image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೂಡಿ ಬಾಳಿದರೆ ಅದುವೇ ಸ್ವರ್ಗಸುಖ...

ಕೂಡಿ ಬಾಳಿದರೆ ಅದುವೇ ಸ್ವರ್ಗಸುಖ...

ಸಂಬಂಧಗಳೆಂದರೇನು? ಅವು ಹೇಗಿರಬೇಕು? ಸಂಬಂಧಗಳನ್ನು ನಾವು ಹೇಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂಬುದನ್ನು ನಮ್ಮ ಮಹಾಕಾವ್ಯಗಳಲ್ಲಿ ಮಹಾನ್ ಪುರುಷರು ಹೇಳಿದ್ದನ್ನು ಓದಿದ್ದೇವೆ. ಸಂಬಂಧಗಳು ಯಾಕೆ ಬೇಕು? ಯಾಕೆ ಈ ಸಂಬಂಧಗಳು ಭಾವನಾತ್ಮಕವಾಗಿ ಕಾಡುತ್ತದೆ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಕಾಡಿದರೂ, ನಮ್ಮ ಬದುಕಿನಲ್ಲಿ ಬರುವ ಕೆಲವು ಸಂಬಂಧಗಳು ನಮಗೆ ಅರಿವಿಲ್ಲದಂತೆ ನಮ್ಮನ್ನು ಗಾಢವಾಗಿ ಆವರಿಸಿ ಬಿಡುತ್ತದೆ. ಮನುಷ್ಯನ ಹುಟ್ಟಿನಿಂದ ಸಂಬಂಧಗಳ ಸರಪಳಿಗಳು ಒಂದೊಂದಾಗಿ ಬೆಸೆದುಕೊಳ್ಳುತ್ತಾ ಮುಂದುವರಿಯುತ್ತದೆ. ಅಂತಹ ಸಂಬಂಧಗಳನ್ನು ಹಲವು ರೀತಿಯಲ್ಲಿ ಗುರುತಿಸಬಹುದು. ಅದರಲ್ಲಿ ಮೊದಲನೆಯದು “ರಕ್ತ ಸಂಬಂಧ”. ಈ ಸಂಬಂಧ ಅಷ್ಟು ಸುಲಭವಾಗಿ ಬೇರ್ಪಡುವುದಿಲ್ಲ. ಈ ಸಂಬಂಧದ ಮದ್ಯದಲ್ಲಿ ಕೆಲವರು ಅಡ್ಡಗೋಡೆಯನ್ನೇ ಕಟ್ಟಲು ಪ್ರಯತ್ನಿಸುವುದುಂಟು, ಹಾಗೆ ನಿರ್ಮಾಣವಾದ ಗೋಡೆ ತಾತ್ಕಾಲಿಕ ಗೋಡೆಯಾಗಿರುತ್ತದೆಯೇ ಹೊರತು ಅದು ಶಾಶ್ವತವಾಗಿ ನಿಲ್ಲಲು ಸಾದ್ಯವಿಲ್ಲ ಎನ್ನುವದನ್ನು ಮನವರಿಕೆ ಮಾಡಿಕೊಂಡರೆ ಸಂಬಂಧ ಗಟ್ಟಿಯಾಗಿ ನಿಲ್ಲುತ್ತದೆ. ನಾವು ಒಂದು ಸಸಿ ನೆಟ್ಟ ಬಳಿಕ ಅದಕ್ಕೆ ಹೇಗೆ ನೀರು, ಗೊಬ್ಬರ ಹಾಕಿ ಸಲಹುತ್ತೇವೇಯೋ ಅದೇ ರೀತಿಯಾಗಿ ಸಂಬಂಧವನ್ನು ಕೂಡ ಸಲಹಬೇಕು. ಇನ್ನು ನಾವು ಗೆಳೆತನದ ಸಂಬಂಧ, ಪ್ರೇಮ ಸಂಬಂಧ, ಬಾಳಸಂಗಾತಿಯ ಜೊತೆಗಿನ ಸಂಬಂಧ, ಅತ್ತೆ ಸೊಸೆಯ ಸಂಬಂಧ ಹೀಗೆ ಹಲವು ತರದ ಸಂಬಂಧಗಳನ್ನು ಕಾಣಬಹುದು. ಅದರಲ್ಲಿ ಸ್ನೇಹ ಸಂಬಂಧ ಎಲ್ಲರ ಬಾಳಿನಲ್ಲಿ ಸವಿಯನ್ನೂ, ಕೆಲವಾರು ಸಲ ಕಹಿಯನ್ನು ಉಣಿಸಿರುತ್ತದೆ. ಆದರೆ ಸ್ನೇಹ ಸಂಬಂಧದಿಂದ ದೂರವಾಗಿ ಬದುಕುವುದು ಬಲುಕಷ್ಟ. ಸ್ನೇಹದ ಬಗ್ಗೆ ಈಗಾಗಲೆ ಮಾತಾಡಿದ್ದೇನೆ. ಇನ್ನೂ ಪ್ರೇಮ ಸಂಬಂಧ, ಪ್ರತಿಯೊಬ್ಬರೂ ತನ್ನ ಹದಿ ಹರೆಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪ್ರೇಮ ಸಂಬಂಧದ ಸವಿಯನ್ನು ಉಂಡವರೆ. ಆದರೆ ಈ ಹದಿ ಹರೆಯದ ಪ್ರೇಮ ಸಂಬಂಧವನ್ನು ಮುಂದುವರಿಸಲು ದೈರ್ಯ ಸಾಲದೆ ಮುಂದೆ ಮದುವೆಯಾದ ನಂತರದ ದಿನಗಳಲ್ಲಿ ಕೆಲವರು ತನಗೆ ಮತ್ತು ತನ್ನವರಿಗೆ ಮೋಸ ಮಾಡಿ ಅನೈತಿಕ ಸಂಬಂಧವಾಗಿ ಬೆಳೆಸಿಕೊಂಡು ಹೋಗುವ ಹುಚ್ಚರನ್ನೂ ಕೂಡ ಈ ಸಮಾಜದಲ್ಲಿ ನಾವು ನೋಡಬಹುದು.ಇಂತಹ ಅನೈತಿಕ ಸಂಬಂಧಗಳ ದಳ್ಳುರಿಗೆ ಸಿಕ್ಕಿ ಎಷ್ಟೋ ಜೀವಗಳು ಬೆಂದು ಹೋಗಿರುವುದನ್ನೂ ಕೂಡ ನಾವು ನೋಡಿದ್ದೇವೆ. ಇನ್ನು ಬಾಳ ಸಂಗಾತಿ ಜೊತೆಗಿನ ಸಂಬಂಧದ ಬಗ್ಗೆ ಮಾತಾಡುವುದಾದರೆ ಸತಿ ಪತಿಗಳು ಮನಸ್ಸು ಮಾಡಿದರೆ, ರಕ್ತ ಸಂಬಂಧಕ್ಕಿಂತ ಮಿಗಿಲಾಗಿ, ಸ್ನೇಹ ಸಂಬಂಧದೊಂದಿಗೆ ಪ್ರೇಮ ಪಕ್ಷಿಗಳಾಗಿ ಬದುಕಬಹುದು. ಆದರೆ ಇಲ್ಲಿ ಬೇಕಾಗಿರುವುದು ಸಮಾನವಾದ ತಾಳ್ಮೆ. ಯಾವಾಗ ನಾನು ಎಂಬ ಅಹಂಕಾರ ಸತಿ ಪತಿಗಳಲ್ಲಿ ಬರುತ್ತದೋ ಅಲ್ಲಿಗೆ ಈ ಸಂಬಂಧದ ಅರ್ಥ ಕುಂಟಿತವಾಗಲು ಶುರುವಾಗುತ್ತದೆ. ಸಂಗಾತಿಗಳು ಒಬ್ಬರಿಗೊಬ್ಬರ ಮಾತುಗಳನ್ನು ಸರಿಯಾಗಿ ಆಲಿಸಿದರೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದು ಮತ್ತು ಒಬ್ಬರಿಗೊಬ್ಬರ ಬಾಂಧವ್ಯ ಗಾಢವಾಗಿ ಬೆಸೆದುಕೊಳ್ಳಬಹುದು. ಹಾಗೇ ತಮ್ಮ ಒಳ್ಳೆಯ ಹವ್ಯಾಸ ಹಾಗೂ ಅಭ್ಯಾಸಗಳನ್ನು ಒಬ್ಬರಿಗೊಬ್ಬರು ಪ್ರೋತ್ಸಾಹಿಸಿ ಬೆಂಬಲವಾಗಿ ನಿಲ್ಲಬೇಕು. ಆಗ ಒಬ್ಬರಿಗೊಬ್ಬರ ಮೇಲಿನ ಗೌರವವು ಹೆಚ್ಚಾಗುತ್ತದೆ. ಇನ್ನು ಅತ್ತೆ ಸೊಸೆಯರ ಸಂಬಂಧದ ಬಗ್ಗೆ ಮಾತಾಡುತ್ತಾ ಹೋದರೆ ಪುಟಗಳೇ ಮುಗಿಯಬಹುದು. ಹಾಸ್ಯದ ಮೊದಲ ವಿಷಯ ಅತ್ತೆ ಸೊಸೆಯರೇ ಆಗಿರುತ್ತಾರೆ. ಜಗತ್ತಿನಲ್ಲಿ ಅತ್ತೆ ಮತ್ತು ಸೊಸೆ ಸಂಬಂಧ ಹೇಗಿದೆ ಎಂದರೆ ಅದು ಎಣ್ಣೆ ಸೀಗೆಕಾಯಿ ಎಂದೇ ಹೇಳಬಹುದು. ಎಂದಿಗೂ ಸೊಸೆಯನ್ನು ತನ್ನ ಮಗಳ ರೂಪದಲ್ಲಿ ಒಪ್ಪಿಕೊಳ್ಳಲು ಅತ್ತೆ ಸಿದ್ಧರಿವುದಿಲ್ಲ. ಅತ್ತೆಯನ್ನು ತಾಯಿಯ ಸ್ಥಾನದಲ್ಲಿ ನೋಡಲು ಸೊಸೆಯೂ ತಯಾರಿರುವುದಿಲ್ಲ. ಇಷ್ಟು ಮಾತ್ರವಲ್ಲದೆ ಅತ್ತೆ ಮತ್ತು ಸೊಸೆ ನಡುವಿನ ಸಂಬಂಧವು ಉತ್ತಮವಾಗಿದ್ದರೆ ಆಗ ಅದಕ್ಕೆ “ಹುಳಿ ಹಿಂಡಲು ಕಾಯುತ್ತಿರುತ್ತಾರೆ ನೀಚ ಹುಳಗಳು”. ನನ್ನ ಪ್ರಕಾರ “ಇಂತಹ ಮನೆಹಾಳರಿಗೆ ಎಲ್ಲೆಂದರಲ್ಲಿ ಕಪಾಳ ಮೋಕ್ಷ ಮಾಡಬೇಕು”. ಕೆಲವು ಸಲ ಅತ್ತೆಯರ ವರಸೆ ಹೇಗಿರುತ್ತದೆಯೆಂದರೆ ಇಡೀ ಜಗತ್ತಿನಲ್ಲಿ ತನಗಿಂತ ತಿಳುವಳಿಕೆ ಇರುವವಳು ಇನ್ನಾರು ಇಲ್ಲ, ಅದು ಮಕ್ಕಳಾಗಲಿ ಸೊಸೆಯಾಗಲಿ ಕೊನೆಗೆ ಪತಿಯಾಗಲಿ. ಕೆಲ ಅತ್ತೆಯರು ಎಲ್ಲೆಂದರಲ್ಲಿ ಸೊಸೆಯ ಬಗ್ಗೆ ಕೆಟ್ಟದಾಗಿ ಮಾತಾಡಿ, ಮಾನಹರಣಕ್ಕೆ ಕಾಯುತ್ತಿರುತ್ತಾರೆ. ಅತ್ತೆಯ ಈ ಸ್ವಬಾವ, ಕಳ್ಳಾಟಗಳು ಗೊತ್ತಿದ್ದರೂ ಸೊಸೆ ಪ್ರತಿಯಾಡದೆ ಕೂತರೆ ಹೇಗೋ ಮನೆ ಶಾಂತವಾಗಿರಬಹುದು. ಆಗ ಮನೆಯ ಗಂಡಸರೂ ಸ್ವಲ್ಪ ನೆಮ್ಮದಿಯ ಉಸಿರಾಡಬಹುದು. ಇಲ್ಲವಾದರೆ ದೇವರೇ ಗತಿ. ಕೆಲವರ ಪ್ರಕಾರ ನಗರೀಕರಣ ಆಗುತ್ತಿದ್ದಂತೆ ಅತ್ತೆ ಸೊಸೆಯ ಕದನಗಳು ಹೆಚ್ಚಾಗುತ್ತಿದೆ. ಆದರೆ ನಾನು ಈ ಮಾತನ್ನು ಒಪ್ಪುವುದಿಲ್ಲ. ಹಿಂದಿನ ಕಾಲದಿಂದಲೂ ಅತ್ತೆ ಸೊಸೆಯರ ಕಾಳಗ ಇದ್ದೇ ಇರುತ್ತಿತ್ತು. ಇದು ಬರೀ ಪೇಟೆಯಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ನಡೆದಿದೆ, ನಡೆಯುತ್ತಿದೆ. ಆದರೆ ಹಿಂದಿನ ಕಾಲದಲ್ಲಿ ಮಹಿಳೆ ಗಂಡಿಗೆ ಭಯ ಬೀಳುತ್ತಿದ್ದಳು ಮತ್ತು ತನ್ನ ಸುರಕ್ಷತೆಯ ಬಗ್ಗೆ ಗಂಡನನ್ನೆ ಅವಲಂಬಿಸಿದ್ದಳು. ಅದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಶೈಕ್ಷಣಿಕವಾಗಿ, ಕಾನೂನಾತ್ಮಕವಾಗಿ, ಆರ್ಥಿಕವಾಗಿ ಮುಂದಿದ್ದಾಳೆ ಹಾಗಾಗಿ ಇಂದಿನ ಅತ್ತೆ ಸೊಸೆಯರ ಕಾಳಗ ಜಗಜ್ಜಾಹಿರಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೆಲವು ಸಲ ಸೊಸೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದರೆ ಇನ್ನು ಕೆಲವು ಸಲ ಮನೆ ಮರ್ಯಾದೆಯನ್ನು ಕೆಡಿಸಲು ಇಷ್ಟವಿರದ ಸೊಸೆಯರು ಮರುಮಾತನಾಡದೇ ಅತ್ತೆಯ ಕಾಟವನ್ನು ಸಹಿಸಿಕೊಳ್ಳುತ್ತಾಳೆ. ಅನಾದಿಕಾಲದಿಂದಲೂ ಮಾನವನ ಬದುಕು ಸಾಗುತ್ತಾ ಬಂದಂತೆ ಆತನಲ್ಲಿ ಮತ್ತು ಆತನ ಸುತ್ತಮುತ್ತಲಿನ ಸಮಾಜ, ಪರಿಸರದಲ್ಲಿ ಬದಲಾವಣೆ ಆಗುತ್ತಲೇ ಬಂದಿವೆ. ಈ ಎಲ್ಲ ಬದಲಾವಣೆಗಳ ನಡುವೆಯೂ ಮನುಷ್ಯನ ಅಸ್ತಿತ್ವಕ್ಕೆ ಸದಾ ಬೆಂಗಾವಲಾಗಿ ನಿಂತಿದ್ದು ಈ ಸಂಬಂಧಗಳು. ಯಾವಾಗ ಮನುಷ್ಯನಿಗೆ ಸಂಬಂಧದ ಮೇಲೆ ಪ್ರೀತಿ ನಂಬಿಕೆ ಇರುವುದಿಲ್ಲವೋ ಅಂತವರಿಗೆ ಮಾನಸಿಕ ಒತ್ತಡಗಳು ಗಾಢವಾದ ಪ್ರಭಾವನ್ನು ಬೀರುತ್ತದೆ. ಕೋಪ ಅಸಹನೆಗಳು ಹೆಚ್ಚಾದಾಗ ಮಾನಸಿಕ ಸ್ಥಿತಿಗಳು ಬದಲಾಗುತ್ತವೆ. ಆಗಲೇ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಮೂರು ಹೊತ್ತು ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಯೋಚಿಸುವ ಮನಸ್ಥಿತಿಗೂ ಇದೇ ಕಾರಣ. ಯಾವಾಗ ಸಂಬಂಧಗಳು ಅಳಿಸುತ್ತವೆಯೋ ಆಗ ನಕಾರಾತ್ಮಕ ಪ್ರತಿಕ್ರಿಯೆಗಳು ಅಧಿಕವಾಗುತ್ತದೆ. ಇಲ್ಲಿವರೆಗೂ ಇಷ್ಟವಾಗಿದ್ದ ಗುಣಗಳು ಕಷ್ಟವಾಗುತ್ತದೆ. ಹೆಣ್ಣಾಗಲಿ ಗಂಡಾಗಲಿ ಯಾವಾಗ ಸಂಬಂಧಗಳಲ್ಲಿ ಅಹಂಕಾರದ ಪ್ರದರ್ಶನ ಮಾಡುತ್ತಾರೋ ಅದು ಸಂಬಂಧಗಳ ಅಳಿವಿಗೆ ಕಾರಣವಾಗುತ್ತದೆ.ಅದೆಂತ ಸಂಬಂಧವಾದರೂ ಆ ಸಂಬಂಧಗಳಲ್ಲಿ ಪಾವಿತ್ರ್ಯತೆ ಇರಬೇಕು ಆಗ ಮಾತ್ರ ಆ ಸಂಬಂಧದಿಂದ ಮನಸ್ಸು ಪ್ರಫುಲ್ಲವಾಗಿರಲು ಸಾಧ್ಯ. “ಕೂಡಿ ಬಾಳಿದರೆ ಸ್ವರ್ಗಸುಖ” ಎಂಬ ನಮ್ಮ ಹಿರಿಯರ ಮಾತಿನಂತೆ ನಡೆದು ಮುಂದಿನ ಪೀಳಿಗೆಗೆ ದಾರಿದೀಪವಾಗೋಣ...

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ