಳು. ಅಲ್ಲಿಂದ ಮುಂದುವರಿದು ಕೋರ್ಟಿನ ಮೆಟ್ಟಿಲು ಹತ್ತಿದಾಗ ಮತ್ತೆ ಅದೇ ಅವಮಾನ ಅರೋಪಿಯ ಪರವಾದ ವಕೀಲರಿಂದ. ಈ ನಡುವೆ ನಾನು ಕೋರ್ಟೊಂದರಲ್ಲಿ ಮಹಿಳೆಯನ್ನು ಬೇಟಿಯಾಗುವ ಸಂದರ್ಭ ಬಂತು ಮಾತಾಡುತ್ತಾ ಮಹಿಳೆ ಕೋರ್ಟಿಗೆ ಬಂದಿರುವ ಉದ್ದೇಶ ಕೇಳಿದೆ. ಮಹಿಳೆ ಮಾತನಾಡುತ್ತಾ “ಶ್ರೀಮಂತ ವ್ಯಕ್ತಿಯೊಬ್ಬನಿಂದ ಲೈಂಗಿಕವಾಗಿ ಹಿಂಸೆಯಾದಾಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬೇಕಾಯಿತು. ಎನ್ನುತ್ತಾ ತಾನು ಠಾಣೆಯ ಮೆಟ್ಟಿಲು ಹತ್ತಿದಾಗಿನಿಂದ ತನಗಾದ ಅವಮಾನಗಳನ್ನು ವಿವರಿಸುತ್ತಾ, ಠಾಣೆಯ ಮೆಟ್ಟಿಲೇನೋ ಹತ್ತಿದೆ. ಆದರೆ ಆಮೇಲೆ ತಿಳಿಯಿತು ಹೆಣ್ಣು ಮಕ್ಕಳಿಗೆ ಈ ಸಮಾಜದಲ್ಲಾಗಲಿ ಅಥವಾ ಕೋರ್ಟ್ ಕಛೇರಿಗಳಲ್ಲಾಗಲಿ ನ್ಯಾಯ ಸಿಗಲು ಸಾದ್ಯವಿಲ್ಲ. ಎಲ್ಲಿಯವರೆಗೆ ಹಣದ ಮದದಿಂದ ತೇಲಾಡುತ್ತಿರುವ ಕಾಮಾಂದರ ಹತ್ತಿರ ಇರುವ ದುಡ್ಡಿಗೆ ಆಸೆ ಪಡುವ ನೀಚ ಪೊಲೀಸ್ ಅಧಿಕಾರಿಗಳಾಗಲಿ, ವಕೀಲರುಗಳಾಗಲಿ ಇರುತ್ತಾರೋ ಅಲ್ಲಿಯವರೆಗೆ ಹೆಣ್ಣಿಗೆ ನ್ಯಾಯ ಮರಿಚಿಕೆಯಷ್ಟೆ. ಅದಕ್ಕೆ ಇರಬೇಕು ಇಂತಹ ಪಾಪಿಗಳಿಂದ ಅವಮಾನ, ಅತ್ಯಾಚಾರಕ್ಕೆ ಒಳಗಾದಾಗ ಕೆಲವು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಅಂತಹ ನೀಚರಿಗೆ ಅಡಿಯಾಳಾಗಿ ಬಿಡುತ್ತಾರೆ. ಇದೆರಡರಲ್ಲೂ ಅಸಕ್ತಿ ಇಲ್ಲದ ನನ್ನಂತವರು ಪಡಬಾರದ ನೋವು, ಅವಮಾನಗಳನ್ನು ಸಹಿಸಿಕೊಂಡು ಬದುಕಬೇಕಾಗುತ್ತದೆ” ಎಂದಾಗ ಅವರ ಮುಖದಲ್ಲಿದ್ದ ನೋವು ಒಬ್ಬ ಹೆಣ್ಣಾಗಿ ಗುರುತಿಸದಿರಲು ಸಾದ್ಯವಾಗಲಿಲ್ಲ. ಒಲಿದರೆ ನಾರಿ, ಮುನಿದರೆ ಮಾರಿ, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ಕಲಿತ ಹೆಣ್ಣು ಮನೆಯ ಕಣ್ಣು, ಅಕ್ಷರ ಕಲಿತ ನಾರಿ ದೇಶದ ಪ್ರಗತಿಗೆ ದಾರಿ ಎಂದೆಲ್ಲಾ ನಮ್ಮ ಹಿರಿಯರು ಹೇಳುತ್ತಾ ಬಂದಿರುವುದು ನಿಜ. ಆದರೆ ಈ ಹೆಣ್ಣು ಮನೆಯಿಂದ ಹೊರಗೆ ಬಂದು ತಾನು ಸಾಧನೆಯ ಹಾದಿಯಲ್ಲಿ ನಡೆಯುತ್ತಿರಬೇಕಾದರೆ ಗಂಡಿನಿಂದ ಆಗುತ್ತಿರುವ ಅವಮಾನ, ಅತ್ಯಾಚಾರಕ್ಕೆ ಅವಳಿಗೆಲ್ಲಿ ಸಿಗುತ್ತಿದೆ ನ್ಯಾಯ? ದೇಶದ ಶೇ.50ರಷ್ಟು ಮಹಿಳೆಯರು ಈ ಸಮಾಜದಲ್ಲಿ ಗಂಡಿನಿಂದ ಒಂದಿಲ್ಲೊಂದು ಅವಮಾನಗಳನ್ನು ಎದುರಿಸುತ್ತಾ ದಿನಗಳನ್ನು ಕಳೆಯುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಮಹಿಳೆಯರು ಬೆಳೆದಿದ್ದರೂ ಹೆಣ್ಣನ್ನು ಕೇವಲ ಒಂದು ಮನರಂಜನೆಯ ವಸ್ತುವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ಇಂದಿಗೂ ಮುಂದುವರಿದಿದೆ. ಹೆಣ್ಣಿಗೆ ಸಮಾನ ಹಕ್ಕು ಎಂದು ಕೂಗಿ ಹೇಳುವ ಜನರ ಮನೆಯಲ್ಲಿಯೇ ಮಹಿಳೆಗೆ ನ್ಯಾಯ ದೊರಕದ ಎಷ್ಟೋ ನಿದರ್ಶನಗಳು ದೀಪದ ಕೆಳಗಿನ ಕತ್ತಲೆ ಎಂಬಂತಾಗಿದೆ. ಇವೆಲ್ಲದರ ನಡುವೆ “ಹೆಣ್ಣು ಅಬಲೆಯಲ್ಲ ಸಬಲೆ” ಎಂದು ಕೂಗಿ ಹೇಳ ಹೊರಟಿರುವ ಹೆಣ್ಣಿನ ಮನಸ್ಸಿನ ಅಂಚಿನಲ್ಲಿ ತಾನು ಆಬಲೆಯಾಗಿಯೇ ಬದುಕುತ್ತಿದ್ದೇನೆ ಅಲ್ಲವೇ ಎನ್ನುವ ಅಳುಕು ಇದ್ದೆ ಇದೆ. ಇದು ವಾಸ್ತವ ಕೂಡ. ಈ ಅಳುಕಿನಿಂದ ಹೊರಬಂದು ಈ ಸಮಾಜದಲ್ಲಿ ಒಂದು ಹೆಣ್ಣು ಸಾಧನೆ ಮಾಡಬಳ್ಳಲು ಎಂದರೆ ಅದು ನಿಜವಾಗಿಯೂ ಗೌರವನೀಯ.....
✍ ಲಲಿತಶ್ರೀ ಪ್ರೀತಂ ರೈ