ದೇವರೆಲ್ಲಿದ್ದಾನೆ? ದೇವರು ಇದ್ದಾನೆಯೇ? ಹಾಗಿದ್ದರೆ ಅವನೇಕೆ ನಮಗೆ ಕಾಣ ಸಿಗುತ್ತಿಲ್ಲ? ಹೌದಲ್ಲ ದೇವರು ಇರುವುದೇ ಆದರೆ ಒಮ್ಮೆಯಾದರೂ, ಒಬ್ಬರಿಗಾದರೂ ಕಾಣಿಸಬೇಕಿತ್ತಲ್ಲ, ಯಾರಿಗೆಲ್ಲಾ ಸಿಕ್ಕಿರಬಹುದು ? ಇಂತಹ ತಲೆ ಬುಡ ಇಲ್ಲದ ಪ್ರಶ್ನೆಗಳು ನನ್ನನ್ನು ಕಾಡುವುದುಂಟು. ಅಮ್ಮ ಇದ್ದಾಗ ಆಗಾಗ ಅಮ್ಮನ ತಲೆಗೂ ಹುಳ ಬಿಡಲು ಪ್ರಯತ್ನಿಸುತ್ತಿದ್ದೆ, ಆದರೆ ಅವರಿಗೆಲ್ಲಿ ನಾನು ಬಿಟ್ಟ ಹುಳ ತಲೆ ಕೊರೆಯಲು ಸಾಧ್ಯ. ಮೂರೊತ್ತು ದೇವರನ್ನು ನೆನೆಯುವ ಅವರು ಆಗಾಗ ಹೇಳುತ್ತಿದ್ದುದ್ದು “ನಂಬಿಕೆಯೇ ದೇವರು” ದೇವರಿದ್ದಾನೆ ಅಂತ ನಂಬಿ ಮುಂದೆ ಹೋಗು. ಇಷ್ಟೆಲ್ಲಾ ಮಾತನಾಡುವ ನನಗೆ ದೇವರಲ್ಲಿ ನಂಬಿಕೆ ಇಲ್ಲ ಎನ್ನುವ ನಿರ್ದಾರಕ್ಕೆ ಬಂದು ಬಿಡಬೇಡಿ. ನನ್ನಲ್ಲೂ ನಮ್ಮಮ್ಮ, ನನ್ನ ಅಣ್ಣ ಆಸ್ತಿಕತೆಯ ಬೀಜ ಬಿತ್ತಿದ್ದಾರೆ. ಮೂರೊತ್ತು ಅಲ್ಲದಿದ್ದರೂ ಒಂದೊತ್ತಾದರೂ ದೇವರನ್ನು ಕಣ್ಣುಮುಚ್ಚಿ ನಮಿಸುವಷ್ಟು ನಂಬಿಕೆ ನನ್ನಲ್ಲಿದೆ. ನಂಬಿ ಕೆಟ್ಟವರಿಲ್ಲವೋ... ರಂಗಯ್ಯನಾ ಎಂಬ ದಾಸವಾಣಿಯಂತೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನಂಬಿಕೆ ಅನ್ನುವುದು ಇದ್ದೇ ಇದೆ. ಇನ್ನು ಮನುಷ್ಯರಾದ ನಮ್ಮ ಜೀವನ ನಿಂತಿರುವುದೇ ನಂಬಿಕೆಯ ಮೇಲೆ. ಮನುಷ್ಯ ಸಂಘ ಜೀವಿ, ನಂಬಿಕೆ ಇರುವುದರಿಂದ ಮಾತ್ರ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಬಾಳುವುದು ಸಾಧ್ಯ. ಮನುಷ್ಯ ಭೂಮಿ ಮೇಲೆ ಬರುತ್ತಿದ್ದಂತೆ ಮೊದಲು ಆವರಿಸಿಕೊಳ್ಳೋ ಗುಣವೇ ಈ ನಂಬಿಕೆ, ಇದು ಪ್ರೀತಿಯ ತಳಹದಿಯೂ ಹೌದು. ಹುಟ್ಟುತ್ತಾ ಮಗು ಅಳುತ್ತದೆ, ತಾಯಿ ಎದೆಹಾಲು ಕುಡಿಸುತ್ತಾಳೆ. ಕರುಳುಬಳ್ಳಿಯ ಸಂಬಂಧ ಮಗು ತಾಯಿಯನ್ನು ಗುರುತಿಸಬಲ್ಲದು, ಆದರೆ ತಂದೆ ?, ತಾಯಿ ನಿನ್ನ ತಂದೆ ಎಂದು ತೋರಿಸಿದಾಗ ಮಗು ಆತನನ್ನು ತಂದೆ ಎಂದು ಒಪ್ಪಿಕೊಳ್ಳುತ್ತದೆ, ಇದಕ್ಕೆ ಕಾರಣ ಮಗು ತಾಯಿಯ ಮೇಲೆ ಇಟ್ಟಿರುವ ನಂಬಿಕೆ. ಈ ಜಗತ್ತಿನಲ್ಲಿ ಯಾವ ಮಕ್ಕಳು ತಮ್ಮ ತಾಯಿಯನ್ನು ಕೇಳಿಲ್ಲ “ನನ್ನ ಹುಟ್ಟಿಗೆ ಕಾರಣ ಇವನೇ ಅಂತ ಹೇಗೆ ನಂಬಲಿ” ಅಂತ. ಇದಕ್ಕೆ ಕಾರಣ ಆಗಲೇ ಹೇಳಿದ ಹಾಗೆ ಮಕ್ಕಳು ತಾಯಿಯ ಮೇಲಿಟ್ಟಿರುವ ಸ್ವಾಭಾವಿಕ ನಂಬಿಕೆ ಮತ್ತು ಆಕೆಯ ಮೇಲಿನ ಪ್ರೀತಿ. ಪ್ರೌಢರಾಗಿ ಯೋಚನೆ ಮಾಡಿದಾಗ ನಮಗೆ ದೇವರ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ನಾಸ್ತಿಕ ಮತ್ತು ಆಸ್ತಿಕ ವಾದಗಳು ಬಹುಶಃ ನಾಗರೀಕತೆಯ ಆಧುನೀಕರಣದ ದಿನದಿಂದಲೇ ಶುರುವಾಗಿರಬಹುದು. ದೇವರಿಲ್ಲ ಎನ್ನುವುದೇ ನಾಸ್ತಿಕರ ನಂಬಿಕೆ, ದೇವರಿದ್ದಾನೆ ಅನ್ನೋ ಅಚಲ ನಂಬಿಕೆ ಆಸ್ತಿಕರದ್ದು, ಹಾಗೆಂದು ಇದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿಯೇ ದೇವರ ಅಸ್ತಿತ್ವವನ್ನು ಕಂಡವರು ನಮ್ಮ ಹಿರಿಯರು. ಪ್ರಕೃತಿಯಲ್ಲಿರುವ ಕಲ್ಲು ಮಣ್ಣನ್ನೇ ಪೂಜಿಸಿರುವ ಅವರ ಈ ನಂಬಿಕೆಗಳೇ ಅವರಿಗೆ ದೇವರು. ಯಾವುದೇ ನಂಬಿಕೆಯನ್ನು ವಿರೋಧಿಸುವ ಅಥವಾ ಇದೇ ಸರಿ ಅಂತ ಇನ್ನೊಬ್ಬರ ಮೇಲೆ ಹೇರುವ ಅಧಿಕಾರ ಯಾರಿಗೂ ಇಲ್ಲ. ನಂಬಿಕೆ ಎನ್ನುವುದು ಎಲ್ಲಾ ಸಂಬಂಧದಲ್ಲೂ ಅಡಿಪಾಯವಾಗಿರುತ್ತದೆ. ಅಡಿಪಾಯ ಗಟ್ಟಿಯಿಲ್ಲದಿದ್ದರೆ ಒಂದು ಕಟ್ಟಡ ನಿಲ್ಲಲು ಹೇಗೆ ಸಾಧ್ಯ ಇಲ್ಲವೋ ಹಾಗೆ ಸಂಬಂಧದಲ್ಲಿ ನಂಬಿಕೆ ಇಲ್ಲದಿದ್ದರೆ ಯಾವ ಸಂಬಂಧಗಳೂ ಉಳಿಯಲಾರದು. ಪೋಷಕರು-ಮಕ್ಕಳ, ಸಹೋದರ-ಸಹೋದರಿ, ಗುರು-ಶಿಷ್ಯ, ಗಂಡ- ಹೆಂಡತಿ, ಸ್ನೇಹಿತರು ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತವೆ. ಯುವಕ-ಯುವತಿಯರಿಗೆ ಪ್ರೀತಿಯ ನಂಬಿಕೆ. ಆಸ್ತಿಕರಿಗೆ ದೇವರ ಮೇಲೆ, ನಾಸ್ತಿಕರಿಗೆ ಎಲ್ಲವೂ ಮಿಥ್ಯ ಎಂಬ ನಂಬಿಕೆ, ಹೀಗೇ ನಂಬಿಕೆಗಳು ನಮ್ಮನ್ನು ಕಾಯುತ್ತವೆ ಹಾಗೂ ಬೆಳೆಸುತ್ತವೆ. ಮಹಾಭಾರತದಲ್ಲಿ ಅರ್ಜುನ ಕೌರವ ಸಮೂಹವನ್ನು ಎದುರಿಸಿದ್ದು ತನ್ನ ತೋಳ್ಬಲದಿಂದ ಅಂತ ಎನ್ನುವುದಕ್ಕಿಂತ ಹೆಚ್ಚಾಗಿ ಕೃಷ್ಣ ತನ್ನ ಜತೆಗಿದ್ದಾನೆ ಎಂಬ ನಂಬಿಕೆಯಿಂದ. ನಂಬಿಕೆ ಉತ್ಸಾಹ ಹುಟ್ಟಿಸುವುದರೊಂದಿಗೆ ಒಂದು ಸಕಾರಾತ್ಮಕ, ಪರಿಶುದ್ಧ ನಂಬಿಕೆ ಬದುಕನ್ನು ಸುಂದರವಾಗಿ ರೂಪಿಸುವುದರಲ್ಲಿ ಎರಡು ಮಾತಿಲ್ಲ. ನಂಬಿಕೆ ಕಷ್ಟಗಳನ್ನು ಕಡಿಮೆ ಮಾಡದಿದ್ದರೂ, ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡುವುದರಲ್ಲಿ ಸಂಶಯವಿಲ್ಲ. ಸುತ್ತಲಿರುವ ಜನರ ಒಳ್ಳೆಯತನದಲ್ಲಿ ನಂಬಿಕೆಯ ಜೊತೆಗೆ ಪ್ರಪಂಚದಲ್ಲಿ ಒಳ್ಳೆಯ ಜನರಿದ್ದಾರೆ ಎಂಬ ನಂಬಿಕೆ ಇರಬೇಕು. ಇಲ್ಲದಿದ್ದರೆ ಈ ಸಮಾಜದಲ್ಲಿ ಬೆರೆಯಲು ಸಾಧ್ಯವಿಲ್ಲ. ನಂಬಿಕೆಯ ಮೇಲೆ ನಂಬಿಕೆಯಿಡಬೇಕು, ಆಗ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯ ಎನ್ನುವುದನ್ನು ಮನಗಂಡು ಮುಂದುವರಿಯೋಣ....
✍ ಲಲಿತಶ್ರೀ ಪ್ರೀತಂ ರೈ