ನಾನಿನ್ನು ಹೈಸ್ಕೂಲ್‌ನಲ್ಲಿದ್ದಾಗ ನಮ್ಮ ಉಪದ್ಯಾಯರೊಬ್ಬರು ಯಾವಾಗಲೂ ಹೇಳುತ್ತಿದ್ದ ಮಾತು “ ದುಡ್ಡೇ ದೊಡ್ಡಪ್ಪ”. ಆಗ ದುಡ್ಡಿನ ಬಗ್ಗೆ ತಿಳಿದುಕೊಳ್ಳುವಷ್ಟು ಬುದ್ದಿ ಬೆಳೆದಿಲ್ಲವಾದರೂ ನನ್ನ ಮಾಸ್ಟ್ರ ದೊಡ್ಡಪ್ಪ ದುಡ್ಡು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿದ್ದೆ. ಹಾಗಂತ ಬರೀ ದುಡ್ಡಿನ ಬಗ್ಗೆ ಮಾತ್ರ ಹೇಳುತ್ತಿದ್ದದ್ದಲ್ಲ ಆಗಾಗ “ದುಡ್ಡೇ ದೊಡ್ಡಪ್ಪ, ವಿಧ್ಯೆ ಅದರಪ್ಪ” ಅಂತ ಹೇಳುವುದನ್ನೂ ಮರೆಯುತ್ತಿರಲಿಲ್ಲ. ಪಾಪ ಅವರಿಗೆ ಆಗಲೇ ಈ ಗಾದೆಯ ಮಹತ್ವ ತಿಳಿದಿತ್ತು. ಅದಕ್ಕಾಗಿ ತನ್ನ ಶಿಷ್ಯವೃಂದಕ್ಕೆ ಆಗಾಗ ಹೇಳಿ ವಿದ್ಯೆಯ ಜೊತೆಗೆ ದುಡ್ಡಿನ ಮಹತ್ವವನ್ನೂ ಮನದಟ್ಟು ಮಾಡಲು ಪ್ರಯತ್ನಿಸುತ್ತಿದ್ದಿರಹುದು. ಹಾಗಂತ ಈಗ ನನಗೆ ಆಗಾಗ ಅನಿಸುವುದುಂಟು. ಹೌದಲ್ವ ದುಡ್ಡಿಗೆ ಎಷ್ಟು ಮಹತ್ವ ಇದೆ ಈ ಮನುಷ್ಯರ ಪ್ರಪಂಚದಲ್ಲಿ. ಆದರೆ ಪ್ರಾಣಿ ಪಕ್ಷಿಗಳ ಸಂಕುಲ ನೋಡಿ ದುಡ್ಡು, ಆಸ್ತಿ ಅಂತಸ್ತಿನ ಹಂಗಿಲ್ಲದೇ ಎಷ್ಟು ಸ್ವಚ್ಚಂದವಾಗಿ ವಿಹರಿಸುತ್ತಿವೆ. ಅವುಗಳೇ ಪುಣ್ಯಶಾಲಿಗಳು ಅನಿಸುತ್ತಿದೆ. ಅದರೆ ಮನುಷ್ಯರಾಗಿ ಹುಟ್ಟಿದ ನಮಗೆ ಆಸ್ತಿ ಅಂತಸ್ತು ಅಂತ ಕೂಡಿಡುವುದರ ಜೊತೆಗೆ ತನ್ನ ಖಾಂದಾನೆಲ್ಲಾ ತಿಂದುಂಡು ಅನುಭವಿಸಬೇಕು ಎನ್ನುವ ಬಯಕೆ. ಎಷ್ಟೋ ಸಲ ತಾನು ತಿನ್ನದೆ, ಉಣ್ಣದೆ ಗಂಟುಕಟ್ಟಿ, ತನ್ನ ಇಳಿವಯಸಿನಲ್ಲಿ ತನಗೆ ಅನುಭವಿಸಲಾಗದೆ ತನ್ನ ಮಕ್ಕಳು ಮಜ ಉಡಾಯಿಸುವುದನ್ನು ನೋಡಿ ತಾನು ಒಳಗೊಳಗೆ ಉರಿಯುವವರನ್ನೂ ಕೂಡ ನೋಡಬಹುದು. ನಮ್ಮ ಹಿರಿಯರು ಎಷ್ಟು ಬುದ್ದಿವಂತರು ಅಲ್ವಾ? ತನ್ನ ಅನುಭವಗಳನ್ನು ಗಾದೆಗಳ ರೂಪದಲ್ಲಿ ನಮಗೆ ತಿಳಿಸಲು ಪ್ರಯತ್ನಿಸಿದ್ದಾರೆ. ನಮ್ಮ ಜನರಿಗೆ ದುಡ್ಡೆಂದರೆ ಅದೆಷ್ಟು ಪ್ರೀತಿ. ಹೌದು ನಾವು ಬದುಕಬೇಕಾದರೆ ದುಡ್ಡಿನ ಅವಶ್ಯಕತೆ ಇದೆ. ಆದರೆ ಒಬ್ಬ ಮನುಷ್ಯನನ್ನು ದುಡ್ಡಿನಿಂದಲೇ ಅಳೆಯುವುದದರೂ ಯಾತಕ್ಕೆ? ಮನುಷ್ಯತ್ವಕ್ಕೆ ಇಲ್ಲಿ ಬೆಲೆ ಇಲ್ಲವೇ? ಎಂದೆಲ್ಲಾ ನನಗೆ ನಾನೇ ಕೇಳಿಕೊಳ್ಳುವುದುಂಟು. ಒಂದು ಮಗು ಹುಟ್ಟಿದ ಕ್ಷಣದಿಂದ ದುಡ್ಡಿನ ಮಹಿಮೆ ಪಸರಿಸಲು ಶುರುವಾಗುತ್ತದೆ. ಬಡವನಿಗೆ ಮಗು ಹುಟ್ಟಿದರೆ ಅದನ್ನು ನೋಡಲು ಬರುವವರ ಕೈ ಖಾಲಿಯಾಗಿರುತ್ತದೆ, ಅದೇ ಶ್ರೀಮಂತನಿಗೆ ಮಗು ಹುಟ್ಟಿದರೆ ಬರೀ ಕೈಯಲ್ಲಿ ಹೋದರೆ ಅವರೇನು ತಿಳಿದುಕೊಂಡಾರು ಅಂತ ಅಲ್ಲಿ ಇಲ್ಲಿ ಹುಡುಕಿ ಸ್ವಲ್ಪ ಹೆಚ್ಚಿನ ಬೆಲೆಯದ್ದೆ ಉಡುಗೊರೆ ಮಗುವಿಗೆ ಸಿಗುತ್ತದೆ. ಇನ್ನೂ ಮಗುವಿನ ನಾಮಕರಣದಿಂದ ಹಿಡಿದು ಮುಂಜಿ, ಮದುವೆ, ಕೊನೆಗೆ ಅವನ ಕೊನೆಗಳಿಗೆಯೂ ಕೂಡ. ಬಡವ ಸತ್ತರೆ ಅಂತ್ಯಕ್ರೀಯೆಗೆ ಹೋಗುವಾಗ ಒಂದು ಗಂಧದ ಮಾಲೆ ಕೊಡು ಅಂತ ಅಂಗಡಿಯವನಿಗೆ ಕೇಳಿ ನೂರು ಬಿಸಾಕಿ ಹೋಗುತ್ತಾರೆ. ಅದೇ ಶ್ರೀಮಂತ ಸತ್ತರೆ “ಒಂದು ಒಳ್ಳೆ ಗಂಧದ ಮಾಲೆ ಕೊಡಣ್ಣ, ಕಮ್ಮಿದ್ದು ಹೇಗೆ ತೆಗೆದುಕೊಂಡು ಹೋಗುವುದು ಅವರು ಶ್ರೀಮಂತರು ಮರ‍್ರೆ. ಒರಿಜಿನಲ್ ಕೊಡು ಆಯ್ತಾ ಅವರು ಗಂಧದ ಎಣ್ಣೆಯನ್ನೇ ಹಾಕುತ್ತಾರಂತೆ” ಅಂತ ಮತ್ತೆ ಮತ್ತೆ ಒರಿಜಿನಲ್ ಹುಡುಕಿ ತೆಗೆದುಕೊಂಡು ಹೋಗುವವರನ್ನೂ ನೋಡಬಹುದು. ಪಾಪ ಸತ್ತವನು ಬಡವನಾದರೂ, ಶ್ರೀಮಂತನಾದರೂ ಹೋಗುವಾಗ ಬರೀ ಕೈ ದಾಸ, ಸುಟ್ಟು ಭಸ್ಮವಾಗುತ್ತಾನೆ ಎನ್ನುವ ಸತ್ಯವೂ ಇನ್ನೂ ಕೆಲವರಿಗೆ ಅರಿವಾಗುತ್ತಿಲ್ಲ. ನೀವೇ ನೋಡಿರಬಹುದು ಶ್ರೀಮಂತರ ಮಕ್ಕಳು ಏನೇ ಅನಾಚಾರ ಮಾಡಿದರೂ ಅವರ ಬಗ್ಗೆ ಯಾರು ಮಾತಾಡುವುದಿಲ್ಲ. ಅದೇ ಬಡವನ ಮಗ ಈಚಲ ಮರದ ಕೆಳಗೆ ಕೂತು ಹಾಲು ಕುಡಿದರೂ ಅವನು ಮಹಾ ಕುಡುಕನಾಗಿ ಊರಿಗೆಲ್ಲಾ ಕಾಣಿಸಿಬಿಡುತ್ತಾನೆ. ಕೆಲವರಂತೂ ತನ್ನ ದುಡ್ಡಿನ ಮದದಲ್ಲಿ ಬೇರೆಯವರನ್ನು ಕಡೆಗಣಿಸುವ ಪರಿ ನೋಡಿದರೆ, ಥೂ ಇವರೆಂತಹ ಮನುಷ್ಯರಪ್ಪಾ ಎನಿಸಿಬಿಡುತ್ತದೆ. ಕೆಲವರ ಶ್ರೀಮಂತಿಕೆಯ ಅಮಲಿನ ವೈಖರಿ ನೋಡಿದರೆ ದುಡ್ಡೇ ದೊಡ್ಡಪ್ಪ ಅಲ್ಲ ಇವರೇ ಊರಿಗೆಲ್ಲಾ ದೊಡ್ಡಪ್ಪ ಎನ್ನಿಸುವುದು ಉಂಟು. ಕೆಲವು ಹೆಂಗಸರ ಶ್ರೀಮಂತಿಕೆಯ ಪ್ರದರ್ಶನವಂತೂ ಜಾತ್ರೆಯಲ್ಲಿ ಸಾಗುವ ರಥವನ್ನು ನೆನೆಪಿಸುತ್ತದೆ. ಈ ಬಡತನ ಸಿರಿತನ ಎಲ್ಲವೂ ಮಾಯೆ. ಅದೆಷ್ಟು ಪ್ರತಿಭೆಗಳು ಈ ಬಡತನದ ಬೇಗೆಗೆ ನಲುಗಿಹೋಗಿಲ್ಲ ಈ ಸಮಾಜದಲ್ಲಿ. ಅದೇ ದುಡ್ಡಿದ್ದವರ ಮಕ್ಕಳಿಗೆ ಕೆಲವು ಸಲ ಪ್ರತಿಭೆಯ ಅಗತ್ಯವೇ ಇರುವುದಿಲ್ಲ. ಬಡವರ ಮಕ್ಕಳಿಗೆ ಪ್ರತಿಭೆ ಇದ್ದರೂ ಅದಕ್ಕೆ ನೀರುಣಿಸಿ ಬೆಳೆಸುವವರಿಲ್ಲದೆ ಕನಸಿನಲ್ಲಿಯೇ ಕಮರಿ ಹೋಗುತ್ತದೆ. ಇದುವೇ ನಮ್ಮ ಈ ಸಮಾಜದ ವಿಪರ್ಯಾಸ. ನಾವೆಲ್ಲರೂ ಜೀವನದ ಹಾದಿಯಲ್ಲಿ ಮನುಷ್ಯತ್ವವನ್ನು ಮರೆಯದೆ ಬದುಕುವುದನ್ನು ಕಲಿಯೋಣ........
✍ ಲಲಿತಶ್ರೀ ಪ್ರೀತಂ ರೈ