ಗಾದೆಯು ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎನ್ನುವ ಮಾತನ್ನು ನಮ್ಮ ಹಿರಿಯರು ಹೇಳಿದ್ದಾರೆ. ಕಾರಣ ಗಾದೆಯು ಅನುಭವದಿಂದ ಪ್ರೇರೆಪಿತರಾದವರು ಹಣೆದ ಸಾಲು. ಇತ್ತೀಚೆಗೆ ಒಂದು ಶಾಲೆಗೆ ಬೇಟಿ ನೀಡಿದಾಗ ಮೇಸ್ಟ್ರೊಬ್ಬರನ್ನು ಮಾತನಾಡಿಸುತ್ತಾ ಕುತೂಹಲಕ್ಕೆ ಕೇಳಿದೆ “ಈ ಮಕ್ಕಳನ್ನು ಸಂಬಾಳಿಸುವುದು ನಿಮಗೆ ಕಷ್ಟ ಆಗಲ್ವ ಸರ್” ಅಂತ ಆಗ ಮೇಸ್ಟ್ರು ಮಕ್ಕಳು ದೇವರ ಸಮಾನ ಎನ್ನುತ್ತೇವೆ ಅಂತಹ ಈ ಮಕ್ಕಳಲ್ಲಿ ಎರಡು ವಿಧ. ಒಂದು ಕೋತಿಯ ತರ ಇನ್ನೊಂದು ಮೇಕೆಯ ತರ. ಕೆಲವು ಸಲ ಮಕ್ಕಳು ತನ್ನಷ್ಟಕ್ಕೆ ತಾನಿದ್ದರೂ ಅವರನ್ನು ನೋಡಿದಾಗ ಪೋಕರಿಗಳ ತರ ಕಾಣಿಸಿ ಬಿಡುತ್ತಾರೆ ಇನ್ನೊಂದು ನೋಡುವುದಕ್ಕೆ ಪಾಪವಾಗಿ ಕಂಡರೂ ಮಾಡುವ ಕೋತಿ ಚೇಷ್ಟೆ ಜೋರಾಗಿರುತ್ತದೆ. ಆದರೆ ಈ ಪಾಪ ಕಾಣುವ ಮಕ್ಕಳು ಇರುತ್ತಾರಲ್ಲ ಅವರು ಯಾವತ್ತಿಗೂ ಬಲು ಅಪಾಯ. ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಮೆತ್ತಿದ ಹಾಗೇ ತಾನು ಕಪಿ ಚೇಷ್ಟೆ ಮಾಡಿ ಬೇರೆ ಮಕ್ಕಳ ಮೇಲೆ ಹಾಕಿ ಬಿಡುತ್ತಾರೆ ಮುಂದೆ ಇಂತಹ ಮಕ್ಕಳು ಸಮಾಜದಲ್ಲಿ ಬೇಕಾದಷ್ಟು ಚೇಷ್ಟೆ ಮಾಡುತ್ತಿರುತ್ತಾರೆ. ಹಾಗಂತ ಅಂತಹ ಮಕ್ಕಳನ್ನು ದಂಡಿಸುವುದಕ್ಕೂ ಮನಸ್ಸು ಬರುವುದಿಲ್ಲ. ಇದರಲ್ಲಿ ಕೆಲವು ಮಕ್ಕಳು ಓದಿನಲ್ಲೂ ಮುಂದಿರುತ್ತಾರೆ ಹಾಗೆ ಇತರ ಚಟುವಟಿಕೆಯಲ್ಲೂ ಅಂತ ನಗುತ್ತಾ ಹೇಳಿದರು. ಈ ಮೇಸ್ಟ್ರು "ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರಸಿತು" ಅಂತ ಹೇಳಿದ ಗಾದೆ ಮಾತು ಸುಮಾರು ಸಲ ನಮ್ಮ ಜೀವನದಲ್ಲೂ ನಡೆದಿರುತ್ತದೆ. ಹೌದು ಈ ಮೇಸ್ಟ್ರ ಅನುಭವದ ಮಾತಿನಲ್ಲಿ ಸತ್ಯವಿದೆ ಅಲ್ಲವೇ? ನಾವೇ ನೋಡಿರುತ್ತೇವೆ ಕೆಲವರು ಮಾಡದ ಅನಾಚಾರಗಳನ್ನೆಲ್ಲಾ ಮಾಡಿ ಈ ಸಮಾಜದಲ್ಲಿ, ಸಂಬಂಧಿಕರ ಎದುರಿಗೆ ಸಚಾಗಳ ತರ ಮೆರೆಯುತ್ತಿರುತ್ತಾರೆ. ಯಾಕೆಂದರೆ ಅವರು ಮಾಡಿದ ಅನಾಚಾರವನ್ನು ಇನ್ನೊಬ್ಬರ ಮೂತಿಗೆ ಮೆತ್ತಿ ಅರಾಮವಾಗಿರುತ್ತಾರೆ. ಆದರೆ ಇಂತವರಿಂದಾಗಿ ಸಂಬಂಧಕ್ಕೆ ಬೆಲೆ ಕೊಡುವ ಕೆಲವರು ತಾನು ತಿನ್ನದೇ ಹೋದರೂ ತನ್ನ ಮೂತಿಗೆ ಮೊಸರನ್ನ ಮೆತ್ತಿಸಿಕೊಂಡಿರುತ್ತಾರೆ. ಅದರಲ್ಲೂ ರಾಜಕೀಯದಲ್ಲಿ ಇಂತಹ ಉದಾಹರಣೆಗಳು ಹೆಚ್ಚಾಗಿ ಕಾಣಸಿಗುತ್ತದೆ. ಇನ್ನು ನಮ್ಮ ಸುತ್ತ ಮುತ್ತ ಇರುವ ನಮ್ಮದೇ, ಸಂಬಂಧಿಕರು, ಗೆಳೆಯ ಗೆಳತಿಯರು ಮಾಡುವ ಇಂತಹ ಕಪಿ ಚೇಷ್ಟೆಯಿಂದ ನಾವು ಹಲವಾರು ಸಲ ಮುಜುಗರಕ್ಕೆ ಒಳಗಾಗಿರುತ್ತೇವೆ. ನಾನು ಮತ್ತು ನನ್ನ ಗೆಳತಿಯೊಬ್ಬರು ಯಾವಾಗಲೂ ಜೊತೆಯಾಗಿ ಇರುತ್ತಿದ್ದೆವು. ಆಪೀಸಿನಲ್ಲಿ ಮೀಟಿಂಗ್‌ನಲ್ಲಿ ಗಂಬೀರ ವಿಷಯ ಚರ್ಚೆಯಾಗುತ್ತಿರಬೇಕಾದರೆ ಮೆತ್ತಗೆ ಏನಾದರೂ ಹಾಸ್ಯ ಮಾಡಿ ಅವರು ಸುಮ್ಮನಾಗುತ್ತಿದ್ದರು ಆದರೆ ನನಗೆ ನಗು ತಡೆಯುವುದಕ್ಕೆ ಆಗದೆ ನಕ್ಕು ಮೇಲಾಧಿಕಾರಿ ಕೈಯಲ್ಲಿ ಬೈಸಿಕೊಂಡು ಪಕ್ಕಕ್ಕೆ ತಿರುಗಿ ಗೆಳತಿಯನ್ನು ನೋಡಿದರೆ ಏನು ಆಗದಂತೆ ಕುಳಿತಿರುತ್ತಿದ್ದರು ಇದುವೇ ಅಲ್ಲವೇ ಕೋತಿ ಮೇಕೆ ಬಾಯಿಗೆ ಮೊಸರನ್ನ ಮೆತ್ತುವುದು ಅಂದರೆ. ಇನ್ನೂ ಕೆಲವರನ್ನು ನಾನು ನೋಡಿದ್ದೇನೆ ತಾನು “ಎಣ್ಣೆಯಲ್ಲಿ ಸ್ನಾನ ಮಾಡಿ ಆಗಾಗ ರಸ್ತೆ ಅಳತೆ ಮಾಡುತ್ತಾ ಇರುತ್ತಾರೆ” ಅಂತವರು ಇನ್ನೊಬ್ಬರ ಬಗ್ಗೆ ಮಾತಾಡುವಾಗ “ಆಯೆ ಮೂಂಕು ಮುಟ್ಟ ದಿಂಜಾವೆ ಮಾರಾಯೆರೆ” ಅಂದರೆ ಅವನು ಮೂಗಿನ ತನಕ ಎಣ್ಣೆ ಹೊಡೆಯುತ್ತಾನೆ ಅಂತ ತಾನು ಸಚಾ ತರ ಮಾತಾಡುತ್ತಿರುತ್ತಾರೆ. ಆದರೆ ಅವನ ಮಾತನ್ನೇ ಸತ್ಯ ಅಂತ ತಿಳ್ಕೊಂಡ ಕೆಲವರು ಅವನ ಮಾತಿಗೆ ಇನ್ನೊಂದಷ್ಟು ಸೇರಿಸಿ ರಂಗಾಗಿಸುತ್ತಾರೆ. ಇದುವೇ ಈ ಪ್ರಪಂಚದಲ್ಲಿ ನಡೆಯುತ್ತಿರುವ ಸತ್ಯ. ಇಂತಹ ಚಿಕ್ಕ ಚಿಕ್ಕ ವಿಷಯಗಳಿಂದ ಶುರುವಾಗುವ ಕೋತಿ ಚೇಷ್ಟೆ ಎಷ್ಟೋ ಸಲ ಇನ್ನೊಬ್ಬರ ಜೀವನವನ್ನೇ ಸರ್ವ ನಾಶ ಮಾಡಿರುವುದನ್ನು ನಾವು ಈ ಸಮಾಜದಲ್ಲಿ ನೋಡಿರಬಹುದು. ಇಂತಹ ಸಮಯದಲ್ಲಿ ಮೇಕೆಯ ಸ್ಥಾನದಲ್ಲಿ ಇರುವವನಿಗೆ ಮಾತ್ರ ಗೊತ್ತಿರುತ್ತದೆ ನಿಜವಾದ ಸತ್ಯ. ಮನುಷ್ಯನಾಗಿ ಹುಟ್ಟಿ ಕೋತಿ ಬುದ್ದಿ ಮಾಡಿ ಇನ್ನೊಬ್ಬರನ್ನು ಬಲಿ ಪಶುವಾಗಿ ಮಾಡುವ ಬದಲು ನಮ್ಮಿಂದ ಇನ್ನೊಬ್ಬರಿಗೆ ಒಳ್ಳೆಯದಾಗುವಂತೆ ಮಾಡಿದರೆ ಅಂತಹ ಒಳ್ಳೆಯತನ ನಮ್ಮನ್ನು ಕೈ ಹಿಡಿದು ಕಾಪಾಡುತ್ತದೆ ಎನ್ನುವುದನ್ನು ಮನಗಂಡು ನಮ್ಮ ದಾರಿಯಲ್ಲಿ ನಾವು ನಿಷ್ಟೆಯಿಂದ ಬದುಕೋಣ....
✍ ಲಲಿತಶ್ರೀ ಪ್ರೀತಂ ರೈ