image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು...

ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು...

ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು. ಬೆನ್ನ ಕಟ್ಟುವರು ಸಭೆಯೊಳಗೆ, ಸಾವಿರ ಹೊನ್ನ ಕಟ್ಟುವರು ಉಡಿಯೊಳಗೆ. ಎನ್ನುವ ಜನಪದ ಹಾಡನ್ನು ನಾವು ನೀವೆಲ್ಲಾ ಕೇಳಿರುತ್ತೇವೆ. ಹೌದು ಹೆಣ್ಣಾದವಳಿಗೆ ಅಣ್ಣ ತಮ್ಮರು ಇರಬೇಕು. ಅದರಲ್ಲೂ ಅಣ್ಣ ಇರಲೇ ಬೇಕು. ಈ ದಿನ ಕೆಲವರು ಅಣ್ಣ ತಂಗಿಯರ ಹಬ್ಬ ಆಚರಿಸುತ್ತಾರೆ. ನಾಗರಪಂಚಮಿಯನ್ನು ಕೂಡ ಅಣ್ಣ ತಂಗಿಯರ ಹಬ್ಬ ಎನ್ನಲಾಗುತ್ತದೆ. ಇದಕ್ಕೆ ಜನಪದ ಕಥೆಗಳು ಇದ್ದು, ಕೆಲವು ಕಡೆ ನಾಗರ ಪಂಚಮಿ ದಿನವನ್ನೇ ಇಂದಿಗೂ ಅಣ್ಣ ತಂಗಿ ಹಬ್ಬವಾಗಿ ಆಚರಿಸಲಾಗುತ್ತದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ ‘ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ  ಆಚರಿಸಲಾಗುತ್ತಿದೆ. ಇಂತಹ ಹಬ್ಬಗಳನ್ನು ಆಚರಿಸಬೇಕಾದರೆ ಆ ಅಣ್ಣ ತಂಗಿಯರ ಬಾಂಧವ್ಯ ಹೇಗಿರಬೇಕು ಎನ್ನುವುದು ಬಹುಮುಖ್ಯ ವಾಗಿರುತ್ತದೆ. ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಚಿಕ್ಕವರಿರುವಾಗ ತನ್ನ ಅಣ್ಣಂದಿರು ನೋಡಿಕೊಳ್ಳುವ ರೀತಿ, ಆ ಪ್ರೀತಿಯೇ ಬೇರೆ. ಅದರಲ್ಲೂ ನನ್ನಂತೆ ಅಣ್ಣನಿಗೆ ಒಬ್ಬಳೇ ತಂಗಿಯಾದರೆ ಇನ್ನೂ ಕಾಳಜಿ ಜಾಸ್ತಿ ಎನ್ನಬಹುದು. ಪ್ರತಿಯೊಬ್ಬ ಹೆಣ್ಣು ಮಗುವಿಗೆ ಅಪ್ಪನೇ  ಜೀವನದಲ್ಲಿ ಹೀರೋ ಆಗಿರುತ್ತಾನೆ. ಆದರೆ ನನ್ನ ಅಪ್ಪ ನನಗೆಂದೂ ಹೀರೋ ಎನಿಸಲೇ ಇಲ್ಲ. ಅದಕ್ಕೆ ಕಾರಣ ಹಲವಾರು ಬಿಡಿ. ನನ್ನ ಜೀವನದಲ್ಲಿ ಹೀರೋ ನನ್ನ ಅಣ್ಣನೇ. ಅಣ್ಣ-ತಂಗಿ ಸಂಬಂಧವು ಬಹಳ ವಿಶೇಷವಾದದ್ದು, ಆಳವಾದ ಪ್ರೀತಿ, ಕಾಳಜಿ, ಮತ್ತು ರಕ್ಷಣೆಯ ಸಂಬಂಧವಿರುತ್ತದೆ. ಅಣ್ಣ ಯಾವತ್ತಿಗೂ ತನ್ನ ತಂಗಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದರೊಂದಿಗೆ ಅವಳ ರಕ್ಷಕನಾಗಿರುತ್ತಾನೆ. ತಂಗಿಯೂ ಸಹ ತನ್ನ ಅಣ್ಣನನ್ನು ಗೌರವಿಸುತ್ತಾಳೆ. ಅವನಿಗೆ ಪ್ರೀತಿಯನ್ನು ತೋರಿಸುತ್ತಾಳೆ. ಈ ಸಂಬಂಧದಲ್ಲಿ ಸಣ್ಣಪುಟ್ಟ ಜಗಳಗಳಿದ್ದರೂ, ಅದು ಪ್ರೀತಿಯ ಭಾಗವಾಗಿರುತ್ತದೆ. ಈ ಸಂಬಂಧವು ಜೀವನಪರ್ಯಂತ ಮುಂದುವರಿಯುತ್ತದೆ. ಇಲ್ಲೊಂದು ಸತ್ಯ ಹೇಳಲೇಬೇಕು. ಅಣ್ಣ ತಂಗಿಗಿಂತ ಎಷ್ಟೇ ದೊಡ್ಡವರಿರಲಿ, ಏನೇ ಇರಲಿ ತಂಗಿ ಯಾವತ್ತೂ ಜೋರಾಗಿರುತ್ತಾಳೆ. ಅಷ್ಟೇ ಅಲ್ಲ ಅವಳದೇ ಮಾತು ಚಲಾವಣೆಯಲ್ಲಿರಬೇಕು ಎಂದು ಬಯಸುತ್ತಾಳೆ. ಅದು ನನ್ನನ್ನೂ ಸೇರಿಸಿ. ತಂಗಿಯಾದವಳಿಗೆ ಅಣ್ಣ ತೋರುವ ಕಾಳಜಿ ಜೀವನ ಪರ್ಯಂತ ಸಿಹಿ ನೆನಪಾಗಿ ಕಾಡುತ್ತದೆ. ಅಂತಹ ನೆನಪಿನಲ್ಲಿ ನಾನು ನಿಮಗೆ ಹೇಳಲೇಬೇಕಾದ ಒಂದು ನೆನಪು “ಆಗ ನಾನಿನ್ನು ತುಂಬಾ ಚಿಕ್ಕವಳು. ಅಣ್ಣನಿಗೆ ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಶಿಕ್ಷಕರು ಕಲೆಯ ಗೀಳು ಹಿಡಿಸಿದ್ದರು. ಹಾಗಾಗಿ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಣ್ಣ ಮೇಲುಗೈ.

ಅಣ್ಣ ಎಲ್ಲೇ ಹೋದರು ಬೆಂಬಿಡದ ಬೇತಾಳದಂತೆ ನಾನು ಅವರ ಸೊಂಟದಲ್ಲಿ ಇರಲೇ ಬೇಕು. ಆದರೆ ಅವರು ಕರೆದುಕೊಂಡು ಹೋಗುತ್ತಿದ್ದರೋ, ನಾನಾಗೇ ಹೋಗುತ್ತಿದ್ದೆನೋ ಎನ್ನುವ ಬಗ್ಗೆ ನೆನಪಿಲ್ಲ. ಅಂದು ಶಾಲೆಯ ವಾರ್ಷಿಕೋತ್ಸವವಂತೆ. ಅಲ್ಲಿ ನಡೆಯಬೇಕಾಗಿರುವ ನಾಟಕದಲ್ಲಿ ನನ್ನಣ್ಣ ನಾಯಕ. ಸೊಂಟದಲ್ಲಿ ನಾನು. ಅಣ್ಣ ನನ್ನನ್ನು ವೇದಿಕೆಯ ಎದುರು ಒಂದು ಬದಿಯಲ್ಲಿ ಕೂರಿಸಿ, ನಾಟಕಕ್ಕೆ ಸಿದ್ದವಾಗಲು ಹೋದರು. ಅವರ ಸಹಪಾಠಿಗಳಿಗೆ ನನ್ನ ಜವಾಭ್ಧಾರಿ ಬೇರೆ. ಅಣ್ಣನ ಮೇಕಪ್ ಅರ್ದ ಆಗಿರಬೇಕು ಒಬ್ಬ ಹುಡುಗಿ ಮೆಲ್ಲಗೆ ಚಿವುಟಿದ್ದಾಳೆ ನನಗೆ. ನಾನೋ ಅಣ್ಣಾಣ್ಣಾಣ್ಣಾ ಅಂತ ರಾಗವಾಗಿ ಊರೆಲ್ಲಾ ಕೇಳುವಂತೆ ಕಿರುಚಿಬಿಟ್ಟೆ. ಅದು ಅಣ್ಣನ ಕಿವಿಗೆ ಮುಟ್ಟಲು ತುಂಬಾ ಸಮಯವೇನೋ ಬೇಕಾಗಿರಲಿಲ್ಲ. ಸೀನ್ ಕಟ್ ಆದರೆ ಅಣ್ಣನ ಸೊಂಟದಲ್ಲಿ ನಾನು. ಮಾಸ್ಟರ್ ಎಷ್ಟು ಕರೆದರೂ ಅಣ್ಣ ಹೋಗಲು ಸಿದ್ದವಿಲ್ಲ. ಬಾ ವಿಶ್ವ ನೀನು ಹೋಗಬೇಕು ಸ್ಟೇಜ್‌ಗೆ ಅಂದರೆ ಅಣ್ಣನ ಉತ್ತರ ಇಷ್ಟೆ “ ನಾನು ಹೋಗಲ್ಲ, ನನ್ನ ತಂಗಿಗೆ ಚಿವುಟುತ್ತಾರೆ” ಅಂತ. ಕೊನೆಗೆ ನಿನ್ನ ತಂಗಿಯನ್ನು ನಾನು ಎತ್ತಿಕೊಳ್ಳುತ್ತೇನೆ ಎಂದು ಪ್ರಾಮಿಸ್ ಮಾಡಿ ಅಣ್ಣನನ್ನು ಒಪ್ಪಿಸಿದರು. ಈಗ ನನ್ನ ಸೀಟು ಶಿಪ್ಟ್. ನಾನು ಮಾಸ್ಟರ್‌ರ ಸೊಂಟದಲ್ಲಿ ಕುಳಿತುಕೊಂಡು ಅಣ್ಣನ ಸಹಪಾಟಿಗಳಿಗೆ ರೇಗಿಸುತ್ತಿದ್ದೆ. ಮಾಸ್ಟ್ರು “ಇವನಿಗೊಂದು ತಂಗಿ” ಅಂತ ಗೊಣಗಿಕೊಂಡು ಅವರು ಹೋದಲ್ಲಲ್ಲಾ ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದರಂತೆ. ಏನೇ ಆಗಲಿ ಅಣ್ಣನ ನಾಟಕ ಮುಗಿದು ನಾನು ಅಣ್ಣನ ಸೊಂಟಕ್ಕೆ ಶಿಪ್ಟ್ ಆಗುವವರಗೆ ಯಾವುದೇ ತೊಂದರೆ ಆಗಿಲ್ಲ. ಇಂತಹ ನೆನಪುಗಳು ಪ್ರತಿಯೊಬ್ಬನ ಬಾಳಿನಲ್ಲಿಯೂ ಇದ್ದೇ ಇರುತ್ತೆ. ಆದರೆ ಕೆಲವರು ಅದನ್ನು ಮರೆತಂತೆ ನಾಟಕವಾಡುತ್ತಿರುತ್ತಾರೆ. ಇನ್ನು ಕೆಲವರು ಒಳಗೊಳಗೆ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಎಷ್ಟೋ ಅಣ್ಣಂದಿರು ತನ್ನ ಜೀವನದ ಸುಖ ಸಂತೋಷವನ್ನು ತ್ಯಾಗ ಮಾಡಿ ತನ್ನ ತಂಗಿಯ ಜೀವನದ ಸುಖವನ್ನು ನೋಡಿ ಖುಷಿ ಪಟ್ಟವರಿದ್ದಾರೆ, ಪಡುತ್ತಿರುವವರಿದ್ದಾರೆ. ಅಂತವರಲ್ಲಿ ನನ್ನ ಅಣ್ಣನೂ ಸೇರಿದ್ದಾರೆ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. ಕಾರಣ ನನ್ನ ಅಮ್ಮ ಅಂದು ನಮ್ಮನ್ನು ಓದಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಣ್ಣ ಅವರ ವಿದ್ಯಾಭ್ಯಾಸದ ಸಮಯದಲ್ಲಿಯೇ ಕೆಂಪು ಕಲ್ಲು ಕಡಿದು ಅಮ್ಮನಿಗೆ ಸಹಾಯ ಮಾಡುತ್ತಿದ್ದರು. ಅದರಲ್ಲಿ ಬಂದ ದುಡ್ಡಿನಲ್ಲಿ ನನ್ನನ್ನು ಗುಡಿಸಿಲಿನಲ್ಲಿಯಾದರೂ ರಾಣಿಯಂತೆ ಸಾಕಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ನನ್ನ ಖುಷಿಯಲ್ಲಿ ಅವರು ನೆಮ್ಮದಿ ಕಾಣುತ್ತಿದ್ದಾರೆ ಎನ್ನುವುದು ನೆನೆಸಿಕೊಂಡರೆ ಹೃದಯ ಭಾರವಾಗುತ್ತದೆ. 

ವಿದ್ಯಾಭ್ಯಾಸದೊಂದಿಗೆ ಕೆಂಪು ಕಲ್ಲು ಕಡಿಯುವುದರಿಂದ ಪ್ರಾರಂಭವಾದ ಅಣ್ಣನ ವೃತ್ತಿ ಜೀವನ ಕೃಷಿ, ಕೃಷಿ ಪತ್ತಿನ ಸೊಸೈಟಿಯಲ್ಲಿ ಕ್ಲರ್ಕ್, ಜೊತೆಗೆ ವಯಸ್ಕರಿಗೆ ಶಿಕ್ಷಣ ನೀಡುವ ಮಾಸ್ಟರ್, ಇವೆಲ್ಲದರ ಜೊತೆ ಹವ್ಯಾಸಿ ನಾಟಕ ತಂಡಗಳಲ್ಲಿ ನಟನೆ, ನಿರ್ದೇಶನ, ನಾಟಕ ರಚನೆ ಮಾಡಿಕೊಂಡಿದ್ದವರನ್ನು ಗಾಂಧಿನಗರಿಗೆ ಕರೆದುಕೊಂಡು ಹೋಗಿದ್ದು ನಟ ಅಂಬರೀಶ್ ಮೇಲಿನ ಹುಚ್ಚು ಅಭಿಮಾನ. ಕೆಲವರು ನಮ್ಮ ಕುಟುಂಬ ಚಿತ್ರರಂಗದಲ್ಲಿ ಅಷ್ಟು ಸಾಧನೆ ಮಾಡಿದೆ, ಇಷ್ಟು ಸಾಧನೆ ಮಾಡಿದೆ ಹಾಗಾಗಿ ನನಗೆ ಗೌರವ ಕೊಡಬೇಕು ಎಂದು ಬಡಿದುಕೊಳ್ಳುತ್ತಾರೆ. ಅವರ ನಡುವೆ ಯಾವುದೇ ಹಿನ್ನಲೆ ಇಲ್ಲದೆ, ಎಷ್ಟೋ ಕಷ್ಟ ಕಾರ್ಪಣ್ಯಗಳ ನಡುವೆ, ಕಾಲು ಎಳೆದು ಖುಷಿ ಪಡುವ ದುಷ್ಟರ ಎದುರು ಇಂದು ಸಿನಿಮಾರಂಗದಲ್ಲಿ ಕೆಲಸ ಮಾಡಿ ಗುರಿತಿಸಿಕೊಂಡಿರುವುದು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತಂಗಿಯಾಗಿ ನಾನು ಹೆಮ್ಮೆಯಿಂದ ಹೇಳುತ್ತೇನೆ. ಹೌದು ನನ್ನ ಅಣ್ಣನ ಬಗ್ಗೆ ಹೇಳುತ್ತಾ ಹೋದರೆ ಪೇಜುಗಟ್ಟಲೆ ಬರೆಯಬಲ್ಲೆ. ನಾನು ಹೇಗೆ ಪೇಜುಗಟ್ಟಲೆ ಬರೆಯಬಲ್ಲೆನೋ ಹಾಗೇ ನಿಮ್ಮ ಜೀವನದಲ್ಲಿ ಅದೆಷ್ಟು ಸವಿ ನೆನಪುಗಳು ಇರಬಹುದು ಒಮ್ಮೆ ನೆನಪಿಸಿಕೊಳ್ಳಿ. ಜೀವನದಲ್ಲಿ ಆಸ್ತಿ, ಅಂತಸ್ತು, ದುಡ್ಡು  ಒಡವೆ ಎಲ್ಲವೂ ನಶ್ವರ. ಪ್ರೀತಿ ಅನುಬಂಧವೇ ಯಾವತ್ತಿಗೂ ಶಾಶ್ವತ. ನಾನು ಒಬ್ಬ ತಂಗಿಯಾಗಿ ನನ್ನಂತ ಎಲ್ಲಾ ಅಕ್ಕ ತಂಗಿಯರಲ್ಲಿ ವನವಿ ಮಾಡಿಕೊಳ್ಳುವುದೊಂದೇ “ಯಾವುದೋ ಒಂದು ಕೆಟ್ಟ ಗಳಿಗೆ, ಯಾರದೋ ಮಾತುಗಳಿಂದ ನಮ್ಮ ಒಡ ಹುಟ್ಟಿದವರ ಜೊತೆ ವೈಷಮ್ಯ ಬೆಳೆದಿರಬಹುದು. ಆ ವೈಷಮ್ಯದ ಎದುರು ನಮ್ಮ ಬಾಲ್ಯದ ಆ ದಿನಗಳ ಸವಿ ನೆನಪುಗಳು ದೊಡ್ಡದಾಗಿ ಕಾಣುತ್ತಿದೆಯಾದರೆ ಒಮ್ಮೆ ಯೋಚಿಸಿ ನಾವು ಮುನ್ನಡೆಯಬೇಕಾಗಿದೆ. ಇದರೊಂದಿಗೆ ಒಂದು ಕಿವಿ ಮಾತು. "ಇಂದು ರಕ್ಷಾ ಬಂಧನ ಒಂದು Fashion ಆಗಿ ಹೋಗಿದೆ. ಇಂದು ಕೈಗೆ ರಕ್ಷೆ ಕಟ್ಟಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾಳೆ ಕೈ ಕೈ ಹಿಡಿದು ಗಮ್ಮತ್ತು ಮಾಡುವವರನ್ನು ನೋಡುತ್ತೇವೆ. ಹಾಗೇ ಉಡುಗೊರೆಯ ಆಸೆಗಾಗಿಯೋ ರಕ್ಷೆ ಕಟ್ಟುವ ಟ್ರೆಂಡ್ ಕಾಣಬಹುದು.  ನಮ್ಮ ಸಂಪ್ರದಾಯದಲ್ಲಿ    ಸಂಬಂಧಕ್ಕೆ ಹೇಗೆ ಯಾವ ರೀತಿ ಗೌರವ ಕೊಡುತ್ತೇವೆ ಎನ್ನುವುದನ್ನು  ತಿಳಿದುಕೊಳ್ಳುವುದು ಬಹು ಮುಖ್ಯವಾಗಿದೆ". ರಕ್ಷಾ ಬಂಧನವನ್ನು ಯಾರೋ ಒಬ್ಬರಿಗೆ ಕಟ್ಟಿ ಅದರಲ್ಲೂ ಅಣ್ಣ ತಂಗಿಯ ಬಾಂಧವ್ಯ ಹುಡುಕುವ ಬದಲು (ಎಲ್ಲಾ ಸಮಯದಲ್ಲೂ ರಕ್ತ ಸಂಬಂಧದ ಸಹೋದರತ್ವದ ಪ್ರೀತಿ ದೊರಕಲು ಸಾಧ್ಯವಿಲ್ಲ)  ನಮ್ಮದೇ ಅಣ್ಣ ತಮ್ಮಂದಿರಿಗೆ ಪ್ರೀತಿ ತೋರಿ ಭಾಂಧವ್ಯ ಉಳಿಸಿಕೊಂಡು ಜೀವನದ ಸವಿಯನ್ನು ಸವಿಯಲು ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗೋಣ...‌

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ